ಬಿಜೆಪಿ ಮುಳುಗುತ್ತಿರೋದ್ರಿಂದ್ಲೇ ಜೆಡಿಎಸ್ ಬೆಂಬಲ ಕೇಳಿದ್ದಲ್ವೇ?
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಗ್ರಾಮ ಪಂಚಾಯಿತಿ ವ್ಯವಸ್ಥೆಗೆ ಅತೀ ಹೆಚ್ಚು ಒತ್ತು ಕೊಟ್ಟಿದ್ದು ಕಾಂಗ್ರೆಸ್ ಪಕ್ಷ. 1 ಲಕ್ಷ ದಿಂದ 5 ಲಕ್ಷಕ್ಕೆ ಅನುದಾನ ಏರಿಕೆ ಮಾಡಿದ್ದು ಕಾಂಗ್ರೆಸ್. ನರೇಗಾ ಜಾರಿಗೆ ತಂದು ಗ್ರಾಮ ಪಂಚಾಯಿತಿಗಳ ಜೀವ ಉಳಿಸಿದ್ದು ಕಾಂಗ್ರೆಸ್ ಸರಕಾರ. ಶೇ.50ರಷ್ಟು ಮಹಿಳಾ ಮೀಸಲಾತಿ ಜಾರಿಗೆ ತಂದಿದ್ದು ಕಾಂಗ್ರೆಸ್ ಸರಕಾರ ಹಾಗಾಗಿ ವಿವೇಚನೆಯುಳ್ಳ ಪಂಚಾಯಿತಿ ಸದಸ್ಯರು ಕಾಂಗ್ರೆಸ್ ಗೆ ಮತ ನೀಡಲಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಬೆಳಗಾವಿಯಲ್ಲಿ ಸೋಮವಾರ ಬೆಳಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡಬಲ್ ಎಂಜಿನ್ ಸರಕಾರದಿಂದ ಏನೇನೂ ಆಗಿಲ್ಲ ಎನ್ನುವುದು ಜನರಿಗೆ ಗೊತ್ತಿದೆ. ಬೆಳಗಾವಿ ಕಾಂಗ್ರೆಸ್ ಅಭ್ಯರ್ಥಿ ಸಜ್ಜನರು, ಯುವಕರು, ಜನರ ಸೇವೆ ಮಾಡಿಕೊಂಡು ಬರುತ್ತಿದ್ದಾರೆ. ಅವರಿಗೆ ಮತ ಚಲಾಯಿಸಿ ಸೇವೆ ಮಾಡಲು ಅವಕಾಶ ಮಾಡಿಕೊಡಿ ಎಂದು ವಿನಂತಿಸುತ್ತೇನೆ ಎಂದರು.
ಕಳೆದ ಬಾರಿಗಿಂತ ಕಾಂಗ್ರೆಸ್ ಹೆಚ್ಚಿನ ಸ್ಥಾನ ಗೆಲ್ಲುವ ವಿಶ್ವಾಸವನ್ನು ಅವರು ವ್ಯಕ್ತಪಡಿಸಿದರು.
ಕಾಂಗ್ರೆಸ್ ಮುಳುಗುವ ಹಡಗು ಎಂದು ಬಿಜೆಪಿ ಹೇಳುತ್ತಿದೆಯಲ್ಲ ಎನ್ನುವ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ, ಯಡಿಯೂರಪ್ಪನವರು ಜನತಾ ದಳದ ಬೆಂಬಲ ಕೇಳಿದ್ದಾರೆ. ಬೊಮ್ಮಾಯಿ ಕೂಡ ಕೇಳ್ತಾ ಇದಾರೆ ಎನ್ನುವ ಸುದ್ದಿ ಮಾಧ್ಯಮಗಳಲ್ಲಿ ಬಂದಿದೆ. ಇದರರ್ಥ ಯಾರು ಮುಳುಗ್ತಾ ಇದಾರೆ? ಬಲಿಷ್ಠವಾಗಿದ್ದರೆ ಯಾಕೆ ಬೆಂಬಲ ಕೇಳಬೇಕು? ಎಂದು ಡಿ.ಕೆ.ಶಿವಕುಮಾರ ಪ್ರಶ್ನಿಸಿದರು.
ಮಾಜಿ ಸಚಿವ ರಮೇಶ ಜಾರಕಿಹೊಳಿ ತಮ್ಮ ಸಹೋದರ , ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿಗೆ ಮತ ಕೇಳುತ್ತಿರುವ ಕುರಿತು ಮಾಧ್ಯಮಗಳ ಪ್ರಶ್ನೆಗೆ ಉತ್ತರಿಸಿದ ಡಿ.ಕೆ.ಶಿವಕುಮಾರ, ಬಿಜೆಪಿ ಶಿಸ್ತಿನ ಪಕ್ಷ. ಸ್ವಾಭಿಮಾನ, ಶಿಸ್ತು ಇದ್ದರೆ ಅವರೇ ಉತ್ತರ ಕೊಡಲಿ. ಕೇವಲ ಬ್ಲ್ಯಾಕ್ ಮೇಲರ್ಸ್ ಪಾರ್ಟಿ, ಬ್ಲ್ಯಾಕ್ ಮೇಲರ್ಸ್ ಗೆ ಬಗ್ಗುತ್ತೇವೆ ಎನ್ನುವಂತಿದ್ದರೆ ಇರಲಿ. ಜನರು ಎಲ್ಲವನ್ನೂ ಗಮನಿಸುತ್ತಿದ್ದಾರೆ. ಬಿಜೆಪಿ ಈ ಮಟ್ಟಕ್ಕೆ ಬಂತಲ್ಲ ಅಂತ ನಾನೂ ಸುಮ್ಮನಿರುತ್ತೇನೆ. ನಾನಾಗಿದ್ದರೆ ಬ್ಲ್ಯಾಕ್ ಮೇಲರ್ಸ್ ನ್ನು ಒಂದು ಗಂಟೆಯೂ ಇಟ್ಟು ಕೊಳ್ಳುತ್ತಿರಲಿಲ್ಲ ಎಂದು ಡಿ.ಕೆ.ಶಿವಕುಮಾರ ಹೇಳಿದರು.
ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಕುರಿತು ರಮೇಶ ಜಾರಕಿಹೊಳಿ ಅವಹೇಳನಕಾರಿಯಾಗಿ ಮಾತನಾಡುತ್ತಿದ್ದಾರಲ್ಲಾ ಎನ್ನುವ ಪ್ರಶ್ನೆಗೆ, ಅದು ಬಿಜೆಪಿಯ ಸಂಸ್ಕೃತಿಯ ಪ್ರತಿಬಿಂಬ. ಶೇ.50ರಷ್ಟು ಮಹಿಳಾ ಮತದಾರರಿದ್ದಾರೆ. ಅಂತವರಿಗೆ ಅವಮಾನ ಮಾಡುವುದು ಅವರ ಸಂಸ್ಕೃತಿ. ತಮ್ಮದು ಸಂಸ್ಕೃತಿಯ ಪಕ್ಷ ಎನ್ನುವ ಶೋಭಕ್ಕ, ಯಡಿಯೂರಪ್ಪ, ಕಟೀಲು ಇದಕ್ಕೆ ಉತ್ತರ ಕೊಡಲಿ ಎಂದರು.
ಗೋಕಾಕ, ಅರಬಾವಿ, ರಾಯಬಾಗ ಮೊದಲಾದೆಡೆ ಮತಪತ್ರ ಪಡೆದು ಬೇರೆಯವರು ಮತಹಾಕುತ್ತಾರೆ. ಅವನ್ನೆಲ್ಲ ವೀಡಿಯೋ ರೆಕಾರ್ಡಿಂಗ್ ಮಾಡಬೇಕು. ಈ ಕುರಿತು ಚುನಾವಣೆ ಆಯೋಗಕ್ಕೆ ಮನವಿ ಮಾಡ್ತೇವೆ. ಜಿಲ್ಲಾಧಿಕಾರಿಗಳಿಗೆ ದೂರು ದಾಖಲಿಸುತ್ತೇವೆ. ಬೇರೆಯವರು ಓಟ್ ಹಾಕಂತೆ ಚುನಾವಣೆ ನಡೆಸಬೇಕು. ಸಂಪೂರ್ಣ ವಿಡೀಯೋ ರೆಕಾರ್ಡ್ ಮಾಡಬೇಕು ಎಂದು ಲಿಖಿತ ದೂರು ಸಲ್ಲಿಸುತ್ತೇವೆ ಎಂದು ಅವರು ತಿಳಿಸಿದರು.
ಭೀಕರ ಅಪಘಾತ; ಶಾಸಕರ ಅಳಿಯ ಸೇರಿ ನಾಲ್ವರ ದುರ್ಮರಣ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ