ನಂದಿ ಬೆಟ್ಟ ಆತಂಕ: ಬಿಜೆಪಿಯಲ್ಲಿ ತಲ್ಲಣ; ಜಾರಕಿಹೊಳಿ ಸಹೋದರರ ಮುಂದಿನ ನಡೆ ಏನು?

ಎಂ.ಕೆ.ಹೆಗಡೆ, ಬೆಂಗಳೂರು – ವಿಧಾನ ಪರಿಷತ್ ಚುನಾವಣೆ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆ ಫಲಿತಾಂಶ ಬಂದ ಮೇಲೆ ಬಿಜೆಪಿಯಲ್ಲಿ ಮೊದಲಿನ ವಾತಾವರಣ ಉಳಿದಿಲ್ಲ. ಒಳಗೊಳಗೇ ತಲ್ಲಣ ಶುರುವಾಗಿದೆ. 2023ರ ಚುನಾವಣೆ ಆತಂಕ ಹೆಚ್ಚಿದೆ.

ಜನೆವರಿ 8ರಂದು ನಂದಿಬೆಟ್ಟದಲ್ಲಿ ನಡೆಯಲಿರುವ ಚಿಂತನಾ ಸಮಾವೇಶ ಬಿಜೆಪಿ ಕಾರ್ಯಕರ್ತರಿಗಿಂತ ನಾಯಕರಲ್ಲಿ ನಡುಕ ಹೆಚ್ಚಿಸಿದೆ. ಇದೇ ಸಮಾವೇಶ ರಾಜ್ಯದಲ್ಲಿ 2023ರ ಚುನಾವಣೆಗೆ ಮುನ್ನ ನಡೆಯಲಿರುವ ರಾಜಕೀಯ ಧೃವೀಕರಣಕ್ಕೆ ನಾಂದಿಹಾಡಿದರೂ ಆಶ್ಚರ್ಯವಿಲ್ಲ ಎನ್ನುವ ಗುಸು ಗುಸು ಶುರುವಾಗಿದೆ.

ನಂದಿಬೆಟ್ಟದ ಸಮಾವೇಶದಲ್ಲಿ ರಾಷ್ಟ್ರೀಯ ನಾಯಕ ಅಮಿತ್ ಶಾ ಭಾಗವಹಿಸಲಿದ್ದಾರೆ. ಇದು ಸಮಾವೇಶದ ಗಂಭೀರತೆಯನ್ನು ಹೆಚ್ಚಿಸಿದೆ. ಕಳೆದ ಕೆಲವು ತಿಂಗಳುಗಳಿಂದ ಪಕ್ಷದ ಆಂತರಿಕ ವಿದ್ಯಮಾನಗಳ ಕಾರಣದಿಂದಾಗಿಯೇ ಬಿಜೆಪಿಗೆ ಹಿನ್ನಡೆಯುಂಟಾಗುತ್ತಿದೆ ಎನ್ನುವ ಅಂಶವನ್ನು ಹೈಕಮಾಂಡ್ ಕೂಡ ಗುರುತಿಸಿದೆ.

ಅಮಿತ್ ಶಾ ಇವಕ್ಕೆಲ್ಲ ಖಡಕ್ ನಿರ್ಣಯದ ಮೂಲಕ ಇತಿಶ್ರೀ ಹಾಡಲಿದ್ದಾರೋ ಅಥವಾ ಎಲ್ಲವನ್ನೂ ಸಮಾಧಾನದಿಂದ ಸರಿಪಡಿಸುವ ನಿರ್ಧಾರ ತೆಗೆದುಕೊಳ್ಳಲಿದ್ದಾರೋ ಎನ್ನುವ ಪ್ರಶ್ನೆ ಮೂಡಿದೆ. ಖಡಕ್ ನಿರ್ಣಯ ತೆಗೆದುಕೊಂಡಲ್ಲಿ ಹಾಲಿ ಸಚಿವರು ಸೇರಿದಂತೆ ಅನೇಕ ನಾಯಕರ ಖುರ್ಚಿ ಅಲುಗಾಡುವುದರಲ್ಲಿ ಸಂಶಯವಿಲ್ಲ. ಅದನ್ನು ಸಹಿಸುವ ಮನೋಸ್ಥಿತಿಯಲ್ಲಿ ಬಹುತೇಕ ನಾಯಕರು ಇದ್ದಂತೆ ಕಾಣುತ್ತಿಲ್ಲ. ಹಾಗಾದಲ್ಲಿ ಆಪರೇಶನ್ ಕಮಲದ ಮೂಲಕ ಒಳಬಂದ ನಾಯಕರು ಸೇರಿದಂತೆ ಅನೇಕರು ಪಕ್ಷಾಂತರದ ಹಾದಿ ಹಿಡಿಯುವ ಎಲ್ಲ ಲಕ್ಷಣಗಳಿವೆ.

ಕಾಂಗ್ರೆಸ್ ಶಕ್ತಿ ; ಬಿಜೆಪಿ ಟ್ವೀಟ್

ಪ್ರತಿ ಚುನಾವಣೆಗೆ ಮುನ್ನ ರಾಜಕೀಯ ಧೃವೀಕರಣ ಸಹಜ ಪ್ರಕ್ರಿಯೆ. ಬದಲಾವಣೆಯ ಗಾಳಿ ಗಮನಿಸಿ ಕೆಲವರು ಪಕ್ಷಾಂತರ ನಿರ್ಧಾರ ಮಾಡಿದರೆ ಕೆಲವರು ಟಿಕೆಟ್ ಸಿಗದೆ ಅಸಮಾಧಾನಗೊಂಡು ಪಕ್ಷ ಬದಲಾಯಿಸುತ್ತಾರೆ. ಈಗಿನ ವಾತಾವರಣ ನೋಡಿದರೆ ಮುಂದಿನ 2ಂ23ರ ಚುನಾವಣೆಯಲ್ಲಿ ಬಿಜೆಪಿ ಸ್ವಂತ ಶಕ್ತಿಯ ಮೇಲೆ ಅಧಿಕಾರಕ್ಕೇರುವುದು ಸಾಧ್ಯವಿಲ್ಲ ಎಂದು ಬಿಜೆಪಿಯ ನಾಯಕರೇ ಮಾತನಾಡಲು ಶುರು ಮಾಡಿದ್ದಾರೆ. ಅಂತಹ ಅವಕಾಶ ಕಾಂಗ್ರೆಸ್ ಪಕ್ಷಕ್ಕೆ ಬಂದರೂ ಬರಬಹುದು ಎನ್ನುವ ಆಲೋಚನೆಯಲ್ಲಿ ಕೆಲವರು ಕಾಂಗ್ರೆಸ್ ನತ್ತ ಮುಖಮಾಡಬಹುದು. ಆದರೆ ಕಾಂಗ್ರೆಸ್ ಚುನಾವಣೆಯವರೆಗೆ ತನ್ನ ಶಕ್ತಿಯನ್ನು ಹೇಗೆ ವೃದ್ಧಿಸಿಕೊಳ್ಳುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.

ಬಿಜೆಪಿಗಿರುವ ಒಂದೇ ಒಂದು ಆಶಾಕಿರಣವೆಂದರೆ, ಚುನಾವಣೆ ಹತ್ತಿರಬರುತ್ತಿದ್ದಂತೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ ಮತ್ತು ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಮಧ್ಯೆ ನಾಯಕತ್ವಕ್ಕಾಗಿ ದೊಡ್ಡ ಬಿರುಕು ಉಂಟಾಗಲಿದೆ. ಇದರ ಲಾಭ ತನಗಾಗಲಿದೆ ಎನ್ನುವುದು. ಹಾಗಾಗಿಯೇ ಇತ್ತೀಚಿನ ಬಿಜೆಪಿ ಟ್ವೀಟಿ ಗಳನ್ನು ಗಮನಿಸಿದರೆ ಈ ವಿಷಯದ ಸುತ್ತಲೇ ಗಿರಕಿಹೊಡೆಯುತ್ತಿದೆ.

ತನ್ನ ಸಾಧನೆಗಳನ್ನು ಹೇಳುವ ಬದಲು, ಬಿಜೆಪಿಯ ತತ್ವ, ಸಿದ್ದಾಂತ, ಸರಕಾರದ ಸಾಧನೆಗಳನ್ನು ಜನರಿಗೆ ತಲುಪಿಸುವ ಬದಲು, ಕಾಂಗ್ರೆಸ್ ಪಕ್ಷದ ಆಂತರಿಕ ಗೊಂದಲಗಳನ್ನೇ ದೊಡ್ಡದು ಮಾಡುವ ಪ್ರಯತ್ನ ಮಾಡುತ್ತಿರುವುದು ವಿಪರ್ಯಾಸವೇ ಸರಿ. ಬಿಜೆಪಿ ತನ್ನನ್ನು ತಾನು ಸದೃಢ ಮಾಡಿಕೊಳ್ಳಲು ಈಗಲೂ ಅವಕಾಶ ಮತ್ತು ಸಮಯವಿದೆ. ಕೈಯಲ್ಲಿ ಅಧಿಕಾರವೂ ಇದೆ. ಆದರೆ ಕಾಂಗ್ರೆಸ್ ಮನೆ ಮುರಿದು ತಾನು ಲಾಭ ಮಾಡಿಕೊಳ್ಳುವ ತಂತ್ರ ಒಳ್ಳೆಯ ಬೆಳವಣಿಗೆಯಲ್ಲ. ಜೊತೆಗೆ, ಅಭಿವೃದ್ಧಿಯ ಬದಲು ಭಾವನಾತ್ಮಕ ವಿಷಯಗಳ ಕಡೆಗೆ ಹೆಚ್ಚಿನ ಗಮನ ನೀಡುತ್ತಿರುವುದೂ ಅಪೇಕ್ಷಣೀಯ ಬೆಳವಣಿಗೆಯೆನಿಸುವುದಿಲ್ಲ. 

ಸಮಾಜವಾದಿ ಪಕ್ಷ

ಆಪರೇಶನ್ ಕಮಲದ ಮೂಲಕ ಬಂದಿರುವ ಹಲವರು ಬಿಜೆಪಿಯಲ್ಲಿ ಸಮಾಧಾನದಿಂದಿಲ್ಲ. ಅಂತವರಲ್ಲಿ ರಮೇಶ ಜಾರಕಿಹೊಳಿ ಮತ್ತು ಬಾಲಚಂದ್ರ ಜಾರಕಿಹೊಳಿ ಮುಂಚೂಣಿಯಲ್ಲಿದ್ದಾರೆ. ಅವರು ಪಕ್ಷದ ಪ್ರಮುಖ ವಿದ್ಯಮಾನಗಳಿಂದ ಅಂತರ ಕಾಯ್ದುಕೊಳ್ಳುತ್ತಿರುವುದೇ ಇದಕ್ಕೆ ಉದಾಹರಣೆ. ಈಗಾಗಲೆ ಇನ್ನೂ ಹಲವು ನಾಯಕರು ಕಾಂಗ್ರೆಸ್ ಸಂಪರ್ಕದಲ್ಲಿದ್ದಾರೆ ಎನ್ನುವುದೂ ಗುಟ್ಟಾಗಿ ಉಳಿದಿಲ್ಲ. ಜಾರಕಿಹೊಳಿ ಸಹೋದರರು ಕಾಂಗ್ರೆಸ್ ಗೆ ಮರಳಿ ಹೋಗುವ ಸಾಧ್ಯತೆ ತೀರಾ ಕಡಿಮೆ. ಅವರು ಸಮಾಜವಾದಿ ಪಕ್ಷವನ್ನು ರಾಜ್ಯದಲ್ಲಿ ಕಟ್ಟಲು ಪ್ರಯತ್ನಿಸಲಿದ್ದಾರೆ ಎನ್ನುವ ವದಂತಿ ಈಗಾಗಲೆ ಹರಡಿದೆ. ಹಾಗಾಗಿಯೇ ಸಮಾನ ಮನಸ್ಕ ಶಾಸಕರನ್ನು ಒಗ್ಗೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ ಎನ್ನಲಾಗುತ್ತಿದೆ. ಇದರಲ್ಲಿ ಸಧ್ಯಕ್ಕೆ ಸ್ಪಷ್ಟತೆ ಇಲ್ಲ.

ಬಿಜೆಪಿಯ ನಂದಿಬೆಟ್ಟ ಸಮಾವೇಶ ಮುಂದಿನ ಬೆಲವಣಿಗೆಗಳ ಕುರಿತು ಒಂದಿಷ್ಟು ಕ್ಲ್ಯಾರಿಟಿ ನೀಡಹುದು. ಹಲವರಿಗೆ ಮುಂದಿನ ನಿರ್ಧಾರ ತೆಗೆದುಕೊಳ್ಳಲು ಸೂಚನೆಯನ್ನೂ ನೀಡಬಹುದು.. ಒಟ್ಟಾರೆ ರಾಜ್ಯ ರಾಜಕೀಯ ಬರುವ 3 ರಿಂದ 6 ತಿಂಗಳಲ್ಲಿ ಸಾಕಷ್ಟು ದೊಡ್ಡ ಮಟ್ಟದ ಬದಲಾವಣೆ, ಬೆಳವಣಿಗೆಯನ್ನು ಕಾಣುವುದರಲ್ಲಿ ಸಂಶಯವಿಲ್ಲ.

ಬೆಳಗಾವಿಯಲ್ಲಿ ಮತಾಂತರ ಆರೋಪ; ಕುಟುಂಬದವರ ಮೇಲೆ ಹಲ್ಲೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button