ಪ್ರಗತಿವಾಹಿನಿ ಸುದ್ದಿ; ಚಿಕ್ಕೋಡಿ: ನಿಪ್ಪಾಣಿಯ ವಿದ್ಯಾ ಸಂವರ್ಧಕ ಮಂಡಳದ ಮೈದಾನದಲ್ಲಿ ಜರುಗಿದ ದಾಂಡಿಯಾ ನೈಟ್ಸ್ ಕಾರ್ಯಕ್ರಮವನ್ನು ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ ದುರ್ಗಾಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸುವ ಮೂಲಕ ಚಾಲನೆ ನೀಡಿದರು.
ದಾಂಡಿಯಾ ಕಾರ್ಯಕ್ರಮದಲ್ಲಿ ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ ಸೇರಿದಂತೆ ವಿವಿಧ ಗಣ್ಯರು ಸ್ಟೆಪ್ಸ್ ಹಾಕಿದರು.
ಈ ವೇಳೆ ಮಾತನಾಡಿದ ಸಚಿವೆ ಶಶಿಕಲಾ ಜೊಲ್ಲೆ, ಹೊರ ರಾಜ್ಯದಲ್ಲಿಯ ಕೆಲ ಪ್ರಸಿದ್ಧ ದೇಗುಲಗಳಲ್ಲಿ ಯಾತ್ರಿ ನಿವಾಸಗಳನ್ನು ಶೀಘ್ರದಲ್ಲೆ ನಿರ್ಮಾಣ ಮಾಡಲಾಗುವುದು ಎಂದರು.
‘ಆಂಧ್ರಪ್ರದೇಶದಲ್ಲಿರುವ ಶ್ರೀಶೈಲ್‍ನಲ್ಲಿ ರೂ. ಒಂದು ಕೋಟಿ ಅನುದಾನದಲ್ಲಿ ಯಾತ್ರಿಭವನವನ್ನು ಶೀಘ್ರದಲ್ಲೇ ನಿರ್ಮಿಸಲಾಗುವುದು. ಅಯೋಧ್ಯೆಯಲ್ಲಿಯೂ ಸಹ ರಾಜ್ಯದ ಭಕ್ತರಿಗಾಗಿ ಒಂದು ಸುಸಜ್ಜಿತವಾದ ಯಾತ್ರಿನಿವಾಸ ನಿರ್ಮಿಸಲಾಗುವುದು. ರಾಜ್ಯದ ಭಕ್ತರಿಗಾಗಿ ಮಹಾರಾಷ್ಟ್ರದ ಪಂಢರಪುರ ಹಾಗೂ ಗುಡ್ಡಾಪೂರದಲ್ಲಿ ಯಾತ್ರಿನಿವಾಸಗಳನ್ನು ನಿರ್ಮಿಸಲಿದ್ದು ಇನ್ನೊಂದು ತಿಂಗಳಲ್ಲಿ ಭೂಮಿಪೂಜೆ ನೆರವೇರಿಸಲಾಗುವುದು ಎಂದು ತಿಳಿಸಿದರು.
ತಿರುಪತಿಯಲ್ಲೂ ಸಹ ಈಗಾಗಲೇ ಒಂದು ಯಾತ್ರಿನಿವಾಸವಿದ್ದರೂ ಇನ್ನೊಂದು ಯಾತ್ರಿನಿವಾಸದ ನಿರ್ಮಾಣದ ಕಾರ್ಯ ನಡೆದಿದೆ. ಅಯೋಧ್ಯೆಯಲ್ಲಿ ನಿರ್ಮಾಣವಾಗುತ್ತಿರುವ ಶ್ರೀರಾಮ ಮಂದಿರ ನಿರ್ಮಾಣಕ್ಕಾಗಿ ರೂ.40 ಕೋಟಿ ಅನುದಾನ ಈಗಾಗಲೇ ನೀಡಲಾಗಿದೆ’ ಎಂದರು.
ತಾಲ್ಲೂಕಿನ ಮಮದಾಪೂರ ಗ್ರಾಮದ ಅಂಬಿಕಾದೇವಿ ದೇವಸ್ಥಾನಕ್ಕಾಗಿ ಉಭಯ ರಾಜ್ಯಗಳಿಂದ ಅಪಾರ ಭಕ್ತರು ಆಗಮಿಸುತ್ತಾರೆ. ಆದ್ದರಿಂದ ರೂ.4.16 ಕೋಟಿ ವೆಚ್ಚದಲ್ಲಿ ಅಲ್ಲಿ ಯಾತ್ರಿನಿವಾಸ, ಮಕ್ಕಳಿಗೆ ಆಟವಾಡಲು ಒಂದು ಸುಂದರ ಉದ್ಯಾನವನ, ಸಮುದಾಯ ಭವನ ಮತ್ತು ರಕ್ಷಣಾ ಗೋಡೆ ಕಾಮಗಾರಿಗಳು ಶೀಘ್ರದಲ್ಲೆ ನಡೆಯಲಿದ್ದು ಅದಕ್ಕಾಗಿ ಚೆಕ್ ಈಗಾಗಲೇ ನೀಡಲಾಗಿದೆ. ಕೊಲ್ಹಾಪೂರದ ಪ್ರಸಿದ್ಧ ಮಹಾಲಕ್ಷ್ಮೀಯ ದೇಗುಲದ ನಂತರ ನಗರದ ಗ್ರಾಮದೇವತೆಯಾದ ಶ್ರೀ ಮಹಾಲಕ್ಷ್ಮೀ ದೇವಿಯ ದೇವಾಲಯ ಎನ್ನುವಂತೆ ಕನಸ್ಸು ಕಂಡಿದ್ದೆ. ಅದಕ್ಕಾಗಿಯೇ ಸ್ಥಳೀಯ ಮಹಾಲಕ್ಷ್ಮೀ ದೇಗುಲಕ್ಕಾಗಿ ನನ್ನ ಆಡಳಿತಾವಧಿಯಲ್ಲಿ ಇಲ್ಲಿಯವರೆಗೆ ಸುಮಾರು ರೂ. ಒಂದು ಕೋಟಿ ಅನುದಾನ ನೀಡಲಾಗಿದೆ ಎಂದರು.
ಬಸವಪ್ರಸಾದ ಜೊಲ್ಲೆ ಮಾತನಾಡಿ ‘ಜೊಲ್ಲೆ ಕುಟುಂಬವು ರಾಜಕಾರಣದಲ್ಲಿ ಸಕ್ರೀಯವಾಗಿದ್ದರೂ ಸಾಮಾಜಿಕ, ಧಾರ್ಮಿಕ, ಶೈಕ್ಷಣಿಕ ಮೊದಲಾದ ಹತ್ತು ಹಲವಾರು ಕ್ಷೇತ್ರಗಳಲ್ಲಿ ಕಾರ್ಯನಿರ್ವಹಿಸುತ್ತಿದೆ. ಕಳೆದ ಎರಡು ವರ್ಷಗಳಲ್ಲಿ ಯಾವುದೆ ಕಾರ್ಯಕ್ರಮಗಳು ಆಗದ ಪರಿಣಾಮ ಮತ್ತು ಕೋವಿಡ್-19 ಗಣನೀಯವಾಗಿ ಇಳಿಮುಖವಾಗಿದ್ದರಿಂದ ಸಾರ್ವಜನಿಕರ ಮನೋರಂಜನೆಗಾಗಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಸ್ಟೆಪ್ಸ್ ಹಾಕಿದ ಸಚಿವೆ:
ಆರಂಭದಲ್ಲಿ ಸಚಿವೆ ಶಶಿಕಲಾ ಜೊಲ್ಲೆ, ಸಂಸದ ಅಣ್ಣಾಸಾಹೇಬ ಜೊಲ್ಲೆ, ವಿದ್ಯಾ ಸಂವರ್ಧಕ ಮಂಡಳದ ಚೇರಮನ್ ಚಂದ್ರಕಾಂತ ಕೋಠಿವಾಲೆ, ವಾಯಿಸ್-ಚೇರಮನ್ ಆರ್.ವೈ. ಪಾಟೀಲ, ಯೂಥ್ ಫೌಂಡೇಶನ್ ಅಧ್ಯಕ್ಷ ಬಸವಪ್ರಸಾದ ಜೊಲ್ಲೆ, ಜೋತಿಪ್ರಸಾದ ಜೊಲ್ಲೆ ಸೇರಿದಂತೆ ಗಣ್ಯರು ದುರ್ಗಾಮಾತಾ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿದರು.
ನಂತರ ಆಕಾಶಕ್ಕೆ ಬಲೂನ್‍ಗಳನ್ನು ಹಾರಿಸಿ ಚಾಲನೆ ನೀಡಿದ ಅವರು ದಾಂಡಿಯಾ ಆಡುತ್ತ ಸ್ಟೆಪ್ಸ್ ಹಾಕಿ ದಾಂಡಿಯಾದಲ್ಲಿ ಭಾಗವಹಿಸಿದ್ದ ಯುವಕರು, ಯುವತಿಯರು ಸಂಗೀತದಲ್ಲಿ ದಾಂಡಿಯಾದೊಂದಿಗೆ ತೇಲುವಂತೆ ಮಾಡಿದರು.
ಮಕ್ಕಳಂತೂ ಕನ್ನಡ, ಹಿಂದಿ, ಮರಾಠಿ ಹಾಗೂ ಗುಜರಾತಿ ಹಾಡುಗಳ ಸಂಗೀತದೊಂದಿಗೆ ದಾಂಡಿಯಾ ನೃತ್ಯದಲ್ಲಿ ಮೈಮರೆತುಕೊಂಡಿದ್ದರು. ಸಂಸದ ಜೊಲ್ಲೆಯವರೂ ದಾಂಡಿಯಾ ನೃತ್ಯವಾಡಿ ನೋಡುಗರ ಗಮನ ಸೆಳೆದರು.
ಈ ಸಂದರ್ಭದಲ್ಲಿ ಹಾಲಶುಗರ ಕಾರ್ಖಾನೆಯ ವಾಯಿಸ್-ಚೇರಮನ್ ಮಲಗೊಂಡಾ ಪಾಟೀಲ ಮತ್ತು ಸಂಚಾಲಕರು, ನಗರಸಭೆ ಅಧ್ಯಕ್ಷ ಜಯವಂತ ಭಾಟಲೆ, ಉಪಾಧ್ಯಕ್ಷೆ ನೀತಾ ಬಾಗಡೆ ಮತ್ತು ಸದಸ್ಯರು, ಗೋಪಾಳ ನಾಯಿಕ, ಪ್ರಣವ ಮಾನವಿ. ಪವನ ಪಾಟೀಲ, ವಿಭಾವರಿ ಖಾಂಡಕೆ, ಮೊದಲಾದವರು ಉಪಸ್ಥಿತರಿದ್ದರು.
ವಿಶ್ವವಿಖ್ಯಾತ ಮೈಸೂರು ದಸರಾ ಜಂಬೂ ಸವಾರಿಗೆ ಸಿಎಂ ಬೊಮ್ಮಾಯಿ ಚಾಲನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ