Kannada NewsKarnataka News

ಮತ್ತೆ ಅವರೇ ಸಚಿವರಾಗಿದ್ದಾರೆ, ಅದೇ ಪರಿಸ್ಥಿತಿ ಮುಂದುವರೆಯುತ್ತದೆ : ಸತೀಶ ಜಾರಕಿಹೊಳಿ

ನೂತನ ಸಚಿವರಿಂದ ಯಾವುದೇ ನಿರೀಕ್ಷೆ ಸಾಧ್ಯವಿಲ್ಲ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ನೂತನ ಸಚಿವರಿಂದ ಯಾವುದೇ ನಿರೀಕ್ಷೆ ಮಾಡಲು ಸಾಧ್ಯವಿಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ತಿಳಿಸಿದರು.
 ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಸಂಪುಟದಲ್ಲಿದ್ದ ಬಹುತೇಕ ಸಚಿವರೇ, ಈಗ ಸಿಎಂ ಬೊಮ್ಮಾಯಿ ಅವರ ಸಂಪುಟದಲ್ಲೂ ಸಚಿವರಾಗಿದ್ದಾರೆ. ಅವರ ಕಾರ್ಯವೈಖರಿಯನ್ನು ಈಗಾಗಲೇ ನಾವು ನೋಡಿದ್ದೇವೆ. ಹೀಗಾಗಿ, ಈಗ ಅಧಿಕಾರ ಸ್ವೀಕರಿಸಿರುವ ಸಚಿವರಿಂದ ಯಾವುದೇ ನಿರೀಕ್ಷೆ ಮಾಡಲು ಆಗುವುದಿಲ್ಲ ಎಂದರು.
ಈ ಹಿಂದೆ ಜಿಲ್ಲೆಯಲ್ಲಿ ಮಂತ್ರಿಗಳಿದ್ದವರು, ಜಿಲ್ಲೆಯ ಯಾವುದೇ ಸಮಸ್ಯೆಗೆ ಸ್ಪಂದಿಸಿರಲಿಲ್ಲ. ಕೊರೊನಾ ಹಾಗೂ ಪ್ರವಾಹಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳೊಂದಿಗೆ ಸಭೆಗಳನ್ನು ಮಾಡಿರಲಿಲ್ಲ. ಈಗ ಮತ್ತೆ ಅವರೇ ಸಚಿವರಾಗಿದ್ದಾರೆ, ಅದೇ ಪರಿಸ್ಥಿತಿ ಮುಂದುವರೆಯುತ್ತದೆ ಅಷ್ಟೇ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಬೊಮ್ಮಾಯಿ ಸಂಪುಟದಲ್ಲಿರುವ ಮೂವರು ಸಚಿವರ ವಿರುದ್ಧ ಗಂಭೀರ ಆರೋಪಗಳಿವೆ. ಮುಂದಿನ ದಿನಗಳಿಲ್ಲ ಈ ಸಚಿವರ ವಿರುದ್ಧ ಹೋರಾಟ ನಡೆಸಲು ಪಕ್ಷದಿಂದ ಚರ್ಚಿಸಲಾಗುವುದು ಎಂದು ಪ್ರತಿಕ್ರಿಯಿಸಿದರು.
ಮೂರನೇ ಅಲೆ ಬಗ್ಗೆ ಸರ್ಕಾರ ಸ್ಪಷ್ಟ ಮಾಹಿತಿ ನೀಡಲಿ:
ಸರ್ಕಾರ ಕೊರೊನಾ ಬಗ್ಗೆ ಮೊದಲಿನಿಂದಲೂ ನಿರ್ಲಕ್ಷ್ಯ ತಾಳುತ್ತಲೇ ಬಂದಿದೆ. ಈಗ ಮೂರನೇ ಅಲೆ ಹರಡುವ ಬಗ್ಗೆ ಚರ್ಚೆಯಾಗುತ್ತಿದೆ. ಆದರೆ, ಈ ಬಗ್ಗೆ ಯಾರ ಬಳಿಯೂ ಸ್ಪಷ್ಟ ಮಾಹಿತಿ ಇಲ್ಲ. ಹೀಗಾಗಿ, ಸರ್ಕಾರ ಮೂರನೇ ಅಲೆ ಬಗ್ಗೆ ಜನರಿಗೆ ಸ್ಪಷ್ಟ ಮಾಹಿತಿ ನೀಡಬೇಕು ಎಂದು ಒತ್ತಾಯಿಸಿದರು.
ಸರ್ಕಾರ ಗಡಿ ಜಿಲ್ಲೆಗಳಲ್ಲಿ ವೀಕೆಂಡ್ ಕರ್ಫ್ಯೂ ಘೋಷಿಸಿದ್ದು, ಯಾವ ರೀತಿ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡೋಣ ಎಂದು ಪ್ರತಿಕ್ರಿಯಿಸಿದರು.
ಬಿಜೆಪಿ ಅಧಿಕಾರದಲ್ಲಿರೋವರೆಗೂ ಕೇಂದ್ರದಿಂದ ಅನುದಾನ ಬರಲ್ಲ:
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರದಲ್ಲಿ ಇರೋವರೆಗೂ ಕೇಂದ್ರ ಸರ್ಕಾರದಿಂದ ಯಾವುದೇ ಅನುದಾನ ಬರುವುದಿಲ್ಲ. ಪ್ರಧಾನಿ ಮೋದಿಯವರು ರಾಜ್ಯಕ್ಕೆ ಸಾಕಷ್ಟು ಸಮಸ್ಯೆ ಮಾಡಿದ್ದಾರೆ. ರಾಜ್ಯ ಸರ್ಕಾರ ಪ್ರತಿ ಬಾರಿ ಪ್ರವಾಹ ಸಂತ್ರಸ್ತರಿಗೆ ಪರಿಹಾರವನ್ನು ಘೋಷಿಸುತ್ತಿದೆ. ಆದರೆ, ಆ ಪರಿಹಾರ ಸಂತ್ರಸ್ತರಿಗೆ ತಲುಪುತ್ತಿಲ್ಲ. ಈ ಬಾರಿ ಪ್ರವಾಹ ಎದುರಾಗಿದ್ದರು ಕೂಡ ಯಾವುದೇ ಪರಿಹಾರ ನೀಡಿಲ್ಲ. ಇನ್ನೂ ಸರ್ವೇ ಕಾರ್ಯ ನಡೆಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ವೀರಕುಮಾರ ಪಾಟೀಲ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ವಿನಯ ನಾವಲಗಟ್ಟಿ, ಚಿಕ್ಕೋಡಿ ಜಿಲ್ಲಾ ಘಟಕದ ಅಧ್ಯಕ್ಷ ಲಕ್ಷ್ಮಣರಾವ್ ಚಿಂಗಳೆ, ಕಿಸಾನ್ ಕಾಂಗ್ರೆಸ್ ರಾಜ್ಯ ಘಟಕದ ಸಂಚಾಲಕ ರಾಜೇಂದ್ರ ಪಾಟೀಲ, ಎಐಸಿಸಿ ಗೋವಾ ವೀಕ್ಷಕ ಸುನೀಲ ಹನುಮಣ್ಣವರ, ಗ್ರಾಮೀಣ ಜಿಲ್ಲಾ ಕಾಂಗ್ರೆಸ್ ಸಮಿತಿ ಪ್ರಧಾನ ಕಾರ್ಯದರ್ಶಿ (ಆಡಳಿತ) ಪ್ರದೀಪ ಎಂ.ಜೆ. ಇದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button