Latest

ರಾಮಾಯಣ ಕುರಿತಂತೆ ಡಾ.ಭೈರಪ್ಪ ಚರ್ಚೆಗೆ ಬರಲಿ -ಪೇಜಾವರ ಶ್ರೀ

ಹರಿದಾಸ ಹಬ್ಬ ಸಮಾರೋಪ ಸಮಾರಂಭದಲ್ಲಿ ಶ್ರೀ ವಿಶ್ವೇಶತೀರ್ಥರು

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ:

ರಾಮಾಯಣದಲ್ಲಿ ಶ್ರೀರಾಮಚಂದ್ರ ಜಾತ್ಯಾತೀತ ಮನುಷ್ಯ. ಒಳ್ಳೆಯ ಕೆಲಸಗಳಿಗೆ ರಾಮನ ಅನುಗ್ರಹ ಯಾವಾಗಲೂ ಇದ್ದೇ ಇತ್ತು. ಶಂಭುಕ ತಪ್ಪಸ್ಸು ಮಾಡಿದರೂ ಆತನ ತಪ್ಪಸ್ಸಿನ ಉದ್ದೇಶ ಲೋಕನಾಶ ಮಾಡುವುದಕ್ಕಾಗಿ ಇತ್ತು. ಲೋಕಕಲ್ಯಾಣಕ್ಕಾಗಿ ಶಂಭುಕನನ್ನು ನಾಶ ಮಾಡಿದನೇ ಹೊರತು ರಾಮ ದಲಿತ ವಿರೋಧಿ ಅಲ್ಲ. ಪರಿಶಿಷ್ಟ ಜಾತಿಯ ಶಬರಿಯು ರಾಮನಿಗಾಗಿ ಕಾಯುತ್ತಾ ಇದ್ದಳು. ಅವಳನ್ನು ರಾಮ ಅನುಗ್ರಹಿಸಲಿಲ್ಲವೆ? ಇಲ್ಲಿ ಜಾತಿಯ ಪ್ರಶ್ನೆಯೇ ಇಲ್ಲ. ಬುದ್ದಿಜೀವಿಗಳೆಂದು ತಿಳಿದುಕೊಂಡ ಕೆಲವರು ಏನೇನೋ ಮಾತನಾಡಿ ಆದರ್ಶರಾಮನ ವ್ಯಕ್ತಿತ್ವವನ್ನೇ ಹಾಳುಮಾಡುತ್ತಿದ್ದಾರೆ ಎಂದು ಉಡುಪಿಯ ಶ್ರೀ ಪೇಜಾವರ ಮಠಾಧೀಶರಾದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಹೇಳಿದರು.
ನಗರದ ಹರಿದಾಸ ಸೇವಾ ಸಮಿತಿಯವರು ಮೂರು ದಿನಗಳ ಕಾಲ ಹರಿದಾಸ ಹಬ್ಬ ಕಾರ‍್ಯಕ್ರಮವನ್ನು ಭಾಗ್ಯನಗರದಲ್ಲಿರುವ ರಾಮನಾಥ ಮಂಗಲ ಕಾರ‍್ಯಾಲಯದಲ್ಲಿ ಹಮ್ಮಿಕೊಂಡಿದ್ದರು. ಸಮಾರೋಪ ಸಮಾರಂಭದಲ್ಲಿ ಶ್ರೀಗಳಿಗೆ ಸನ್ಮಾನ ಪತ್ರ ನೀಡಿ ಗೌರವಿಸಿದರು. ಗೌರವ ಸ್ವೀಕರಿಸಿದ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರು ಮಾತನಾಡುತ್ತ ಮೇಲಿನಂತೆ ಅಭಿಪ್ರಾಯ ವ್ಯಕ್ತಪಡಿಸಿದರು.

ಶ್ರೀರಾಮನ ವ್ಯಕ್ತಿತ್ವ ಅದ್ಭುತ. ಆದರ್ಶ ಪುರುಷೋತ್ತಮ. ಆತನ ಕುರಿತು ರಾಮಾಯಣದ ಸರಿಯಾದ ಜ್ಞಾನವಿಲ್ಲದೇ ಮಾತನಾಡುವ ಬುದ್ದಿಜೀವಿಗಳ ಕುರಿತು ಕನಿಕರವಾಗುತ್ತದೆ ಎಂದು ಹೇಳಿದರು.
ಭೈರಪ್ಪ ಚರ್ಚೆಗೆ ಬರಲಿ: ಕಾದಂಬರಿಕಾರ ಎಸ್. ಎಲ್ ಭೈರಪ್ಪನವರೂ ರಾಮಾಯಣವನ್ನು ಸರಿಯಾಗಿ ಅರ್ಥೈಸಿಕೊಳ್ಳದೇ ಏನೇನೊ ಬರೆದಿದ್ದಾರೆ. ರಾಮಾಯಣ ಕುರಿತಂತೆ ಡಾ. ಭೈರಪ್ಪನವರು ಚರ್ಚೆಗೆ ಬರಲಿ, ಸರಿಯಾದ ಉತ್ತರ ಕೊಡಲು ನಾನು ಸಿದ್ಧನಿದ್ದೇನೆ ಎಂದು ಹೇಳಿದರು.
ಹರಿದಾಸ ಸೇವಾ ಸಮಿತಿಯವರು ಸನ್ಮಾನಪತ್ರ ನೀಡಿ ಗೌರವಿಸಿದ್ದಾರೆ. ಆದರೆ ಸ್ವೀಕರಿಸಲು ಮನಸ್ಸು ಒಪ್ಪುತ್ತಿಲ್ಲ. ಏಕೆಂದರೆ ಇನ್ನೂ ಮಾಡಬೇಕಾದ ಕೆಲಸಗಳು ಬಹಳಷ್ಟಿವೆ. ನಿರೀಕ್ಷಿತ ಮಟ್ಟಕ್ಕೆ ಮಾಡಬೇಕಾದ ಕೆಲಸಗಳಾಗಿಲ್ಲ. ಸಮಿತಿಯವರು ಆ ಎಲ್ಲ ಕೆಲಸ ಮಾಡುವಂತೆ ಎಚ್ಚರಿಕೆ ಕೊಟ್ಟಿದ್ದಾರೆಂದು ಭಾವಿಸಿದ್ದೇನೆ. ಇಂದು ಸಮಿತಿಯವರು ನೀಡಿರುವುದು ಸನ್ಮಾನ ಪತ್ರವಲ್ಲ, ಅಭಿಮಾನದ ಪತ್ರ ಎಂದು ತಿಳಿದುಕೊಂಡಿದ್ದೇನೆ ಎಂದು ಅವರು ಹೇಳಿದರು.

ಹಿಂದೂ ಧರ್ಮಕ್ಕೆ ಹಾನಿಯಾಗದಂತೆ ರಕ್ಷಿಸುವವರಿಗೆ ಮತ ನೀಡಿ

ಮತದಾನ ಮಾಡುವುದು ಭಾರತದ ಪ್ರತಿಯೊಬ್ಬ ನಾಗರೀಕನ ಹಕ್ಕು. ನಮ್ಮ ರಾಷ್ಟ್ರವನ್ನು ರಕ್ಷಿಸುವ, ಅಭಿವೃದ್ಧಿ ಪಡಿಸುವ ಹಾಗೂ ಹಿಂದೂ ಧರ್ಮಕ್ಕೆ ಹಾನಿಯಾಗದಂತೆ ರಕ್ಷಿಸುವಂತಹವರಿಗೆ ಮತವನ್ನು ನೀಡಬೇಕೆಂದು ಕೇಳಿಕೊಂಡ ಅವರು ನಾನು ಯಾವ ಪಕ್ಷದ ಪರವಾಗಿಯೂ ಮಾತನಾಡುತ್ತಿಲ್ಲವೆಂದು ಶ್ರೀಗಳು ಸ್ಪಷ್ಟ ಪಡಿಸಿದರು.
ಸಮಾರೋಪ ಸಮಾರಂಭದ ಅತಿಥಿಗಳಾಗಿ ಆಗಮಿಸಿದ್ದ ನಿವೃತ್ತ ಪೊಲೀಸ ಆಯುಕ್ತರಾದ ಕೃಷ್ಣ ಭಟ್ ಅವರು ಹರಿದಾಸ ಹಬ್ಬ ಸಮಿತಿಯವರು ಸಾವಿರಾರು ಜನರ ಮಧ್ಯದಲ್ಲಿ ಅರ್ಥಪೂರ್ಣ ಕಾರ‍್ಯಕ್ರಮವನ್ನು ಮೂರು ವರ್ಷಗಳಿಂದ ಮಾಡುತ್ತ ಬಂದಿದ್ದಾರೆ. ಇದು ಹೀಗೆ ಯಾವುದೇ ಅಡೆತಡೆಯಿಲ್ಲದೇ ಮುಂದುವರೆಯಲಿ ಎಂದು ಹೇಳಿದ ಅವರು ಅಸಂಖ್ಯ ಜನುಮಗಳಲ್ಲಿ ನರಜನ್ಮ ಮಹತ್ವದ್ದು ಅದರಂತೆ ಮನುಷ್ಯನಾಗಿ ಹುಟ್ಟಿ ಮನುಷತ್ವದಿಂದ ಬದುಕುವುದು ಕೂಡ. ಇದನ್ನೆ ದಾಸರು ತಮ್ಮ ಪದಗಳಿಂದ ಬದುಕುವ ದಾರಿಯನ್ನು ಅತ್ಯಂತ ಸರಳ ಭಾಷೆಯಲ್ಲಿ ನಮಗೆ ತೋರಿಸಿಕೊಟ್ಟಿದ್ದಾರೆಂದು ಹೇಳಿದರು.
ಚಿದಂಬರನಗರದ ಲಕ್ಷ್ಮೀ ಶೋಭಾನ ಭಜನಾ ಮಂಡಳ, ಟಿಳಕವಾಡಿಯ ಮಧ್ವಮಾಧವ ಭಜನಾ ಮಂಡಳ, ಟಿಳಕವಾಡಿಯ ಶ್ರೀ ವೇಣುಗೋಪಾಲ ಭಜನಾ ಮಂಡಳ ಹಾಗೂ ಕಾಕತಿಯ ಶ್ರೀ ರಾಘವೇಂದ್ರ ಭಜನಾ ಮಂಡಳಿಗಳಿಂದ ಭಜನೆ ಹಾಗೂ ಮಕ್ಕಳಿಂದ ಸಾಂಸ್ಕೃತಿಕ ಕಾರ‍್ಯಕ್ರಮ ನಡೆಯಿತು. ಪಂ. ಪಾಂಡುರಂಗಾಚಾರ್ಯ ಪೂಜಾರ ಇವರಿಂದ ಉಪನ್ಯಾಸ, ಶ್ರೀಪಾದಂಗಳರಿಂದ ಅಮೃತೋಪದೇಶಗಳು ಜರುಗಿದವು.
ದಾಸವಾಣಿ: ರಾಯಚೂರು ಶೇಷಗಿರಿದಾಸರಿಂದ ದಾಸವಾಣಿ ಜರುಗಿತು. ಆರಂಭದಲ್ಲಿ ಶ್ರೀ ವಿಶ್ವೇಶತೀರ್ಥ ಶ್ರೀಪಾದಂಗಳವರ ಕುರಿತಂತೆ ಗಾಯಕಾರಾದ ಶೇಷಗಿರಿದಾಸರೇ ರಚಿಸಿದ ’ವಿಶ್ವಗುರು ವಿಶೇಷ ಗುರು…’ ಹಾಡನ್ನು ಹಾಡಿದರು. ಹಾಡನ್ನು ಆಲಿಸಿದ ಶ್ರೀಗಳು ಶೇಷಗಿರಿದಾಸರ ಕಂಠ, ಗಾಯನ, ರಚನೆ ಕುರಿತು ಅಭಿಮಾನ ವ್ಯಕ್ತ ಪಡಿಸದರೂ, ನನ್ನ ಕುರಿತಾಗಿ ಬರೆಯುವದಕ್ಕಿಂತ ಭಗವಂತ ನೆನೆಯುವ ರಚನೆಗಳು ನಿಮ್ಮಿಂದ ಹೊರಬರಲಿ ಎಂದು ಆಶಿಸಿದರು.
ರಾಯಚೂರು ಶೇಷಗಿರಿದಾಸರ ’ದಾಸವಾಣಿ’ ಕಾರ‍್ಯಕ್ರಮದಲ್ಲಿ ಸಂಗೀತಾಸಕ್ತರಿಂದ ಕಿಕ್ಕಿರಿದು ತುಂಬಿತ್ತು. ಅವರು ’ರಾಯ ಬಾರೋ ರಾಘವೇಂದ್ರ ಬಾರೋ…’ ವಿಠ್ಠಲದಾಸರ ರಚನೆ ’ಏನೊಲ್ಲೆ ಹರಿಯೇ ನಿನ್ನ…’ ಕನದಾಸರ ರಚನೆಗಳನ್ನು ಹಾಡಿದರು. ಅಲ್ಲದೇ ಅವರ ’ಹನುಮಂತ.. ಹನುಮಂತ..’ ಎಂಬ ಹಾಡಿಗೆ ಕುಳಿತಿದ್ದ ಭಕ್ತ ಸಮೂಹ ಎದ್ದು ಕುಣಿದು ಸಂತಸಪಟ್ಟರು. ಹೀಗೆ ಸುಮಾರು ಎರಡು ಗಂಟೆಗಳ ಕಾಲ ಸಂಗೀತಾಸಕ್ತರ ಮನ ತಣಿಸುವಲ್ಲಿ ಡಾ.ಶೇಷಗಿರಿದಾಸರು ಯಶಸ್ವಿಯಾದರು. ಗೋಪಾಲ ಗುಡಿಬಂಡಿ ಮತ್ತು ವಿನಯ ಕುಲಕರ್ಣಿ ತಬಲಾ. ಶ್ರೀಪಾದ ದಾಸ ಹಾರ್ಮೋನಿಯಮ್ ಶ್ರೀಧರ ಕುಲಕರ್ಣಿ ತಾಲ ಸಾಥ್ ನೀಡಿದರು.
 ರಾಘವೇಂದ್ರ ಕಾಗವಾಡ ಅಲ್ಲದೆ ಹರಿದಾಸ ಸೇವಾ ಸಮಿತಿಯ ಕೇಶವ ಮಾಹುಲಿ, ಜಯತೀರ್ಥ ಸವದತ್ತಿ, ಭೀಮಸೇನ ಮಿರ್ಜಿ, ಸಂಜೀವ ಮೊರಪ್ಪನವರ, ಪ್ರಭಾಕರ ಸರಳಾಯ, ಶ್ರೀಧರ ಹಲಗತ್ತಿ, ನಂದಕುಮಾರ ಕರಗುಪ್ಪಿಕರ ಗೋಷ್ಠಿಯಲ್ಲಿ ಉಪಸ್ಥಿತರಿದ್ದರು.
—————————————————-

ಹರಿದಾಸ ಹಬ್ಬದ ಸಮಗ್ರ ಸುದ್ದಿಗಳಿಗಾಗಿ ಕ್ಲಿಕ್ ಮಾಡಿ:

ಪೇಜಾವರ ಶ್ರೀಗಳಿಂದ ಬೆಳಗಾವಿಯಲ್ಲಿ ಶ್ರೀರಾಮನವಮಿ ಉತ್ಸವ

ನಾಳೆ ಪೇಜಾವರ ಶ್ರೀಗಳಿಂದ ಹರಿದಾಸ ಹಬ್ಬ ಉದ್ಘಾಟನೆ

ಭಕ್ತಿಯ ಸರಳ ಮಾರ್ಗವನ್ನು ದಾಸರು ತೋರಿಸಿಕೊಟ್ಟರು -ಪೇಜಾವರ ಶ್ರೀ

ಶಾಸ್ತ್ರಸಾಹಿತ್ಯ ದಾಸ ಸಾಹಿತ್ಯ ಎರಡೂ ಒಂದೆ -ಪೇಜಾವರ ಶ್ರೀ

 

(ಪ್ರಗತಿವಾಹಿನಿ ಸುದ್ದಿಗಳನ್ನು ಎಲ್ಲ ಗ್ರುಪ್ ಗಳಿಗೆ ಶೇರ್ ಮಾಡಿ)

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button