ಡಾ.ಅಂಜಲಿ ನಿಂಬಾಳಕರ್ ತಮ್ಮ ವೈಫಲ್ಯ ಮುಚ್ಚಿಕೊಳ್ಳಲು ಮಾಡುತ್ತಿರುವ ರಾಜಕೀಯ ಗಿಮಿಕ್ – ಡಾ.ಸೋನಾಲಿ ಸರ್ನೋಬತ್ ಪ್ರತಿಕ್ರಿಯೆ
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಖಾನಾಪುರ ಶಾಸಕಿ ಡಾ.ಅಂಜಲಿ ನಿಂಬಾಳಕರ್ ಅವರು ಬೆಳಗಾವಿಯ ಸುವರ್ಣ ವಿಧಾನಸೌಧಕ್ಕೆ ಪಾದಯಾತ್ರೆ ಹಮ್ಮಿಕೊಂಡಿರುವುದು ರಾಜಕೀಯ ಗಿಮಿಕ್ ಆಗಿದ್ದು, ಶಾಸಕರಾಗಿ ತಮ್ಮ ವೈಫಲ್ಯವನ್ನು ಮುಚ್ಚಿಕೊಳ್ಳಲು ಮಾಡುತ್ತಿರುವ ತಂತ್ರವಾಗಿದೆ ಎಂದು ಭಾರತೀಯ ಜನತಾ ಪಾರ್ಟಿಯ ಬೆಳಗಾವಿ ಗ್ರಾಮೀಣ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಪ್ರತಿಕ್ರಿಯಿಸಿದ್ದಾರೆ.
ಈ ಕುರಿತು ಹೇಳಿಕೆ ನೀಡಿರುವ ಸರ್ನೋಬತ್, ಖಾನಾಪುರ ತಾಲೂಕು ಮೊದಲಿನಿಂದಲೂ ಹಿಂದುಳಿದ ತಾಲೂಕಾಗಿದ್ದು, ಮಾಡಬೇಕಾದ ಕೆಲಸಗಳು ಸಾಕಷ್ಟಿವೆ. ಆದರೆ ರಾಜ್ಯದಲ್ಲಿ 60 ವರ್ಷ ಆಳ್ವಿಕೆ ನಡೆಸಿದ ಕಾಂಗ್ರೆಸ್ ಪಕ್ಷ ಇಲ್ಲಿನ ಅಭಿವೃದ್ಧಿಗೆ ಸೂಕ್ತವಾಗಿ ಸ್ಪಂದಿಸಿರಲಿಲ್ಲ. ಬಿಜೆಪಿ ಸರಕಾರ ಬಂದ ನಂತರ ಅಲ್ಲಿ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡುತ್ತಿದೆ. ಆದರೆ ಈಗಿನ ಸ್ಥಳೀಯ ಶಾಸಕರು ಅಭಿವೃದ್ಧಿಗೆ ಸೂಕ್ತ ರೀತಿಯಲ್ಲಿ ಸ್ಪಂದಿಸಿ, ಸಮಸ್ಯೆಗಳ ಕುರಿತು ಸೂಕ್ತವಾಗಿ ಸರಕಾರದ ಗಮನ ಸೆಳೆಯುವ ಕೆಲಸ ಮಾಡುತ್ತಿಲ್ಲ ಎಂದು ಆರೋಪಿಸಿದ್ದಾರೆ.
ವಿಧಾನ ಸಭೆ ಚುನಾವಣೆ ಹತ್ತಿರ ಬರುತ್ತಿರುವ ಸಂದರ್ಭದಲ್ಲಿ ಡಾ.ಅಂಜಲಿ ನಿಂಬಾಳಕರ್ ಅವರಿಗೆ ಅಭಿವೃದ್ಧಿಯ ನೆನಪಾಗಿದೆ. ಕ್ಷೇತ್ರದಲ್ಲಿ ಶಾಸಕರ ಕುರಿತು ಎಲ್ಲೆಡೆ ಅಸಮಾಧಾನ ಬುಗಿಲೆದ್ದಿದೆ. ಅವರು ಸಮಸ್ಯೆಗಳಿಗೆ ಸರಿಯಾಗಿ ಸ್ಪಂದಿಸುತ್ತಿಲ್ಲ, ಜನರ ಕೈಗೆ ಸಿಗುತ್ತಿಲ್ಲ ಎನ್ನುವ ಆರೋಪ ಎಲ್ಲೆಡೆ ಇದೆ. ಹಾಗಾಗಿ ಮುಂಬರುವ ಚುನಾವಣೆ ನೆನಪಾಗಿ ಅವರು ಪಾದಯಾತ್ರೆ ಹಮ್ಮಿಕೊಂಡಿದ್ದಾರೆ ಎಂದು ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಶಾಸಕರು ಆಗಬೇಕಾದ ಕೆಲಸಗಳ ಸ್ಪಷ್ಟ ಯೋಜನೆ ತಯಾರಿಸಿ ಸರಕಾರದ ಮಟ್ಟದಲ್ಲಿ ಪ್ರಯತ್ನ ಮಾಡಿದ್ದರೆ ಸಾಕಷ್ಟು ಯೋಜನೆಗಳನ್ನು ತರಬಹುದಿತ್ತು. ಆದರೆ ಕೇವಲ ಆರೋಪಗಳನ್ನು ಮಾಡುವುದಿರಿಂದ, ಧರಣಿ, ಪ್ರತಿಭಟನೆ ಮಾಡುವುದರಿಂದ ಏನೇನೂ ಪ್ರಯೋಜನವಿಲ್ಲ. ಜನರು ಅಭಿವೃದ್ಧಿ ಮಾಡುವವರ ಬೆನ್ನಿಗೆ ನಿಲ್ಲುತ್ತಾರೆಯೇ ವಿನಃ ಈ ರೀತಿ ಗಿಮಿಕ್ ಮಾಡುವವರನ್ನು ನಂಬುವಷ್ಟು ದಡ್ಡರಲ್ಲ ಎಂದು ಹೇಳಿದ್ದಾರೆ.
ಪಾದಯಾತ್ರೆ ಮೂಲಕ ಸುವರ್ಣ ವಿಧಾನಸೌಧ ಚಲೋ : ಡಾ.ಅಂಜಲಿ ನಿಂಬಾಳಕರ್ ನೇತೃತ್ವ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ