Kannada NewsLatest

ಬೆಳಗಾವಿಗೆ ಭೇಟಿ ನೀಡಿದ ಕೇಂದ್ರ ನೆರೆ ಅಧ್ಯಯನ ತಂಡ; ಮನೆ, ಬೆಳೆ ಹಾನಿ ಪರಿಶೀಲನೆ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಇತ್ತೀಚಿನ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಪರಿಶೀಲನೆಗಾಗಿ ಜಿಲ್ಲೆಗೆ ಭೇಟಿ ನೀಡಿರುವ ಕೇಂದ್ರ ಅಧ್ಯಯನ ತಂಡವು ಭಾನುವಾರ (ಸೆ.5) ವಿವಿಧ ತಾಲ್ಲೂಕುಗಳಲ್ಲಿ ಸಂಚರಿಸಿ ನೆರೆಹಾನಿಯನ್ನು ಪರಿಶೀಲಿಸಿತು.

ಜಿಲ್ಲೆಯಲ್ಲಿ ಎರಡು ದಿನಗಳ ಕಾಲ ಸಂಚರಿಸಲಿರುವ ತಂಡವು ಮೊದಲ ದಿನ ಖಾನಾಪುರ, ಹುಕ್ಕೇರಿ ಹಾಗೂ ಗೋಕಾಕ ತಾಲ್ಲೂಕುಗಳಿಗೆ ಭೇಟಿ ನೀಡಿತು. ಭಾನುವಾರ ಬೆಳಿಗ್ಗೆ ನಗರಕ್ಕೆ ಆಗಮಿಸಿದ ತಂಡವನ್ನು ಜಿಲ್ಲಾಧಿಕಾರಿ ‌ಎಂ.ಜಿ.ಹಿರೇಮಠ ಸ್ವಾಗತಿಸಿದರು.

ಬೆಳಗಾವಿ ಜಿಲ್ಲೆಗೆ ಭೇಟಿ ನೀಡಿರುವ ಕೇಂದ್ರ ಗೃಹ ಇಲಾಖೆಯ ಲೆಕ್ಕ ವಿಭಾಗದ ಮುಖ್ಯ ನಿಯಂತ್ರಣಾಧಿಕಾರಿ ಸುಶೀಲ್ ಪಾಲ್ ನೇತೃತ್ವದ ನೆರೆ ಅಧ್ಯಯನ ತಂಡವು ಮೊದಲಿಗೆ ನಗರದ ಪ್ರವಾಸಿಮಂದಿರದಲ್ಲಿ ಜಿಲ್ಲಾಡಳಿತದೊಂದಿಗೆ ಸಭೆ ನಡೆಸಿ ಜಿಲ್ಲೆಯಲ್ಲಿ ಇತ್ತೀಚಿಗೆ ಅತಿವೃಷ್ಟಿಯಿಂದ ಉಂಟಾಗಿರುವ ಹಾನಿಯ ಕುರಿತು ಚರ್ಚೆ ನಡೆಸಿತು.

ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಅವರು, ಜಿಲ್ಲೆಯಲ್ಲಿ ಉಂಟಾಗಿರುವ ಮನೆ, ಬೆಳೆ ಹಾನಿಯ ಬಗ್ಗೆ ಹಾಗೂ ರಸ್ತೆ, ಸೇತುವೆ, ಶಾಲಾ ಕಟ್ಟಡಗಳು ಸೇರಿದಂತೆ ಇತರೆ ಮೂಲಸೌಕರ್ಯಗಳ ಹಾನಿಯ ಕುರಿತು ಛಾಯಾಚಿತ್ರಗಳ ಸಮೇತ ಪ್ರಾತ್ಯಕ್ಷಿಕೆಯನ್ನು ನೀಡಿದರು.

ಕೇಂದ್ರ ಅಧ್ಯಯನ ತಂಡದ ಸದಸ್ಯರಾದ ಕೇಂದ್ರ ಕೃಷಿ ಸಚಿವಾಲಯದ ನಿರ್ದೇಶಕರಾದ ಡಾ.ಕೆ.ಮನೋಹರನ್, ಇಂಧನ ಇಲಾಖೆಯ ಶುಭಂ ಗರ್ಗ್, ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ಆರ್ಯ ಮತ್ತಿತರರು ಉಪಸ್ಥಿತರಿದ್ದರು.

ಖಾನಾಪುರ ತಾಲ್ಲೂಕಿಗೆ ಭೇಟಿ:
ಸಭೆಯ ಬಳಿಕ ಖಾನಾಪುರ ತಾಲ್ಲೂಕಿಗೆ ಭೇಟಿ ನೀಡಿದ ಕೇಂದ್ರ ಅಧ್ಯಯನ ತಂಡವು, ಅತಿವೃಷ್ಟಿಯಿಂದ ತೀವ್ರ ಹಾನಿಗೊಳಗಾದ ಮಾರುತಿನಗರದ ಬಳಿ ಮಲಪ್ರಭಾ ನದಿಯ ಬ್ರಿಡ್ಜ್ ಕಮ್ ಬ್ಯಾರೇಜ್ ವೀಕ್ಷಿಸಿದರು.

ಇದಾದ ಬಳಿಕ ಪೌಲ್ಟ್ರಿ ಫಾರ್ಮ್ ಹಾಗೂ ಪೊಲೀಸ್ ತರಬೇತಿ ‌ಶಾಲೆಗೆ ಭೇಟಿ ನೀಡಿ, ಪರಿಶೀಲಿಸಿದರು.

ಹುಕ್ಕೇರಿ ತಾಲ್ಲೂಕಿನಲ್ಲಿ ಸಂಚಾರ:

ನಂತರ ಅತಿವೃಷ್ಟಿಯಿಂದ ‌ತೀವ್ರ ಹಾನಿ‌ ಸಂಭವಿಸಿರುವ ವಿವಿಧ ಪ್ರದೇಶಗಳಿಗೆ ಭೇಟಿ ನೀಡಿದ ತಂಡವು ತೋಟಗಾರಿಕೆ ಬೆಳೆಹಾನಿ, ಮನೆ ಹಾಗೂ ಮೂಲಸೌಕರ್ಯ ಹಾನಿಯನ್ನು ಪರಿಶೀಲಿಸಿತು.

ಜಿನರಾಳ ಕ್ರಾಸ್ ‌ನಲ್ಲಿ ತೋಟಗಾರಿಕೆ ಬೆಳೆಹಾನಿ, ಬಡಕುಂದ್ರಿ ಹೊಳೆಮ್ಮ ದೇವಸ್ಥಾನದ ಬಳಿ ಹಿರಣ್ಯಕೇಶಿ ನದಿಪಾತ್ರದ ಮನೆಗಳು ಹಾಗೂ ಮೂಲಸೌಕರ್ಯ ಹಾನಿಯನ್ನು ವೀಕ್ಷಿಸಿದ ತಂಡವು ಹಾನಿಯ ‌ಕುರಿತು ಅಧಿಕಾರಿಗಳಿಂದ ಮಾಹಿತಿಯನ್ನು ಪಡೆದುಕೊಂಡಿತು.

ಜೂನ್ ಎರಡನೇ ವಾರದಲ್ಲಿ ಬಿತ್ತನೆ ಮಾಡಲಾದ ಕ್ಯಾಬೇಜ್ ಬೆಳೆ‌ ಜುಲೈನಲ್ಲಿ ಸುರಿದ ಮಳೆಗೆ ಸಂಪೂರ್ಣ ಹಾಳಾಗಿದೆ. ಅದೇ ರೀತಿ ಟೊಮ್ಯಾಟೊ ಬೆಳೆ ಕೂಡ ಹಾನಿಯಾಗಿರುವುದಾಗಿ ರೈತರು ವಿವರಿಸಿದರು.

20 ಗುಂಟೆ ಜಮೀನಿನಲ್ಲಿ ಹನ್ನೆರಡು ಟನ್ ಇಳುವರಿ ಬರಬೇಕಿತ್ತು. ಮಳೆಯಿಂದಾಗಿ ಕೇವಲ ಎರಡು ಟನ್ ಕೂಡ ಬಂದಿಲ್ಲ.‌ ಮೂವತ್ತು ಸಾವಿರ ಖರ್ಚು ಮಾಡಲಾಗಿದೆ ಎಂದು ರೈತರು ಹೇಳಿದರು.

ಇದೇ ರೀತಿ ನೂರಾರು ಎಕರೆಯಲ್ಲಿರುವ ಟೊಮ್ಯಾಟೋ ಬೆಳೆ ಹಾನಿಯಾಗಿರುತ್ತದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ಆರ್ಯ ಹಾಗೂ ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ವಿವರಿಸಿದರು.

ಹೊಳೆಯಮ್ಮ ದೇವಸ್ಥಾನದ ಆವರಣದಲ್ಲಿ ಅತಿವೃಷ್ಟಿ ಹಾನಿಗೆ ಸಂಬಂಧಿಸಿದ ಛಾಯಾಚಿತ್ರ ಪ್ರದರ್ಶನವನ್ನು ವೀಕ್ಷಿಸಿದರು. ಹುಕ್ಕೇರಿ ತಾಲ್ಲೂಕಿನ ಯರನಾಳ, ಇಸ್ಲಾಂಪುರ, ಸುಲ್ತಾನಪುರ, ಹರಗಾಪುರ, ಗುಡಸ-ಹುಲ್ಲೊಳಿ ರಸ್ತೆ, ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ವಿವಿಧ ಹಾನಿಗೆ ಸಂಬಂಧಿಸಿದ ಛಾಯಾಚಿತ್ರಗಳನ್ನು ತಂಡದ ಸದಸ್ಯರು ವೀಕ್ಷಿಸಿದರು.

ಹಾನಿ ಕುರಿತು ಎಂಟತ್ತು ದಿನಗಳಲ್ಲಿ ಕೇಂದ್ರಕ್ಕೆ ಸಮಗ್ರ ವರದಿ-ಸುಶಿಲ್ ಪಾಲ್:

ಈ ಸಂದರ್ಭದಲ್ಲಿ ಸುದ್ದಿಗಾರರ ಜತೆ‌ ಮಾತನಾಡಿದ ನೆರೆ ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ಸುಶೀಲ್ ಪಾಲ್ ಅವರು, ಬೆಳಗಾವಿ ಜಿಲ್ಲೆಯಲ್ಲಿ ಉಂಟಾಗಿರುವ ಹಾನಿಯನ್ನು ಸಮಗ್ರವಾಗಿ ಪರಿಶೀಲಿಸಿದ ಬಳಿಕ ಸರಕಾರದ ಮಾರ್ಗಸೂಚಿ ಪ್ರಕಾರ ನೆರವು ಬಿಡುಗಡೆಗೆ ವರದಿಯನ್ನು ಸಲ್ಲಿಸಲಾಗುವುದು ಎಂದು ತಿಳಿಸಿದರು.

ನೆರೆ ಅಧ್ಯಯನದ ಬಳಿಕ ಸಾಮಾನ್ಯವಾಗಿ ಎಂಟರಿಂದ ಹತ್ತು ದಿನಗಳೊಳಗೆ ದಿನದೊಳಗೆ ಕೇಂದ್ರ ಸರಕಾರಕ್ಕೆ ಸಮಗ್ರ ವರದಿ ಸಲ್ಲಿಸಲಾಗುತ್ತದೆ ಎಂದು ಹೇಳಿದರು.

ರಾಜ್ಯಕ್ಕೆ ಮಾರ್ಗಸೂಚಿ ಪ್ರಕಾರ ಒಟ್ಟು 765 ಕೋಟಿ ಬಿಡುಗಡೆಗೆ ಪ್ರಸ್ತಾವನೆಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾಗಿದೆ ಎಂದು ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ ಆಯುಕ್ತರಾದ ಮನೋಜ್ ಆರ್ಯ ಹೇಳಿದರು. ಈ ಪ್ರಸ್ತಾಪವನ್ನು ಆಧರಿಸಿ ಮೂರು ಕೇಂದ್ರ‌ ಅಧ್ಯಯನ ತಂಡಗಳು ಭೇಟಿ ನೀಡಿ ಹಾನಿಯನ್ನು ಪರಿಶೀಲನೆ ಕೈಗೊಂಡಿವೆ.

ಬೆಳೆಹಾನಿ ಜಂಟಿ ಸಮೀಕ್ಷೆ ಬಳಿಕ ಸೂಕ್ತ ಪರಿಹಾರ ಬಿಡುಗಡೆಗೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು. ನಂತರ ಗೌಡವಾಡ ಗ್ರಾಮದಲ್ಲಿ ‌ಮನೆಗಳ‌ ಕುಸಿತ ಕುರಿತು ‌ಸಂತ್ರಸ್ತರ ಜತೆ‌ ಚರ್ಚೆ ನಡೆಸಿದ ತಂಡದ ಸದಸ್ಯರು ಮನೆ ಕುಸಿದಾಗ ತುರ್ತಾಗಿ ಆಶ್ರಯ ಪಡೆದಿರುವ ಬಗ್ಗೆ ತಿಳಿದುಕೊಂಡರು.

ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ದರ್ಶನ್, ಉಪ ವಿಭಾಗಾಧಿಕಾರಿಗಳಾದ ರವೀಂದ್ರ ಕರಲಿಂಗಣ್ಣವರ, ಶಶಿಧರ್ ಬಗಲಿ, ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ, ಪಶು‌ ಸಂಗೋಪನೆ ಇಲಾಖೆಯ ಉಪನಿರ್ದೇಶಕ ಡಾ.ಅಶೋಕ ಕೊಳ್ಳಾ, ಖಾನಾಪುರ ಹಾಗೂ ಹುಕ್ಕೇರಿ ತಹಶೀಲ್ದಾರರು ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.
ಪ್ರಾಥಮಿಕ ಶಾಲೆಗಳ ಆರಂಭ ವಿಚಾರ; ಸಿಎಂ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button