ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ವಿಧಾನಮಂಡಲ ಅಧಿವೇಶನದಲ್ಲಿ ಅಗತ್ಯ ವಸ್ತುಗಳ ಬೆಲೆ ಏರಿಕೆ ವಿಚಾರ ಪ್ರತಿಧ್ವನಿಸಿದ್ದು, ಆಡಳಿತ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಾಯಕರ ನಡುವಿನ ಗದ್ದಲ-ಕೋಲಾಹಲಕ್ಕೆ ಕಾರಣವಾಗಿದೆ.
ವಾಜಪೇಯಿ ಅವಧಿಯಲ್ಲಿ ಆಯಿಲ್ ಬಾಂಡ್ ಖರೀದಿ ವಿಚಾರ ಹಾಗೂ ಅಂಕಿ-ಅಶಗಳ ಸಮೇತ ವಿಪಕ್ಷ ನಾಯಕ ಸಿದ್ದರಾಮಯ್ಯ ವಿಷಯ ಪ್ರಸ್ತಾಪಿಸುತ್ತಿದ್ದಂತೆ ಆಡಳಿತ ಪಕ್ಷದ ಬಿಜೆಪಿ ನಾಯಕರು ಸಿದ್ದರಾಮಯ್ಯ ವಿರುದ್ಧ ಮುಗಿಬಿದ್ದಿದ್ದು, ಬೆಲೆ ಏರಿಕೆ ಸಾಮಾನ್ಯ ಪ್ರಕ್ರಿಯೆ. ಯುಪಿಎ ಸರ್ಕಾರದ ಅವಧಿಯಿಂದಲೂ ಆಗಿದೆ ಎಂದು ಸಮರ್ಥಿಸಿಕೊಳ್ಳಲು ಮುಂದಾದರು.
ಅಂದು ಪೆಟ್ರೋಲ್ ಬೆಲೆ 7 ಪೈಸೆ ಏರಿಕೆಯಾಗುತ್ತಿದ್ದಂತೆ ವಾಜಪೇಯಿ ಪಾರ್ಲಿಮೆಂಟ್ ಗೆ ಎತ್ತಿನಗಾಡಿಯಲ್ಲಿ ಬಂದರು. ಕ್ರಿಮಿನಲ್ ಲೂಟ್ ಎಂದು ಹೇಳಿಕೆ ನೀಡಿದ್ದರು. ಗ್ಯಾಸ್ ಸಿಲಿಂಡರ್ ದರ ಸ್ವಲ್ಪ ಏರುತ್ತಿದ್ದಂತೆ ಅಂದು ಶೋಭಾ ಕರಂದ್ಲಾಜೆ ಸಿಲಿಂಡರ್ ತಲೆ ಮೇಲೆ ಹೊತ್ತು ಪ್ರತಿಭಟನೆ ಮಾಡಿದರು. ಇಂದು ಅವರು ಎಲ್ಲಿಗೆ ಹೋಗಿದ್ದಾರೆ? ಆಯಿಲ್ ಬಾಂಡ್ ಖರಿದಿಸಿದ್ದು ವಾಜಪೇಯಿ ಅವಧಿಯಲ್ಲಿ ಅದನ್ನು ಡಾ.ಸಿಂಗ್ ಅವಧಿಯಲ್ಲಿ ಮುಂದುವರೆಸಿಕೊಂಡು ಹೋಗಲಾಯಿತು. ಆದರೆ ಈಗ ಕಚ್ಚಾ ತೈಲ ಬೆಲೆ ಕಡಿಮೆಯಿದ್ದರೂ ಪೆಟ್ರೋಲ್, ಡೀಸೆಲ್ ಬೆಲೆಯನ್ನು ಏರಿಕೆ ಮಾಡುತ್ತಲೇ ಹೋಗಲಾಗುತ್ತಿದೆ. ಕೋವಿಡ್ ನಂತಹ ಸಂಕಷ್ಟದ ಸಂದರ್ಭದಲ್ಲಿ ಜೀವನ ನಡೆಸುವುದು ದುಸ್ಥರವಾಗಿರುವಾಗ ಅಗತ್ಯವಸ್ತುಗಳ ಬೆಲೆ ಏರಿಕೆಯಾಗುತ್ತಿರುವುದು ಜನ ಸಾಮಾನ್ಯರು ಕಣ್ಣೀರಲ್ಲಿ ಕೈತೊಳೆಯುವಂತಾಗಿದೆ. ಈ ಬಗ್ಗೆ ರಾಜ್ಯ ಸರ್ಕಾರ ಉತ್ತರ ಕೊಡಬೇಕು ಎಂದು ಆಗ್ರಹಿಸಿದರು.
ಓರ್ವ ಕೂಲಿ ಕಾರ್ಮಿಕ ಇಂದು ವರ್ಷಕ್ಕೆ 1 ಲಕ್ಷ ತೆರೆಗೆ ಕಟ್ಟುತ್ತಿರುವ ಬಗ್ಗೆ ಸರ್ವೆಯಲ್ಲಿ ಬಹಿರಂಗವಾಗಿದೆ. ರಾಜ್ಯದಿಂದ ಕೇಂದ್ರಕ್ಕೆ ಹೋಗುತ್ತಿರುವ ತೆರಿಗೆ ಹಣ ಏನಾಗುತ್ತಿದೆ? ಬೆಲೆ ಏರಿಕೆಯಾಗುತ್ತಲೇ ಇದ್ದರೆ ಬಸ್, ಗಾಡಿಗಳಲ್ಲಿ ಓಡಾಟ, ಅಗತ್ಯ ವಸ್ತು ಖರೀದಿ, ಔಷಧಿ ಖರೀದಿಗೆ ಜನಸಾಮಾನ್ಯರು ಏನು ಮಾಡಬೇಕು? ಎಂದು ಪ್ರಶ್ನಿಸಿದರು. ಈ ವೇಳೆ ಮಾತನಾಡಿದ ಸಚಿವ ಜೆ.ಸಿ.ಮಾಧುಸ್ವಾಮಿ, ಡಾ.ಸಿಂಗ್ ಸರ್ಕಾರದ ಬಗ್ಗೆ ಕಟ್ಟಿಕೊಂಡು ಈಗ ಏನು ಆಗಬೇಕಾಗಿದೆ? ಪಾರ್ಲಿಮೆಂಟ್ ನಲ್ಲಿ ಕೇಳುವ ಪ್ರಶ್ನೆ ಇಲ್ಲಿ ಕೇಳುತ್ತಿದ್ದೀರಿ ಉತ್ತರ ಕೊಡಲು ಸಾಧ್ಯವಾಗುವಂತಹ ಪ್ರಶ್ನೆ ಕೇಳಿ ಎಂದು ಕಿಡಿಕಾರಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ನಾನು ಸಂಸತ್ತಿಗೆ ಹೋಗಿ ಕೇಳಲು ಆಗಲ್ಲ ಅದಕ್ಕಾಗಿಯೇ ಇಲ್ಲಿ ಪ್ರಶ್ನಿಸುತ್ತಿದ್ದೇನೆ ಎಂದು ಗುಡುಗಿದರು.
ಇದೇವೇಳೆ ಮಾತನಾಡಿದ ಸಚಿವ ಆರ್ ಅಶೋಕ್ ಕಾಂಗ್ರೆಸ್ ನವರು 70 ವರ್ಷ ದೇಶವನ್ನು, ರಾಜ್ಯವನ್ನು ಲೂಟಿ ಮಾಡಿದ್ದಾರೆ. ಈಗ ನಮ್ಮನ್ನು ಪ್ರಶ್ನಿಸಿದರೆ ಹೇಗೆ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಸಿದ್ದರಾಮಯ್ಯ ನಾವು 70 ವರ್ಷ ದೇಶದಲ್ಲಿ ಆಡಲಿತ ನಡೆಸಿ, ದೇಶಕ್ಕೆ ಸಂಪತ್ತು ಸೃಷ್ಟಿಸಿದೆವು. ಅದಕ್ಕಾಗಿ ನೀವು 7 ವರ್ಷದಲ್ಲಿ ಎಲ್ಲವನ್ನೂ ಹಾಳು ಮಾಡುತ್ತಿದ್ದೀರಾ? ಎಲ್ಲವನ್ನೂ ಖಾಸಗಿ ಕರಣ ಮಾಡಿ ಅಂಬಾನಿ, ಅದಾನಿಯಂತವರನ್ನು ಬೆಳೆಸುತ್ತಿದ್ದೀರಾ. ಪ್ರಧಾನಿ ಮೋದಿ ಸುಳ್ಳು ಭರವಸೆಗಳನ್ನು ನೀಡಿ ಜನರ ದಿಕ್ಕು ತಪ್ಪಿಸುತ್ತಿದ್ದಾರೆ. ಪೆಟ್ರೋಲ್, ಡೀಸೆಲ್, ಅಡುಗೆ ಅನಿಲ ದರ ಏರುಕೆಯಿಂದ ಜನ ಪರದಾಡುತ್ತಿದ್ದಾರೆ. 20 ರೂಪಾಯಿ ಇದ್ದ 2 ಇಡ್ಲಿ 1 ವಡಾ ಸಾಂಬಾರ್ ಬೆಲೆ ಇಂದು 37 ರೂ ಆಗಿದೆ. 590 ರೂ ಇದ್ದ ಗ್ಯಾಸ್ ಸಿಲಿಂಡರ್ ಬೆಲೆ ಇಂದು 920 ರೂ ಆಗಿದೆ. ಉಜ್ವಲ ಯೋಜನೆ ಎಂದು ಪ್ರಧಾನಿ ಮೋದಿ ಘೋಷಣೆ ಮಾಡಿದರು. ಆದರೆ 2020ರಿಂದ ಸಬ್ಸಿಡಿ ನೀಡುವುದನ್ನು ನಿಲ್ಲಿಸಿದ್ದಾರೆ. ಗ್ಯಾಸ್ ಸಿಲಿಂಡರ್ ದರ ಏರಿಕೆಯಿಂದ ರಾಜ್ಯದಲ್ಲಿ ಶೇ.36ರಷ್ಟು ಜನ ಮತ್ತೆ ಸೌದೆ ಒಲೆ ಮೊರೆ ಹೋಗಿದ್ದಾರೆ ಎಂದು ಕಿಡಿಕಾರಿದರು.
ಈ ವೇಳೆ ಆಡಳಿತ ಪಕ್ಷದ ಬಿಜೆಪಿ ಸದಸಯರು ಕಾಂಗ್ರೆಸ್ ನಾಯಕರ ವಿರುದ್ಧ ವಾಗ್ದಾಳಿ ನಡೆಸಿದ್ದು, ಸದನದಲ್ಲಿ ಬಿಜೆಪಿ ಹಾಗೂ ಕಾಂಗ್ರೆಸ್ ಸದಸ್ಯರ ನಡುವೆ ಗದ್ದಲ-ಕೋಲಾಹಲ ನಡೆಯಿತು.
ಬಿಜೆಪಿ ರಾಷ್ಟ್ರಾಧ್ಯಕ್ಷ ನಡ್ಡಾ ವಿರುದ್ಧ ಪ್ರಕರಣ ದಾಖಲು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ