ಪ್ರಗತಿವಾಹಿನಿ ಸುದ್ದಿ, ಖಾನಾಪುರ: ತಾಲ್ಲೂಕಿನ ಬಂಕಿ ಗ್ರಾಮದ ಒಂದೇ ಕುಟುಂಬದ 11 ಸದಸ್ಯರು ವಿಷಪೂರಿತ ಆಹಾರ ಸೇವಿಸಿ ಅಸ್ವಸ್ಥರಾದ ಪ್ರಕರಣಕ್ಕೆ ಸಂಬಂಧಿಸಿದಂತೆ ಗುರುವಾರ ಬೆಳಗಾವಿ
ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸಾಹೀರ್ ಮಹಮ್ಮದ್ ಜಮಾದಾರ (14)
ಮೃತಪಟ್ಟಿದ್ದಾನೆ.
“ತೀವ್ರ ವಾಂತಿ ಮತ್ತು ಬೇಧಿಯಿಂದ ನಿತ್ರಾಣವಾಗಿದ್ದ ಸಾಹೀರ್ ಎಂಬ ಮಗುವನ್ನು ಹೆಚ್ಚಿನ
ಚಿಕಿತ್ಸೆಗಾಗಿ ಜಿಲ್ಲಾಸ್ಪತ್ರೆಗೆ ದಾಖಲಿಸಿದ್ದು, ಆತ ಚಿಕಿತ್ಸೆ ಫಲಿಸದೇ ಗುರುವಾರ
ಮೃತಪಟ್ಟಿದ್ದಾನೆ” ಎಂದು ತಾಲ್ಲೂಕು ಆರೋಗ್ಯಾಧಿಕಾರಿ ಡಾ.ಸಂಜೀವ ನಾಂದ್ರೆ ಮಾಹಿತಿ
ನೀಡಿದರು.
ಈ ಘಟನೆಯ ಕುರಿತು ನಂದಗಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜಮಾದಾರ ಕುಟುಂಬದ ಸದಸ್ಯರು ಮೂರು ದಿನಗಳ ತಮ್ಮ ಸಂಬಂಧಿಕರ ಮನೆಯಲ್ಲಿ ಔತಣಕೂಟ ಮುಗಿಸಿ ಮನೆಗೆ ಹಿಂದಿರುಗಿದ್ದರು. ಬಳಿಕ ಅವರ ಆರೋಗ್ಯದಲ್ಲಿ ಏರುಪೇರಾದ ಕಾರಣ ನಂದಗಡದ ಸಮುದಾಯ ಆರೋಗ್ಯ ಕೇಂದ್ರಕ್ಕೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದರು.
ಜಮಾದಾರ ಕುಟುಂಬದ ಸದಸ್ಯರು ಸೇವಿಸಿದ ಆಹಾರದ ಬಗ್ಗೆ ಅನುಮಾನ ವ್ಯಕ್ತಪಡಿಸಿರುವ ವೈದ್ಯರು ಅವರೆಲ್ಲರೂ ಸೇವಿಸಿದ ಆಹಾರದಲ್ಲಿ ಇಲಿ, ಜಿರಳೆ ಅಥವಾ ಹಲ್ಲಿ ಬಿದ್ದಿರಬಹುದು ಎಂದು
ಶಂಕಿಸಿದ್ದಾರೆ.
ಆಹಾರಕ್ಕೆ ವಿಷ ಸೇರಿದ್ದರಿಂದ ಫುಡ್ ಪಾಯಿಸನ್ ಉಂಟಾಗಿದ್ದು, ಇದರಿಂದಾಗಿ ಓರ್ವ ಬಾಲಕ ಸಾವನ್ನಪ್ಪಿದ್ದಾನೆ ಎಂದು ಅಭಿಪ್ರಾಯ ಪಟ್ಟಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ