ಪ್ರಗತಿವಾಹಿನಿ ಸುದ್ದಿ; ಖಾನಾಪುರ: ಬೆಳಗಾವಿ ಮತ್ತು ಬಾಗಲಕೋಟೆ ಜಿಲ್ಲೆಗಳ ಒಟ್ಟು 12 ಪ್ರವಾಸಿ ತಾಣಗಳಲ್ಲಿ ಅರಣ್ಯ ಇಲಾಖೆಯ ನೇತೃತ್ವದಲ್ಲಿ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಪ್ರಮಾಣೀಕೃತ ಪ್ರಕೃತಿ ಮಾರ್ಗದರ್ಶಕರನ್ನು ನಿಯೋಜಿಸಿ ಅವರ ಮೂಲಕ ಪ್ರಾಕೃತಿಕ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶ ಹೊಂದಿರುವುದಾಗಿ ಅರಣ್ಯ ಇಲಾಖೆಯ ಬೆಳಗಾವಿ ವೃತ್ತದ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ವಿಜಯಕುಮಾರ ಸಾಲಿಮಠ ಮಾಹಿತಿ ನೀಡಿದರು.
ತಾಲ್ಲೂಕಿನ ಹೆಮ್ಮಡಗಾ ಗ್ರಾಮದ ಬಳಿಯ ಭೀಮಗಡ ಪ್ರಕೃತಿ ಶಿಬಿರದಲ್ಲಿ ಸೋಮವಾರ ಅರಣ್ಯ ಇಲಾಖೆಯ ಪ್ರಕೃತಿ ಮಾರ್ಗದರ್ಶಕರ ಐದು ದಿನಗಳ ಮೂಲ ತರಬೇತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಈಗಾಗಲೇ ಅರಣ್ಯ ಇಲಾಖೆ ಬೆಳಗಾವಿ ವಿಭಾಗದಲ್ಲಿ 8, ಗೋಕಾಕ ವಿಭಾಗದಲ್ಲಿ 2 ಮತ್ತು ಬಾಗಲಕೋಟೆ ವಿಭಾಗದಲ್ಲಿ 2 ಸೇರಿದಂತೆ ಒಟ್ಟು 12 ತಾಣಗಳಲ್ಲಿ ಚಾರಣ ಪಥಗಳನ್ನು ಗುರುತಿಸಿದೆ. ಈ ಪಥಗಳ ಮೂಲಕ ಚಾರಣ ಪ್ರಿಯರನ್ನು ಪ್ರವಾಸಿ ತಾಣಗಳಿಗೆ ಕರೆದೊಯ್ದು ಪ್ರವಾಸಿ ತಾಣದ ವಿಶೇಷತೆ, ಅರಣ್ಯ ಹಾಗೂ ವನ್ಯಜೀವಿ ಸಂರಕ್ಷಣೆಯ ಮಹತ್ವ ಮತ್ತು ಪರಿಸರ ಸಂರಕ್ಷಣೆಯ ಬಗ್ಗೆ ವಿವರಿಸುವ ಉದ್ದೇಶದಿಂದ ಸ್ಥಳೀಯವಾಗಿ ವಾಸಿಸುವ 45 ಸ್ವಯಂ ಸೇವಕರನ್ನು ಗುರುತಿಸಿ ಅವರನ್ನು ಪ್ರಕೃತಿ ಮಾರ್ಗದರ್ಶಕರನ್ನಾಗಿ ನೇಮಕಗೊಳಿಸಲಾಗಿದೆ. ಅವರಿಗೆ ಭೀಮಗಡ ಶಿಬಿರದಲ್ಲಿ 5 ದಿನಗಳ ಕಾಲ ವಿಶೇಷ ತರಬೇತಿಯನ್ನು ನೀಡಿದ ಬಳಿಕ ಅವರು ಪ್ರಮಾಣೀಕೃತ ಪ್ರಕೃತಿ ಮಾರ್ಗದರ್ಶಕರಾಗಿ ಕಾರ್ಯನಿರ್ವಹಿಸಲಿದ್ದಾರೆ. ಈಗಾಗಲೇ ರಾಜ್ಯದ ವಿವಿಧೆಡೆ ಇಂತಹ ಮಾರ್ಗದರ್ಶಕರು ನಿಯುಕ್ತಿಕೊಂಡು ಸೇವೆ ಸಲ್ಲಿಸುತ್ತಿದ್ದು, ಬೆಳಗಾವಿ ವೃತ್ತದ ಮಟ್ಟಿಗೆ ಇದು ಪ್ರಥಮ ಪ್ರಯತ್ನ. ಇದು ಯಶಸ್ವಿಯಾದರೆ ಉಭಯ ಜಿಲ್ಲೆಗಳ ಮತ್ತಷ್ಟು ಪ್ರವಾಸಿ ತಾಣಗಳಲ್ಲಿ ಈ ಯೋಜನೆಯನ್ನು ಮುಂದುವರೆಸುವ ಆಲೋಚನೆಯಿದೆ ಎಂದು ವಿವರಿಸಿದರು.
ಕೋವಿಡ್ ಲಾಕ್ ಡೌನ್ ತೆರವುಗೊಂಡ ಬಳಿಕ ಶಹರ ಪ್ರದೇಶಗಳಲ್ಲಿ ವಾಸಿಸುತ್ತಿರುವ ಸಾರ್ವಜನಿಕರು ಹೆಚ್ಚಾಗಿ ಅರಣ್ಯ ಪ್ರದೇಶಗಳಲ್ಲಿ ಚಾರಣ ಮಾಡಲು ಬಯಸುತ್ತಿದ್ದಾರೆ. ಕೆಲಕಾಲ ಜನಜಂಗುಳಿಯಿಂದ ದೂರವಿದ್ದು, ನಿಸರ್ಗದ ಮಧ್ಯದಲ್ಲಿ ವನಸಿರಿಯ ಪರಿಶುದ್ಧ ವಾತಾವರಣದಲ್ಲಿ ಕಾಲ ಕಳೆಯಲು ಶಹರವಾಸಿಗಳು ಇಚ್ಛಿಸುತ್ತಿದ್ದಾರೆ. ರಾಜ್ಯದ ಕೆಲ ಅರಣ್ಯ ಪ್ರದೇಶಗಳಲ್ಲಿ ಪೋಸ್ಟ್ ಕೋವಿಡ್ ಸಂದರ್ಭದಲ್ಲಿ ಅರಣ್ಯ ಪ್ರದೇಶದ ಸುತ್ತಲಿನ ತಾಣಗಳಿಗೆ ಚಾರಣಕ್ಕೆ ಬರುವವರ ಸಂಖ್ಯೆಯಲ್ಲಿ ಗಣನೀಯ ಪ್ರಮಾಣದ ಏರಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಕರ್ನಾಟಕ ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಮತ್ತು ಜಂಗಲ್ ಲಾಡ್ಜಸ್ ಆಂಡ್ ರಿಸಾರ್ಟ್ಸ್ ಸಹಯೋಗದಲ್ಲಿ ಅರಣ್ಯ ಪ್ರದೇಶದ ಮಧ್ಯೆ ಇರುವ ಪ್ರವಾಸಿ ತಾಣಗಳಲ್ಲಿ ಪ್ರಕೃತಿ ಮಾರ್ಗದರ್ಶಕರನ್ನು ನಿಯೋಜಿಸಿ ಅವರ ಮೂಲಕ ಪ್ರಾಕೃತಿಕ ತಾಣಗಳನ್ನು ಪ್ರವಾಸಿಗರಿಗೆ ಪರಿಚಯಿಸುವ ಉದ್ದೇಶ ಹೊಂದಿದೆ ಎಂದು ಅವರು ಮಾಹಿತಿ ನೀಡಿದರು.
ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ವ್ಯವಸ್ಥಾಪಕ ನವೀನಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿ, ರಾಜ್ಯದ ಚಾರಣ ಪ್ರದೇಶಗಳ ಅಭಿವೃದ್ಧಿ ಹಾಗೂ ಪ್ರಕೃತಿಗೆ ಸಂಬಂಧಿಸಿದ ಹಬ್ಬಗಳು ಮತ್ತು ಉತ್ಸವಗಳನ್ನು ಆಯೋಜಿಸುವ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವ ಕೆಲಸವನ್ನು ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿ ಕೈಗೊಂಡಿದೆ. ಈಗ ಇತಿಹಾಸದಲ್ಲಿ ಮೊದಲ ಬಾರಿ ಬೆಳಗಾವಿ ವೃತ್ತದ ವಿವಿಧೆಡೆ ಚಾರಣ ಮಾರ್ಗಗಳನ್ನು ಗುರುತಿಸಿ ಅವುಗಳಿಗೆ ಪ್ರಮಾಣೀಕೃತ ಪ್ರಕೃತಿ ಮಾರ್ಗದರ್ಶಕರನ್ನು ನಿಯೋಜಿಸುವ ನಿಟ್ಟಿನಲ್ಲಿ ಸ್ಥಳೀಯ ಯುವಕರನ್ನು ಗುರುತಿಸಲಾಗಿದ್ದು, ಅವರಿಗೆ 5 ದಿನಗಳ ತರಬೇತಿಯನ್ನು ನೀಡಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಬೆಳಗಾವಿ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಹರ್ಷಭಾನು ಜಿ.ಪಿ, ಸಂವಹನ ತಜ್ಞ ರೋಣಿತ್ ನಂಜಪ್ಪ, ಪರಿಸರ ತಜ್ಞರಾದ ರಾಹುಲ್ ಆರಾಧ್ಯ, ಸಂದೀಪ, ಪ್ರವೀಣ ಬಾಗೋಜಿ ಸೇರಿದಂತೆ ಬೆಳಗಾವಿ ವಿಭಾಗದ ಅರಣ್ಯ ಅಧಿಕಾರಿಗಳು, ಸಿಬ್ಬಂದಿ, ಪರಿಸರ ಪ್ರವಾಸೋದ್ಯಮ ಅಭಿವೃದ್ಧಿ ಮಂಡಳಿಯ ಅಧಿಕಾರಿಗಳು, ಸಿಬ್ಬಂದಿ ಮತ್ತು ತರಬೇತಿದಾರರು ಇದ್ದರು. ಉಪ ವಲಯ ಅರಣ್ಯಾಧಿಕಾರಿ ಶಿವಾನಂದ ಮಗದುಮ್ ಸ್ವಾಗತಿಸಿದರು. ರಾಕೇಶ ಅರ್ಜುನವಾಡ ನಿರೂಪಿಸಿದರು.
ಇಲಾಖೆಗಳ ಕಾರ್ಯನಿರ್ವಹಣೆಯ ಬಗ್ಗೆ ಶ್ರೇಯಾಂಕ ನೀಡಲು ಮಾನದಂಡ ನಿಗದಿಮಾಡಲು ಸೂಚನೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ