ಪ್ರಗತಿವಾಹಿನಿ ಸುದ್ದಿ, ಮೂಡಲಗಿ:
‘ಡಾ. ಬಿ.ಆರ್. ಅಂಬೇಡ್ಕರ್ ಅವರು ಶಿಕ್ಷಣ, ಹೋರಾಟ ಮತ್ತು ಸಂಘಟನೆಯ ಮೂಲಕ ದೇಶದಲ್ಲಿ ಸಮಾನತೆಯ ಮಂತ್ರವನ್ನು ಸಾರಿದ ಧೀಮಂತ ನಾಯಕ’ ಎಂದು ಸಮಾಜಶಾಸ್ತ್ರ ಪ್ರಾಧ್ಯಾಪಕ ಪ್ರೊ. ವಿಶ್ವನಾಥ ಎಸ್. ಹಂಪಣ್ಣವರ ಹೇಳಿದರು.
ಇಲ್ಲಿಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದಲ್ಲಿ ಭಾನುವಾರ ಡಾ. ಬಿ.ಆರ್. ಅಂಬೇಡ್ಕರ್ ಅವರ 128ನೇ ಜಯಂತ್ಯುತ್ಸವ ಸಮಾರಂಭದ ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು ದೇಶದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಗೆ ಅವರ ಹೋರಾಟವು ಅನುಪಮವಾದದ್ದು ಎಂದರು.
ಅಧ್ಯಕ್ಷತೆವಹಿಸಿದ್ದ ಪ್ರಾಚಾರ್ಯ ಡಾ. ಆರ್.ಎ. ಶಾಸ್ತ್ರೀಮಠ ಮಾತನಾಡಿ ಅರ್ಥಶಾಸ್ತ್ರ, ರಾಜ್ಯಶಾಸ್ತ್ರ ಸೇರಿದಂತೆ ಹಲವಾರು ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಹಾಗೂ 9 ಭಾಷೆಗಳ ಪಾಂಡಿತ್ಯ ಅವರದಾಗಿತ್ತು ಎಂದರು.
ತಮ್ಮದೆ ವಿದ್ವತ್ ಹಾಗೂ ಪರಿಶ್ರಮದ ಮೂಲಕ ಇಡೀ ವಿಶ್ವದ ಗಮನಸಳೆದ ಮಹಾನ್ ಮಾನವತಾವಾದಿ. ಡಾ. ಅಂಬೇಡ್ಕರ್ ರಚಿಸಿದ ಸಂವಿಧಾನವು ಇಡೀ ವಿಶ್ವದಲ್ಲಿ ಮಾದರಿ ಸಂವಿಧಾನವಾಗಿದೆ ಎಂದು ಬಣ್ಣಿಸಿದರು.
ಪ್ರೊ. ಎ.ಪಿ. ರಡ್ಡಿ ಪ್ರಾರ್ಥಿಸಿದರು, ಡಾ. ಎಸ್.ಎಲ್. ಚಿತ್ರಗಾರ ಸ್ವಾಗತಿಸಿದರು, ಪ್ರೊ. ಜಿ.ಸಿದ್ರಾಮ್ರಡ್ಡಿ ನಿರೂಪಿಸಿದರು, ಪ್ರೊ. ಎಸ್.ಜಿ. ನಾಯಿಕ ವಂದಿಸಿದರು.
 
					 
				 
					 
					 
					 
					
 
					 
					


