ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಬಿಟ್ ಕಾಯಿನ್ ವಿಚಾರವಾಗಿ ರಾಜಕೀಯ ನಾಯಕರ ಬಡಿದಾಟ ಮುಂದುವರೆದಿದ್ದು, ಸಿದ್ದರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೇ ಬಿಟ್ ಕಾಯಿನ್ ದಂಧೆ ನಡೆದಿದೆ ಎಂದು ರಾಜ್ಯ ಬಿಜೆಪಿ ಘಟಕ ಆರೋಪಿಸಿದೆ.
ಬಿಟ್ ಕಾಯಿನ್ ದಂಧೆಯ ಆರೋಪಿ ಯುವ ಕಾಂಗ್ರೆಸ್ ನಿಯೋಜಿತ ಅಧ್ಯಕ್ಷ ಮಹಮ್ಮದ್ ನಲಪಾಡ್ ಹಾಗೂ ಮಾಜಿ ಸಚಿವ ಲಮಾಣಿ ಪುತ್ರ ದರ್ಶನ್ ನಡುವೆ ಅವ್ಯವಹಾರ ನಡೆಸಿರುವ ಬಗ್ಗೆ ನ್ಯಾಯಾಲಯಕ್ಕೆ ಸಲ್ಲಿಸಲಾದ ಚಾರ್ಜ್ ಶೀಟ್ ನಲ್ಲಿ ಉಲ್ಲೇಖಿಸಲಾಗಿದೆ ಎಂದು ಬಿಜೆಪಿ ತಿಳಿಸಿದೆ.
ಸರಣಿ ಟ್ವೀಟ್ ಮೂಲಕ ಕಿಡಿ ಕಾರಿರುವ ಬಿಜೆಪಿ, ಬಿಟ್ ಕಾಯಿನ್ ದಂಧೆ ಆರೋಪಿ ಶ್ರೀಕಿಯನ್ನು ಸಿದ್ದರಾಮಯ್ಯ ಅವಧಿಯಲ್ಲಿ ಬಂಧಿಸಿ ಬಿಡುಗಡೆಗೊಳಿಸಲಾಗಿತ್ತು. ಅದೇ ಸಿದ್ದರಾಮಯ್ಯ ಈಗ ಬಿಟ್ ಕಾಯಿನ್ ಆರೋಪಿಗೆ ಕಾಂಗ್ರೆಸ್ ನಾಯಕರ ಜೊತೆ ಇರುವ ಸಂಬಂಧವನ್ನು ಉಲ್ಲೇಖ ಮಾಡದೆ, ಬಿಜೆಪಿ ವಿರುದ್ಧ ಹೇಳಿಕೆ ನೀಡುತ್ತಿರುವುದು ದುರದೃಷ್ಟಕರ ಎಂದು ಹೇಳಿದೆ.
ಬಿಟ್ ಕಾಯಿನ್ ವಿಚಾರವಾಗಿ ಸಿದ್ದರಾಮಯ್ಯ ಬೇಜವಾಬ್ದಾರಿ ಹೇಳಿಕೆ ನೀಡುವುದನ್ನು ನಿಲ್ಲಿಸಬೇಕು. ಪ್ರಕರಣ ಸಂಬಂಧ ಸಾಕ್ಷ್ಯಗಳಿದ್ದರೆ ಬಹಿರಂಗಪಡಿಸಬೇಕು ಎಂದು ಬಿಜೆಪಿ ಆಗ್ರಹಿಸಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ