Latest

ಸರಕಾರ ನೀಡಿದ್ದ ಕೋವಿಡ್‌ ಪರಿಹಾರದ ಚೆಕ್ ಬೌನ್ಸ್ ; ಪ್ರತಿಕ್ರಿಯೆ ನೀಡಿದ CM ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ, ಬೆಂಗಳೂರು –  ಕೋವಿಡ್‌ನಿಂದ ಮೃತಪಟ್ಟವರ ಕುಟುಂಬಕ್ಕೆ ನೀಡುವ 1 ಲಕ್ಷ ರೂ. ಚೆಕ್ ಬೌನ್ಸ್ ಆಗಿದ್ದು ಸರಕಾರ ಮುಜುಗರ ಅನುಭವಿಸುವಂತಾಗಿದೆ.

ಚೆಕ್ ಬೌನ್ಸ್ ಆದ ಕುಟುಂಬಗಳಿಗೆ ಕೂಡಲೇ ಪರಿಹಾರ ವಿತರಣೆ ಮಾಡುವಂತೆ ಸಿಎಂ ಬಸವರಾಜ ಬೊಮ್ಮಾಯಿ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ಕೋವಿಡ್‌ನಿಂದ ಮೃತಪಟ್ಟ ಬಿಪಿಎಲ್ ಕುಟುಂಬಗಳ ವಾರಸುದಾರರಿಗೆ 1 ಲಕ್ಷ ರೂ. ಪರಿಹಾರವನ್ನು ಬಿ. ಎಸ್. ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ಅವಧಿಯಲ್ಲೇ ಘೋಷಣೆ ಮಾಡಿದ್ದರು. ಕಳೆದ ಕೆಲ ದಿನಗಳಿಂದ ರಾಜ್ಯಾಧ್ಯಂತ ಪರಿಹಾರ ವಿತರಣೆ ಆಗುತ್ತಿದೆ. ಅದರಂತೆ ಯಾದಗಿರಿ ಜಿಲ್ಲೆಯ ಶೋರಾಪುರ ಮತಕ್ಷೇತ್ರದಲ್ಲಿಯೂ ಅಲ್ಲಿನ ಶಾಸಕ ನರಸಿಂಹ ನಾಯಕ (ರಾಜು ಗೌಡ ) ಅವರು ಕೆಲ ಕುಟುಂಬಗಳಿಗೆ 1 ಲಕ್ಷ ರೂ. ಪರಿಹಾರದ ಚೆಕ್‌ಅನ್ನು ವಿತರಿಸಿದ್ದರು. ಈ ಪೈಕಿ 2 ಕುಟುಂಬಗಳಿಗೆ ನೀಡಿದ್ದ ಚೆಕ್ ಬೌನ್ಸ್ ಆಗಿರುವುದು ಬೆಳಕಿಗೆ ಬಂದಿದೆ.

ಕಾರಣ ತಿಳಿಸುತ್ತಿಲ್ಲ

ಯಾದಗಿರಿ ಜಿಲ್ಲೆಯ ಬಸವನಗೌಡ ಎಂಬುವವರು ಕಳೆದ ವರ್ಷ ಕೋವಿಡ್‌ನಿಂದ ಮೃತಪಟ್ಟಿದ್ದು ಅವರ ಪುತ್ರಿ ಅನೀತಾ ಎಂಬುವವರಿಗೆ 1 ಲಕ್ಷ ರೂ. ಪರಿಹಾರದ ಚೆಕ್ ವಿತರಿಸಲಾಗಿತ್ತು. ಈ ಚೆಕ್ ಎಸ್‌ಬಿಐ ಬ್ಯಾಂಕಿನದ್ದಾಗಿದೆ. ಅನೀತಾ ಅದನ್ನು ತನ್ನ ಖಾತೆಯಿರುವ ಕರ್ನಾಟಕ ಗ್ರಾಮೀಣ ವಿಕಾಸ ಬ್ಯಾಂಕ್‌ಗೆ ನಗದೀಕರಿಸಲು ನೀಡಿದ್ದರು.

ಆದರೆ ಚೆಕ್ ನಗದು ಆಗದ ಕಾರಣ ಬ್ಯಾಂಕಿಗೆ ಹೋಗಿ ವಿಚಾರಿಸಿದಾಗ ಅವರು ಎಸ್‌ಬಿಐ ನಲ್ಲಿ ವಿಚಾರಿಸುವಂತೆ ತಿಳಿಸಿದ್ದರು. ಎಸ್‌ಬಿಐ ನವರು ಚೆಕ್ ಅನ್ನು ನಗದೀಕರಿಸದೆ ಮರಳಿ ನೀಡಿದ್ದಾರೆ. ಆದರೆ ಚೆಕ್ ಯಾವ ಕಾರಣಕ್ಕೆ ಬೌನ್ಸ್ ಆಗಿದೆ ಎಂಬುದನ್ನು ಬ್ಯಾಂಕಿನವರು ತಿಳಿಸಿಲ್ಲ. ಹಿಂಬರಹದಲ್ಲಿ ಫಾರ್ ಅದರ್ ರೀಸನ್ಸ್ (ಇತರೇ ಕಾರಣಗಳಿಗಾಗಿ ) ಎಂದಷ್ಟೇ ನಮೂದಿಸಲಾಗಿದೆ ಎಂದು ಅನೀತಾ ಅಳಲು ತೋಡಿಕೊಂಡಿದ್ದಾರೆ.

ಇದೇ ರೀತಿ ಕೋವಿಡ್ ನಿಂದ ಮೃತಪಟ್ಟ ಮಹಾದೇವಿ ಅವರ ಕುಟುಂಬದ ಹನುಮಂತುಗೆ ನೀಡಿದ್ದ ಪರಿಹಾರದ ಚೆಕ್ ಕೂಡ ಬೌನ್ಸ್ ಆಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.

ಪರಿಹಾರ ವಿತರಣೆಗೆ ಕ್ರಮ

ಸ್ಥಳೀಯ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಶಾಸಕ ರಾಜು ಗೌಡ, ಈ ಕುರಿತು ಪರಿಶೀಲಿಸಲು ಅಧಿಕಾರಿಗಳಿಗೆ ತಿಳಿಸಿದ್ದೇನೆ. ಸಂತ್ರಸ್ತ ಕುಟುಂಬಗಳಿಗೆ ಪರಿಹಾರ ವಿತರಿಸಲು ಕ್ರಮ ವಹಿಸಲಾಗುವುದು ಎಂದು ತಿಳಿಸಿದ್ದಾರೆ.

ಬೆಂಗಳೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿರುವ ಮುಖ್ಯುಮಂತ್ರಿ ಬಸವರಾಜ ಬೊಮ್ಮಾಯಿ, ರಾಜ್ಯಾಧ್ಯಂತ ಪರಿಹಾರ ವಿತರಣೆ ಕಾರ್ಯ ನಡೆದಿದೆ. ಯಾದಗಿರಿ ಜಿಲ್ಲೆಯಲ್ಲಿ ಮಾತ್ರ ಈ ರೀತಿ ಆಗಿರುವುದು ಗೊತ್ತಾಗಿದೆ. ಆದಷ್ಟು ಶೀಘ್ರದಲ್ಲಿ ಪರಿಹಾರ ವಿತರಣೆಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದ್ದೇನೆ ಎಂದು ತಿಳಿಸಿದ್ದಾರೆ.

ಹನಿಟ್ರ್ಯಾಪ್ ಕೇಸ್; ಜ್ಯೋತಿಷಿಯಿಂದಲೇ 49 ಲಕ್ಷ ವಸೂಲಿ ಮಾಡಿದ್ದ ದಂಪತಿ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button