ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬೆಲೆ ಏರಿಕೆ ಖಂಡಿಸಿ ಅಧಿವೇಶನಕ್ಕೆ ಟಾಂಗಾ ಜಾಥಾ ಮೂಲಕ ಆಗಮಿಸಿದ ಕಾಂಗ್ರೆಸ್ ನಾಯಕರು ರಾಜ್ಯ ಬಿಜೆಪಿ ಹಾಗೂ ಕೇಂದ್ರ ಸರ್ಕಾರದ ವಿರುದ್ಧ ಹಿಗ್ಗಾಮುಗ್ಗಾ ವಾಗ್ದಾಳಿ ನಡೆಸಿದ್ದಾರೆ.
ವಿಧಾನಸೌಧದಲ್ಲಿ ಮಾತನಾಡಿದ ವಿಪಕ್ಷ ನಾಯಕ ಸಿದ್ದರಾಯ್ಯ, ಬೆಲೆ ಏರಿಕೆ ವಿರುದ್ಧ ಅಂದು ಎತ್ತಿನಗಾಡಿ ಮೂಲಕ ಪ್ರತಿಭಟನೆ ನಡೆಸಿದೆವು, ಬಳಿಕ ಸೈಕಲ್ ಜಾಥಾ ಮೂಲಕ ಅಧಿವೇಶಕ್ಕೆ ಬಂದು ಪ್ರತಿಭಟನೆ ನಡೆಸಿದರು. ಆದರೂ ಈ ಸರ್ಕಾರ ಜನರ ಸಂಕಷ್ಟ ಆಲಿಸುತ್ತಿಲ್ಲ. ದಪ್ಪ ಚರ್ಮದ ಸರ್ಕಾರ ಇದು. ಹಾಗಾಗಿ ಮತ್ತೆ ಮತ್ತೆ ನಾವು ಹೋರಾಟ ಮಾಡುತ್ತಿದ್ದೇವೆ. ಇಂದು ಟಾಂಗಾ ಪ್ರತಿಭಟನೆ ಮಾಡುವ ಮೂಲಕ ವಿಧಾನಸೌಧಕ್ಕೆ ಬಂದಿದ್ದೇವೆ ಎಂದರು.
ಬಿಜೆಪಿ ಸರ್ಕಾರ ಬೆಲೆ ಏರಿಕೆ ಮಾಡಿ ಜನರ ರಕ್ತ ಕುಡಿಯುತ್ತಿದೆ. ಸಿಎಂ ಬಸವರಾಜ್ ಬೊಮ್ಮಾಯಿ, ಪ್ರಧಾನಿ ಮೋದಿ ಸರ್ಕಾರ ಬೆಲೆ ಏರಿಕೆಯನ್ನು ಬಹಳ ಲಘುವಾಗಿ ಮಾತನಾಡುತ್ತಾ ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಪೆಟ್ರೋಲ್ ದರ 100 ರೂ ತಲುಪಿದೆ. ಡೀಸೆಲ್ 90 ರೂಪಾಯಿ ಆಗಿದೆ. ಅಗತ್ಯ ವಸ್ತುಗಳನ್ನು ಖರೀದಿಸಲು ಜನರು ಒಡವೆಗಳನ್ನು ಗಿರವಿ ಇಟ್ಟು ಬದುಕುವ ಸ್ಥಿತಿಯಿದೆ. 10-15 ಸಾವಿರ ಸಂಬಳ ಪಡೆಯುವವರು ಮನೆ ನಿಭಾಯಿಸಲಾಗದೇ ಹೊತ್ತಿನ ಊಟಕ್ಕೆ ಪರದಾಡುವ ಸ್ಥಿತಿ ಬಂದಿದೆ. ಇಷ್ತಾದರೂ ಸರ್ಕಾರಕ್ಕೆ ಅರ್ಥವಾಗುತ್ತಿಲ್ಲ. ನಾವು ಸದನದಲ್ಲಿ ಪ್ರಶ್ನೆ ಮಾಡಿದರೆ ಉಡಾಫೆ ಉತ್ತರ ನೀಡುತ್ತಾ, ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಅಂದು ನಮ್ಮ ಸರ್ಕಾರದ ಅವಧಿಯಲ್ಲಿ 7 ಪೈಸೆ ಬೆಲೆ ಏರಿಕೆಯಾಗಿದ್ದಕ್ಕೆ ವಾಜಪೇಯಿ ಸಂಸತ್ ಅಧಿವೇಶನಕ್ಕೆ ಎತ್ತಿನ ಗಾಡಿಯಲ್ಲಿ ಬಂದು ಪ್ರತಿಭಟಿಸಿದರು. ಇಂದು ಪೆಟ್ರೋಲ್ ದರ ನೂರು ರೂ ಗಡಿ ದಾಟಿದೆ. ಕೋವಿಡ್ಸಂಕಷ್ಟದಿಂದ ಜನರು ತತ್ತರಿಸಿರುವಾಗ ಅಗತ್ಯವಸ್ತುಗಳ ಬೆಲೆ ದುಪ್ಪಟ್ಟು ಮಾಡುವುದು ಸರಿಯೇ? ಬಿಜೆಪಿ ಸರ್ಕಾರ ಲಜ್ಜೆಗೆಟ್ಟ ಮಾನ ಮರ್ಯಾದೆ ಇಲ್ಲದ ಸರ್ಕಾರ. ನಿಜವಾಗಿಯೂ ರೈತರ ಪರ, ಬಡವರ ಪರವಾದ ಸರ್ಕಾರವಾದರೆ ಅಗತ್ಯ ವಸ್ತುಗಳ ಬೆಲೆಯನ್ನು 10 ರೂಪಾಯಿ ಇಳಿಕೆ ಮಾಡಲಿ. ತೆರಿಗೆ ಹಣವನ್ನು ಕಾರ್ಪೊರೇಟ್ ಬಾಡಿ, ಶ್ರೀಮಂತರ ಮೇಲೆ ಹಾಕಿ ಬಡ ಜನತೆಯ ಮೇಲೆ ಹೇರುತ್ತಿರುವುದಾದರೂ ಯಾಕೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬೆಲೆ ಏರಿಕೆ ವಿರುದ್ಧ ಕಾಂಗ್ರೆಸ್ ಟಾಂಗಾ ರ್ಯಾಲಿ; ಕುದುರೆ ಟಾಂಗಾ ಮೂಲಕ ಅಧಿವೇಶನಕ್ಕೆ ಎಂಟ್ರಿಕೊಟ್ಟ’ ಕೈ’ ನಾಯಕರು
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ