ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅರೆ ಕಾಲಿಕ ಉಪನ್ಯಾಸಕರ ಖಾಯಂಮಾತಿ ಕುರಿತಂತೆ ಸರ್ಕಾರ ಈಗಾಗಲೇ ಉನ್ನತ ಅಧಿಕಾರಿಗಳ ಸಮಿತಿ ರಚನೆ ಮಾಡಿದೆ. ವರದಿ ನಂತರ ಕ್ರಮ ಕೈಗೊಳ್ಳಲಾಗುವುದು ಎಂದು ಉನ್ನತ ಶಿಕ್ಷಣ, ಜೈವಿಕ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವರಾದ ಡಾ.ಅಶ್ವತ್ಥ ನಾರಾಯಣ ಅವರು ಸದನಕ್ಕೆ ತಿಳಿಸಿದರು.
ವಿಧಾನ ಸಭೆಯಲ್ಲಿಂದು ಶೂನ್ಯ ವೇಳೆಯಲ್ಲಿ ದೆಹಲಿ ಸರ್ಕಾರದ ಮಾದರಿಯಲ್ಲಿ ಕರ್ನಾಟಕ ರಾಜ್ಯದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅರೆ ಕಾಲಿಕ ಉಪನ್ಯಾಸಕರ ಖಾಯಂಮಾತಿ ಹಾಗೂ ವೇತನ ಹೆಚ್ಚಳ ಕುರಿತಂತೆ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯನವರ ಪ್ರಶ್ನೆಗೆ ಉತ್ತರಿಸಿದ, ಅವರು ರಾಜ್ಯದಲ್ಲಿ 430 ಸರ್ಕಾರಿ ಪದವಿ ಕಾಲೇಜಿನಲ್ಲಿ 14564 ಜನ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಈ ಉಪನ್ಯಾಸಕರನ್ನು, ಕಾರ್ಯಭಾರ ಆಧರಿಸಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆದಾಗ್ಯೂ ಅತಿಥಿ ಉಪನ್ಯಾಸಕರ ಬಗ್ಗೆ ಸರ್ಕಾರ ಸಹಾನುಭೂತಿಯಿಂದ ಇದೆ. ಅವರ ಬೇಡಿಕೆ, ಸಮಸ್ಯೆಗಳಿಗೆ ಸ್ಪಂದಿಸುವ ಕೆಲಸವನ್ನು ಈಗಾಗಲೇ ಸರ್ಕಾರ ಮಾಡಿದೆ. ಮಾನ್ಯ ಮುಖ್ಯಮಂತ್ರಿಗಳು ಈಗಾಗಲೇ ದಿನಾಂಕ 15-12-2021 ರಂದು ಉನ್ನತ ಶಿಕ್ಷಣ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು, ಕಾನೂನು ಇಲಾಖೆ, ಆರ್ಥಿಕ ಇಲಾಖೆ ಸೇರಿದಂತೆ ವಿವಿಧ ಇಲಾಖೆಯ ಪ್ರಧಾನ ಕಾರ್ಯದರ್ಶಿಗಳ ನೇತೃತ್ವದಲ್ಲಿ ಸಮಿತಿ ರಚಿಸಲಾಗಿದೆ. ಅತಿಥಿ ಉಪನ್ಯಾಸಕರ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ಸರ್ಕಾರ ಕೈಗೊಳ್ಳಬೇಕಾದ ಕ್ರಮಗಳ ಕುರಿತಂತೆ ಒಂದು ತಿಂಗಳೊಳಗಾಗಿ ವರದಿ ಸಲ್ಲಿಸಲು ಸೂಚನೆ ನೀಡಲಾಗಿದೆ ಎಂದು ಸ್ಪಷ್ಟನೆ ನೀಡಿದರು.
ಶಿವಮೊಗ್ಗ ಕೃಷಿ ಮತ್ತು ತೋಟಗಾರಿಕೆ ವಿವಿಗೆ ಕೆಳದಿ ಶಿವಪ್ಪ ನಾಯಕನ ನಾಮಕರಣ:
ವಿಧಾನ ಸಭೆಯಲ್ಲಿಂದು ಕೃಷಿವಿಜ್ಞಾನಗಳ ವಿಶ್ವವಿದ್ಯಾಲಯಗಳ ಅಧಿನಿಯಮ ತಿದ್ದುಪಡಿ 2021ಕ್ಕೆ ವಿಧೇಯಕವನ್ನು ಕೃಷಿ ಸಚಿವ ಬಿ.ಸಿ.ಪಾಟೀಲ ಅವರು ಮಂಡಿಸಿದರು.
ಕೃಷಿವಿಜ್ಞಾನಗಳ ವಿಶ್ವವಿದ್ಯಾಲಯ ಅಧಿನಿಯಮ 2009ಕ್ಕೆ ತಿದ್ದುಪಡಿ ತಂದು “ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವ ವಿದ್ಯಾಲಯ” ಎಂಬ ಪದಗಳಿಗೆ “ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ” ಎಂಬ ನಾಮಕರಣಗೊಳಿಸಿ ತಿದ್ದುಪಡಿಗೊಳಿಸಲಾಗಿದೆ. ಹಾಗೂ ವಿವಿಯ ನಾಮಕರಣದ ಸಂದರ್ಭದಲ್ಲಿ ಆಂಗ್ಲ ಪದದಲ್ಲಿ “ಶಿಮೊಗ” ಎಂಬ ಪದ ಬರುವ ಕಡೆಯಲ್ಲಿ “ಶಿವಮೊಗ್ಗೆ” ಎಂಬ ಪದ ಬಳಸಲು ತಿದ್ದುಪಡಿಸಲಾಗಿದೆ. ಕೃಷಿ ಸಚಿವರು ಮಂಡಿಸಿದ ವಿಧೇಯಕ್ಕೆ ವಿಧಾನ ಸಭೆ ಅನುಮೋದನೆ ನೀಡಿತು.
ಗೌರಿಬಿದನೂರಿನಲ್ಲಿ ಎಲೆಕ್ಟ್ರಿಕಲ್ ವಾಹನ ಉತ್ಪಾದನಾ ಘಟಕ ಕೈಗಾರಿಕೆಗೆ ಭೂಮಿ: ಮಧ್ಯವರ್ತಿಗಳಿಗೆ ಅವಕಾಶ ಇಲ್ಲ: ಸಚಿವ ನಿರಾಣಿ ಸ್ಪಷ್ಟನೆ:
ಗೌರಿಬಿದನೂರು ತಾಲೂಕಿನ ಕುಡುಮಲಕುಂಟೆ ಕೈಗಾರಿಕಾ ಪ್ರದೇಶದಲ್ಲಿ ವಿದ್ಯುತ್ ವಾಹನಗಳ ಉತ್ಪಾದನಾ ಘಟಕ ಆರಂಭಿಸಲು ಕ್ರಮ ವಹಿಸುವುದಾಗಿ ಬೃಹತ್ ಮತ್ತು ಮಧ್ಯಮ ಕೈಗಾರಿಕಾ ಸಚಿವ ಮುರಗೇಶ್ ನಿರಾಣಿ ಅವರು ಭರವಸೆ ನೀಡಿದರು.
ವಿಧಾನ ಸಭೆಯ ಪ್ರಶ್ನೋತ್ತರ ವೇಳೆಯಲ್ಲಿ ಸದಸ್ಯ ಶಿವಶಂಕರ ರೆಡ್ಡಿ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಒಂದು ತಿಂಗಳ ಒಳಗಾಗಿ ಕುಡುಮಲಕುಂಟೆ ಕೈಗಾರಿಕಾ ಪ್ರದೇಶಕ್ಕೆ ಹೊಂದಿಕೊಡಿರುವ ಗೌಡಸಂಘ, ಮತ್ತು ದೊಡ್ಡಕುರುಗೊಡು ಗ್ರಾಮಗಳ ಜಮೀನನ್ನು ಭೂ ಸ್ವಾಧೀನ ಪ್ರಕ್ರಿಯೆ ಪೂರ್ಣಗೊಳಿಸಿ ಅಧಿಸೂಚನೆ ಹೊರಡಿಸಲಾಗುವುದು ಎಂದರು. ಕುಡಮಲಕುಂಟೆಯಲ್ಲಿ ಸ್ಥಳೀಯರಿಗೆ ಉದ್ಯೋಗ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಕೆ.ಐ.ಎ.ಡಿ.ಬಿ. ಕೈಗಾರಿಕಾ ಪ್ರದೇಶಗಳಲ್ಲಿ ಬೃಹತ್ ಉದ್ದಿಮೆಗಳನ್ನು ಸ್ಥಾಪಿಸಲು ಬಂಡವಾಳಗಾರರನ್ನು ಆಹ್ವಾನಿಸಲಾಗುವುದು ಎಂದು ತಿಳಿಸಿದರು. ರಾಜ್ಯ ಎಲ್ಲಾ ಕೈಗಾರಿಕಾ ಪ್ರದೇಶಗಳಲ್ಲಿ ಕಾಯ್ದಿಟ್ಟ ಭೂಮಿಗಳಲ್ಲಿ ಸಮಗ್ರ ಕೈಗಾರಿಕಾ ಟೌನ್‍ಶಿಪ್ ಸ್ಥಾಪನೆಗೆ ಉದ್ದಿಮೆಗಳನ್ನು ಆಹ್ವಾನಿಸಲಾಗುವುದು. ಇದರಿಂದ ಕೈಗಾರಿಕೆಯ ಜೊತೆಗೆ ಅಲ್ಲಿ ದುಡಿಯುವ ಕಾರ್ಮಿಕರಿಗೆ ವಸತಿ ಸೇರಿದಂತೆ ನಾಗರಿಕ ಸೌಲಭ್ಯಗಳ ಒಳಗೊಂಡ ಕೈಗಾರಿಕಾ ಟೌನ್‍ಶಿಪ್ ಸ್ಥಾಪಿಸುವುದರಿಂದ ಸಾಗಾಣಿಕೆ ವೆಚ್ಚ, ಸಂಚಾರಿ ವ್ಯವಸ್ಥೆ ಒತ್ತಡ ಕಡಿಮೆಯಾಗಲಿದೆ ಎಂದು ಹೇಳಿದರು.\
ರೈತರ ನೇರ ಹಣ ವರ್ಗಾವಣೆ: ಕೈಗಾರಿಕೆಗಳಿಗೆ ಭೂಸ್ವಾಧೀನ ಸಂದರ್ಭದಲ್ಲಿ ನೇರವಾಗಿ ರೈತರೊಂದಿಗೆ ವ್ಯವಹಾರ ಮಾಡಲಾಗುತ್ತದೆ. ಅವರ ಖಾತೆಗೆ ಹಣ ಜಮೆ ಮಾಡುವ ವ್ಯವಸ್ಥೆ ಜಾರಿಯಲ್ಲಿದೆ. ಮಧ್ಯವರ್ತಿಗಳಿಗೆ ಅವಕಾಶ ಇರುವುದಿಲ್ಲ. ಇದರಿಂದ ಪರಿಹಾರ ಹಣ ಪಡೆಯುವಲ್ಲಿ ರೈತರು ಲಂಚಕೊಡುವ ಪ್ರಶ್ನೆಯೇ ಉದ್ಭವಿಸುವುದಿಲ್ಲ ಎಂದು ಸಚಿವ ಮುರಗೇಶ್ ನಿರಾಣಿ ಸ್ಪಷ್ಟಪಡಿಸಿದರು.
ಹರಿಹರದ ಶಾಸಕರಾದ ಡಾ.ಎಸ್.ರಾಮಪ್ಪ ಅವರ ಪ್ರಶ್ನೆಗೆ ಉತ್ತರಿಸಿದ ಅವರು ರಾಜ್ಯಮಟ್ಟದ ಏಕಗವಾಕ್ಷಿ ಸಮತಿಯಲ್ಲಿ ಹರಿಹರ ತಾಲೂಕಿನಲ್ಲಿ ಈವರೆಗೆ 16 ಕೈಗಾರಿಕೆಗಳಿಗೆ ಅನುಮೋದನೆ ನೀಡಲಾಗಿದೆ. ರೂ. 217.34 ಕೋಟಿ ಬಂಡವಾಳ ಹೂಡುವ ನಿರೀಕ್ಷೆಯಿದೆ. 908 ಜನರಿಗೆ ಉದ್ಯೋಗ ಅವಕಾಶಗಳು ದೊರೆಯಲಿವೆ. ಪ್ರಸ್ತುತ 9 ಯೋಜನೆಗಳು ಅನುಷ್ಠಾನಗೊಂಡಿದ್ದು, ರೂ.93.38 ಕೋಟಿ ಬಂಡವಾಳ ಹೂಡಿಕೆಯಾಗಿದೆ. 500 ಜನರಿಗೆ ಉದ್ಯೋಗ ಅವಕಾಶಗಳು ನೀಡಲಾಗಿದೆ. ಇದಲ್ಲದ ಎರಡು ಬೃಹತ್ ಕೈಗಾರಿಕೆಗಳಿಗೆ ಅನುಮೋದನೆ ನೀಡಿದ್ದು, 1596 ಕೋಟಿ ಬಂಡವಾಳ ಹೂಡಿಕೆಯಾಗುವ ನಿರೀಕ್ಷೆಯಿದೆ.
581 ಜನರಿಗೆ ಉದ್ಯೋಗ ದೊರಕಲಿದೆ. ಈ ಪೈಕಿ ಕಾರ್ಗಿಲ್ ಇಂಡಿಯಾ ಪ್ರೈವೆಟ್ ಸ್ಟಾರ್ಚ್ ಘಟಕವು ಅನುಷ್ಠಾನಗೊಂಡಿದೆ. 630 ಕೋಟಿ ಬಂಡವಾಳ ಹೂಡಿದೆ. 510 ಜನರಿಗೆ ಉದ್ಯೋಗ ನೀಡಲಾಗಿದೆ. ಹನಗವಾಡಿ ಕೈಗಾರಿಕಾ ಪ್ರದೇಶದಲ್ಲಿ ಮಂಗಳೂರು ರಿಫೈನರ್ ಆ್ಯಂಡ್ ಪೆಟ್ರೋಕೆಮಿಕಲ್ ಕಂಪನಿ ರೂ.966 ಕೋಟಿ ವೆಚ್ಚದಲ್ಲಿ 2ಜಿ ಎಥೇನಾಲ್ ಘಟಕ ಸ್ಥಾಪನೆಗೆ ಮಂಜೂರಾತಿ ನೀಡಿದೆ. ಈಗಾಗಲೇ 47 ಎಕರೆ ಜಮೀನು ಲೀಸ್ ಡೀಡ್ ನೋಂದಣಿ ಪ್ರಕ್ರಿಯೆ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ವಿಜಯಪುರದಲ್ಲಿ ಬಂಜಾರ ಕಸೂತಿ ಕೇಂದ್ರ ಸ್ಥಾಪನೆ ಸಚಿವ ಶಂಕರ ಪಾಟೀಲ ಮುನೇಕೊಪ್ಪ:
ವಿಜಯಪುರ ಜಿಲ್ಲೆಯಲ್ಲಿ ಬಂಜಾರ ಸಮುದಾಯ ಹೆಚ್ಚಿರುವುದರಿಂದ ಸಮುದಾಯ ಕಸೂತಿ ಕಲೆಯನ್ನು ಪ್ರೋತ್ಸಾಹಿಸುವ ನಿಟ್ಟಿನಲ್ಲಿ ಸರ್ಕಾರ ಬಂಜಾರ ಕಸೂತಿ ಕೇಂದ್ರ ಸ್ಥಾಪನೆಗೆ ಕ್ರಮ ವಹಿಸಲಾಗುವುದು ಎಂದು ಕೈಮಗ್ಗ, ಜವಳಿ, ಸಕ್ಕರೆ ಹಾಗೂ ಕಬ್ಬು ಅಭಿವೃದ್ಧಿ ಖಾತೆ ಸಚಿವರಾದ ಶಂಕರ ಪಾಟೀಲ ಮುನೇನಕೊಪ್ಪ ತಿಳಿಸಿದರು.
ವಿಧಾನಸಭೆ ಪ್ರಶ್ನೋತ್ತರ ವೇಳೆಯಲ್ಲಿ ಶಾಸಕ ದೇವಾನಂದ ಚವಾಣ್ ಅವರ ಪ್ರಶ್ನೆಗೆ ಉತ್ತರಿಸಿದ ಅವರು ಕಳೆದ ಮೂರು ವರ್ಷದಲ್ಲಿ ವಿಜಯಪುರ ಜಿಲ್ಲೆ ನೂತನ ಜವಳಿ ನೀತಿಯಲ್ಲಿ 1677 ಜನರಿಗೆ ವಿವಿಧ ಕೌಶಲ್ಯ ತರಬೇತಿ ನೀಡಲಾಗಿದೆ. ಜವಳಿ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ 4897 ಜನರಿಗೆ 1046.11 ಲಕ್ಷ ರೂಪಾಯಿಗಳ ನೆರವು ಒದಗಿಸಲಾಗಿದೆ ಎಂದು ಮಾಹಿತಿ ನೀಡಿದರು.
ಪಿಡಿಒಗಳಿಗೆ ಗ್ರಾಪಂ ಮಟ್ಟದಲ್ಲಿ ವಸತಿಗೃಹ ನಿರ್ಮಾಣಕ್ಕೆ ಯತ್ನ: ಸಚಿವ ಈಶ್ವರಪ್ಪ
ಗ್ರಾಪಂ ಅಭಿವೃದ್ಧಿ ಅಧಿಕಾರಿಗಳಿಗೆ ಕೇಂದ್ರಸ್ಥಳದಲ್ಲಿ ಕಡ್ಡಾಯವಾಗಿ ವಾಸವಿದ್ದು ಜನರಿಗೆ ತಕ್ಷಣ ಸ್ಪಂದಿಸುವುದಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಆಯಾ ಗ್ರಾಮದ ಬಳಿಯೇ ವಸತಿಗೃಹ ನಿರ್ಮಿಸುವುದಕ್ಕೆ ಸಂಬಂಧಿಸಿದಂತೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಕ್ರಮಕೈಗೊಳ್ಳಲಾಗುವುದು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಇಲಾಖೆ ಸಚಿವ ಕೆ.ಎಸ್.ಈಶ್ವರಪ್ಪ ಅವರು ವಿಧಾನಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಡಾ.ತಳವಾರ ಸಾಬಣ್ಣ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಪಿಡಿಒಗಳು ಮತ್ತು ಗ್ರಾಮಲೆಕ್ಕಿಗರು ಗ್ರಾಪಂ ವ್ಯಾಪ್ತಿಯಲ್ಲಿ ನೆಲೆಸದಿರುವುದಕ್ಕೆ ಸಂಬಂಧಿಸಿದಂತೆ ಯಾವುದೇ ರೀತಿಯ ದೂರುಗಳು ಬಂದಿರುವುದಿಲ್ಲ;ಬಂದರೇ ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಕಲ್ಯಾಣ ಕರ್ನಾಟಕ ಪ್ರದೇಶದಲ್ಲಿ ಗ್ರಾಪಂ ಪಿಡಿಒಗಳು ಮತ್ತು ಗ್ರಾಮಲೆಕ್ಕಿಗರು ಕೊರತೆ ಇರುವುದು ಸರಕಾರದ ಗಮನಕ್ಕೆ ಬಂದಿದ್ದು,ನಿಯಮಾನುಸಾರ ಭರ್ತಿ ಮಾಡಲು ಕ್ರಮವಹಿಸಲಾಗುತ್ತಿದೆ ಎಂದರು.
727 ಪಿಡಿಒ ಹುದ್ದೆಗಳು ಖಾಲಿ: ರಾಜ್ಯದಲ್ಲಿ 5962 ಗ್ರಾಪಂಗಳಿದ್ದು,5294 ಪಿಡಿಒಗಳು ಕರ್ತವ್ಯ ನಿರ್ವಹಿಸುತ್ತಿದ್ದಾರೆ,727 ಹುದ್ದೆಗಳು ಖಾಲಿ ಇವೆ ಎಂದು ಸದಸ್ಯ ಕೆ.ಹರೀಶಕುಮಾರ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಸಚಿವ ಈಶ್ವರಪ್ಪ ಅವರು ಉತ್ತರಿಸಿದರು.
ರಾಜ್ಯದಲ್ಲಿ ಗ್ರಾಪಂಗಳಲ್ಲಿ 635 ಕಾರ್ಯದರ್ಶಿ ಗ್ರೇಡ್-1 ಹುದ್ದೆಗಳು ಮತ್ತು 956 ಕಾರ್ಯದರ್ಶಿ ಗ್ರೇಡ್-2 ಹುದ್ದೆಗಳು ಖಾಲಿಇದ್ದು, ಈ ಹುದ್ದೆಗಳ ವೃಂದಕ್ಕೆ ಜಿಪಂ ಉಪಕಾರ್ಯದರ್ಶಿ(ಅಭಿವೃದ್ಧಿ) ನೇಮಕಾತಿ ಪ್ರಾಧಿಕಾರವಾಗಿರುತ್ತಾರೆ. ಎಲ್ಲ ಜಿಪಂ ಸಿಇಒಗಳಿಗೆ ಈ ಹುದ್ದೆಗಳನ್ನು ಭರ್ತಿ ಮಾಡಲು ಸರಕಾರದಿಂದ ನಿರ್ದೇಶನ ನೀಡಲಾಗಿರುವುದನ್ನು ಸದನದಲ್ಲಿ ತಿಳಿಸಿದರು.
ಹೈಕ ಹೊರತುಪಡಿಸಿ ಕಾರ್ಯದರ್ಶಿ ಗ್ರೇಡ್-2 ವೃಂದದ 263 ಹುದ್ದೆಗಳು ಮತ್ತು ಹೈಕ ಪ್ರದೇಶದ 80 ಹುದ್ದೆಗಳು ಸೇರಿ 343 ಹುದ್ದೆಗಳಿಗೆ ನೇರನೇಮಕ ಮಾಡಲು ದ್ವಿತೀಯ ದರ್ಜೆ ಲೆಕ್ಕ ಸಹಾಯಕ ವೃಂದದ 158 ಹುದ್ದೆಗಳಿಗೆ ನೇರ ನೇಮಕಾತಿ ಮಾಡಲು ಉದ್ದೇಶಿಸಲಾಗಿದೆ ಎಂದರು.
ಮುಂದಿನ ದಿನಗಳಲ್ಲಿ ಪ್ರತಿ ಗ್ರಾಪಂಗೆ ಒಬ್ಬ ಅಧಿಕಾರಿ ಇರುವಂತೆ ನೋಡಿಕೊಳ್ಳಲಾಗುವುದು ಎಂದು ಅವರು ಸ್ಪಷ್ಟಪಡಿಸಿದರು.
2023-24ರೊಳಗೆ ರಾಜ್ಯದಲ್ಲಿ 93 ಲಕ್ಷ ಮನೆಗಳಿಗೆ ನಳ ಸಂಪರ್ಕ ಗುರಿ:
ಜಲಜೀವನ ಮಿಶನ್ ಯೋಜನೆ ಅಡಿ ರಾಜ್ಯದಲ್ಲಿ 2023-24ರೊಳಗೆ 93ಲಕ್ಷ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಗುರಿ ಹಾಕಿಕೊಳ್ಳಲಾಗಿದ್ದು,ನಿತ್ಯವೂ 10 ಸಾವಿರ ಮನೆಗಳಿಗೆ ನಳ ಸಂಪರ್ಕ ಒದಗಿಸಲಾಗುತ್ತಿದ ಎಂದು ಸಚಿವ ಕೆ.ಎಸ್.ಈಶ್ವರಪ್ಪ ತಿಳಿಸಿದರು.
ಸದಸ್ಯ ಎನ್.ರವಿಕುಮಾರ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಜಲಜೀವ ಮಿಶನ್ ಯೋಜನೆ ಅಡಿ ಇದುವರೆಗೆ 17.40ಲಕ್ಷ ಮನೆಗಳಿಗೆ ನಳಸಂಪರ್ಕ ಕಲ್ಪಿಸಲಾಗಿದೆ ಎಂದರು.
ಜಲಜೀವನ್ ಮಿಶನ್ ಯೋಜನೆಯಡಿ ನಳಸಂಪರ್ಕ ಒದಗಿಸಲು ಯಾವುದೇ ಅರ್ಜಿ ಒದಗಿಸುವ ಅವಶ್ಯಕತೆ ಇಲ್ಲ ಎಂದು ಸ್ಪಷ್ಟಪಡಿಸಿ ಸಚಿವ ಈಶ್ವರಪ್ಪ ಅವರು ರಾಜ್ಯದಲ್ಲಿ ಈವರೆಗೆ 41.91ಲಕ್ಷ ಮನೆಗಳಿಗೆ ಟ್ಯಾಪ್ ಮೂಲಕ ನೀರಿನ ಸಂಪರ್ಕ ಒದಗಿಸಲಾಗಿದೆ ಎಂದರು. ರಾಜ್ಯದಲ್ಲಿ 2019ರವರೆಗೆ ರಾಷ್ಟ್ರೀಯ ಗ್ರಾಮೀಣ ಕುಡಿಯುವ ನೀರು ಯೋಜನೆ ಜಾರಿಯಲ್ಲಿತ್ತು;ನಂತರ ಜಲಜೀವನ ಮಿಶನ್ ಯೋಜನೆಯೊಂದಿಗೆ ವಿಲೀನ ಮಾಡಲಾಗಿದೆ ಎಂದು ಅವರು ವಿವರಿಸಿದರು.
ಶೇ.70ರಷ್ಟು ಹಳ್ಳಿಗಳಲ್ಲಿ ಫ್ಲೋರೈಡ್ ನೀರು ಮತ್ತು ದೇವದುರ್ಗ ತಾಲೂಕಿನಲ್ಲಿ ಶೇ.80ರಷ್ಟು ಫ್ಲೋರೈಡ್ ಮಿಶ್ರೀತ ನೀರು ಸಿಗುತ್ತಿದೆ;ಈ ನೀರು ಸೇವನೆಯಿಂದ ನಾನಾಕಾಯಿಲೆಗಳಿಗೆ ಗುರಿಯಾಗುತ್ತಿರುವುದನ್ನು ಸದಸ್ಯ ರವಿಕುಮಾರ ಪ್ರಶ್ನಿಸಿದಕ್ಕೆ ಎಲ್ಲೆಲ್ಲಿ ನದಿಗಳು ಹರಿಯುತ್ತವೆಯೋ ಅಲ್ಲಿನ ಮೂಲಗಳನ್ನು ಗುರುತಿಸಿ ಅಲ್ಲಿಂದ ನೀರು ಒದಗಿಸಲಾಗುತ್ತಿದೆ. ಒಳ್ಳೆಯ ನೀರು ಸಿಗದೆಡೆ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ಸ್ಥಾಪಿಸಲಾಗಿದೆ ಎಂದು ಸ್ಪಷ್ಟಪಡಿಸಿದರು.
1368 ಕೋಟಿ ಮೌಲ್ಯದ 55908 ಎಕರೆ ಜಮೀನು ಹಂಚಿಕೆ: ಸಚಿವ ಕೋಟ ಶ್ರೀನಿವಾಸ ಪೂಜಾರಿ:
ವಿವಿಧ ನಿಗಮಗಳ ಮೂಲಕ ಅನುಷ್ಠಾನಗೊಳಿಸಲಾಗುತ್ತಿರುವ ಭೂ ಒಡೆತನ ಯೋಜನೆಯಲ್ಲಿ ಸಣ್ಣ-ಪುಟ್ಟ ಲೋಪದೋಷಗಳಿದ್ದು,ಅವುಗಳನ್ನು ಸರಿಪಡಿಸಿ ಕಟ್ಟುನಿಟ್ಟಿನ ಅನುಷ್ಠಾನಕ್ಕೆ ಕ್ರಮಕೈಗೊಳ್ಳಲಾಗುವುದು ಎಂದು ಸಮಾಜಕಲ್ಯಾಣ ಸಚಿವರು ಆಗಿರುವ ಸಭಾನಾಯಕ ಕೋಟಶ್ರೀನಿವಾಸ ಪೂಜಾರಿ ಅವರು ಪರಿಷತ್‍ನಲ್ಲಿ ತಿಳಿಸಿದರು.
ಸದಸ್ಯ ಡಾ.ವೈ.ಎ.ನಾರಾಯಣಸ್ವಾಮಿ ಅವರ ಚುಕ್ಕೆಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಭೂ ಒಡೆತನ ಯೋಜನೆಯು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ಅಭಿವೃದ್ಧಿ ನಿಗಮದಲ್ಲಿ 1990-91ನೇ ಸಾಲಿನಲ್ಲಿ ಅಸ್ತಿತ್ವಕ್ಕೆ ಬಂದಿದೆ. ಅಲ್ಲಿಂದ ಇಲ್ಲಿಯವರೆಗೆ 1368 ಕೋಟಿ ರೂ.ಮೌಲ್ಯದ 55908 ಎಕರೆ ಜಮೀನನ್ನು 48 ಸಾವಿರ ಜನರಿಗೆ ಹಂಚಿಕೆ ಮಾಡಲಾಗಿದೆ ಎಂದರು.
ರಾಯಚೂರು ಜಿಲ್ಲೆಯಲ್ಲಿ 53 ಮತ್ತು ಮಂಡ್ಯ ಜಿಲ್ಲೆಯಲ್ಲಿ 2 ಜನರಿಗೆ ಹಂಚಿಕೆಯಾದ ಜಮೀನು ಸಿಗದೇ ಮೊದಲಿನ ಭೂಮಾಲೀಕರೇ ಇಂದಿಗೂ ವ್ಯವಸಾಯ ಮಾಡುತ್ತಾ ಬದುಕು ಸಾಗಿಸುತ್ತಿರುವುದು ಗಮನಕ್ಕೆ ಬಂದ ತಕ್ಷಣ ಅದನ್ನು ಸರಿಪಡಿಸಿ ಫಲಾನುಭವಿಗಳಿಗೆ ಒದಗಿಸಲಾಗಿದೆ. ಈ ರೀತಿಯ ಘಟನೆಗಳು ಕಂಡುಬಂದಲ್ಲಿ ಅಂತವರ ಮೇಲೆ ಕ್ರಿಮಿನಲ್ ಕೇಸ್ ದಾಖಲಿಸಲಾಗುವುದು ಎಂದು ಎಚ್ಚರಿಕೆ ನೀಡಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಎರಡು ತಿಂಗಳ ಈಚೆಗೆ ಪ್ರತಿ ಜಿಲ್ಲೆಯಲ್ಲಿ ಭೂಒಡೆತನಕ್ಕೆ ಸಂಬಂಧಿಸಿದಂತೆ ಸಮೀಕ್ಷೆ ಮಾಡಲು ಮತ್ತು ವಿಶೇಷ ಸಭೆಗಳನ್ನು ಕರೆಯಲು ಸೂಚಿಸಲಾಗಿದೆ ಎಂದು ವಿವರಿಸಿದರು.
ಸದಸ್ಯ ನಾರಾಯಣಸ್ವಾಮಿ ಅವರು ಈ ಯೋಜನೆಯನ್ನು ಮಧ್ಯವರ್ತಿಗಳು ಮತ್ತು ಅಧಿಕಾರಿಗಳು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ;ಇತ್ತೀಚೆಗೆ ಎಸಿಬಿ ಅಧಿಕಾರಿಗಳ ಕಚೇರಿ ಹಾಗೂ ಮನೆಗಳ ಮೇಲೆ ದಾಳಿ ಮಾಡಿದ ಸಂದರ್ಭದಲ್ಲಿ ಕಂಡುಬಂದ ದಾಖಲೆಗಳೇ ಸಾಕ್ಷಿ ಎಂದು ಆರೋಪಿಸಿದಕ್ಕೆ ಉತ್ತರಿಸಿದ ಸಚಿವ ಕೋಟ ಶ್ರೀನಿವಾಸ ಪೂಜಾರಿ ಅವರು ಸಣ್ಣ-ಪುಟ್ಟ ಲೋಪದೋಷಗಳಿರುವುದು ಗಮನಕ್ಕಿದ್ದು, ಅಧಿವೇಶನ ಮುಗಿದ ತಕ್ಷಣ ವಿಶೇಷ ಸಭೆ ಕರೆದು ಕಠಿಣ ಕ್ರಮಕೈಗೊಳ್ಳಲಾಗುವುದು ಎಂದರು.
ಭಿಕ್ಷಾಟನೆ ನಿರ್ಮೂಲನೆಗೆ ಕಠಿಣ ಕ್ರಮ:ಸಚಿವ ಕೋಟ ಶ್ರೀನಿವಾಸ ಪೂಜಾರಿ
ರಾಜ್ಯದಲ್ಲಿ ಭಿಕ್ಷಾಟನೆಯ ಹೆಸರಿನಲ್ಲಿ ಹಲವು ಅಕ್ರಮ ಚಟುವಟಿಕೆಗಳು ನಡೆಯುತ್ತಿರುವುದು ಸರಕಾರದ ಗಮನಕ್ಕೆ ಬಂದಿದ್ದು, ಈ ಭಿಕ್ಷಾಟನೆಯನ್ನು ನಿರ್ಮೂಲನೆ ಮಾಡುವ ನಿಟ್ಟಿನಲ್ಲಿ ಅಧಿವೇಶನದ ಮುಗಿದ ವಾರದೊಳಗೆ ವಿಶೇಷ ಸಭೆ ಕರೆದು ಕಠಿಣ ಕ್ರಮಕೈಗೊಳ್ಳಲಾಗುವುದು ಎಂದು ಸ್ಪಷ್ಟಪಡಿಸಿದರು.
ಸದಸ್ಯ ಗೋವಿಂದರಾಜು ಅವರು ಚುಕ್ಕೆ ಗುರುತಿನ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು ಈ ವಿಷಯದಲ್ಲಿ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ,ಗೃಹ ಇಲಾಖೆ ಮತ್ತು ಸಮಾಜಕಲ್ಯಾಣ ಇಲಾಖೆ ಪಾತ್ರ ಪ್ರಮುಖವಾಗಿದೆ ಎಂದರು.
ಒಳಾಡಳಿತ ಇಲಾಖೆಯಿಂದ ರಾಜ್ಯದಲ್ಲಿ ಒಟ್ಟಾರೆ 30 ಮಾನವ ಕಳ್ಳ ಸಾಗಾಣಿಕೆ ನಿಷೇಧ ಘಟಕಗಳನ್ನು ಸ್ಥಾಪಿಸಿದ್ದು ಕಾಣೆ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುವಂತೆ ನಿರ್ದೇಶನ ನೀಡಲಾಗಿದೆ ಎಂದು ವಿವರಿಸಿದ ಸಚಿವ ಕೋಟ ಅವರು ಭಿಕ್ಷಾಟನೆ ಹೆಸರಿನಲ್ಲಿ ಮಕ್ಕಳನ್ನು ಅಕ್ರಮ ಚಟುವಟಿಕೆಗಳಿಗೆ ಬಳಸಿಕೊಳ್ಳುತ್ತಿರುವ ಪ್ರಕರಣಗಳನ್ನು ಸರಕಾರ ಗಂಭೀರವಾಗಿ ಪರಿಗಣಿಸಿದ್ದು, ಸೂಕ್ತ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದರು.
ಫಸಲ್ ಬಿಮಾ ಯೋಜನೆ ಯಶಸ್ವಿ ಅನುಷ್ಠಾನ: ಕೃಷಿ ಸಚಿವ ಪಾಟೀಲ್:
ರಾಜ್ಯದಲ್ಲಿ 2016-17ನೇ ಸಾಲಿನಿಂದ ಪ್ರಧಾನಮಂತ್ರಿ ಫಸಲ್ ಬಿಮಾ ಯೋಜನೆ ಯಶಸ್ವಿಯಾಗಿ ಅನುಷ್ಠಾನವಾಗುತ್ತಿದೆ. ಈ ಯೋಜನೆ ಅಡಿ 2018ರಿಂದ 2020-21ರವರೆಗೆ 5711938 ರೈತರು ನೋಂದಾಯಿಸಿಕೊಂಡಿದ್ದು 505.78 ಕೋಟಿ ರೂ. ಪ್ರಿಮಿಯಂ ಮೊತ್ತ ಪಾವತಿಸಲಾಗಿದೆ ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ಅವರು ಪರಿಷತ್‍ನಲ್ಲಿ ತಿಳಿಸಿದ್ದಾರೆ.
ಸದಸ್ಯ ಮಹಾಂತೇಶ ಕವಟಗಿಮಠ ಅವರ ಚುಕ್ಕೆಗುರುತಿಲ್ಲದ ಪ್ರಶ್ನೆಗೆ ಅವರು ಲಿಖಿತ ಉತ್ತರ ನೀಡಿದ್ದಾರೆ. 2403763 ರೈತರ 3977.07 ಕೋಟಿ ರೂ.ಬೆಳೆವಿಮೆ ಇತ್ಯರ್ಥಪಡಿಸಲಾಗಿದೆ ಎಂದು ವಿವರಿಸಿರುವ ಅವರು ರೈತರು ಈ ಯೋಜನೆ ಅಡಿ ವಿಮಾ ಹಣ ಪಡೆಯಲು ಯಾವುದೇ ರೀತಿಯ ತೊಂದರೆಗಳಾಗಿರುವುದಿಲ್ಲ ಎಂದು ಅವರು ತಿಳಿಸಿದ್ದಾರೆ.
23ರಂದು ಬೆಳಗಾವಿಯಲ್ಲಿ ಉದ್ಯೋಗ ಮೇಳ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ