Kannada NewsKarnataka NewsLatest

ಸತೀಶ್ ಜಾರಕಿಹೊಳಿ, ಲಕ್ಷ್ಮಿ ಹೆಬ್ಬಾಳಕರ್ ಮತದಾನ; ಗುಜನಾಳಕ್ಕೆ ಭೇಟಿ ನೀಡಿದ ಸತೀಶ್

ಪ್ರಗತಿವಾಹಿನಿ ಸುದ್ದಿ,  ಬೆಳಗಾವಿ : ವಿಧಾನ ಪರಿಷತ್ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಗೆಲುವು ನಿಶ್ಚಿತ. ಬಿಜೆಪಿ ಹಾಗೂ ಪಕ್ಷೇತರ ಅಭ್ಯರ್ಥಿಗಿಂತ ಹೆಚ್ಚಿನ ಮತಗಳ ಅಂತರದಲ್ಲಿ ಕಾಂಗ್ರೆಸ್ ಪಕ್ಷ ಗೆಲುವು ಪಡೆಯುತ್ತದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಗೆಲುವಿನ ವಿಶ್ವಾಸ ವ್ಯಕ್ತಪಡಿಸಿದರು.
ಬೆಳಗಾವಿ ಮಹಾನಗರ ಪಾಲಿಕೆ ಮತಗಟ್ಟೆಯಲ್ಲಿ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಮತ ಚಲಾಯಿಸಿದರು.

ಬೆಳಗಾವಿ ಮಹಾನಗರ ಪಾಲಿಕೆಯ ಮತಗಟ್ಟೆ ಸಂಖ್ಯೆ -161ರಲ್ಲಿ ಹಕ್ಕು ಚಲಾಯಿಸಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿ,  ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಮೊದಲ ಪ್ರಾಶಸ್ತ್ಯದಲ್ಲಿ ಗೆದ್ದು ಬರಲಿದ್ದಾರೆ ಎಂದರು.

ಕಳೆದ ಹದಿನೈದು ವರ್ಷಗಳಿಂದ ಚುನಾವಣೆ ಮಾಡುತ್ತಿದ್ದೇವೆ. ನಮ್ಮ ಪಕ್ಷದ ಸದಸ್ಯರು ನಮ್ಮೊಂದಿಗೆ ಇದ್ದಾರೆ. ಕಾಂಗ್ರೆಸ್ ಪಕ್ಷದ ಹಾಲಿ, ಮಾಜಿ ಶಾಸಕರು, ಮುಖಂಡರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ. ಆ ವಿಶ್ವಾಸದಲ್ಲಿ ಗೆಲುವು ಸಾಧಿಸಲಿದ್ದೇವೆಂದು ಹೇಳುತ್ತಿದ್ದೇನೆ ಎಂದಿದ್ದಾರೆ.
ಪಕ್ಷೇತರ ಅಭ್ಯರ್ಥಿ ಲಖನ್ ಜಾರಕಿಹೊಳಿ ಬಿಜೆಪಿಯ ‘ಬಿ’ ಟೀಮ್, ಕಾಂಗ್ರೆಸ್ ಪಕ್ಷಕ್ಕೂ ಅವರಿಗೂ ಯಾವುದೇ ಸಂಬಂಧವಿಲ್ಲ. ಮಹಾಂತೇಶ್ ಕವಟಗಿಮಠ, ಲಖನ್ ಇಬ್ಬರಲ್ಲಿ ಒಬ್ಬರು ಮಾತ್ರ ಗೆಲ್ಲುತ್ತಾರೆ. ಆದರೆ ಮೊದಲ ಪ್ರಾಶಸ್ತ್ಯದಲ್ಲಿ ಚನ್ನರಾಜ್ ಗೆಲ್ಲುತ್ತಾರೆ. ನಾವು ಗೆಲ್ಲುವಷ್ಟು ಸಂಖ್ಯಾ ಬಲ ನಮ್ಮಲ್ಲಿದೆ ಎಂದು ಹೇಳಿದರು.
ಇದಕ್ಕೂ ಮೊದಲು ಕಾಂಗ್ರೆಸ್ ಪಕ್ಷದ ಮಹಾನಗರ ಪಾಲಿಕೆಯ ನೂತನ ಸದಸ್ಯರು, ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ಏಕಕಾಲಕ್ಕೆ ಮತಗಟ್ಟೆಗೆ ತೆರಳಿ ಒಬ್ಬಬ್ಬರಾಗಿ ಮತಚಲಾಯಿಸಿದರು. ಕಾಂಗ್ರೆಸ್ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ ಎಂದು ಗೆಲುವಿನ ನಗೆ ಬೀರಿದರು.

ಅಕ್ರಮಕ್ಕೆ ಬ್ರೇಕ್ ಹಾಕಲು ಕ್ರಮ

 ಅಕ್ರಮಕ್ಕೆ ಬ್ರೇಕ್ ಹಾಕಲು ಗೋಕಾಕ್ , ಅರಭಾವಿ ಮತಕ್ಷೇತ್ರದಲ್ಲಿ ಕಾಂಗ್ರೆಸ್ ಪಕ್ಷದ ಪ್ರಮುಖ ಕಾರ್ಯಕರ್ತರನ್ನ ಗ್ರಾಮ ಪಂಚಾಯ್ತಿಗಳಲ್ಲಿ ನೇಮಕ ಮಾಡಿದ್ದೇವೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದರು.
ಗುಜನಾಳ ಮತಗಟ್ಟೆ ಕೇಂದ್ರಕ್ಕೆ ಭೇಟಿ ಸಂದರ್ಭದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿ, ಕಾಂಗ್ರೆಸ್ ಪಕ್ಷದಲ್ಲಿ ಉತ್ತಮ ವಾತಾವರಣ ನಿರ್ಮಾಣವಾಗಿದೆ. ಕಾಂಗ್ರೆಸ್ ಅಭ್ಯರ್ಥಿಯನ್ನ ಗೆಲ್ಲಿಸಬೇಕೆಂದು  ಕಾಂಗ್ರೆಸ್ ಹಾಲಿ, ಮಾಜಿ ಶಾಸಕರು, ಮುಖಂಡರು, ಕಾರ್ಯಕರ್ತರು ಒಗ್ಗಟ್ಟಿನಿಂದ ಕೆಲಸ ಮಾಡಿದ್ದಾರೆ ಎಂದರು.
ಗೋಕಾಕ, ಅರಭಾವಿ ಮತಕ್ಷೇತ್ರದಲ್ಲಿ ಕಳೆದ ಬಾರಿ ಒಬ್ಬನೇ ಮತದಾರ ಎರಡೇರಡು ಮತ ಹಾಕಿರುವುದನ್ನು ನೋಡಿದ್ದೇವೆ. ಇದರಿಂದ ಈ ಚುನಾವಣೆಯಲ್ಲಿ ಪುನರಾವರ್ತನೆ ಆಗಬಾರದು , ಮತದಾರರೇ ಬಂದು ವೋಟ್ ಮಾಡಬೇಕು. ಗೋಕಾಕ ಕ್ಷೇತ್ರದಲ್ಲಿ- 20 ಅರಭಾವಿ-  33  ಗ್ರಾಮ ಪಂಚಾಯ್ತಿಗಳಲ್ಲಿ  ಪ್ರಮುಖ ಕಾರ್ಯಕರ್ತರನ್ನು ನೇಮಕ ಮಾಡಿದ್ದೇವೆ ಎಂದು ಹೇಳಿದರು
ಕಾಂಗ್ರೆಸ್ ಅಭ್ಯರ್ಥಿ ಚನ್ನರಾಜ್ ಹಟ್ಟಿಹೊಳಿ ಗೆಲುವಿಗೆ ಒತ್ತು ನೀಡಲಿದ್ದೇವೆ. ಮುಖ್ಯಮಂತ್ರಿ ಬಂದು ಹೋದ ಮೇಲೆ ಬಿಜೆಪಿ ನಾಯಕರು ಆ್ಯಕ್ಟಿವ್ ಆಗಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷ ಮೊದಲಿನಿಂದಲೂ ಅಭ್ಯರ್ಥಿಯ ಗೆಲುವಿಗೆ ನಿರಂತರ ಕೆಲಸ ಮಾಡಿದ್ದೇವೆಂದರು.
ವಿಧಾನಪರಿಷತ್ ಚುನಾವಣೆ ಬಿಜೆಪಿ, ಕಾಂಗ್ರೆಸ್ ಪಕ್ಷದ ನಡುವೆ ಸ್ಪರ್ಧೆ. ಬಿಜೆಪಿ , ಪಕ್ಷೇತರ ಅಭ್ಯರ್ಥಿಯಲ್ಲಿ ಯಾರಾದ್ರು ಒಬ್ಬರು ಗೆಲುವು ಸಾಧಿಸಲಿದ್ದಾರೆ. ಆದರೆ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಗೆದ್ದೇ ಗೆಲ್ಲುತ್ತಾರೆ, ಗೆಲುವು ನಿಶ್ಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

 

ಗುಜನಾಳಕ್ಕೆ ಭೇಟಿ

 ವಿಧಾನಪರಿಷತ್ ಚುನಾವಣೆಯ ಮತದಾನ ಹಿನ್ನೆಲೆ ಗೋಕಾಕ ಮತಕ್ಷೇತ್ರದ ಗುಜನಾಳ ಮತಗಟ್ಟೆ ಕೇಂದ್ರಕ್ಕೆ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಮತದಾನ ಆರಂಭಕ್ಕೂ ಮುನ್ನವೇ ಭೇಟಿ ನೀಡಿ, ವೀಕ್ಷಣೆ ಮಾಡಿದರು.
ಸತೀಶ್ ಜಾರಕಿಹೊಳಿ  ಗುಜನಾಳ ಏಜೆಂಟ್  ಆಗಿ ಕಾರ್ಯನಿರ್ವಹಿಸುವುದಾಗಿ ಘೋಷಿಸಿದ್ದರು. ಈ ಹಿಂದೆ ವಾಗ್ದಾನ ಮಾಡಿದಂತೆ  ಬೆಳಿಗ್ಗೆ ಮತಗಟ್ಟೆ ಸಂಖ್ಯೆ 245 ಭೇಟಿ ನೀಡಿ,  ವೀಕ್ಷಿಣೆ ಮಾಡಿದರು.
ಗುಜನಾಳ ಮತಗಟ್ಟೆ ಕೇಂದ್ರ ಬಿಜೆಪಿ ಶಾಸಕ , ಮಾಜಿ ಸಚಿವ ರಮೇಶ್ ಜಾರಕಿಹೊಳಿ ಕ್ಷೇತ್ರದಲ್ಲಿದೆ. ಇಲ್ಲಿ ಅಕ್ರಮ ಮತದಾನ ನಡೆಯುತ್ತವೆ ಎಂಬ ಮಾತುಗಳು ಕೇಳಿ ಬಂದಿರುವ ಹಿನ್ನೆಲೆ ಸ್ವತಃ ಅವರೇ ಬೆಳಿಗ್ಗೆ 8 ಗಂಟೆಗೆ ಮತಗಟ್ಟೆ ಕೇಂದ್ರದತ್ತ ಆಗಮಿಸಿ ವೀಕ್ಷಿಸಿದರು.
ಗೋಕಾಕ ಮತ ಕ್ಷೇತ್ರದ ಪರಿಸ್ಥಿತಿಯೇ ಬೇರೆ ಇದೆ. ಈ ಹಿನ್ನಲೆ ನ್ಯಾಯಯುತ ಮತದಾನ ನಡೆಯಬೇಕು ಎಂಬ ಆಶಯದಿಂದ ಭೇಟಿ ನೀಡಿದ್ದಾರೆ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button