ಬೆಳಗಾವಿ ನಗರ ಕೊರೋನಾ ಶಾಕ್ ನಿಂದ್ ಚುನಾವಣೆ ಶಾಕ್ ನತ್ತ ಸರಿದಿದೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಬೆಳಗಾವಿ ಪಾಲಿಕೆಗೆ ಚುನಾವಣೆ ಯಾವಾಗ ನಡೆದೀತು ಎಂದು ಎಲ್ಲರೂ ನಿರೀಕ್ಷೆಯಲ್ಲಿದ್ದುದು ನಿಜವಾದರೂ, ಇಷ್ಟು ದಿಢೀರ್ ಆಗಿ ಚುನಾವಣೆ ಘೋಷಣೆಯಾಗಿರುವುದು ಶಾಕ್ ನೀಡಿದೆ.
ಕೇವಲ 4 ದಿನ ಅವಕಾಶ ನೀಡಿ ನಾಮಪತ್ರ ಸಲ್ಲಿಕೆ ಆರಂಭದ ದಿನ ಘೋಷಿಸಲಾಗಿದೆ. ಆ.16ರಿಂದಲೇ ನಾಮಪತ್ರ ಸಲ್ಲಿಕೆ ಆರಂಭವಾಗಲಿದೆ. ಆ.23 ನಾಮಪತ್ರ ಸಲ್ಲಿಕೆಗೆ ಅಂತಿಮ ದಿನ. ಸೆ.3ರಂದು ಮತದಾನ ನಡೆಯಲಿದೆ. ಸೆ.6ಕ್ಕೆ ಫಲಿತಾಂಶ ಪ್ರಕಟವಾಗಲಿದೆ.
ಬೆಳಗಾವಿ ಬೇರೆ ಮಹಾನಗರ ಪಾಲಿಕೆಗಳಂತಲ್ಲ. ಇದು ಭಾಷಾ ವಿವಾದದ ಸೂಕ್ಷ್ಮ ಪ್ರದೇಶ. ಇಲ್ಲಿ ಕರ್ನಾಟಕ – ಮಹಾರಾಷ್ಟ್ರ ಗಡಿ ವಿವಾದ ಜೀವಂತವಿರುವ ಹಿನ್ನೆಲೆಯಲ್ಲಿ ಕಳೆದ ಹಲವು ವರ್ಷಗಳಿಂದ ಕನ್ನಡ – ಮರಾಠಿ ಭಾಷೆಯ ಆಧಾರದ ಮೇಲೆಯೇ ಚುನಾವಣೆ ನಡೆಯುತ್ತ ಬಂದಿದೆ. ಇದಕ್ಕೆ ಎಲ್ಲ ರಾಜಕೀಯ ಪಕ್ಷಗಳೂ ಸಹಕಾರ ನೀಡುತ್ತ ಬಂದಿವೆ.
ಬರಬರುತ್ತ ಇಲ್ಲಿ ಮರಾಠಿ ಪ್ರಾಬಲ್ಯ ಕಡಿಮೆಯಾಗಿದೆ. ಮರಾಠಿಗರಿಗೆ ಕೂಡ ಭಾಷಾ ರಾಜಕೀಯ ಸಾಕಾಗಿದೆ. ಹಾಗಾಗಿ ಅವರೂ ಮುಖ್ಯ ವಾಹಿನಿಗೆ ಬಂದಿದ್ದು, ರಾಜಕೀಯ ಪಕ್ಷಗಲ್ಲಿ ಗುರುತಿಸಿಕೊಳ್ಳುತ್ತಿದ್ದಾರೆ. ಮಹಾರಾಷ್ಟ್ರ ಏಕೀಕರಣ ಸಮಿತಿ ಬಹುತೇಕ ಮುಳುಗಿಹೋಗಿದೆ. ಮರಾಠಿ ಭಾಷಕ ಮುಖಂಡರು ಬಿಜೆಪಿ, ಕಾಂಗ್ರೆಸ್ ಪಕ್ಷಗಳಲ್ಲಿ ಗುರುತಿಸಿಕೊಂಡಿದ್ದಾರೆ.
ಹಾಗಾಗಿ ಈ ಬಾರಿ ಪಾರ್ಟಿ ಆಧಾರದ ಮೇಲೆ ಚುನಾವಣೆ ನಡೆಸಲು ರಾಜಕೀಯ ಪಕ್ಷಗಳು ಈಗಾಗಲೆ ಸಿದ್ಧತೆ ನಡೆಸಿವೆ. ಕಳೆದ 2 ವರ್ಷದಿಂದಲೂ ಈ ಬಗ್ಗೆ ಪಕ್ಷಗಳು ಸುಳಿವು ನೀಡುತ್ತ ಬಂದಿವೆ. ಕನ್ನಡ ಸಂಘಟನೆಗಳು ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿವೆ. ಈಗಲೂ ಕನ್ನಡ ಸಂಘಟನೆಗಳು ರಾಜಕೀಯ ಪಕ್ಷಗಳ ಮನವೊಲಿಸುವ ಪ್ರಯತ್ನ ಮಾಡಬಹುದು. ಆದರೆ ಭಾಷೆ ಆಧಾರದ ಮೇಲೆ ಈ ಬಾರಿ ಚುನಾವಣೆ ನಡೆಯುವುದು ಅನುಮಾನ.
ಮಹಾರಾಷ್ಟ್ರ ಏಕಾಕರಣ ಸಮಿತಿ ಅಲ್ಲದೆ, ಶಿವಸೇನೆ ಕೂಡ ಈ ಬಾರಿ ಪ್ರತ್ಯೇಕವಾಗಿ ಬೆಳಗಾವಿ ಪಾಲಿಕೆ ಚುನಾವಣೆಗೆ ಧುಮುಕುವುದು ಖಚಿತ. ಹಾಗಾಗಿ ಮರಾಠಿ ಭಾಷಿಕರೂ 2 -3 ಜನರು ಕಣಕ್ಕಿಳಿಯಬಹುದು.
ಇದೀಗ ಏಕಾ ಏಕಿ ಚುನಾವಣೆ ಘೋಷಣೆಯಾಗಿರುವುದು ಲ್ಲರಿಗೂ ಶಾಕ್ ನೀಡಿದೆ. ರಾಜಕೀಯ ಪಕ್ಷಗಳು ತರಾತುರಿಯಲ್ಲಿ ಸಿದ್ಧತೆ ಮಾಡಿಕೊಳ್ಳುತ್ತಿವೆ. ಹೊಸ ಮೀಸಲಾತಿ ಅನ್ವಯ ಅಭ್ಯರ್ಥಿಗಳು ಸಜ್ಜಾಗುತ್ತಿದ್ದಾರೆ. ತಮ್ಮ ಗಾಡ್ ಫಾದರ್ ಮೂಲಕ ಟಿಕೆಟ್ ಗಿಟ್ಟಿಸಲು ಪ್ರಯತ್ನ ಆರಂಭಿಸಿದ್ದಾರೆ. ಚುನಾವಣೆ ಘೋಷಣೆಯಾಗುತ್ತಿದ್ದಂತೆ ಆಕಾಂಕ್ಷಿಗಳೆಲ್ಲ ಚುರುಕಾಗಿದ್ದಾರೆ.
ಬೆಳಗಾವಿ ನಗರ ಕೊರೋನಾ ಶಾಕ್ ನಿಂದ್ ಚುನಾವಣೆ ಶಾಕ್ ನತ್ತ ಸರಿದಿದೆ. ಚುನಾವಣೆ ಗದ್ದಲದಲ್ಲಿ ಕೊರೋನಾ ಮರೆಯದಿರಲಿ ಎಂದೇ ಪ್ರಾರ್ಥಿಸೋಣ.
ಬೆಳಗಾವಿ ಸೇರಿ 3 ಮಹಾನಗರ ಪಾಲಿಕೆಗಳ ಚುನಾವಣೆ ಘೋಷಣೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ