Kannada NewsKarnataka News

ಬೆಳಗಾವಿಯಲ್ಲಿ ರಾಜ್ಯಮಟ್ಟದ ಎಸಿಬಿ ಕಾರ್ಯಾಗಾರ ಆರಂಭ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಭ್ರಷ್ಟಾಚಾರ ನಿರ್ಮೂಲನ ಕಾಯ್ದೆ ಮತ್ತು ಇದಕ್ಕೆ ಸಂಬಂಧಿಸಿದ ಕಾಯ್ದೆಗಳ ಕುರಿತು ಮೂರು ದಿನಗಳ ಕಾಲ ರಾಜ್ಯ ಮಟ್ಟದ ಕಾರ್ಯಾಗಾರ ಬೆಳಗಾವಿಯಲ್ಲಿ ನಡೆಯುತ್ತಿದ್ದು, ಬುಧವಾರ ಪ್ರಧಾನ ಜಿಲ್ಲಾ ಸತ್ರ ನ್ಯಾಯಾಧೀಶರಾದ ಚಂದ್ರಶೇಖರ ಎಂ. ಜೋಶಿ ಉದ್ಘಾಟಿಸಿದರು.
ಭ್ರಷ್ಟಾಚಾರ ನಿಗ್ರಹದಳದ ಎಡಿಜಿಪಿ ಸೀಮಂತಕುಮಾರ ಸಿಂಗ್ ಅವರ ಮಾರ್ಗದರ್ಶನದಲ್ಲಿ ಬೆಳಗಾವಿಯ ಸುವರ್ಣ ವಿಧಾನಸೌಧದಲ್ಲಿ ಕಾರ್ಯಾಗಾರ ನಡೆಯುತ್ತಿದೆ.
 ದಿನ ನಿತ್ಯದ ಸಾರ್ವಜನಿಕ ಕಾರ್ಯಗಳಲ್ಲಿ ಆಗುತ್ತಿರುವ ಭ್ರಷ್ಟಾಚಾರದ ಬೆಳವಣಿಗೆಗಳನ್ನು ತಡೆಗಟ್ಟಬಹುದಾದ ಯೋಜನೆಗಳ ಬಗ್ಗೆ ಮತ್ತು ಇತ್ತೀಚೆಗೆ ಹೆಚ್ಚಾಗುತ್ತಿರುವ ಇಲೆಕ್ಟ್ರಾನಿಕ್ ಉಪಕರಣಗಳ ಮೂಲಕ ನಡೆಯುತ್ತಿರುವ ಭ್ರಷ್ಟಾಚಾರದ ಪ್ರಕರಣಗಳಲ್ಲಿ ತನಿಖಾಧಿಕಾರಿಗಳು ಸಂಗ್ರಹಿಸಬೇಕಾದ ಸಾಕ್ಷಾಧಾರಗಳ ಬಗ್ಗೆ ಮತ್ತು ಸಂಗ್ರಹಿಸುವ ವಿಧಾನದ ಬಗ್ಗೆ ಈ ಕಾರ್ಯಾಗಾರದಿಂದ ತಿಳಿದುಕೊಳ್ಳುವ ವ್ಯವಸ್ಥೆಯಾಗಬೇಕು ಎಂದು ಚಂದ್ರಶೇಖರ ಜೋಶಿ ಹೇಳಿದರು.
 ಕಾರ್ಯಕ್ರಮದ ಮುಖ್ಯ ಅತಿಥಿಗಳಾಗಿ ಬೆಳಗಾವಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಲಕ್ಷಣ ಬಿ. ನಿಂಬರಗಿ ಆಗಮಿಸಿ ಭ್ರಷ್ಟಾಚಾರ ಎಂದರೇನು, ಅದರ ಅರ್ಥದ ಬಗ್ಗೆ, ಆಚಾರ-ಅನಾಚಾರದ ಬಗ್ಗೆ ಮತ್ತು ಕಾರ್ಯಾಗಾರದಲ್ಲಿ ಭ್ರಷ್ಟಾಚಾರದಿಂದ ತಿಳಿದುಕೊಳ್ಳಬೇಕಾದ ವಿಷಯಗಳ ಬಗ್ಗೆ ವಿವರಿಸಿದರು.
 ಕಾರ್ಯಾಗಾರದ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಿದ ಭ್ರಷ್ಟಾಚಾರ ನಿಗ್ರಹ ದಳ ಕೇಂದ್ರ ಕಛೇರಿ ಪೊಲೀಸ್ ಅಧೀಕ್ಷಕರು (ಆಡಳಿತ) ಅಬ್ದುಲ್ ಅಹಾದ್,  ಕಾರ್ಯಾಗಾರವನ್ನು ಆಯೋಜಿಸಿದ ಅಧಿಕಾರಿ ಮತ್ತು ಸಿಬ್ಬಂದಿಗಳನ್ನು ಅಭಿನಂದಿಸಿ, ಭ್ರಷ್ಟಾಚಾರದ ಪ್ರಕರಣಗಳಲ್ಲಿ ತನಿಖೆಯನ್ನು ಪರಿಣಾಮಕಾರಿಯಾಗಿ ಕೈಗೊಳ್ಳುವ ಬಗ್ಗೆ, ಘನ ನ್ಯಾಯಾಲಯಗಳ ತೀರ್ಪುಗಳ ಬಗ್ಗೆ ವಿವರಿಸಿದರು.
  ಶಸ್ತ್ರ ಅಭ್ಯಾಸ ಇಲ್ಲದಿದ್ದರೆ ಪ್ರಾಣ ಹೋಗುತ್ತದೆ, ಶಾಸ್ತ್ರ (ಕಾನೂನು) ಗೊತ್ತಿಲ್ಲದಿದ್ದರೆ ಮಾನ ಹೋಗುತ್ತದೆ ಎಂದು ಅವರು ಹೇಳಿದರು.
ಭ್ರಷ್ಟಾಚಾರ ನಿಗ್ರಹ ದಳದ ಉತ್ತರ ವಲಯ ಪೊಲೀಸ್ ಅಧೀಕ್ಷಕ ಬಿ.ಎಸ್.ನೇಮಗೌಡ ಸ್ವಾಗತಿಸಿದರು.    ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕ ಜೆ.ಎಂ.ಕರುಣಾಕರ ಶೆಟ್ಟಿ ವಂದನಾರ್ಪಣೆ ಸಲ್ಲಿಸಿದರು.
 ಕಾರ್ಯಾಗಾರದಲ್ಲಿ ಎಸಿಬಿ ಕೇಂದ್ರ ಕಛೇರಿಯ ಹಿರಿಯ ಅಧಿಕಾರಿಗಳು, ಎಸಿಬಿ ವಲಯಗಳ ಪೊಲೀಸ್ ಅಧೀಕ್ಷಕರುಗಳು, ಕರ್ನಾಟಕ ರಾಜ್ಯದ ಎಲ್ಲ ಜಿಲ್ಲೆಗಳ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಉಪಾಧೀಕ್ಷಕರುಗಳು, ಪೊಲೀಸ್ ನಿರೀಕ್ಷಕರು, ಕಾನೂನು ಅಧಿಕಾರಿಗಳು ಹಾಗೂ ಸಿಬ್ಬಂದಿಗಳು   ಕಾರ್ಯಾಗಾರದಲ್ಲಿ ನೇರವಾಗಿ ಇಲ್ಲವೇ ವರ್ಚುವಲ್ ಮೂಲಕ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button