Kannada News

ಪರೀಕ್ಷೆ ಮುಗೀತು, ಫಲಿತಾಂಶವೂ ಬರುತ್ತೆ, ಮುಂದೇನು?


ಜಯಶ್ರೀ ಜೆ. ಅಬ್ಬಿಗೇರಿ
ರಾತ್ರಿ ಹಗಲು ಅನ್ನದೇ ಒಂದೇ ಸಮ ಓದಿ ಬರೆದು. ತಲೆ ಗಿರ್ರಂತು. ಸಿಕ್ಕ ಸಿಕ್ಕವರು ಕೂಡಿಟ್ಟಿದ್ದ ಹಳೆಯ ಪ್ರಶ್ನೆ ಪತ್ರಿಕೆ ಕೂಡಿಸಿ, ಬಿಡಿಸಿ ಬಿಡಿಸಿ ತೆಗೆದದ್ದೂ ಆಯ್ತು. ಗೂಗಲ್ ಆಂಟಿ ಹತ್ರ ಅದು ಇದು ಸಮಸ್ಯೆಗಳನ್ನು ಕೇಳಿ ತಿಳಿದದ್ದೂ ಆಯ್ತು. ಅದೆಷ್ಟು ಒತ್ತಡ, ಅಬ್ಬಬ್ಬಾ! ಕ್ಷಣ ಕ್ಷಣವೂ ಕೆಂಡದ ಮೇಲೆ ನಿಂತಂಥ ಅನುಭವ.

ಮುಗಿಲು ಕತ್ತರಿಸಿಕೊಂಡು ಹೆಗಲು ಮೇಲೆ ಬಿದ್ದವರ ತರ ಅನಿಸ್ತಿತ್ತು. ನನ್ನ ಪರೀಕ್ಷೆ ಅಂತ ಟಿವಿ ಐದಾರು ತಿಂಗಳಿಂದ ಉಪವಾಸ ಬಿದ್ದಿದ್ದ ಬಹು ಬೇಡಿಕೆಯ ರಿಮೋಟ್ ಅನಾಥವಾಗಿ ಮೂಲೆಯಲ್ಲಿ ಕುಂತದ. ಅಪ್ಪ ಅವ್ವನ್ನ ಬಿಟ್ರೆ ಉಳಿದವ್ರೆಲ್ಲ ನಿನ್ನ ಪರೀಕ್ಷೆ ಯಾವಾಗ ಮುಗಿಯುತ್ತೋ? ಅಂತ ಕೇಳಿ ಗುರಾಯಿಸುವವರೆ! ಇವ್ನ ಪರೀಕ್ಷೆಗಾಗಿ ನಾವು ಸನ್ಯಾಸಿಗಳಾಗಬೇಕಾಗಿದೆ.

ಹೋಮ್ ಥೇಟರ್ ಇದ್ದೂ ಉಪಯೋಗವಾಗ್ತಿಲ್ಲ. ದೊಡ್ಡ ಸ್ಕ್ರೀನ್‌ಲ್ಲಿ ಕ್ರಿಕೆಟ್ ನೋಡಿ ಚಪ್ಪಾಳೆ ತಟ್ಟೋ ಭಾಗ್ಯ ನನಗಿಲ್ಲ ಅಂತ ಅಣ್ಣನ ಗೋಳಾಟ. ರಿಯಾಲಿಟಿ ಶೋ, ಸೀರಿಯಲ್ಸ್‌ನಲ್ಲಿ ಇಂಟ್ರಸ್ಟ್ ಇಲ್ಲದಂಗಾಗಿದೆ. ಮೊಬೈಲ್ ಸ್ಕ್ರೀನ್ ಸಣ್ಣದು ಅದರಲ್ಲಿ ನೋಡಿದರೂ ಮಜಾ ಬರ್ತಿಲ್ಲ ಅನ್ನೋ ತಕರಾರು ತಂಗಿದು.

ಆಗಿದ್ದು ಆಗಲಿ ಹೇಗಾದ್ರೂ ಪರೀಕ್ಷೆ ಬೇಗ ಬರೆದು ಮುಗಿಸಿ ಬಿಟ್ರೆ ಒಂದು ಸಲ ಪೂರ್ಣ ತಲೆ ತೊಳ್ಕೊಂಡು ಬಿಡಬಹುದು ಅಂತ ಪರೀಕ್ಷೆ ಬರೆದು ಮುಗಿಸಿದ್ದೂ ಆಯ್ತು. ಇದೀಗ ಅದಕ್ಕಿಂತ ಟೆನ್ಷನ್ ಜಾಸ್ತಿ ಆಗ್ತಿದೆ. ರಿಸಲ್ಟ್ ಏನಾಗುತ್ತೋ ಏನೋ? ಮನಸ್ಸಿನಲ್ಲಿ ಕಾರ್ಮೋಡ ಕವಿದಿದೆ.

ಒಂದು ವೇಳೆ ಫಲಿತಾಂಶ ಚೆನ್ನಾಗಿ ಬರದಿದ್ದರೆ ಮುಂದೇನು? ಅನ್ನೋ ದೊಡ್ಡ ಪ್ರಶ್ನೆ ಜೀವ ತಿಂತಿದೆ. ಫಲಿತಾಂಶ ಚೆನ್ನಾಗಿ ಬಂದರೆ ಫಳ ಫಳ ಹೊಳೆಯುವ ಬಂಗಾರದ ಬದುಕು ಸಿಕ್ಕಂತೆಯೇ ಸರಿ.

ಆದರೆ ಫಲಿತಾಂಶ ಬರುವವರೆಗೆ ದಿನ ಸವೆಸುವುದು ಹೇಗೆ? ಮನದ ತೊಳಲಾಟ, ನಡುಕ ಹುಟ್ಟಿಸುತ್ತಿರುವ ಭಯದ ಕುರಿತು ಹೇಳೋದು ಯಾರಿಗೆ? ನನಗೆ ಬೇಕಾದ ಕೋರ್ಸ್ ಓದಲು ಅಪ್ಪ ಅವ್ವ ಬಿಡ್ತಾರೋ ಇಲ್ವೋ? ಎಲ್ಲವೂ ಗೊಂದಲಮಯವಾಗಿದೆ. ಅನ್ನೋದು ಮನೋಜನ ಮನಸ್ಥಿತಿಯ ಅಳಲು.

ವಿಭಿನ್ನವಾಗಿ ಅಭಿವ್ಯಕ್ತಿಸಲಿ

ಇದು ಕೇವಲ ಒಬ್ಬ ವಿದ್ಯಾರ್ಥಿಯ ಗೋಳಲ್ಲ. ಪರೀಕ್ಷೆ ಬರೆದ ಎಲ್ಲ ವಿದ್ಯಾರ್ಥಿಗಳ ಸ್ಥಿತಿ ಹೆಚ್ಚು ಕಡಿಮೆ ಹೀಗೇ ಇರುತ್ತದೆ. ನಮ್ಮಲ್ಲಿ ಬಹಳಷ್ಟು ವಿದ್ಯಾರ್ಥಿಗಳು ತಮ್ಮ ಜೀವನದ ಪ್ರಮುಖ ವಿಷಯಗಳನ್ನು ಇರುವುದಕ್ಕಿಂತ ಅತಿ ದೊಡ್ಡದಾಗಿ ಇಲ್ಲವೇ ಪ್ರಾಮುಖ್ಯತೆ ಇಲ್ಲವೇನೋ ಎನ್ನುವಷ್ಟು ಸಣ್ಣದಾಗಿ ನಿರ್ವಹಿಸುತ್ತಾರೆ ಎಂಬ ಯೋಚನೆಯ ಹುಳು ತಲೆಯಲ್ಲಿ ಹೊಕ್ಕಿಕೊಳ್ಳುತ್ತದೆ.

ನಿಜಾಂಶವೆಂದರೆ ನಾವು ಮಕ್ಕಳನ್ನು ಪುಸ್ತಕದ ಹುಳುಗಳನ್ನಾಗಿಸಲು ಪ್ರಯತಿಸುತ್ತಿದ್ದೇವೆ. ಕೇವಲ ಪಠ್ಯ ಪುಸ್ತಕಗಳನ್ನು ಮಾತ್ರ ಓದಬೇಕು. ಉಳಿದ ಪುಸ್ತಕಗಳ ಮೇಲೆ ಕಣ್ಣಾಡಿಸಲೂ ಬಿಡುವುದಿಲ್ಲ. ಕೈಗೆ ಸಿಕ್ಕಿದ್ದನ್ನೆಲ್ಲ ಓದುವುದು ನಿಷಿದ್ಧ. ಅವರಲ್ಲಿ ನೆಲೆಸಿರುವ ಸೃಜನಶೀಲತೆ, ಕಲೆ, ಚಿತ್ರಕಲೆ, ಸಂಗೀತ ಸಾಹಿತ್ಯ ರಚನೆಯನ್ನು ಮೇದಾವಿತನವನ್ನು ಹೊರಗೆಡುವಲು ಪ್ರಯತ್ನಿಸುವುದೇ ಕಡಿಮೆ.

ವಿಭಿನ್ನವಾದ ಅಭಿವ್ಯಕ್ತಿಯನ್ನು ಅಭಿವ್ಯಕ್ತಿಸಲು ಬಿಡುವುದೇ ಇಲ್ಲ. ನೈಜ ಪ್ರತಿಭೆಯ ಕರೆಗಳಿಗೆ ಓಗೊಡುವುದೇ ಇಲ್ಲ. ಓಡುವ ಕುದುರೆ ಆಚೀಚೆ ನೋಡದಂತೆ ಕಣ್ಣಿಗೆ ಕಾಪು ಕಟ್ಟಿಕೊಂಡು ಮಕ್ಕಳನ್ನು ನಾವಂದುಕೊಂಡಂತೆ ನಮಗೆ ಬೇಕಾದ ವೃತ್ತಿಯನ್ನು ಪಡೆಯಲು ಒತ್ತಾಯಿಸಿ ಕಡ್ಡಾಯಗೊಳಿಸುತ್ತೇವೆ. ನಮ್ಮ ಕನಸುಗಳನ್ನು ಅವರಲ್ಲಿ ನನಸಾಗಿಸಲು ಮುಂದಾಗುತ್ತೇವೆ.

ಹಾಕದಿರಿ ಬೇಲಿ

ನಮಗೇ ಗೊತ್ತಾಗದಂತೆ ಮಕ್ಕಳ ಸುತ್ತ ಅಗೋಚರ ಬೇಲಿ ಹಾಕುತ್ತೇವೆ. ಮಕ್ಕಳಲ್ಲಿ ಹುದುಗಿರುವ ಸಾಮರ್ಥ್ಯ ಪ್ರತಿಭೆಗಳನ್ನು ಹೊರಗೆಳೆಯದೇ ಅಲ್ಲಿಯೇ ಹುಗಿದು ಬಿಡುತ್ತೇವೆ. ಅವರಿಗೆ ಬೇಡವಾದ ಇಷ್ಟವಿಲ್ಲದ ವೃತ್ತಿ ತರಬೇತಿ ಕೊಡಿಸಲು ಮುಂದಾಗುತ್ತೇವೆ. ಮಕ್ಕಳ ಒಳಗಿರುವ ತುಡಿತಕ್ಕೆ ಸೊಪ್ಪು ಹಾಕದೇ ಅದಕ್ಕೆ ಉಸಿರಾಡಲು ಬಿಡದೇ ಕತ್ತು ಹಿಸುಕಿ ಬಿಡುತ್ತೇವೆ.

ಮಕ್ಕಳು ನಾವು ಹಾಕಿದ ಅಗೋಚರ ಬೇಲಿಯನ್ನು ದಾಟಿ ಹೋಗಲಾಗದೇ ಅದಕ್ಕೆ ಒಗ್ಗಿಕೊಳ್ಳಲು ಹೆಣಗುತ್ತಾರೆ. ಸಾವಿರ ಮೀಟರ್ ಓಡುವ ತಾಕತ್ತಿದ್ದರೂ ೧೦೦ ಮೀಟರ್ ನಡಿಗೆಯ ಪಂಜರಕ್ಕೆ ತಳ್ಳುವ ಕೆಟ್ಟ ಚಟ ರೂಡಿಸಿಕೊಂಡಿದ್ದೆವೆ. ನಾವು ಹಾಕಿದ ಅಗೊಚರ ಬೇಲಿ ಇಲ್ಲದಾಗಲೂ ಮಕ್ಕಳು ಆ ಎಲ್ಲೆಯನ್ನು ಮೀರದಂತೆ ಕಿವಿ ತುಂಬಿರುತ್ತೇವೆ.

ಅವರ ನಂಬಿಕೆ ವ್ಯವಸ್ಥೆಯನ್ನು ಹಾಗೆ ಟ್ಯೂನ್ ಮಾಡಿ ಬಿಡುತ್ತೇವೆ. ವಾಸ್ತವವೆಂಬಂತಹ ಕಲ್ಪನಾತ್ಮಕ ಎಲ್ಲೆಯನ್ನು ಮಕ್ಕಳು ತಾವೇ ರೂಪಿಸಿಕೊಳ್ಳುವಂತೆ ನಾವು ದುಂಬಾಲು ಬಿದ್ದಿರುತ್ತೇವೆ. ಮಕ್ಕಳು ಬೆಳೆದಂತೆಲ್ಲ ತಾವು ಅಂದುಕೊಂಡದ್ದನ್ನು ಮಾಡುವುದಂತೂ ದೂರ ಉಳಿಯಿತು.

ನಾವು ಹಾಕಿದ ಗೆರೆಯನ್ನು ಕನಸಿನಲ್ಲೂ ದಾಟುವುದಿಲ್ಲ. ಗಡಿಬಿಡಿಯ ದಿನಗಳಲ್ಲಿ ಮಕ್ಕಳು ನಾವು ತೋರಿದ ಮಾರ್ಗದಲ್ಲಿ ನುಗ್ಗಿಕೊಂಡು ಹೋಗಲೇಬೇಕು. ಇಲ್ಲದಿದ್ದರೆ ಬದುಕಿಲ್ಲ ಎನ್ನುವುದು ನಮ್ಮ ಅಭಿಪ್ರಾಯ ಒಪ್ಪುವಂಥದಲ್ಲ.

ಭಯಗಳಿಗೆ ಬಲಿ

ಸಮಯ ಕಳೆದಂತೆಲ್ಲ ನಮಗೆ ಅರಿವು ಇಲ್ಲದಂತೆ ಮಕ್ಕಳನ್ನು ನಕಾರಾತ್ಮಕ ನಂಬಿಕೆಗಳಿಗೆ ಹಾನಿಕಾರಕ ಭಯಗಳಿಗೆ ತಪ್ಪು ಕಲ್ಪನೆಗಳಿಗೆ ಬಲಿಯಾಗುವಂತೆ ಮಾಡಿಬಿಡುತ್ತೇವೆ. ‘ಭಯ ಯಾವತ್ತೂ ಒಬ್ಬಂಟಿಯಲ್ಲ. ಯಾವುದಾದರೊಂದನ್ನು ನೆನೆಸಿಕೊಂಡಾಗ ಅದರ ಬಗ್ಗೆ ಭಯ ಪಡುತ್ತೇವೆ.

ಅಂದರೆ ಯಾವುದೋ ಒಂದು ವಿಷಯಕ್ಕೆ ನಮ್ಮ ಮನಸ್ಸನ್ನು ಸಂಬಂಧಿಸಿದಾಗ ಮಾತ್ರ ಭಯವಾಗುತ್ತದೆ. ಇಲ್ಲದಿದ್ದರೆ ಅದರ ಅಸ್ತಿತ್ವ ಇರುವುದಿಲ್ಲ’ ಎನ್ನುತ್ತಾರೆ ಜಿಡ್ಡು ಕೃಷ್ಣಮೂರ್ತಿ.
ಭಯವನ್ನೇ ನಿಜವೆಂದು ನಂಬಿ ಬಿಡುತ್ತಾರೆ.

ಹೀಗಾಗಿ ಭಯ, ಬೆಟ್ಟದಂತೆ ಬಿಡದೇ ಬೆಳೆಯುತ್ತ ಹೋಗುತ್ತದೆ. ಮಕ್ಕಳಿಗೆ ತಮ್ಮ ಮೇಲೆ ತಮಗೆ ಕೋಪ ಅಸಹ್ಯ ಭಾವನೆ ಹುಟ್ಟಿದರೂ ಹೇಳಿಕೊಳ್ಳಲಾಗದ ಅಸಹಾಯಕತೆ ನಿರ್ಮಾಣವಾಗಿರುತ್ತದೆ.  ನಾವು ಅಂದುಕೊಂಡಿದ್ದೇ ಸತ್ಯ. ಅದನ್ನೇ ಮಕ್ಕಳು ಅನುಸರಿಸಬೇಕು ಎನ್ನುವುದು ಯಾವ ಲೆಕ್ಕ? ನಾವು ಬಯಸುವುದನ್ನು ಅವರಿಂದ ನಿರೀಕ್ಷಿಸಿ ಇಲ್ಲದ ಭಯಗಳ ಸೃಷ್ಟಿಸಿ.

ಉಜ್ವಲ ಭವಿಷ್ಯಕ್ಕೆ ತಡೆಯುಂಟು ಮಾಡುತ್ತೇವೆ. ನಮ್ಮ ಮಕ್ಕಳ ಹಿನ್ನೆಡೆಗೆ ನಾವೇ ಕಾರಣರಾಗುತ್ತೇವೆ. ಹೀಗಾಗಿ ಮಕ್ಕಳ ಮನದಲ್ಲಿರುವ ಮಹತ್ವಾಕಾಂಕ್ಷೆಯನ್ನು ಕೇಳಿ ಅವರ ದಾರಿಯಲ್ಲಿ ನಡೆಯಲು ಅನುವು ಮಾಡಿಕೊಡುವುದು ಸೂಕ್ತ.

ಹೃದಯವಂತರಾಗಲಿ

ಮಕ್ಕಳು ಧನವಂತರಾಗಬೇಕು. ಕೈ ತುಂಬ ಗಳಿಸಿ ಸುಖೀ ಜೀವನ ನಡೆಸಬೇಕೆನ್ನುವುದು ಎಲ್ಲ ಪಾಲಕರ ಮಹದಾಸೆ. ಅದು ಒಳ್ಳೆಯದೇ. ಆದರೂ ಹಣದ ಅಮಲಿನ ಅಲೆಯು ತಿರುಗಿ ತಿರುಗಿ ಬಂದು ಬಡಿಯುವಂತೆ ಬೆಳೆಸಬಾರದು. ತಾಮ್ರದ ದುಡ್ಡು ತಾಯಿ ಮಕ್ಕಳನ್ನು ಅಗಲಿಸುತ್ತದೆ.

ಪ್ರೀತಿ ಮಕ್ಕಳನ್ನು ಹೃದಯವಂತರನ್ನಾಗಿಸುತ್ತದೆ. ಹೃದಯವಂತರಾದರೆ ನೆಮ್ಮದಿ ತಾನಾಗಿಯೇ ಒಲಿದು ಬರುತ್ತದೆ. ’ಪ್ರತಿಯೊಬ್ಬರಿಗೂ ತನ್ನ ಅಭಿಪ್ರಾಯಗಳ ಬಗ್ಗೆ ಹಕ್ಕಿದೆ. ಆದರೆ ಯಾರಿಗೂ ತನ್ನ ವಿಷಯಗಳ ಬಗ್ಗೆ ತಪ್ಪಾಗಿರಲು ಹಕ್ಕಿಲ್ಲ’ ಎಂಬುದನ್ನು ನೆನಪಿಟ್ಟುಕೊಳ್ಳಬೇಕಿದೆ.

ನೆನಪಿಡುವುದು ಅಷ್ಟೇ ಅಲ್ಲ ಆಚರಿಸಬೇಕಿದೆ. ನಾವು ಪಡೆದುಕೊಂಡಿರುವ ಉಡುಗೊರೆಗಳಲ್ಲಿ ಬಹು ಆಸ್ಥೆಯಿಂದ ಪಡೆದುಕೊಂಡವು ಮಕ್ಕಳು. ಅವು ಸಹಜವಾಗಿ ಅರಳಿ ಪರಿಮಳ ಸೂಸಬೇಕು.

ಬೇಡ ಷರುತ್ತುಗಳ ಹಾವಳಿ

ಪಾಲಕರಾದ ನಾವು ಬಹಳಷ್ಟು ಸಲ ಮಕ್ಕಳನ್ನು ಷರತ್ತುಗಳನ್ನು ವಿಧಿಸಿ ಪ್ರೀತಿಸುವುದನ್ನು ಆರಂಭಿಸುತ್ತೇವೆ. ಇಷ್ಟು ಅಂಕ ಗಳಿಸಿದರೆ ಇಂಥ ಮೊಬೈಲ್, ಇಲ್ಲವೇ ಇಂಥ ಬೈಕ್, ಇಂಥ ಸ್ಕೂಟಿ ಎಂಬಿತ್ಯಾದಿ ಅವರ ಬೇಡಿಕೆಗಳಿಗೆ ಸುತ್ತಲೂ ಷರತ್ತುಗಳನ್ನು ಹಾಕುತ್ತೇವೆ.

ಅವರೊಂದಿಗೆ ಸಮಯ ಕಳೆಯಲೂ ಷರತ್ತು ಹಾಕುತ್ತೇವೆ. ’ಸಮಯವು ನಮ್ಮ ಅತ್ಯಂತ ಉತ್ಕೃಷ್ಟ ಆಸ್ತಿ. ಅದನ್ನು ನಾವು ಪ್ರೀತಿಸುವವರೊಡನೆ ಕಳೆಯಬೇಕು’ ಷರತ್ತಿಲ್ಲದ ಪ್ರೀತಿ ಮಕ್ಕಳನ್ನು ಉತ್ತಮವಾಗಿ ಬೆಳೆಸಬಲ್ಲದು. ’ನಿಜವಾದ ಪ್ರೀತಿಯನ್ನು ನೀಡಲು ಕೊಳ್ಳಲಾರದ ಮತ್ತು ಹಣದಿಂದ ಅಳೆಯಲಾಗದ್ದನ್ನು ಸೇರಿಸಬೇಕು.’

ಮಕ್ಕಳ ಭವಿಷ್ಯದ ಕುರಿತು ಚೆನ್ನಾಗಿ ಯೋಚಿಸುವುದು ಬುದ್ಧಿವಂತಿಕೆ: ಚೆನ್ನಾಗಿ ಯೋಜಿಸುವುದು ಹೆಚ್ಚು ಬುದ್ಧಿವಂತಿಕೆ; ಅವರಲ್ಲಿರುವ ಸಾಮರ್ಥ್ಯ ಪ್ರತಿಭೆ ಚೆನ್ನಾಗಿ ಬಳಸಿಕೊಳ್ಳುವುದು ಅತಿ ಬುದ್ಧಿವಂತಿಕೆ ಮತ್ತು ಎಲ್ಲದಕ್ಕಿಂತ ಅತ್ಯುತ್ತಮ.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button