Latest

ಮೂವರು ಹಿರಿಯ ಸಾಹಿತಿಗಳಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ, ಕಥೆ ಮತ್ತು ಕಾದಂಬರಿ ಪ್ರಶಸ್ತಿ ಪ್ರದಾನ

ಪ್ರಗತಿವಾಹಿನಿ ಸುದ್ದಿ; ಧಾರವಾಡ: ಧಾರವಾಡ ಆಲೂರು ವೆಂಕಟರಾವ್ ಸಭಾಭನದಲ್ಲಿ ಬೆಳಗಾವಿಯ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ವತಿಯಿಂದ ಭಾನುವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ 2020-21ನೇ ಸಾಲಿನ ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ, ಕಥೆ ಮತ್ತು ಕಾದಂಬರಿ ಪ್ರಶಸ್ತಿಗಳನ್ನು ಮೂವರು ಹಿರಿಯ ಸಾಹಿತಿಗಳಿಗೆ ಹಿರಿಯ ಸಾಹಿತಿ ಡಾ. ಗುರುಲಿಂಗ ಕಾಪಸೆ ಅವರು, ಪ್ರಶಸ್ತಿ ಪ್ರದಾನ ಮಾಡಿದರು.

ಡಾ. ಸಿದ್ಧಲಿಂಗ ಪಟ್ಟಣಶೆಟ್ಟಿ ಅವರಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಕಾವ್ಯ ಪ್ರಶಸ್ತಿ, ಡಾ. ಕುಂ. ವೀರಭದ್ರಪ್ಪ ಅವರಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಕಾದಂಬರಿ ಪ್ರಶಸ್ತಿ ಹಾಗೂ ವೈದೇಹಿ ಅವರಿಗೆ ಡಾ. ಬೆಟಗೇರಿ ಕೃಷ್ಣಶರ್ಮ ಕಥಾ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು. ಈ ಪ್ರಶಸ್ತಿಯು ತಲಾ 50 ಸಾವಿರ ರೂ. ನಗದು ಹಾಗೂ ಪ್ರಶಸ್ತಿ ಪ್ರಮಾಣ ಪತ್ರವನ್ನು ಒಳಗೊಂಡಿದೆ.

ಪ್ರಶಸ್ತಿ ಪ್ರದಾನ ಮಾಡಿ ಮಾತನಾಡಿದ ಡಾ. ಗುರುಲಿಂಗ ಕಾಪಸೆ ಅವರು, ಈ ಪ್ರಶಸ್ತಿ ಆಯ್ಕೆಯಲ್ಲಿ ಭಾಷೆ, ಪ್ರಾದೇಶಿಕ ಹಾಗೂ ಸಾಮಾಜಿಕ ನ್ಯಾಯವನ್ನು ಪರಿಗಣಿಸಲಾಗಿದೆ. ಈ ಪ್ರಶಸ್ತಿ ಪಡೆದ ಮೂವರು ಸಾಹಿತಿಗಳು ಶ್ರೇಷ್ಠರಾಗಿದ್ದಾರೆ. ಈ ಪ್ರತಿಷ್ಠಾನದ ಕಾರ್ಯ ರಾಜ್ಯದ ಇತರ ಪ್ರತಿಷ್ಠಾನಕ್ಕೆ ಮಾದರಿಯಾಗಿದೆ. ಬದುಕಿನಲ್ಲಿ ಉತ್ತಮ ಮೌಲ್ಯಗಳನ್ನು ಅಳವಡಿಸಿಕೊಳ್ಳಬೇಕು. ಇತ್ತೀಚಿನ ದಿನಗಳಲ್ಲಿ ತಂತ್ರಜ್ಞಾನದ ಪ್ರಭಾವದಿಂದ ನಾವು ಲೌಕಿಕತೆಯನ್ನು ತೊರೆಯುತ್ತಿರುವುದು ವಿಷಾಧನೀಯ ಎಂದರು.

ಡಾ. ಸಿದ್ದಲಿಂಗ ಪಟ್ಟಣಶೆಟ್ಟಿ ಮಾತನಾಡಿ, ಡಾ. ಬೆಟಗೇರಿ ಕೃಷ್ಣಶರ್ಮ ಅವರು ನಿಷ್ಟುರ ಮತ್ತು ಸ್ಪಷ್ಟ ಮಾತಿನ ಕವಿಯಾಗಿದ್ದರು. ಹೀಗಾಗಿ ಅವರ ಸಾಹಿತ್ಯ ಕೃಷಿ ಅನನ್ಯವಾಗಿದೆ. ಅವರ ಸಾಹಿತ್ಯದ ಪ್ರತಿಯೊಂದು ಆಕರಗಳು ನಾಡಿಗೆ ಮಾದರಿಯಾಗಿವೆ ಎಂದರು.

ನಾಡೋಜ ವೈದೇಹಿ ಮಾತನಾಡಿ, ಚಿಕ್ಕ ವಯಸ್ಸಿನಿಂದಲೂ ಡಾ. ಕೃಷ್ಣಶರ್ಮ ಅವರ ಜಯಂತಿ ಪ್ರತಿಕೆಯನ್ನು ಓದಿ ಬೆಳೆದಿದ್ದೆನೆ. ಅವರು ನಾಡಿನ ಮಹಾನ ಕವಿಗಳಲ್ಲಿ ಒಬ್ಬರು. ಸಮಾಜದಲ್ಲಿ ಮಹಿಳೆರ ಮೇಲೆ ನಡೆಯುತ್ತಿರುವ ದೌರ್ಜನ್ಯಗಳು ನಿಲ್ಲಬೇಕು. ಮಹಿಳೆ ಆಡಳಿತರದಲ್ಲಿ ಇದ್ದರೂ, ಪುರುಷ ಅಧಿಕಾರ ನಡೆಸುತ್ತಾನೆ. ಯಾವಾಗ ಮಹಿಳೆಗೆ ಗೌರವ, ರೈತರ ಸಂಕಷ್ಟಗಳು ದೂರವಾಗುತ್ತವೊ ಆಗ ದೇಶ ಹೆಚ್ಚು ಅಭಿವೃದ್ಧಿ ಹೊಂದುತ್ತದೆ ಎಂದರು.

ಕು. ವೀರಭದ್ರಪ್ಪ ಮಾತನಾಡಿ, ನಾನು ಇಂದಿನಿಂದ ಕುಂಬಾರ ವೀರಭದ್ರಪ್ಪ ಎಂದು ಕರೆದುಕೊಳ್ಳುತ್ತೇನೆ. ಹಳ್ಳಿಯಲ್ಲಿ ಬೆಳದ ಡಾ. ಕೃಷ್ಣಶರ್ಮ ಅವರು ಗ್ರಾಮೀಣ ಪ್ರದೇಶಗಳನ್ನು ಸಮರ್ಥಿಸಿಕೊಂಡು ಸಾಹಿತ್ಯದಲ್ಲಿ ಕೃಷಿ ಮಾಡಿದ್ದಾರೆ. ಬರಹ ನನ್ನನ್ನು ಸೌಮ್ಯ ಸ್ವಭಾವದ ವ್ಯಕ್ತಿಯನ್ನಾಗಿ ಮಾಡಿದೆ. ಪುಸ್ತಕ ಓದಿದ ಉತ್ಸಾಹ ಆರೋಗ್ಯವನ್ನು ಪುಳಕಗೊಳಿಸುತ್ತದೆ. ದೇಶದಲ್ಲಿ ಶೇ.72ರಷ್ಟು ಕಿಮಿನಲ್ ರಾಜಕಾರಣಿಗಳು ಇದ್ದಾರೆ. ಅವರಿಂದ ದೇಶದ ಅಭಿವೃದ್ಧಿ ಅಸಾಧ್ಯ. ಹೀಗಾಗಿ ಲೇಖಕರು ಸಮಾಜದ ಅಭಿವೃದ್ಧಿಗೆ ಏನನ್ನಾದರೂ ಮಾಡಬೇಕು ಎಂದರು.

ಈ ವೇಳೆ ಡಾ. ಬೆಟಗೇರಿ ಕೃಷ್ಣಶರ್ಮ ಸ್ಮಾರಕ ಟ್ರಸ್ಟ್ ಅಧ್ಯಕ್ಷ ರಾಘವೇಂದ್ರ ಪಾಟೀಲ, ಟ್ರಸ್ಟನ ಸದಸ್ಯ ಕಾರ್ಯದರ್ಶಿ ವಿದ್ಯಾವತಿ ಭಜಂತ್ರಿ, ಡಾ. ಸಿ.ಕೆ. ನಾವಲಗಿ, ಶಿರೀಷ ಜೋಶಿ, ಡಾ. ಸರಜೂ ಕಾಟ್ಕರ್, ಸತೀಶ ಕುಲಕರ್ಣಿ, ಆಶಾ ಕಡಪಟ್ಟಿ, ಪ್ರೊ. ಚಂದ್ರಶೇಖರ ವಸ್ತ್ರದ, ಇತರರು ಉಪಸ್ಥಿತರಿದ್ದರು.
ಬೆಳಗಾವಿಯಲ್ಲಿ ಚಳಿಗಾಲದ ಅಧಿವೇಶನಕ್ಕೆ ಸಿದ್ಧತೆ; ಡಿಸೆಂಬರ್ ವೇಳೆಗೆ ಸರ್ಕಾರಿ ಕಚೇರಿಗಳ ಸ್ಥಳಾಂತರ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button