ಆನಗೋಳದಲ್ಲಿ ಮಧ್ಯರಾತ್ರಿ ರಾಯಣ್ಣ ಮೂರ್ತಿ ಭಗ್ನ ಮಾಡಿದ ದುಷ್ಕರ್ಮಿಗಳು; ಪೊಲೀಸ್ ಠಾಣೆ ಬಳಿ ಜಮಾಯಿಸಿದ ಯುವಕರು
ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಇಲ್ಲಿಯ ಆನಗೋಳದಲ್ಲಿ ಇಡಲಾಗಿದ್ದ ವೀರ ಸಂಗೊಳ್ಳಿ ರಾಯಣ್ಣ ಮೂರ್ತಿಯನ್ನು ಮಧ್ಯರಾತ್ರಿ ದುಷ್ಕರ್ಮಿಗಳು ಭಗ್ನಗೊಳಿಸಿದ್ದಾರೆ. ಇದರಿಂದಾ ಆಕ್ರೋಶಗೊಂಡ ರಾಯಣ್ಣ ಅಭಿಮಾನಿಗಳು ಪೊಲೀಸ್ ಠಾಣೆ ಎದುರು ಜಮಾಯಿಸಿದ್ದಾರೆ.
ರಾತ್ರಿ 2.30ರ ಹೊತ್ತಿಗೆ ಬಂದ ನಾಲ್ವರು ದುಷ್ಕರ್ಮಿಗಳು ಮೂರ್ತಿಯ ಡಾಲ್ ಮುರಿದಿದ್ದು, ಖಡ್ಗವನ್ನೂ ಕಿತ್ತು ಹಾಕಿದ್ದಾರೆ. ರಾಯಣ್ಣ ಮುಖದ ಮೇಲೆಲ್ಲ ರಾಡ್ ನಿಂತ ಡ್ಯಾಮೇಜ್ ಮಾಡಿದ್ದಾರೆ ಎಂದು ಸ್ಥಳೀಯರು ಪ್ರಗತಿವಾಹಿನಿಗೆ ತಿಳಿಸಿದ್ದಾರೆ.
ಸುದ್ದಿ ಹರಡುತ್ತಿದ್ದಂತೆ ಅಲ್ಲಿಯ ಜನ ಸೇರತೊಡಗಿದರು. ಈಗ ಅಲ್ಲಿನ ಯುವಕರು ಟಿಳಕವಾಡಿ ಪೊಲೀಸ್ ಠಾಣೆ ಮುಂದೆ ಜಮಾಯಿಸಿದ್ದಾರೆ. ದುಷ್ಕರ್ಮಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದಾರೆ.
ಇದೀಗ ಮೂರ್ತಿಯನ್ನು ಟಿಳಕವಾಡಿ ಠಾಣೆ ಪೊಲೀಸರು ಒಯ್ದಿದ್ದು, ಸ್ಥಳೀಯ ಯುವಕರು ಠಾಣೆ ಬಳಿ ಸೇರುತ್ತಿದ್ದಾರೆ.
ರಾಯಣ್ಣ ಜಯಂತಿ ಸೇರಿದಂತೆ ವಿವಿಧ ಕಾರ್ಯಕ್ರಮಗಳಲ್ಲಿ ಬಳಸಲೆಂದು ಸ್ಥಳೀಯ ರಾಯಣ್ಣ ಸೇನಾ ಯುವಕಸಂಘದವರು 8 ಅಡಿ ಎತ್ತರದ ಭವ್ಯವಾದ ರಾಯಣ್ಣ ಮೂರ್ತಿ ತಯಾರಿಸಿದ್ದರು. ಅದನ್ನು ಅಲ್ಲಿಯ ಮನೆಯೊಂದರ ಮುಂದೆ ನಿಲ್ಲಿಸಿಡಲಾಗಿತ್ತು. ಕಾರ್ಯಕ್ರಮಗಳಿಗೆ ಬೇಕಾದಾಗ ಬಳಸಲಾಗುತ್ತಿತ್ತು.
“ರಾಯಣ್ಣ ಮೂರ್ತಿಯನ್ನು ನಮ್ಮ ಮನೆಯ ಮುಂದೆಯೇ ಇರಿಸಲಾಗಿತ್ತು. ರಾತ್ರಿ 2.30ರ ಹೊತ್ತಿಗೆ ಶಬ್ದ ಬಂತು. ನಾನು ಎದ್ದು ಬಂದು ನೋಡಿದಾಗ ನಾಲ್ಕು ಜನರು ರಾಯಣ್ಣ ಮೂರ್ತಿಯ ಮೇಲೆ ಹತ್ತಿ ಹೊಡೆಯುತ್ತಿದ್ದರು. ನಾನು ಬರುತ್ತಿರುವುದನ್ನು ನೋಡಿ ಓಡಿ ಹೋದರು” ಎಂದು ಸ್ಥಳೀಯ ಯುವಕ, ರಾಯಣ್ಣ ಸೇನೆಯ ಶಿವರಾಜ ಹೊಳಿಮಠ ಪ್ರಗತಿವಾಹಿನಿಗೆ ತಿಳಿಸಿದರು.
“ಮೂರ್ತಿಯ ಡಾಲ್, ತಲವಾರ್ ಗಳನ್ನು ಕಿತ್ತು ಹಾಕಲಾಗಿದೆ. ಮುಖದ ಮೇಲೆ ರಾಡ್ ನಿಂದ ಹೊಡೆದು ಡ್ಯಾಮೇಜ್ ಮಾಡಿದ್ದಾರೆ. ಇದರ ಶಬ್ದ ಬಂತು. ಎದ್ದು ನೋಡುತ್ತಿದ್ದಂತೆ ಅವರು ಓಡಿ ಹೋದರು” ಎಂದು ಅವರು ತಿಳಿಸಿದರು.
“ರಾಯಣ್ಣ ಸೇನೆಯ ಒಡೆತನದ ಮೂರ್ತಿ ಅದು. ರಾಯಣ್ಣ ಜಯಂತಿಗೆ ಬಳಸುತ್ತಿದ್ದೆವು. ನವರಾತ್ರಿಯಲ್ಲಿ ದುರ್ಗಾಮಾತಾ ದೌಡ್ ಗೆ ಕೂಡ ಬಳಸುತ್ತಿದ್ದೆವು. 8 ಅಡಿಯ ಫೈಬರ್ ಮೂರ್ತಿ ಅದು. ಈಗ ಮೂರ್ತಿಯನ್ನು ಪೊಲೀಸ್ ಠಾಣೆಗೆ ಒಯ್ದಿದ್ದಾರೆ. ನಾವು 20ಕ್ಕೂ ಹೆಚ್ಚು ಜನರು ಈಗ ಪೊಲೀಸ್ ಠಾಣೆಗೆ ಬಂದಿದ್ದೇವೆ” ಎಂದು ಶಿವರಾಜ ತಿಳಿಸಿದರು.
“ದುಷ್ಕರ್ಮಿಗಳನ್ನು ಕೂಡಲೇ ಬಂಧಿಸಬೇಕು. ಜೊತೆಗೆ ನಮಗೆ ಅದೇ ಸ್ಥಳದಲ್ಲಿ ಮೂರತಿ ಪ್ರತಿಷ್ಠಾಪನೆಗೆ ಅನುಮತಿ ನೀಡಬೇಕು. ಈಗ ಪೊಲೀಸರಿಗೆ ಲಿಖಿತ ದೂರು ಸಲ್ಲಿಸುತ್ತಿದ್ದೇವೆ” ಎಂದು ಅವರು ತಿಳಿಸಿದರು.
ಬೆಳಗಾವಿಯಲ್ಲಿ ಪ್ರತಿಭಟನೆ, ಹಿಂಸಾಚಾರ: 20ಕ್ಕೂ ಹೆಚ್ಚು ವಾಹನಗಳಿಗೆ ಕಲ್ಲು ತೂರಾಟ: ವಾಹನಗಳ ಗಾಜು ಪುಡಿ ಪುಡಿ
ಬೆಳಗಾವಿಯಲ್ಲಿ ಕಲ್ಲು ತೂರಾಟ; 3 ಪ್ರಕರಣ ದಾಖಲು; 27 ಜನರ ಬಂಧನ: ನಿಷೇಧಾಜ್ಞೆ ಜಾರಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ