ಪ್ರಗತಿವಾಹಿನಿ ಸುದ್ದಿ, ಖಾನಾಪುರ:
ತಾಲ್ಲೂಕಿನ ಲೋಂಡಾ ಅರಣ್ಯ ವಲಯದ ಗವ್ವೇಗಾಳಿ ಗ್ರಾಮದ ಬಳಿ ಲೋಂಡಾ-ಕ್ಯಾಸಲರಾಕ್-ಗೋವಾ ರೈಲು ಮಾರ್ಗದಲ್ಲಿ ರೈಲ್ವೆ ಹಳಿಗಳ ಪಕ್ಕದಲ್ಲಿ ಬಿದ್ದಿದ್ದ ತಿಂಡಿಯನ್ನು ತಿನ್ನುತ್ತಿದ್ದ ಕಾಡುಕೋಣಕ್ಕೆ ಚಲಿಸುತ್ತಿದ್ದ ರೈಲು ಅಪ್ಪಳಿಸಿದ ಪರಿಣಾಮ ಅದು ಸ್ಥಳದಲ್ಲೇ ಮೃತಪಟ್ಟ ಘಟನೆ ಸೋಮವಾರ ಬೆಳಕಿಗೆ ಬಂದಿದೆ.
ಅರಣ್ಯದಿಂದ ಆಹಾರ ಅರಸಿ ಬಂದ ಕಾಡುಕೋಣ ಗವ್ವೇಗಾಳಿ ಬಳಿ ಹಾದುಹೋದ ರೈಲ್ವೆ ಹಳಿ ಪಕ್ಕದಲ್ಲಿ ಮೇಯುತ್ತಿದ್ದ ಸಂದರ್ಭದಲ್ಲಿ ಹಿಂದಿನಿಂದ ಕಾಡುಕೋಣಕ್ಕೆ ರೈಲು ಡಿಕ್ಕಿ ಹೊಡೆದು ಈ ದುರಂತ ಸಂಭವಿಸಿದೆ. ಡಿಕ್ಕಿಯ ರಭಸಕ್ಕೆ ರೈಲಿನ ಇಂಜಿನ್ ಕಾಡುಕೋಣದ ದೇಹವನ್ನು ಹಲವು ಕಿಮೀ ದೂರದವರೆಗೆ ಎಳೆದುಕೊಂಡು ಹೋಗಿದೆ. ಆದರೆ ಅದರ ರುಂಡ ಮಾತ್ರ ಘಟನಾ ಸ್ಥಳದಲ್ಲೇ ಬಿದ್ದಿದೆ ಎಂದು ಇಲಾಖೆಯ ಮೂಲಗಳು ತಿಳಿಸಿವೆ.
ಸುದ್ದಿ ತಿಳಿಯುತ್ತಲೇ ಅರಣ್ಯ ಇಲಾಖೆಯ ಬೆಳಗಾವಿ ಡಿಎಫ್ಒ ಎಂ.ವಿ ಅಮರನಾಥ್, ಖಾನಾಪುರ ಎಸಿಎಫ್ ಸಿ.ಬಿ ಪಾಟೀಲ, ವಲಯ ಅರಣ್ಯ ಅಧಿಕಾರಿ ಬಸವರಾಜ ವಾಳದ ಮತ್ತು ಸಿಬ್ಬಂದಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಲೋಂಡಾ ವಲಯದ ಅರಣ್ಯ ಅಧಿಕಾರಿಗಳು, ಸಿಬ್ಬಂದಿ ಹಾಗೂ ಸ್ಥಳೀಯರು ಇದ್ದರು.
ಈಗಾಗಲೇ ಕಳೆದ ಮೂರು ವರ್ಷದ ಅವಧಿಯಲ್ಲಿ ಬೆಳಗಾವಿ ವಿಭಾಗದ ಅರಣ್ಯ ಪ್ರದೇಶದ ಮೂಲಕ ಹಾದುಹೋಗುವ ರೈಲು ಮಾರ್ಗದಲ್ಲಿ ರೈಲಿಗೆ ಸಿಲುಕಿ 15ಕ್ಕೂ ಹೆಚ್ಚು ಕಾಡುಕೋಣಗಳು, ಒಂದು ಕಾಡಾನೆ ಸೇರಿದಂತೆ ಹಲವು ವನ್ಯಜೀವಿಗಳು ಮೃತಪಟ್ಟಿವೆ. ರೈಲಿನಲ್ಲಿ ಪ್ರಯಾಣಿಸುವವರು ತಿಂದು ಬಿಸಾಡಿದ ಆಹಾರವನ್ನು ಸೇವಿಸಲು ವನ್ಯಜೀವಿಗಳು ರೈಲು ಹಳಿಗಳ ಬಳಿ ಬಂದು ತಮ್ಮ
ಪ್ರಾಣ ಕಳೆದುಕೊಳ್ಳುತ್ತಿರುವುದು ಆತಂಕದ ವಿಷಯವಾಗಿದೆ. ಕಾಡಿನ ಮಾರ್ಗದಲ್ಲಿ ಸಂಚರಿಸುವ ರೈಲುಗಳ ವೇಗ ನಿಯಂತ್ರಣ, ಪ್ರಯಾಣಿಕರು ತಿಂಡಿ ಪೊಟ್ಟಣಗಳನ್ನು ಹೊರಗೆ ಎಸೆಯಲು ನಿಷೇಧ, ಅರಣ್ಯದಲ್ಲಿ ಸಾಗುವ ರೈಲು ಮಾರ್ಗದ ಅಕ್ಕಪಕ್ಕ ಬೇಲಿ ನಿರ್ಮಾಣ ಸೇರಿದಂತೆ ವನ್ಯಜೀವಿಗಳ ಸುರಕ್ಷತೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ರೈಲ್ವೆ ಇಲಾಖೆಗೆ ಹಲವು ಬಾರಿ ಪತ್ರ ಬರೆದರೂ ಅಲ್ಲಿಂದ ಯಾವುದೇ ಕ್ರಮ ಜರುಗಿಸಿಲ್ಲ. ಹೀಗಾಗಿ ತಾಲ್ಲೂಕಿನ ಕಾಡಿನ ಮೂಲಕ ಹಾದುಹೋಗಿರುವ ರೈಲು ಮಾರ್ಗದಲ್ಲಿ ರೈಲುಗಳ ಆರ್ಭಟಕ್ಕೆ ಅಪರೂಪದ ವನ್ಯಜೀವಿಗಳ ಬಲಿ ನಿರಂತರವಾಗಿ ನಡೆದಿದೆ ಎಂದು ಖಾನಾಪುರ ಉಪವಿಭಾಗದ ಎಸಿಎಫ್
ಸಿ.ಬಿ ಪಾಟೀಲ ಘಟನೆಯ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದರು.
ಕಾಡುಕೋಣಗಳ ಹಿಂಡುಗಳ ಪೈಕಿ ಮಧ್ಯವಯಸ್ಕ ಕಾಡುಕೋಣ ರೈಲು ಹಳಿಗಳ ಪಕ್ಕ ರೈಲ್ವೆ ಪ್ರಯಾಣಿಕರು ತಿಂದು ಎಸೆದ ಆಹಾರವನ್ನು ಸೇವಿಸುವಾಗ ಈ ದುರ್ಘಟನೆ ಸಂಭವಿಸಿದೆ. ಇದೇ ರೀತಿಯ ಘಟನೆ ತಾಲೂಕಿನ ಮೂಲಕ ಹಾದುಹೋದ ರೈಲು ಮಾರ್ಗದಲ್ಲಿ ಈ ಹಿಂದೆ ಹಲವು ಬಾರಿ ನಡೆದಿವೆ. ಘಟನೆಯ ಬಗ್ಗೆ ಲೋಂಡಾ ವಲಯ ಅರಣ್ಯಾಧಿಕಾರಿಗಳ ಕಚೇರಿಯಲ್ಲಿ ರೈಲ್ವೆ ಇಲಾಖೆಯ ವಿರುದ್ಧ ಪ್ರಕರಣ ದಾಖಲಾಗಿದೆ ಎಂದು ಅವರು ಮಾಹಿತಿ ನೀಡಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ