ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ಪ್ರಕಟ

ಪ್ರಗತಿವಾಹಿನಿ ಸುದ್ದಿ, ಹೊಸ ದೆಹಲಿ  : ಕೇಂದ್ರ ಸಾಹಿತ್ಯ ಅಕಾಡೆಮಿಯು ವಿವಿಧ ಪ್ರಕಾರದ ಸಾಹಿತ್ಯ ಕೃತಿಗಳಿಗೆ ನೀಡುವ ಪ್ರಶಸ್ತಿಗಳನ್ನು ಇಂದು ಇಲ್ಲಿ ಘೋಷಿಸಲಾಗಿದ್ದು ಕನ್ನಡದ ಪ್ರಮುಖ ಲೇಖಕರಾದ ಡಿ ಎಸ್ ನಾಗಭೂಷಣ್ ಅವರ ‘ಗಾಂಧಿ ಕಥನ’ ಕೃತಿಯು ಈ ವರ್ಷದ ಪುಸ್ತಕ ಪ್ರಶಸ್ತಿಗೆ ಆಯ್ಕೆಯಾಗಿದೆ.
‘ಬಾಲ ಪುರಸ್ಕಾರ’ ಕ್ಕೆ ಬಸು ಬೇವಿನಗಿಡದ ಅವರ ‘ ಓಡಿ ಹೋದ ಹುಡುಗ ‘ ಮಕ್ಕಳಿಗಾಗಿ ಬರೆದ ಕಾದಂಬರಿ ಆಯ್ಕೆಯಾಗಿದೆ.
ಅಕಾಡೆಮಿಯು ನೀಡುವ ‘ಯುವ ಪುರಸ್ಕಾರ’ ಕ್ಕೆ ಎಚ್ ಲಕ್ಷೀನಾರಾಯಣ ಸ್ವಾಮಿ ಅವರ ‘ತೊಗಲ ಚೀಲದ ಕರ್ಣ ‘ ಮಹಾ ಕಾವ್ಯವು ಆಯ್ಕೆಯಾಗಿದೆ.

ಮುಖ್ಯ ಪ್ರಶಸ್ತಿಯು ಒಂದು ಲಕ್ಷ ರುಪಾಯಿ ಹಾಗೂ ಸನ್ಮಾನ ಒಳಗೊಂಡಿದ್ದರೆ ಯುವ ಹಾಗೂ ಬಾಲ ಪುರಸ್ಕಾರಗಳು ಐವತ್ತು ಸಾವಿರ ರುಪಾಯಿ ಹಾಗೂ ಸನ್ಮಾನಗಳು ಒಳಗೊಂಡಿರುತ್ತವೆ.

ಯುವ ಸಾಹಿತ್ಯ ಪ್ರಶಸ್ತಿಯ ಜ್ಯೂರಿಗಳಾಗಿ ಕಮಲಾ ಹಂಪನಾ, ಜಗದೀಶ್ ಕೊಪ್ಪ ಹಾಗೂ ವಿಜಯಕುಮಾರಿ ಕೆಲಸ ನಿರ್ವಹಿಸಿದ್ದರೆ ಬಾಲ ಸಾಹಿತ್ಯ ಪ್ರಶಸ್ತಿಗೆ ಟಿ ಪಿ ಅಶೋಕ , ಮಾಲತಿ ಪಟ್ಟಣಶೆಟ್ಟಿ ಹಾಗೂ ಎಸ್ ದಿವಾಕರ ಅವರು ಜ್ಯೂರಿಗಳಾಗಿದ್ದರು. ಪ್ರಮುಖ ಕೃತಿ ಆಯ್ಕೆಯ ಜ್ಯೂರಿಗಳಾಗಿ ಬೊಳುವಾರ್ ಮಹಮ್ಮದ ಕುಂಯಿ, ಅಮರೇಶ ನುಗಡೋಣಿ ಹಾಗೂ ಸಬೀಹಾ ಭೂಮಿಗೌಡ ಅವರಿದ್ದರು.ಪುಸ್ತಕ ಆಯ್ಕೆ ಪ್ರಕ್ರಿಯೆಯು ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಸಲಹಾ ಸಮಿತಿಯ ಸಂಯೋಜಕರಾದ ಸರಜೂ ಕಾಟ್ಕರ್ ಅವರ ಉಸ್ತುವಾರಿಯಲ್ಲಿ ನಡೆಯಿತು.
ಪ್ರಶಸ್ತಿಗಳನ್ನು ಫೆಬ್ರವರಿ ತಿಂಗಳಲ್ಲಿ ದೆಹಲಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರದಾನ ಮಾಡಲಾಗುವುದು.
ಪ್ರಶಸ್ತಿ ವಿಜೇತರರನ್ನು ಕೇಂದ್ರ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷರಾದ ಚಂದ್ರಶೇಖರ ಕಂಬಾರ ಅವರು ಅಭಿನಂದಿಸಿದ್ದಾರೆ.

2 ಡೋಸ್ ಲಸಿಕೆ ಪಡೆದವರಲ್ಲೂ ಒಮಿಕ್ರಾನ್; ರಾಜ್ಯದಲ್ಲಿ ಮತ್ತೆ 5 ಕೇಸ್ ಪತ್ತೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button