Latest

ಕಾಂಗ್ರೆಸ್ ನಾಯಕರೇ ಮೊದಲು ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳಿ; ತಿರುಗೇಟು ನೀಡಿದ ಬಿಜೆಪಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ಹಿರಿಯ ಮುಖಂಡ ಸಿ.ಎಂ.ಇಬ್ರಾಹಿಂ ಪಕ್ಷ ತೊರೆಯಲು ಮುಂದಾಗಿದ್ದಾರೆ, ಈ ನಡುವೆ ಸಿದ್ದರಾಮಯ್ಯ ಅವರ ಆಪ್ತವಲಯದಲ್ಲಿದ್ದ ಕೆಲವರು ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ಮುಖಂಡರನ್ನು ಭೇಟಿಯಾಗಿದ್ದಾರೆ. ಕಾಂಗ್ರೆಸ್ ಗೆ ಬೀಗ ಜಡಿಯುವ ಕಾಲ ಸಮೀಪಿಸುತ್ತಿದೆ ಎಂದು ರಾಜ್ಯ ಬಿಜೆಪಿ ಘಟಕ ಲೇವಡಿ ಮಾಡಿದೆ.

ಸಿದ್ದರಾಮಯ್ಯ ಅವರೇ ನಿಮ್ಮ ಆಪ್ತ ವಲಯದವರು ಈಗ ಸಮಾಜವಾದಿ ಪಕ್ಷ ಹಾಗೂ ಆಮ್ ಆದ್ಮಿ ಪಕ್ಷದ ನಾಯಕರ ಸುತ್ತಮುತ್ತ ಕಾಣಿಸಿಕೊಳ್ಳುತ್ತಿರುವುದು ಹಲವು ಅನುಮಾನಕ್ಕೆ ಪುಷ್ಠಿ ನೀಡಿದೆ. ಉತ್ತರ ಪ್ರದೇಶ ಚುನಾವಣೆಯ ಫಲಿತಾಂಶದ ಬಳಿಕ ಕರ್ನಾಟಕದಲ್ಲೂ ಇದರ ಪ್ರತಿಫಲನ ಕಾಣಬಹುದೇ? ಈ ಬಾರಿ ನಿಮ್ಮದು ಕ್ಷೇತ್ರಾಂತರವೋ? ಪಕ್ಷಾಂತರವೋ? ವಲಸೆ ರಾಮಯ್ಯ ಎಂದು ಸರಣಿ ಟ್ವೀಟ್ ಮೂಲಕ ಬಿಜೆಪಿ ಪ್ರಶ್ನಿಸಿದೆ.

ನಮ್ಮ ಸಂಪರ್ಕದಲ್ಲಿ ಆ ಪಕ್ಷದವರಿದ್ದಾರೆ, ಈ ಪಕ್ಷದವರಿದ್ದಾರೆ ಎಂದು ಸಿದ್ದರಾಮಯ್ಯ ಕಳೆದ ಕೆಲ ದಿನಗಳಿಂದ ನಿರಂತರ ಬುರುಡೆ ಬಿಟ್ಟಾಗಲೇ ಅನುಮಾನವಿತ್ತು. ಈಗ ನೋಡಿದರೆ ತಮ್ಮ ಆಪ್ತರನ್ನೇ ಬೇರೆಯವರ ಸಂಪರ್ಕಕ್ಕೆ ಬಿಟ್ಟಿದ್ದಾರೆ. ಮತ್ತೊಮ್ಮೆ ವಲಸೆ ವೇದಿಕೆ ಸೃಷ್ಟಿಸಿಕೊಳ್ಳುತ್ತಿದ್ದೀರಾ? ಸಿದ್ದರಾಮಯ್ಯನವರ ಸುಳ್ಳಿನ ಕೊಡ ಇನ್ನೇನು ತುಂಬಲಿದೆ. 2023ರಲ್ಲಿ ಸ್ಪಷ್ಟ ಉತ್ತರ ಸಿಗಲಿದೆ. ಪಲಾಯನಕ್ಕೆ ಸಿದ್ಧರಾಗಿ ಸಿದ್ದರಾಮಯ್ಯ ಎಂದು ಕುಟುಕಿದೆ.

ಈವರೆಗೆ ಸಿದ್ದರಾಮಯ್ಯ ಹಾಗೂ ಡಿ.ಕೆ.ಶಿವಕುಮಾರ್ ಇಬ್ಬರೇ ಸಿಎಂ ಗಾದಿಗೆ ಕಣ್ಣಿಟ್ಟಿದ್ದರು. ಈಗ ಎಂ.ಬಿ.ಪಾಟೀಲ್ ಸೇರಿದ್ದಾರೆ. ಕಾಂಗ್ರೆಸ್ ಕಲಹ ಮತ್ತಷ್ಟು ಹೆಚ್ಚಾಗಲಿದೆ. ಈಗಾಗಲೇ ಕಾಂಗ್ರೆಸ್ ಪರಿಸ್ಥಿತಿ ಮನೆಯೊಂದು ಮೂರು ಬಾಗಿಲು ಎಂಬಂತಾಗಿದೆ. ಕಾಂಗ್ರೆಸ್ ಸೇರುವವರ ಪಟ್ಟಿ ನಮ್ಮಲ್ಲಿದೆ ಎಂದು ಹೇಳುವ ಕಾಂಗ್ರೆಸ್ ನಾಯಕರೇ ಮೊದಲು ನಿಮ್ಮ ಪಕ್ಷದ ಬಾಗಿಲು ಭದ್ರಪಡಿಸಿಕೊಳ್ಳಿ. ಕಾಂಗ್ರೆಸ್ ಕಲಹದಿಂದಾಗಿ ಇಬ್ರಾಹಿಂ ಪಕ್ಷ ತೊರೆಯುತ್ತಿದ್ದಾರೆ. ಪಕ್ಷಕ್ಕೆ ಬೀಗ ಜಡಿಯುವ ಸಮಯ ದೂರವಿಲ್ಲ ಎಂದು ಹೇಳಿದೆ.

ಅಲ್ಪಸಂಖ್ಯಾತರಿಗೂ ಉಸಿರುಗಟ್ತಿಸುವ ವಾತಾವರಣ ಕಾಂಗ್ರೆಸ್ ಪಕ್ಷದಲ್ಲಿದೆ ಎಂದಾದರೆ ಆ ಪಕ್ಷ ಕೇವಲ ಪ್ರಭಾವಿಗಳ ಹಾಗೂ ಗುಲಾಮರ ಕೂಟ ಎಂಬುದು ಸಾಬೀತಾದಂತಾಯಿತಲ್ಲವೇ? ಇಬ್ರಾಹಿಂ ರಾಜೀನಾಮೆಯಿಂದ ಸಿದ್ದರಾಮಯ್ಯ ಅವರ ಅಹಿಂದ ಮುಖ ಕಳಚಿ ಬಿದ್ದಿದೆ. ತಮ್ಮ ಗೆಳೆಯನಿಗೆ ಕೊಟ್ಟ ಭರವಸೆಯನ್ನೇ ಈಡೇರಿಸುವಲ್ಲಿ ಅಸಮರ್ಥರಾಗಿದ್ದೀರಿ. ಹೀಗಿರುವಾಗ ನಿಮ್ಮ ನಾಯಕತ್ವ ನಂಬಿ ಅನ್ಯಪಕ್ಷದವರು ಬರುತ್ತಾರೆಯೇ? ಎಂದು ಪ್ರಶ್ನಿಸಿದೆ.

ಕಾಂಗ್ರೆಸ್ ಗೆ ವಿದಾಯ ಹೇಳಿದ ಸಿ.ಎಂ.ಇಬ್ರಾಹಿಂ ; ಸಿದ್ದರಾಮಯ್ಯಗೆ ರಾಜಕೀಯ ಜೀವನ ಕೊಟ್ಟಿದ್ದಕ್ಕೆ ಒಳ್ಳೆಯ ಕೊಡುಗೆ ಕೊಟ್ರು

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button