ಪ್ರಗತಿವಾಹಿನಿ ಸುದ್ದಿ, ನವದೆಹಲಿ – ಸದಾ ವಿವಾಧಾತ್ಮಕ ವಿಷಯಗಳಿಂದಲೇ ಸುದ್ದಿಯಾಗುವ ಬಿಜೆಪಿ ಮುಖಂಡ ಸುಬ್ರಹ್ಮಣ್ಯಂ ಸ್ವಾಮಿ, ಪ್ರಧಾನಿ ನರೇಂದ್ರ ಮೋದಿ ಅವರು ಪೋಪ್‌ರನ್ನು ಭಾರತಕ್ಕೆ ಆಹ್ವಾನಿಸಿದ್ದನ್ನು ಟೀಕಿಸುವ ಮೂಲಕ ಮುಜುಗರ ಉಂಟುಮಾಡಿದ್ದಾರೆ.
ತಮಗೆ ಸರಿ ಅನ್ನಿಸಿದ್ದನ್ನು ನಿರ್ಭಿಡೆಯಿಂದ ಹೇಳಿಬಿಡುವ ಸುಬ್ರಹ್ಮಣ್ಯಂ ಸ್ವಾಮಿ ಇತ್ತೀಚೆಗೆ ಬಿಜೆಪಿಗೆ ಬಿಸಿ ತುಪ್ಪದಂತಾಗಿದ್ದಾರೆ. ಕೇಂದ್ರ ಸರಕಾರದ ಅನೇಕ ಧೋರಣೆಗಳನ್ನು ಮುಲಾಜಿಲ್ಲದೆ ಟೀಕಿಸುತ್ತಿದ್ದಾರೆ.
ಈ ನಡುವೆ ಪ್ರಧಾನಿ ನರೇಂದ್ರ ಮೋದಿ ಅವರು ಪೋಪ್‌ರನ್ನು ಭಾರತಕ್ಕೆ ಆಹ್ವಾನಿಸಿದ ಬಗ್ಗೆ ಸೋಮವಾರ ಸಂಜೆ ಟ್ವೀಟ್ ಮಾಡಿರುವ ಸ್ವಾಮಿ, ಇತ್ತೀಚೆಗೆ ವ್ಯಾಟಿಕನ್ ಗೆ ತೆರಳಿದ್ದ ಪ್ರಧಾನಿ ಮೋದಿ ಪೋಪ್‌ರನ್ನು ಭಾರತಕ್ಕೆ ಆಹ್ವಾನಿಸಿರುವುದಾಗಿ ವ್ಯಾಟಿಕನ್‌ನ ನನ್ನ ಸ್ನೇಹಿತರು ಮಾಹಿತಿ ನೀಡಿದ್ದಾರೆ. ಈ ಹಿಂದೆ ೧೯೯೯ರಲ್ಲಿಯೂ ಅಂದಿನ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಪೋಪ್‌ರನ್ನು ಆಹ್ವಾನಿಸಿದ್ದರು. ನಮ್ಮ ಹಿಂದುತ್ವವಾದಿ ಪ್ರಧಾನಿಗಳು ಪೋಪ್‌ರನ್ನು ಭಾರತಕ್ಕೆ ಯಾಕೆ ಆಹ್ವಾನಿಸುತ್ತಾರೆ ? ಇದು ಕೀಳರಿಮೆಯಿಂದ ಉಂಟಾದ ವರ್ತನೆಯೇ ? ಎಂದು ಪ್ರಶ್ನಿಸಿದ್ದಾರೆ.
ಸೋಮವಾರ ಸಂಜೆ ೮ ಗಂಟೆಯ ಸುಮಾರಿಗೆ ಸ್ವಾಮಿ ಮಾಡಿರುವ ಟ್ವೀಟ್ ವೈರಲ್ ಆಗುತ್ತಿದೆ. ಎರಡೇ ತಾಸುಗಳಲ್ಲಿ ೫ ಸಾವಿರಕ್ಕೂ ಹೆಚ್ಚು ಜನ ಸ್ವಾಮಿ ಟ್ವೀಟ್‌ಗೆ ಪ್ರತಿಕ್ರಿಯೆ ನೀಡಿದ್ದಾರೆ. ಕೆಲವರು ಸ್ವಾಮಿ ಹೇಳಿಕೆಯನ್ನು ಬೆಂಬಲಿಸಿದ್ದರೆ ಇನ್ನು ಕೆಲವರು ಪ್ರಧಾನಿ ಮೋದಿ ನಡೆಯನ್ನು ಸಮರ್ಥಿಸಿಕೊಂಡಿದ್ದಾರೆ.
ಬೆಳಗಾವಿ ಜಿಲ್ಲಾಧಿಕಾರಿಗಳಿಂದ ಸಮಗ್ರ ವರದಿ ಕೇಳಿದ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ