
ಪ್ರಗತಿವಾಹಿನಿ ಸುದ್ದಿ; ಹಾಂಗ್ಕಾಂಗ್ : ಕೋವಿಡ್ ನಿಯಂತ್ರಣಕ್ಕೆ ಭಾರತದಲ್ಲೂ ಹಲವು ನಿಯಮಗಳನ್ನು ಹೇರಲಾಗಿದೆ. ಮಾಸ್ಕ್ ಧಾರಣೆ, ಸಾಮಾಜಿಕ ಅಂತರ ಕಾಪಾಡಿಕೊಳ್ಳುವುದು ಮೊದಲಿಂದಲೂ ಇದೆ. ಜತೆಗೆ ಕೋವಿಡ್ ಉಲ್ಬಣಗೊಂಡಾಗ ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಗೆ ಮಿತಿಯನ್ನು ಹೇರಲಾಗುತ್ತದೆ. ಗರಿಷ್ಟ 200ಕ್ಕಿಂತ ಹೆಚ್ಚು ಜನ ಸೇರುವಂತಿಲ್ಲ ಎಂಬ ನಿಯಮ ಈಗಲೂ ಇದೆ. ಆದರೆ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುವವರು ಎಷ್ಟು ಜನ ಎಂಬುದು ಪ್ರಶ್ನೆ. ಹಿರಿಯ ಅಧಿಕಾರಿಗಳೇ ಎಷ್ಟೋ ಬಾರಿ ಕೋವಿಡ್ ಮಾರ್ಗಸೂಚಿಯನ್ನು ಉಲ್ಲಂಘಿಸುತ್ತಾರೆ. ಇನ್ನು ರಾಜಕಾರಣಿಗಳಂತೂ ಕೋವಿಡ್ ಮಾರ್ಗಸೂಚಿಗೆ ಕ್ಯಾರೆ ಎನ್ನುವುದಿಲ್ಲ. ಕೋವಿಡ್ ನಿಯಮ ಉಲ್ಲಂಘಿಸಿದ ಬಗ್ಗೆ ಮಾಧ್ಯಮಗಳಲ್ಲಿ ವರದಿಯಾದರೆ ಒಂದಿಷ್ಟು ಸಮಜಾಯಿಶಿ ಕೊಟ್ಟರೆ ಮುಗಿಯಿತು ಎಂಬ ಮನೋಸ್ಥಿತಿಯಲ್ಲಿದ್ದಾರೆ.
ಆದರೆ ಹಾಂಕಾಂಗ್ನ ಈ ಹಿರಿಯ ಸಚಿವ ಬರ್ಥಡೆ ಪಾರ್ಟಿಯಲ್ಲಿ ಪಾಲ್ಗೊಂಡು ಕೋವಿಡ್ ನಿಯಮ ಉಲ್ಲಂಘಿಸಿದ್ದಕ್ಕೆ ಪ್ರಾಯಶ್ಚಿತ್ತವಾಗಿ ತಮ್ಮ ಅತ್ಯುನ್ನತ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಅದೂ ಸಣ್ಣ ಪುಟ್ಟ ಹುದ್ದೆಯಲ್ಲ, ಹಾಂಕಾಂಗ್ ಗೃಹ ಸಚಿವರಾಗಿದ್ದ ಕ್ಯಾಸ್ಪರ್ ತ್ಸುಯಿ, ತಮ್ಮ ತಪ್ಪಿಗೆ ಪ್ರಾಯಶ್ಚಿತ್ತವಾಗಿ ರಾಜೀನಾಮೆ ನೀಡಿ ಮಾದರಿಯಾಗಿದ್ದಾರೆ.
ಹುದ್ದೆಗೆ ಸಂಚಕಾರ ತಂದ ಬರ್ತಡೆ ಪಾರ್ಟಿ
ಹಾಂಕಾಂಗ್ನಲ್ಲಿ ಕೋವಿಡ್ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಸಭೆ ಸಮಾರಂಭಗಳಿಗೆ ಗರಿಷ್ಟ 200 ಜನರ ಮಿತಿಯನ್ನು ಹೇರಲಾಗಿದೆ. ತ್ಸುಯಿ ಜ.3ರಂದು ಹಾಂಕಾಂಗ್ನ ತಾಪಸ್ ರೆಸ್ಟೋರೆಂಟ್ನಲ್ಲಿ ಹಮ್ಮಿಕೊಂಡಿದ್ದ ಚೀನಾ ನ್ಯಾಷನಲ್ ಪೀಪಲ್ ಕಾಂಗ್ರೆಸ್ನ ಸದಸ್ಯ ವಿಟ್ಮನ್ ಹಂಗ್ ಅವರ ಬರ್ತಡೆ ಪಾರ್ಟಿಯಲ್ಲಿ ಪಾಲ್ಗೊಂಡಿದ್ದರು. ಪಾರ್ಟಿಯಲ್ಲಿ 200ಕ್ಕಿಂತ ಹೆಚ್ಚು ಜನಸೇರಿದ್ದರು.
ಇದ್ದವರೆಲ್ಲಾ ಗಣ್ಯರೆ
ಪಾರ್ಟಿಯಲ್ಲಿ ಹಿರಿಯ ಪೊಲೀಸ್ ಅಧಿಕಾರಿಗಳು ನ್ಯಾಯಾಧೀಶರು ಒಳಗೊಂಡು ಬಹುತೇಕ ಗಣ್ಯರೇ ಸೇರಿದ್ದರು. ಪಾರ್ಟಿಯ ನಂತರ ಅದರಲ್ಲಿ ಪಾಲ್ಗೊಂಡಿದ್ದ ಒಬ್ಬರಿಗೆ ಕೋವಿಡ್ ಪಾಸಿಟಿವ್ ಬಂದಿತ್ತು. ಆಗ ಪಾರ್ಟಿಯಲ್ಲಿದ್ದ ಅತಿಥಿಗಳ ಯಾದಿಯನ್ನು ಹಾಂಕಾಂಗ್ ಆರೋಗ್ಯ ಇಲಾಖೆಯ ಅಧಿಕಾರಿಗಳು ಪರಿಶೀಲಿಸಿದಾಗ 200ಕ್ಕಿಂತ ಹೆಚ್ಚು ಜನ ಸೇರಿದ್ದು ಬೆಳಕಿಗೆ ಬಂದಿದೆ.
ಮುಜುಗರಕ್ಕೀಡಾದ ಸರಕಾರ
ಹಾಂಕಾಂಗ್ನ ಕ್ಯಾರಿ ಲ್ಯಾಮ್ ಸರಕಾರ ಜೀರೊ ಕೋವಿಡ್ ಪಾಲಿಸಿ ಅನುಷ್ಠಾನಗೊಳಿಸಿದ್ದು ಕೋವಿಡ್ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಲು ಕ್ರಮ ಕೈಗೊಳ್ಳುತ್ತಿದೆ. ಆದರೆ ತ್ಸುಯಿ ಸೇರಿದಂತೆ ಸರಕಾರದ ಪ್ರಬಾವಿ ಅಧಿಕಾರಿಗಳು, ರಾಜಕಾರಣಿಗಳು ಕೋವಿಡ್ ನಿಯಮ ಉಲ್ಲಂಘಿಸಿದ್ದು ಸರಕಾರಕ್ಕೆ ತೀವ್ರ ಮುಜುಗರ ತಂದಿದೆ. ಸ್ಥಳೀಯ ಮಾಧ್ಯಮಗಳಲ್ಲೂ ಈ ಬರ್ತಡೆ ಪಾರ್ಟಿಯ ಪೋಟೊಗಳು ವೈರಲ್ ಆಗಿದ್ದು ಬಹುತೇಕರು ಮಾಸ್ಕ್ ಧರಿಸದೆ ಸಾಮಾಜಿಕ ಅಂತರ ಕಾಪಾಡಿಕೊಳ್ಳದೆ ನಿಯಮ ಉಲ್ಲಂಘಿಸಿದ್ದು ಖಚಿತವಾಗಿದೆ.
ಕ್ರಿಕೇಟ್ ಪ್ರಿಯರಿಗೆ ಸಂತಸದ ಸುದ್ದಿ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ