Kannada NewsKarnataka NewsLatest

21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ – ಡಿ.ಕೆ.ಶಿವಕುಮಾರ

 

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ನಾವು ಮೊದಲಿನಿಂದಲೂ ಮತಾಂತರ ನಿಷೇಧ ಮಸೂದೆಯನ್ನು ವಿರೋಧಿಸುತ್ತಲೇ ಬಂದಿದ್ದೇವೆ. ಈ ಮಸೂದೆ ಮಂಡನೆಯನ್ನು ನಾವು ಆಕ್ಷೇಪಿಸುತ್ತೇವೆ. ಈ ಮಸೂದೆ ಸಂವಿಧಾನ ವಿರುದ್ಧವಾಗಿದ್ದು, ನಾವು ಅದನ್ನು ವಿರೋಧಿಸಲೇಬೇಕಿದೆ. ನಮ್ಮ ರಾಜ್ಯದಲ್ಲಿ ಅಶಾಂತಿ ಮೂಡಿಸಲು, ರಾಜಕೀಯ ಉದ್ದೇಶಕ್ಕಾಗಿ ವಿಷಯಾಂತರ ಮಾಡುವ ಪ್ರಯತ್ನ ನಡೆಯುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಲವಂತವಾಗಿ ಮತಾಂತರ ಮಾಡುವಂತಿಲ್ಲ ಎಂಬ ಕಾನೂನು ಈಗಾಗಲೇ ಇದ್ದರೂ ಧಾರ್ಮಿಕ ಸ್ವಾತಂತ್ರ್ಯ, ಬದುಕಿನ ಹಾಗೂ ವಿಚಾರದ ಹಕ್ಕನ್ನು ಯಾರು ಕಸಿಯಲು ಆಗುವುದಿಲ್ಲ. ಇದು ಎಲ್ಲ ಧರ್ಮಕ್ಕೂ ಸೇರಿದ ವಿಚಾರ. ಬೌದ್ಧ, ಕ್ರೈಸ್ತ ಧರ್ಮ ಸೇರಿದಂತೆ ಎಲ್ಲವೂ ಇದರ ವ್ಯಾಪ್ತಿಯಲ್ಲಿದೆ ಎಂದರು.

ಇಸ್ಕಾನ್, ಅಮೃತಾನಂದಮಯಿ ಆಶ್ರಮ ಸೇರಿದಂತೆ ಹಲವೆಡೆ ವಿದೇಶದಿಂದ ಅನ್ಯ ಧರ್ಮದವರು ಬಂದು ಹರೇ ರಾಮ, ಹರೇ ಕೃಷ್ಣ ಎಂದು ಭಜನೆ ಮಾಡುತ್ತಾರೆ. ಹೀಗಿರುವಾಗ ಈ ಮಸೂದೆ ಎಲ್ಲರಿಗೂ ಕಸಿವಿಸಿ ವಾತಾವರಣ ಸೃಷ್ಟಿಸುತ್ತಿದೆ.

ಇದು ಜಾತ್ಯಾತೀತ ರಾಜ್ಯ, ಇದೊಂದು ಶಾಂತಿಯ ನಾಡು. ಇಲ್ಲಿ ಎಲ್ಲ ಜನಾಂಗದವರು ಬದುಕಲು ಅವಕಾಶ ಇದೆ ಎಂದು ಹೊರಗಿನವರು ಗೌರವ ಇಟ್ಟುಕೊಂಡಿದ್ದಾರೆ. ಆದರೆ ಇಲ್ಲಿ ಶಾಂತಿ ಕದಡಲು ಪ್ರಯತ್ನ ಮಾಡಲಾಗುತ್ತಿದೆ. ಕೆಲವು ಕ್ರೈಸ್ತರನ್ನು ಗಮನದಲ್ಲಿಟ್ಟುಕೊಂಡು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

ಈ ದೇಶವನ್ನು ಮೊಘಲರು, ಪೋರ್ಚುಗೀಸರು ಹಾಗೂ ಬ್ರಿಟಿಷರು ಆಳಿದ್ದಾರೆ. ಅವರ ಜನಸಂಖ್ಯೆ ಎಲ್ಲಿ ಹೆಚ್ಚಾಗಿದೆ. ಈಗಲೂ ಸುಮಾರು ಶೇ. 2.30 ರಷ್ಟು ಜನ ಇದ್ದಾರೆ.

ಎಲ್ಲ ನಾಯಕರು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ತಮ್ಮ ಮಕ್ಕಳಿಗೆ ಶಿಕ್ಷಣ, ಆಸ್ಪತ್ರೆಯಲ್ಲಿ ಚಿಕಿತ್ಸೆ ಬೇಕು ಅಂತಾರೆ. ನಾನು ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಓದಿದ್ದೇನೆ. ನನಗೆ ಯಾರೂ ಬಂದು ಕ್ರೈಸ್ತ ಧರ್ಮದ ಬಗ್ಗೆ ಬೋಧನೆ ಆಗಲಿ ಮತಾಂತರಕ್ಕೆ ಬಲವಂತ ಮಾಡಿಲ್ಲ.

21 ಮಂತ್ರಿಗಳ ಮಕ್ಕಳು ಕ್ರೈಸ್ತ ಶಿಕ್ಷಣ ಸಂಸ್ಥೆಗಳಲ್ಲಿ ಓದುತ್ತಿದ್ದಾರೆ. ಎಲ್ಲಾದರೂ ಒಂದು ಕಡೆ. ಬಲವಂತದ ಮತಾಂತರ ಆಗಿರುವ ಪ್ರಕರಣ ಇದೆಯಾ? ಈ ಸಮುದಾಯ ಸಮಾಜ ಸೇವೆ ಮಾಡಿಕೊಂಡು ಬಂದಿದೆ. ಹಿಂದೂ ಧರ್ಮದಲ್ಲೂ ಧಾರ್ಮಿಕ ಸೇವೆ ಮಾಡಿಕೊಂಡು ಬರಲಾಗುತ್ತಿದೆ. ನಾವು ಕೂಡ ಯಾರಿಗೂ ಹಿಂದೂ ಧರ್ಮಕ್ಕೆ ಮತಾಂತರ ಆಗಿ ಎಂದು ಹೇಳುತ್ತಿಲ್ಲ. ಈ ರೀತಿ ಮಾಡುವುದು ಸರಿಯಲ್ಲ. ನಾವು ಈ ಮಸೂದೆ ಖಂಡಿಸುತ್ತೇವೆ. ಇದು ರಾಜ್ಯಕ್ಕೆ ಕಪ್ಪುಚುಕ್ಕೆಯಾಗಲಿದೆ ಎಂದು ಎಚ್ಚರಿಸಿದರು.

ಇಷ್ಟು ವರ್ಷ ಆಗದ ಬಲವಂತ ಮತಾಂತರ ಈಗ ಯಾರು ಮಾಡುತ್ತಿದ್ದಾರೆ. ಮೊಘಲರು ಎಷ್ಟು ವರ್ಷ ದೇಶ ಆಳಿದ್ದಾರೆ. ಎಷ್ಟು ಜನ ಮುಸಲ್ಮಾನರಿದ್ದಾರೆ? ಈಗಲೂ ಶೇ. 11-12 ರಷ್ಟು ಮುಸಲ್ಮಾನರಿದ್ದಾರೆ. ಹಿಂದೂ ರಾಷ್ಟ್ರ ಇದು. ಎಲ್ಲಿ ಬಲವಂತ ಮತಾಂತರ ನಡೆಯುತ್ತಿದೆ.

ಸುಮ್ಮನೆ ರಾಜಕೀಯವಾಗಿ ಇದನ್ನು ಉಪಯೋಗಿಸಿಕೊಳ್ಳುವುದು ಸರಿಯಲ್ಲ. ಇಬ್ಬರ ಹೃದಯ ಪರಸ್ಪರ ಇಷ್ಟಪಟ್ಟು ಪ್ರೀತಿಸಿದರೆ ಅದು ಲವ್ ಜಿಹಾದ್ ಆಗುತ್ತದಾ? ಅಕ್ಕಿ ಒಂದು ಕಡೆ, ಅರಿಶಿನ ಒಂದು ಕಡೆ ಇರುತ್ತದೆ. ಅವೆರಡೂ ಸೇರಿದರೆ ಮಾತ್ರ ಮಂತ್ರಾಕ್ಷತೆ ಆಗುತ್ತದೆ ಎಂದರು.

ಕಾಂಗ್ರೆಸ್ ಓಲೈಕೆ ರಾಜಕಾರಣ ಮಾಡುತ್ತಿದೆ ಎಂಬ ಬಿಜೆಪಿ ಹಾಗೂ ಜೆಡಿಎಸ್ ಆರೋಪಕ್ಕೆ ಸಂಬಂಧಿಸಿದಂತೆ ಕೇಳಿದ ಪ್ರಶ್ನೆಗೆ ಉತ್ತರಿಸಿದ ಅವರು, ‘ಯಾರೋ ಪುಂಡರು ದುಷ್ಕೃತ್ಯ ಮಾಡಿದರು ಎಂದ ಮಾತ್ರಕ್ಕೆ ಒಂದು ರಾಜಕೀಯ ಪಕ್ಷವಾಗಿ ನಾವು ಸಾಕ್ಷ್ಯಾಧಾರ ಇಲ್ಲದೆ ಒಬ್ಬರ ಮೇಲೆ ಆರೋಪ ಮಾಡಲು ಸಾಧ್ಯವಿಲ್ಲ. ತಪ್ಪು ಯಾರೇ ಮಾಡಿದ್ದರೂ ಅವರಿಗೆ ಶಿಕ್ಷೆಯಾಗಲಿ ಎಂದು ನಾವು ಆಗ್ರಹಿಸುತ್ತೇವೆ’ ಎಂದರು.

ಕಾಂಗ್ರೆಸ್ ಕಾರ್ಯಕರ್ತರು ಈ ದುಷ್ಕೃತ್ಯ ಎಸಗಿದ್ದಾರೆ ಎಂಬ ಆರೋಪಕ್ಕೆ ಪ್ರತಿಕ್ರಿಯೆ ನೀಡಿದ ಅವರು, ‘ರಾಜಕೀಯ ನಾಯಕರೆಂದರೆ ಅನೇಕರು ಬಂದು ಭೇಟಿ ಮಾಡಿ ಫೋಟೋ ತೆಗೆಸಿಕೊಂಡು ಹೋಗುತ್ತಾರೆ. ಯಾರೋ ಎಲ್ಲೋ ಕಲ್ಲು ಹೊಡೆದರೆ, ಆತ ದಳದ ನಾಯಕರ ಜತೆ ಫೋಟೋ ತೆಗಿಸಿಕೊಂಡ ಮಾತ್ರಕ್ಕೆ ಆ ಕೆಲಸ ದಳದವರು ಮಾಡಿದ್ದಾರೆ ಎಂದು ಹೇಳಲು ಸಾಧ್ಯವೇ?’ ಎಂದರು.

ಕುಮಾರಸ್ವಾಮಿ ಅವರ ಆರೋಪದ ಬಗ್ಗೆ ಕೇಳಿದ ಪ್ರಶ್ನೆಗೆ, ‘ದೊಡ್ಡವರ ಬಗ್ಗೆ ಮಾತನಾಡುವ ಶಕ್ತಿ ನಮಗಿಲ್ಲ. ಸಣ್ಣವರ ಬಗ್ಗೆ ಇದ್ದರೆ ಮಾತನಾಡುತ್ತೇವೆ. ದೊಡ್ಡವರ ಸುದ್ದಿ ನಮಗೇಕೆ?’ ಎಂದು ಉತ್ತರಿಸಿದರು.

ಎಲ್ಲಿಯೂ ಬಲವಂತದ ಮತಾಂತರ ನಡೆದಿಲ್ಲ – ಡಿ.ಕೆ.ಶಿವಕುಮಾರ್

ಮುಂದುವರೆದ ಶಿವಸೇನೆ ಪುಂಡಾಟ; ಕನ್ನಡಿಗರ ಮನೆಗೆ ನುಗ್ಗಿ ಥಳಿಸಿದ ಪುಂಡರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button