ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಲೆ ಏರಿಕೆ ವಿಚಾರ ವಿಧಾನಸಭೆಯಲ್ಲಿ ಮತ್ತೆ ಪ್ರತಿಧ್ವನಿಸಿದ್ದು, ಆಡಳಿ ಪಕ್ಷ ಬಿಜೆಪಿ ಹಾಗೂ ವಿಪಕ್ಷ ಕಾಂಗ್ರೆಸ್ ನಡುವೆ ಗದ್ದಲಕ್ಕೆ ಕಾರಣವಾಯಿತು.
ವಿಧಾನಸಭೆಯಲ್ಲಿ ಬೆಲೆ ಏರಿಕೆ ಕುರಿತಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಉತ್ತರ ನೀಡುತ್ತಿದ್ದಂತೆ ಕಾಂಗ್ರೆಸ್ ಸದಸ್ಯರು ಬಿಜೆಪಿಯವರದ್ದು ಲೂಟಿ ಸರ್ಕಾರ ಎಂದು ಘೋಷಣೆ ಕೂಗಲು ಆರಂಭಿಸಿದರು. ಈ ವೇಳೆ ಕಿಡಿಕಾರಿದ ಸಿಎಂ ಬೊಮ್ಮಾಯಿ, ಕಾಂಗ್ರೆಸ್ ನವರದ್ದು ಲೂಟ್ ಸರ್ಕಾರ. ಕಾಂಗ್ರೆಸ್ ಸರ್ಕಾರವನ್ನು ಕ್ರಿಮಿನಲ್ ಲೂಟ್ ಎಂದು ಕರೆಯಲಾಗಿತ್ತು. ಕ್ರಿಮಿನಲ್ ಲೂಟ್ ಎಂದರೆ ನಿಮಗೆ ಬೇಸರವಾಗುತ್ತೆ ಎನ್ನುವುದಾದರೆ ಕಾಂಗ್ರೆಸ್ ಲೂಟ್ ಎಂದು ಕರೆಯೋಣ ಎಂದು ವಾಗ್ದಾಳಿ ನಡೆಸಿದರು.
ಬೊಮ್ಮಾಯಿ ಹೇಳಿಕೆಗೆ ಕೆಂಡಾಮಂಡಲರಾದ ವಿಪಕ್ಷ ನಾಯಕ ಸಿದ್ದರಾಮಯ್ಯ ಹಾಗೂ ಕಾಂಗ್ರೆಸ್ ಸದಸ್ಯರು ಬಿಜೆಪಿ ಕೂಡ ಲೂಟ್ ಸರ್ಕಾರ. ಅಗತ್ಯವಸ್ತುಗಳ ಬೆಲೆ ಏರಿಕೆಯಾಗಿದೆ, ಜನಸಾಮಾನ್ಯರು ಪರದಾಡುವಂತಾಗಲು ಬಿಜೆಪಿ ದುರಾಡಳಿತವೇ ಕಾರಣ. ಲೂಟಿ ಮಾಡುತ್ತಿರುವುದು ಬಿಜೆಪಿ ಸರ್ಕಾರ. ಪ್ರಧಾನಿ ಮೋದಿಗೆ ಈ ಬಗ್ಗೆ ನೋವಾಗಬೇಕು ಎಂದು ಗುಡುಗಿದರು.
ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಸಿಎಂ ಬೊಮ್ಮಾಯಿ, ನೀವು ಮಾಡಿರುವುದು ಕ್ರಿಮಿನಲ್ ಲೂಟ್, ಹೀಗಿರುವಾಗ ನಮಗೆ ಬುದ್ಧಿ ಹೇಳಲು ಬರಬೇಡಿ. ಇದು ಭೂತದ ಬಾಯಲ್ಲಿ ಭಗವದ್ಗೀತೆ ಕೇಳಿದಂತಿದೆ. ಕಾಂಗ್ರೆಸ್ ಅವಧಿಯಲ್ಲಿ ಶೇ60ರಷ್ಟು ಬೆಲೆ ಏರಿಕೆ ಮಾಡಲಾಗಿದೆ. ನಮ್ಮ ಅವಧಿಯಲ್ಲಿ ಶೇ.30ರಷ್ಟು ಮಾಡಿದ್ದೇವೆ. ಕಾಂಗ್ರೆಸ್ ನವರಿಗೆ ಪ್ರಶ್ನೆ ಮಾಡುವ ಅಧಿಕಾರವೂ ಇಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ದೆಹಲಿಯಲ್ಲಿ ರೈತರ ಹೋರಾಟ ಪ್ರಾಯೋಜಿತ, ಇಂತಹ ಪ್ರಾಯೋಚಿತ ಚಳುವಳಿ ಮೂಲಕ ರೈತರಿಗೆ ಕಾಂಗ್ರೆಸ್ ನಾಯಕರು ಅವಮಾನ ಮಾಡುತ್ತಿದ್ದಾರೆ. ಪಂಜಾಬ್, ಹರಿಯಾಣ ರೈತರದ್ದು ಎಂಎಸ್ ಪಿ ರಾಜಕಾರಣ ಇದೆಲ್ಲವೂ ನಮಗೆ ಗೊತ್ತಿದೆ ಎಂದು ಕಿಡಿಕಾರಿದರು. ಸಿಎಂ ಹೇಳಿಕೆಗೆ ಕಾಂಗ್ರೆಸ್ ಸದಸ್ಯರು ಸರ್ಕಾರದ ವಿರುದ್ಧ ಮುಗಿಬಿದ್ದರು. ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ಮಾತಿನ ಚಕಮಕಿ, ವಾಕ್ಸಮರದಿಂದಾಗಿ ಸದನದಲ್ಲಿ ಕೋಲಾಹಲವುಂಟಾಗಿದ್ದು, ಕಲಾಪವನ್ನು ಸ್ಪೀಕರ್ ಕಾಗೇರಿ ಭೋಜನ ವಿರಾಮದ ನಂತರ 3:15ಕ್ಕೆ ಮುಂದೂಡಿದರು.
ಬೆಲೆ ಏರಿಕೆಗೆ ಆಕ್ರೋಶ; ಕಾಂಗ್ರೆಸ್ ನಿಂದ ಸೈಕಲ್ ಜಾಥಾ
ಮೂರನೇ ಅಲೆ ಆತಂಕದ ನಡುವೆ ಮಕ್ಕಳ ಸರ್ವೆಯಲ್ಲಿ ಶಾಕಿಂಗ್ ಮಾಹಿತಿ ಬಹಿರಂಗ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ