Latest

ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆಗೆ ಕೇಂದ್ರದ ಉತ್ಸಾಹ; ಕರ್ನಾಟಕ ನೀರು ಸಾಗಿಸಲು ಕಾರಿಡಾರ್ ಮಾತ್ರವಾಗದಿರಲಿ!

 

ಸಂಗಮೇಶ ನಿರಾಣಿ

  ಸಂಗಮೇಶ ಆರ್. ನಿರಾಣಿ
(ಅಧ್ಯಕ್ಷರು, ಉತ್ತರ ಕರ್ನಾಟಕ ಸಮಗ್ರ ನೀರಾವರಿ ಹೋರಾಟ ಸಮೀತಿ)

ಕೇಂದ್ರ ಸರ್ಕಾರ ಈ ಬಾರಿಯ ಬಜೇಟ್‌ನಲ್ಲಿ ದಕ್ಷೀಣ ಭಾರತ ನೀರಾವರಿ ಹಿತದೃಷ್ಟಿಯಿಂದ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಹತ್ವದ ಘೊಷಣೆ ಮಾಡಿದ್ದಾರೆ. ಪೆನೂನ್ಸೂಲಾರ್ ನದಿ ಜೋಡಣೆ ಮುಂದಾಗಿರುವ ಕೇಂದ್ರ ಸರ್ಕಾರ ರಾಷ್ಟ್ರೀಯ ನದಿ ಜೋಡಣೆ ಯೋಜನೆ ಕನಸು ಸಾಕಾರಗೊಳಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆ ಇಟ್ಟಿದೆ. ಗೋದಾವರಿ-ಕೃಷ್ಣಾ, ಪೆನ್ನಾರ್-ಕಾವೇರಿ, ದಮನ್‌ಗಂಗಾ-ಪಿನ್‌ಜಾಲ್, ಪರತಾಪಿ-ನರ್ಮದಾ ಸೇರಿ ರಾಷ್ಟ್ರದ ೫ ಮಹತ್ವದ ನದಿ ಜೋಡಣೆ ಅನುಷ್ಠಾನಕ್ಕೆ ಡಿ.ಪಿ.ಆರ್. ಸಿದ್ಧವಾಗಿದ್ದು ೪೪,೬೦೫ ಕೋಟಿ ರೂ.ಗಳನ್ನು ಈ ಬಾರಿ ಬಜೇಟ್‌ನಲ್ಲಿ ಮೀಸಲಿರಸಲಾಗಿದೆ. ರೈತರ ಆದಾಯ ದ್ವಿಗುಣಗೊಳಿಸಲು ನಿರ್ಣಾಯಕ ಹಂತದಲ್ಲಿರುವ ಈ ಸಮಯದಲ್ಲಿ ಬೃಹತ್ ನೀರಾವರಿ ಯೋಜನೆಗಳು ರಾಷ್ಟ್ರದ ಆರ್ಥಿಕ ವಿಕಾಸಕ್ಕೆ ಬಹದೊಡ್ಡ ಬದಲಾವಣೆ ತರಬಲ್ಲವು.
ಭಾರತದ ನೀರಾವರಿ ವ್ಯವಸ್ಥೆಯಲ್ಲಿ ಹಿಮಾಲಯನ್ ನದಿಗಳು ಹಾಗೂ ಪೆನಿನ್ಸೂಲಾರ್ ನದಿಗಳು ಎಂದು ಪ್ರಮುಖ ಎರಡು ಭಾಗಗಳಿವೆ. ರಾಷ್ಟ್ರೀಯ ನದಿ ಜೋಡಣೆ ಯೋಜನೆ ಪರಿಕಲ್ಪನೆಯಲ್ಲಿಯೂ ಹಿಮಾಲಯನ್ ರಿವರ್ ಲಿಂಕಿಂಗ್, ಪೆನಿನ್ಸೂಲಾರ್ ರಿವರ್ ಲಿಂಕಿಂಗ್ ಹಾಗೂ ರಾಜ್ಯ ಮಟ್ಟಗಳಲ್ಲಿ ಸಣ್ಣ ಪುಟ್ಟ ನದಿ ಜೋಡಣೆಗಾಗಿ ಇಂಟ್ರಾ ರಿವರ್ ಲಿಂಕಿಂಗ್ ಎಂದು ೩ ಹಂತದಲ್ಲಿ ಯೋಜನೆಗಳು ಕಾರ್ಯಗತಗೊಳ್ಳುತ್ತವೆ.
ಈ ನಿಟ್ಟಿನಲ್ಲಿ ಪೆನಿನ್ಸೂಲಾರ್ ಅಡಿಯಲ್ಲಿ ಗೋದಾವರಿ-ಕೃಷ್ಣಾ-ಪಾಲಾರ್-ಪೆನ್ನಾರ್-ಕಾವೇರಿ ಸೇರಿದಂತೆ ದಕ್ಷೀಣ ಭಾರತದ ೫ ನದಿಗಳ ಜೋಡಣೆಗೆ ಕೇಂದ್ರ ಸರ್ಕಾರ ಸಜ್ಜಾಗಿದೆ. ಈ ಯೋಜನೆ ಇಂದು ನಿನ್ನೆಯದಲ್ಲ. ಸುಮಾರು ೫೦ ವರ್ಷಗಳ ಹಿಂದೆ ೧೯೭೨ರಲ್ಲಿಯೇ ದೇಶದ ಶ್ರೇಷ್ಠ ನೀರಾವರಿ ತಜ್ಞ ಹಾಗೂ ಅಂದಿನ ಕೇಂದ್ರ ಜಲಸಂಪನ್ಮೂಲ ಸಚಿವರಾದ ಕೆ. ಎಲ್. ರಾವ್ ಈ ಕುರಿತು ಚಿಂತನೆ ನಡೆಸಿದ್ದರು. ೨೦೧೬ರಲ್ಲಿಯೇ ಆಂದ್ರಪ್ರದೇಶ ಸರ್ಕಾರ ಪಟ್ಟೆಸೀಮಾ ಲಿಫ್ಟ್ ಇರಿಗೇಶನ್ ಪ್ರೋಜೆಕ್ಟ್ ಮೂಲಕ ಗೋದಾವರಿ-ಕೃಷ್ಣಾ ನದಿ ಜೋಡಣೆ ಮಾಡಿದೆ.
ದಕ್ಷಿಣ ಭಾರತದ ಪ್ರಮುಖ ನದಿಗಳನ್ನು ಒಂದಕ್ಕೊಂದು ಬೆಸೆಯುವ ಮೂಲಕ ಜಲ ಸಂಪನ್ಮೂಲ ಸದ್ಬಳಕೆಯ ದೃಷ್ಟಿಯಿಂದ ಈ ಯೋಜನೆ ಅತ್ಯಂತ ಮಹತ್ವದ್ದಾಗಿದೆ. ಮಹಾನದಿ ಮತ್ತು ಗೊದಾವರಿ ನದಿ ಕಣಿವೆ ಪ್ರದೇಶವು ಹೆಚ್ಚುವರಿ ಜಲಸಂಪನ್ಮೂಲಗಳನ್ನು ಹೊಂದಿವೆ. ಎಲ್ಲ ಬಳಕೆಯ ನಂತರವೂ ಲಭ್ಯವಿರುವ ಜಲ ಸಂಪನ್ಮೂಲವನ್ನು ನೀರಿನ ಅಭಾವವಿರುವ ನದಿ ಕಣಿವೆಗಳಿಗೆ ತಿರುಗಿಸುವ ಮೂಲಕ ದಕ್ಷಿಣ ಭಾರತದ ಎಲ್ಲ ಪ್ರಮುಖ ನದಿ ಕಣಿವೆಗಳನ್ನು ಸಮೃದ್ದಗೊಳಿಸಲು ಈ ಯೋಜನೆಯಿಂದ ಸಾಧ್ಯವಿದೆ.

ಆತಂಕ ಹೊರಹಾಕಿದ ಕರ್ನಾಟಕ:

ಕೇಂದ್ರ ಸರ್ಕಾರ ಬಜೇಟ್‌ನಲ್ಲಿ ಘೋಷಿಸಿದ ಪಂಚನದಿ ಜೋಡಣೆ ಯೋಜನೆ ಕುರಿತಂತೆ ಕರ್ನಾಟಕ ತನ್ನ ಆತಂಕವನ್ನು ಹೊರಹಾಕಿದೆ. ಈ ಕುರಿತು ಮಾಹಿತಿ ನೀಡಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಈ ಯೋಜನೆಯಿಂದ ಕರ್ನಾಟಕಕ್ಕೆ ಅನ್ಯಾಯವಾಗದಂತೆ ಕ್ರಮ ಕೈಗೊಳ್ಳಲು ಕೇಂದ್ರದ ಜೊತೆ ಚರ್ಚಿಸಲು ನಿರ್ಧರಿಸಿದ್ದಾರೆ. ಅಲ್ಲದೇ ಯೋಜನೆ ಅನುಷ್ಠಾನಕ್ಕೆ ಮೊದಲೇ ರಾಜ್ಯದ ಪಾಲು ಎಷ್ಟು ಎಂಬುದನ್ನು ನಿರ್ಧರಿಸುವಂತೆ ಕೇಂದ್ರದ ಬಳಿ ಕೋರಲಿದ್ದಾರೆ. ಅಲ್ಲದೇ ಬಜೇಟ್ ಅಧಿವೇಶನ ನಡೆಯುತ್ತಿರುವುದರಿಂದ ಸಂಸತ್‌ನಲ್ಲಿ ಈ ಯೋಜನೆ ಸೇರಿದಂತೆ ಅಂತರಾಜ್ಯ ನದಿ ಯೋಜನೆಗಳ ಬಗ್ಗೆ ಧ್ವನಿ ಎತ್ತಲು ವಿನಂತಿಸಿ ಕರ್ನಾಟಕದ ಸಂಸದರು ಹಾಗೂ ಕೇಂದ್ರ ನೀರಾವರಿ ತಜ್ಞ ಅಧಿಕಾರಿಗಳಿಗಾಗಿ ದೆಹಲಿಯಲ್ಲಿ ಫೇ.೦೮ರಂದು ಸಭೆ ಏರ್ಪಡಿಸಿರುವ ಬೆಳವಣಿಗೆಗಳು ನಡೆದಿವೆ. ಇನ್ನೊಂದೆಡೆ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ ತಮ್ಮ ಪಾಲು ದೊರೆಯದಿದ್ದಲ್ಲಿ ಯೋಜನೆ ಅನುಷ್ಠಾನಗೊಳಿಸಲು ಸಮ್ಮತಿ ನೀಡುವುದಿಲ್ಲ ಎಂದು ಸ್ಪಷ್ಟ ಪಡಿಸಿರುವುದು ಒಳ್ಳೆಯ ಬೆಳವಣಿಗೆ.
ಕೇಂದ್ರವು ಈ ಕುರಿತು ರಾಜ್ಯದ ಜೊತೆಗೆ ಮಾತನಾಡದೇ ಆಂದ್ರ, ತಮಿಳುನಾಡು ಹಾಗೂ ಕೇರಳದಿಂದ ಮಾಹಿತಿ ಪಡೆದಿದೆ. ಈ ಯೋಜನೆಯಿಂದ ಕರ್ನಾಟಕಕ್ಕೆ ನೀರಿನ ಪಾಲು ದೊರೆಯದಿದ್ದರೆ ಲಾಭಕ್ಕಿಂತ ನಷ್ಟವೇ ಜಾಸ್ತಿ ಎಂದು ತಜ್ಞರು ಅಭಿಪ್ರಾಯ ಪಟ್ಟಿದ್ದು, ಈಗಾಗಲೇ ಆಂದ್ರಪ್ರದೇಶ ಕೃಷ್ಣಾ-ಗೋದಾವರಿ ನದಿ ಜೋಡಣೆ ಮಾಡಿದೆ. ತಮಿಳುನಾಡು ಪೆನ್ನಾರ್-ಗೂಂಡಾರ್ ಲಿಂಕ್ ರೂಪಿಸಿದೆ. ಈ ಯೋಜನೆಗಳಲ್ಲಿ ಕರ್ನಾಟಕ ತನ್ನ ಪಾಲು ಕೇಳಿರುವ ಪ್ರಕರಣ ಇನ್ನೂ ಸುಪ್ರೀಂ ಕೋರ್ಟ್‌ನಲ್ಲಿದೆ. ಹೀಗಾಗಿ ಅಂತರಾಜ್ಯ ಜಲವಿವಾದದ ವಸ್ತುಸ್ಥಿತಿ ಹಾಗೂ ಸುತ್ತಲಿನ ರಾಜ್ಯಗಳೊಂದಿಗೆ ಗಡಿ ಹಂಚಿಕೊಂಡ ನದಿಗಳ ವಸ್ತುಸ್ಥಿತಿ ಹಾಗೂ ನದಿ ಜೋಡಣೆಯಿಂದ ಆಗುವ ಪರಿಣಾಮಗಳ ಕುರಿತು ಸಮಗ್ರ ಮಾಹಿತಿಯನ್ನು ಕೇಂದ್ರಕ್ಕೆ ಸಲ್ಲಿಸಲು ರಾಜ್ಯ ಸರ್ಕಾರ ನಿರ್ಧರಿಸಿದೆ.
ಕೇಂದ್ರವು ಯೋಜನೆ ಘೊಷಿಸುವ ಮೊದಲು ಭಾಗಿದಾರ ರಾಜ್ಯಗಳ ಜೊತೆ ಚರ್ಚಿಸಬೇಕಾಗಿತ್ತು. ಈಗಲೂ ಚರ್ಚಿಸದೇ ಅನುಷ್ಠಾನಕ್ಕೆ ನಿಂತರೆ ಸಂಘರ್ಷಕ್ಕೆ ಕಾರಣವಾಗಬಹುದು ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದು, ಈ ಸಂಬಂಧ ದಕ್ಷೀಣ ರಾಜ್ಯಗಳ ಮುಖ್ಯಮಂತ್ರಿಗಳು ಹಾಗೂ ಸರ್ವಪಕ್ಷಗಳ ಮುಖಂಡರ ಸಭೆ ಕರೆದು ಯೋಜನೆಯ ಸಮಗ್ರ ಮಾಹಿತಿ ನೀಡಬೇಕು ಎಂದು ಆಗ್ರಹಿಸಿದ್ದಾರೆ.

ಗೋದಾವರಿ ಮತ್ತು ಮಹಾನದಿ ಪರಿಚಯ:

ಗೋದಾವರಿ ನದಿಯು ದಕ್ಷಿಣ ಭಾರತದ ಅತಿದೊಡ್ಡ ಹಾಗೂ ಭಾರತದ ೨ನೇ ಅತಿದೊಡ್ಡ ನದಿಯಾಗಿದೆ. ಮಹಾರಾಷ್ಟ್ರದ ನಾಸಿಕ್ ಬಳಿಯ ತ್ರೈಂಬಕೇಶ್ವರದಲ್ಲಿ ಹುಟ್ಟಿ ಮಹಾರಾಷ್ಟ್ರ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶದಲ್ಲಿ ೧೪೬೫ ಕಿ.ಮೀ. ಉದ್ದ ಹರಿದು ಆಂದ್ರಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಯಾಣಂ ಹಾಗೂ ಅಂತರ್ವೆದಿ ಬಳಿ ಬಂಗಾಳಕೊಲ್ಲಿ ಸೇರುತ್ತದೆ. ಮಹಾರಾಷ್ಟ್ರ, ಛತ್ತಿಸಗಡ, ಮಧ್ಯಪ್ರದೇಶ, ಒಡಿಶಾ, ಕರ್ನಾಟಕ, ತೆಲಂಗಾಣ, ಆಂದ್ರಪ್ರದೇಶ ಸೇರಿದಂತೆ ೭ ರಾಜ್ಯಗಳಲ್ಲಿ ಜಲಾನಯನ ಪ್ರದೇಶವನ್ನು ಹೊಂದಿದೆ. ಜಲಾನಯನ ಪ್ರದೇಶ ವ್ಯಾಪ್ತಿಯಲ್ಲಿ ಗೋದಾವರಿ ಹಾಗೂ ಅದರ ಉಪನದಿಗಳಿಗೆ ೩೫೦ಕ್ಕೂ ಅಧಿಕ ಆಣೆಕಟ್ಟು ಹಾಗೂ ಬ್ಯಾರೇಜ್‌ಗಳನ್ನು ನಿರ್ಮಿಸಲಾಗಿದೆ. ಮಹಾನದಿಯು ಛತ್ತಿಸಗಡ ರಾಜ್ಯದ ಉನ್ನತಪ್ರಾಂತ್ಯಕ್ಕೆ ಸೇರಿದ ರಾಯ್‌ಪುರ ಜಿಲ್ಲೆಯ ಸಿಂಹಾವ ಎಂಬಲ್ಲಿ ಹುಟ್ಟುತ್ತದೆ. ಮುಂದೆ ಒಡಿಶಾದಲ್ಲಿ ಹರಿದು ಬ್ರಾಹ್ಮಿಣಿ ನದಿಯೊಂದಿಗೆ ಸಂಗಮಿಸಿ ಬಂಗಾಳಕೊಲ್ಲಿ ಸೇರುತ್ತದೆ. ಛತ್ತಿಸಗಡ, ಮಹಾರಾಷ್ಟ್ರ, ಜಾರ್ಖಂಡ್, ಒಡಿಶಾ ರಾಜ್ಯಗಳಲ್ಲಿ ಜಲಾನಯನ ಪ್ರದೇಶವನ್ನು ಹೊಂದಿದೆ.

ಯೋಜನೆಯ ಅನುಷ್ಠಾನ ಹೇಗೆ?

ಎಲ್ಲ ಬಳಕೆಯ ನಂತರವೂ ಮಹಾನದಿಯಲ್ಲಿ ದೊರೆಯುವ ೧೨,೧೬೫ ಎಂ.ಸಿ.ಎಂ ನೀರನ್ನು ಮಹಾನದಿ-ಗೋದಾವರಿ ಲಿಂಕ್ ಕೆನಾಲ್ ಮೂಲಕ ಗೊದಾವರಿ ನದಿಗೆ ಸೇರಿಸುವುದು. ನಂತರ ಗೋದಾವರಿ ನದಿಯಿಂದ ದೊರೆಯುವ ೨೬,೧೨೨ ಎಂ.ಸಿ.ಎಂ. ನೀರನ್ನು ಇಚಂಪಲ್ಲಿ-ನಾಗಾರ್ಜುನಸಾಗರ, ಇಚಂಪಲ್ಲಿ-ಪುಲಿಚಿಂತಲಾ, ಪುಲವಾರಂ-ವಿಜಯವಾಡ ಮೂಲಕ ೩ ಲಿಂಕ್‌ಗಳ ಮೂಲಕ ಕೃಷ್ಣಾ ನದಿಗೆ ಸೇರಿಸುವುದು. ಯೋಜನೆಯ ಮೂಲಕ ಕೃಷ್ಣಾ ಕಣಿವೆಗೆ ದೊರೆತ ೨೬,೧೨೨ ಎಂ.ಸಿ.ಎಂ ನೀರಿನಲ್ಲಿ ೧೪,೦೮೦ ಎಂ.ಸಿ.ಎಂ. ನೀರನ್ನು ಆಲಮಟ್ಟಿ-ಪೆನ್ನಾರ್, ಶ್ರೀಶೈಲಂ-ಪೆನ್ನಾರ್, ನಾಗಾರ್ಜುನಸಾಗರ-ಸೋಮಸಿಲಾ ಮೂಲಕ ೩ ಲಿಂಕ್‌ಗಳಲ್ಲಿ ಪೆನ್ನಾರ್ ಕಣಿವೆಗೆ ಸೇರಿಸುವುದು. ಅಲ್ಲಿಂದ ೮,೫೬೫ ಎಂ.ಸಿ.ಎಂ. ನೀರನ್ನು ಕಾವೇರಿ ಕಣಿವೆಗೆ ಸೇರಿಸುವ ಯೋಜನೆಯನ್ನು ಕೇಂದ್ರ ಸರ್ಕಾರ ಸಿದ್ದಪಡಿಸಿದೆ.

ನೀರು ಹಂಚಿಕೆಯಲ್ಲಿ ಕರ್ನಾಟಕಕ್ಕೆ ಅನ್ಯಾಯ!

೧೯೮೦ರಲ್ಲಿ ಯೋಜನೆ ಅನುಷ್ಠಾನಕ್ಕೆ ಚಿಂತಿಸಿದಾಗ ಹಂಚಿಕೆಯಾದಂತೆ ಒಟ್ಟು ೧೩೦೦ ಟಿ.ಎಂ.ಸಿ ಅಡಿ ನೀರಿನಲ್ಲಿ ಕರ್ನಾಟಕಕ್ಕೆ ೨೮೩ ಟಿ.ಎಂ.ಸಿ ಅಡಿ ಹಂಚಿಕೆ ಮಾಡಿ ಅದರಲ್ಲಿ ಕೃಷ್ಣಾ ಕಣಿವೆಯಲ್ಲಿ ೧೯೬ ಹಾಗೂ ಕಾವೇರಿ ಕಣಿವೆಯಲ್ಲಿ ೮೭ ಟಿಎಂಸಿ ಅಡಿ ಬಳಕೆ ಮಾಡಿಕೊಳ್ಳಲು ಯೋಜನೆ ರೂಪಿಸಲಾಗಿತ್ತು. ಸದರಿ ಯೋಜನೆಯ ನೀರು ಹಂಚಿಕೆಯನ್ನು ೨೦೦೦ರಲ್ಲಿ ಪುನರ್ ಪರಿಶೀಲಿಸಿ ಒಟ್ಟು ನೀರಿನ ಹಂಚಿಕೆಯನ್ನು ೯೨೫ ಟಿ.ಎಂ.ಸಿ ಅಡಿಗೆ ಇಳಿಸಲಾಯಿತು. ಆಗ ಕರ್ನಾಟಕದ ಪಾಲನ್ನು ೧೬೪ ಟಿ.ಎಂ.ಸಿ ಅಡಿಗೆ ಕಡಿತಗೊಳಿಸಿ ಕೃಷ್ಣಾ ಕಣಿವೆಗೆ ೧೦೭ ಹಾಗೂ ಕಾವೇರಿ ಕಣಿವೆಗೆ ೫೭ ಟಿ.ಎಂ.ಸಿ ಅಡಿ ನಿಗದಿಪಡಿಸಲಾಯಿತು. ಇದೇ ಯೋಜನೆ ಕುರಿತು ೨೦೧೦ರಲ್ಲಿ ಎನ್.ಡಬ್ಲ್ಯೂ.ಡಿ.ಎ ಮತ್ತೊಮ್ಮೆ ಪರಿಶೀಲಿಸಿ ಒಟ್ಟು ನೀರನ್ನು ೭೧೮ ಟಿ.ಎಂ.ಸಿ ಅಡಿಗೆ ನಿಗದಿಪಡಿಸಿ ಈ ಬಾರಿ ಕರ್ನಾಟಕದ ಪಾಲನ್ನು ಸಂಪೂರ್ಣ ರದ್ದುಗೊಳಿಸಲಾಯಿತು. ಕರ್ನಾಟಕಕ್ಕೆ ಪ್ರಾರಂಭಿಕ ಹಂತದಲ್ಲಿ ೨೮೩ ಟಿಎಂಸಿ ಅಡಿ ನೀರನ್ನು ಈ ಯೋಜನೆಯಡಿ ನಿಗದಿಪಡಿಸಲಾಗಿತ್ತು. ಆದರೆ ಕೊನೆ ಹಂತದಲ್ಲಿ ನೀರು ಹಂಚಿಕೆಯನ್ನು ಪೂರ್ಣ ರದ್ದುಪಡಿಸಿದ್ದು ಕರ್ನಾಟಕಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿದೆ. ಈಗ ಅನ್ಯಾಯವನ್ನು ಸರಿಪಡಿಸಿ ನ್ಯಾಯಯುತ ಪಾಲನ್ನು ಪಡೆಯುವ ಕೆಲಸವನ್ನು ರಾಜ್ಯ ಸರ್ಕಾರ ಮಾಡಬೇಕಿದೆ.

ಪ್ರತಿ ಹಂತದಲ್ಲೂ ಭಾಗೀದಾರ ಆದರೆ ಯೋಜನೆ ಪ್ರತಿಫಲದಲ್ಲಿ ಪಾಲಿಲ್ಲ.
ಮಹಾತ್ವಾಕಾಂಕ್ಷೆಯ ನದಿ ಜೋಡಣೆ ಯೋಜನೆಯನ್ನು ೯ ಹಂತಗಳಲ್ಲಿ ಅನುಷ್ಠಾನಗೊಳಿಸುತ್ತಿದ್ದು, ಪ್ರತಿ ಹಂತದ ಯೋಜನೆಯಲ್ಲಿಯೂ ಕರ್ನಾಟಕದ ಭಾಗವಹಿಸುವಿಕೆ ಅವಶ್ಯಕವಾಗಿದೆ. ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆಯ ಮುಖ್ಯ ಉದ್ದೇಶವೇ ಕೊರತೆಯಾದ ಜಲಾನಯನ ಪ್ರದೇಶವನ್ನು ಸಮೃದ್ದಗೊಳಿಸುವುದು. ಕರ್ನಾಟಕದ ಕೃಷ್ಣಾ ಕಣಿವೆಯಲ್ಲಿಯೇ ಅತಿಹೆಚ್ಚು ಬಯಲುಸೀಮೆ ಪ್ರದೇಶವಿದೆ. ಆಲಮಟ್ಟಿ ಆಣೆಕಟ್ಟಿಗೆ ಹೊಂದಿಕೊಂಡ ಸುತ್ತಲಿನ ಪ್ರದೇಶದಲ್ಲಿಯೇ ನೀರಾವರಿ ಕೊರತೆ ಇದೆ.
ಬಾಗಲಕೋಟ, ಬೆಳಗಾವಿ, ವಿಜಯಪುರ, ಕೊಪ್ಪಳ, ಯಾದಗಿರಿ, ರಾಯಚೂರು, ಗದಗ ಜಿಲ್ಲೆಗಳಲ್ಲಿ ಬರಡು ಭೂಮಿಗೆ ನೀರಾವರಿ ಸೌಲಭ್ಯ ಕಲ್ಪಿಸುವ ಮೂಲಕ ಕೃಷಿಗೆ ಉತ್ತೇಜನ ನೀಡುವ ಸದಾವಕಾಶಗಳಿವೆ. ಕೃಷ್ಣೆಯ ಉಪನದಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶ ನಿರಂತರವಾಗಿ ನೀರಿನ ಕೊರತೆಯನ್ನು ಅನುಭವಿಸುತ್ತಿದೆ. ೨೨,೦೦೦ ಕೋಟಿ ವೆಚ್ಚದಲ್ಲಿ ಮಲಪ್ರಭಾ ಅಚ್ಚುಕಟ್ಟು ಪ್ರದೇಶದಲ್ಲಿ ಕಾಲುವೆ ನಿರ್ಮಾಣ ಕಾಮಗಾರಿ ಪೂರ್ಣಗೊಂಡು ದಶಕಗಳೇ ಕಳೆದರೂ ಸಮರ್ಪಕ ನೀರು ಪೂರೈಕೆ ಸಾಧ್ಯವಾಗುತ್ತಿಲ್ಲ. ಈ ಯೋಜನೆಯಡಿ ದೊರೆಯುವ ನೀರಿನಿಂದ ಈ ಗಂಭೀರ ಸಮಸ್ಯೆಗಳ ಪರಿಹಾರ ಸಾಧ್ಯವಿದೆ.
ಈಗಾಗಲೇ ಪಟ್ಟೆಸೀಮಾ ಯೋಜನೆಯಡಿ ಗೋದಾವರಿ ನೀರನ್ನು ಕೃಷ್ಣೆಗೆ ಹರಿಸಿ ಆಂದ್ರಪ್ರದೇಶ ನದಿ ಜೋಡಣೆ ಲಾಭ ಪಡೆದುಕೊಂಡಿದೆ. ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಲ್ಲಿಯೂ ಗೋದಾವರಿ-ಕೃಷ್ಣ ಜೋಡಣೆಯ ೩ ಲಿಂಕ್‌ಗಳು ಆಂದ್ರಪ್ರದೇಶಕ್ಕೆ ಲಾಭ ತಂದುಕೊಡುತ್ತವೆ. ಪಾಲಾರ್, ಪೆನ್ನಾರ, ಕಾವೇರಿಗೆ ಯೋಜನೆಯಡಿ ನೀರು ಹರಿಸುವ ಮೂಲಕ ಮೂಲಕ ತಮಿಳುನಾಡಿಗೆ ಅತಿದೊಡ್ಡ ಪ್ರಮಾಣದ ನೀರು ಹರಿಸುವ ಸ್ಪಷ್ಟ ಗುರಿ ಈ ಯೋಜನೆಯಡಿ ಕಾಣುತ್ತಿದೆ.
ಮಧ್ಯ ಹಾಗೂ ದಕ್ಷಿಣ ಭಾರತದ ಮಹಾನದಿ, ಗೋದಾವರಿ ನದಿಗಳ ಹೇರಳವಾದ ಜಲಸಂಪನ್ಮೂಲವನ್ನು ಕೃಷ್ಣಾ, ಕಾವೇರಿ ಮೂಲಕ ದಕ್ಷಿಣ ಭಾರತದಾದ್ಯಂತ ವಿಸ್ತರಿಸಿ ಸದುಪಯೋಗಪಡಿಸಿಕೊಳ್ಳುವ ಮಹಾತ್ವಾಕಾಂಕ್ಷೆ ಈ ಯೋಜನೆಯಲ್ಲಿರುವುದರಿಂದ ಕೃಷ್ಣಾ ಮತ್ತು ಕಾವೇರಿ ಕಣಿವೆಯ ಭಾಗಿಧಾರ ಎಲ್ಲ ರಾಜ್ಯಗಳ ಹಿತ ಕಾಯ್ದರೆ ಮಾತ್ರ ಯೋಜನೆಯ ಪೂರ್ಣ ಫಲ ಪಡೆಯಬಹುದು.

ಯೋಜನೆಗೆ ಭೂಮಿ, ಸೌಕರ್ಯ ನಮ್ಮದು, ನೀರು ಮಾತ್ರ ಆಂದ್ರ-ತಮಿಳುನಾಡಿಗೆ!
ಹಂತ-೧ರಲ್ಲಿ ಮಹಾನದಿಯಿಂದ ಗೊದಾವರಿ ನದಿಗೆ ನೀರು ಹರಿಸಲು ಒಡಿಶಾ ರಾಜ್ಯದಲ್ಲಿ ಮಹಾನದಿಗೆ ಅಡ್ಡಲಾಗಿ ಮಣಿಭದ್ರಾ ಬಳಿ ಜಲಾಶಯ ನಿರ್ಮಿಸಲು ಯೋಜನೆ ರೂಪಿಸಲಾಗಿತ್ತು. ಇದರಿಂದ ೫೯,೪೦೦ ಹೆಕ್ಟೇರ್ ಭೂಪ್ರದೇಶ ಮುಳುಗಡೆಯಾಗುತ್ತದೆ ಎಂದು ಕಳವಳಗೊಂಡ ಓಡಿಶಾ ಸರ್ಕಾರ ಯೋಜನೆ ವಿರೋಧಿಸಿತ್ತು. ನಂತರ ಬರಮುಲ್ ಬಳಿ ಕಡಿಮೆ ಭೂಮಿಯನ್ನು ಉಪಯೋಗಿಸಿಕೊಂಡು ಯೋಜನೆ ಅನುಷ್ಠಾನಗೊಳಿಸಲು ಒಪ್ಪಿಗೆ ಸೂಚಿಸಿತು. ಆದರೆ ನಮ್ಮ ರಾಜ್ಯದಲ್ಲಿ ಪುನರ್‌ವಸತಿ ಮತ್ತು ಪುನರ್‌ನಿರ್ಮಾಣ ದೃಷ್ಟಿಯಿಂದ ಜಗತ್ತಿನಲ್ಲಿಯೇ ಅತಿದೊಡ್ಡ ಯೋಜನೆಯನ್ನಾಗಿಸಿ ಕಟ್ಟಿದ ಆಲಮಟ್ಟಿ ಆಣೆಕಟ್ಟು ಈ ಯೋಜನೆಯಡಿ ಪೆನ್ನಾರ್ ಕಣಿವೆ ಪ್ರದೇಶಕ್ಕೆ ನೀರು ಸಾಗಿಸಲು ಉಪಯೋಗವಾಗುತ್ತದೆ. ಆಲಮಟ್ಟಿ ಆಣೆಕಟ್ಟು ಉಪಯೋಗಿಸಿಕೊಂಡು ಯೋಜನೆ ಅನುಷ್ಠಾನಗೊಳಿಸುತ್ತಿರುವುದರಿಂದ ಆಲಮಟ್ಟಿ ಆಣೆಕಟ್ಟು ಪ್ರದೇಶ ವ್ಯಾಪ್ತಿಯ ಘಟಪ್ರಭಾ-ಮಲಪ್ರಭಾ ಕಾಡಾ ಮತ್ತು ನಾರಾಯಣಪೂರ ಕಾಡಾ ವ್ಯಾಪ್ತಿಯ ಪ್ರದೇಶಕ್ಕೆ ನೀರಾವರಿ ಸೌಲಭ್ಯ ಕಲ್ಪಿಸಲು ಅವಕಾಶ ಕಲ್ಪಿಸಬೇಕು.
ರಾಷ್ಟ್ರೀಯ ನದಿ ಜೋಡಣೆಯ ಪೆನಿನ್ಸೂಲಾರ್ ನದಿ ಜೋಡಣೆ ಯೋಜನೆಯಲ್ಲಿ ಅನುಷ್ಠಾನವಾಗಬೇಕಿದ್ದ ವರದಾ-ಬೆಡ್ತಿ ನದಿ ಜೋಡಣೆ ಸ್ಥಳಿಯರ ವಿರೋಧದಿಂದಾಗಿ ಸಾಧ್ಯತಾ ವರದಿ ಸಿದ್ದಪಡಿಸಲು ಸಾಧ್ಯವಾಗಲಿಲ್ಲ. ಮತ್ತೊಂದು ಯೋಜನೆ ಹೇಮಾವತಿ-ನೇತ್ರಾವತಿ ನದಿ ಜೋಡಣೆ ಯೋಜನೆಯನ್ನು ಕರ್ನಾಟಕ ಸರ್ಕಾರ ನೇತ್ರಾವತಿ ನದಿ ನೀರನ್ನು ಎತ್ತಿನಹೊಳೆ ಯೋಜನೆಯಡಿ ಬಳಕೆ ಮಾಡಿಕೊಳ್ಳುತ್ತಿರುವುದರಿಂದ ಪ್ರಸ್ತಾವಣೆ ನಿಂತು ಹೋಯಿತು. ಹೀಗಾಗಿ ಗೋದಾವರಿ-ಕೃಷ್ಣಾ-ಕಾವೇರಿ ನದಿ ಜೋಡಣೆ ಯೋಜನೆಯಡಿ ಮಾತ್ರ ಕರ್ನಾಟಕ ರಾಷ್ಟ್ರೀಯ ನದಿ ಜೋಡಣೆ ಯೋಜನೆಯಡಿ ಪಾಲು ಪಡೆಯಲು ಸಾಧ್ಯವಿದೆ. ಹೀಗಾಗಿ ಸರ್ಕಾರ ಈ ವಿಷಯದಲ್ಲಿ ಜಾಗೃತವಾಗಬೇಕಿದೆ.
ಪಕ್ಕದ ರಾಜ್ಯಗಳಿಗೆ ನೀರು ಸಾಗಿಸಲು ಕೇವಲ ಕಾರಿಡಾರ್ ರೂಪದಲ್ಲಿ ನಮ್ಮ ರಾಜ್ಯದ ನೀರಾವರಿ ವ್ಯವಸ್ಥೆ ಬಳಕೆ ಮಾಡಿಕೊಳ್ಳುವುದು ಆರೋಗ್ಯಕರ ಸಂಗತಿಯಲ್ಲ. ಗೋದಾವರಿ, ಕೃಷ್ಣ, ಕಾವೇರಿ ಮೂರು ನದಿ ನೀರು ಹಂಚಿಕೆಯಲ್ಲಿ ಕರ್ನಾಟಕ ಹಕ್ಕುದಾರ ರಾಜ್ಯವಾಗಿದೆ. ಕೃಷ್ಣ ಮತ್ತು ಕಾವೇರಿ ನಮ್ಮ ರಾಜ್ಯದ ಪ್ರಮುಖ ನದಿ ಕಣಿವೆಗಳು ಹೀಗಾಗಿ ನಮಗೆ ನ್ಯಾಯಯುತ ಪಾಲು ನೀಡದೇ ಈ ಯೋಜನೆ ಅನುಷ್ಠಾನಗೊಳಿಸುವುದು ಸರಿಯಲ್ಲ.
ಕಳೆದ ೬ ದಶಕಗಳಿಂದ ಕೃಷ್ಣೆಯ ಪೂರ್ಣಪ್ರಮಾಣದ ಬಳಕೆ ಸಾಧ್ಯವಾಗುತ್ತಿಲ್ಲ. ಹೀಗಾಗಿ ನಮ್ಮ ೧೩೦ ಟಿ.ಎಂ.ಸಿ. ಅಡಿ ನೀರು ಪ್ರತಿವರ್ಷ ಆಂದ್ರ-ತೆಲಂಗಾಣ ಸೇರುತ್ತಿದೆ. ವಿಪರ್ಯಾಸ ಎಂದರೆ ತಮಿಳುನಾಡಿನ ನೀರಿನ ಬವಣೆ ನೀಗಿಸಲು ೪ ರಾಜ್ಯಗಳು ಹಾಗೂ ೫ ನದಿಗಳನ್ನು ದಾಟಿ ನೀರು ಸಾಗಿಸುತ್ತಿದ್ದಾರೆ. ನಮ್ಮ ಇಚ್ಚಾಶಕ್ತಿಯ ಕೊರತೆ ನಮ್ಮನ್ನು ಹಿಂದುಳುವಿಕೆಗೆ ಕಾರಣವಾಗಿದೆ.
ದೊಡ್ಡ ಮಟ್ಟದ ಯೋಜನೆಗಳನ್ನು ಅನುಷ್ಠಾನಗೊಳಿಸುವ ಮೊದಲು ಕಾರ್ಯಸಾಧುವಾಗಬಲ್ಲ ಸಣ್ಣ-ಸಣ್ಣ ನದಿಗಳನ್ನು ಜೋಡಿಸುವ ಕಾರ್ಯ ಪ್ರಾರಂಭವಾಗಬೇಕು. ನಂತರ ದೊಡ್ಡ ಯೋಜನೆಗಳನ್ನು ಕೈಗೆತ್ತಿಕೊಂಡರೆ ರಾಷ್ಟ್ರೀಯ ನದಿ ಜೋಡಣೆ ಯೋಜನೆ ಪರಿಕಲ್ಪನೆ ಸಾಕಾರವಾಗುತ್ತದೆ. ನಮ್ಮ ಪಶ್ಚಿಮ ಘಟ್ಟದ ನದಿಗಳ ನೀರು ಸದ್ಬಳಕೆಯಾಗಲು ಕಾಳಿ ನದಿ ನೀರನ್ನು ಮಲಪ್ರಭಾ ಹಾಗೂ ಘಟಪ್ರಭಾ ನದಿಗಳಿಗೆ ಹರಿಸಲು ಸಾಧ್ಯವಿದೆ. ಕಳಸಾ-ಬಂಡೂರಿ, ಮಹಾದಾಯಿ ಯೋಜನೆಗಳು ಅಡೆತಡೆಗಳಿಂದ ಮುಕ್ತಿಹೊಂದಿ ತ್ವರಿತ ಅನುಷ್ಠಾನವಾಗಬೇಕು. ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವ ಮೂಲಕ ಅನುಷ್ಠಾನಗೊಳಿಸಿ ಉತ್ತರ ಕರ್ನಾಟಕ ಹಿತ ಕಾಯುವ ಕೆಲಸವಾಗಬೇಕು. ಗೋದಾವರಿ-ಕೃಷ್ಣಾ-ಕಾವೇರಿ ನದಿ ಯೋಜನೆಯಲ್ಲಿಯೂ ಉತ್ತರ ಕರ್ನಾಟಕದ ಕೃಷ್ಣಾ ಕಣಿವೆಗೆ ಹೆಚ್ಚಿನ ಪ್ರಾಶಸ್ತ್ಯ ದೊರೆಯದೇ ಕೃಷ್ಣಾ ಕಣಿವೆ ಮತ್ತೆ ಅನಾಥವಾದರೆ ಹೇಗೆ?
ನೀರು ಅಮೂಲ್ಯ ಸಂಪನ್ಮೂಲ. ಒದಗುವ ಸಂಪನ್ಮೂಲವನ್ನು ವೃಥಾ ಬಿಟ್ಟುಕೊಟ್ಟು ನಂತರ ಮರುಕಪಡುವ ಸಂದಿಗ್ದತೆ ನಮಗೆ ಬಾರದಿರಲಿ. ಕೇಂದ್ರದ ಮಹತ್ವಾಕಾಂಕ್ಷೆಯ ಯೋಜನೆ ಅನುಷ್ಠಾನವಾಗಿ ದಕ್ಷಿಣದ ಗಂಗೆ ಗೋದಾವರಿ ಕರ್ನಾಟಕದ ರೈತರ ಬದುಕನ್ನು ಬೆಳಗಲಿ ಎಂಬುದು ಕನ್ನಡಿಗರ ಆಶಯವಾಗಿದೆ. ರಾಜ್ಯ ಮತ್ತು ಕೇಂದ್ರದಲ್ಲಿ ಒಂದೇ ಸರ್ಕಾರವಿರುವುದರಿಂದ ರಾಜ್ಯ ಸರ್ಕಾರ ಹೇಗೆ ಈ ಅವಕಾಶವನ್ನು ಬಳಸಿಕೊಳ್ಳುತ್ತದೆ ಹಾಗೂ ಕೇಂದ್ರ ಸರ್ಕಾರ ಹೇಗೆ ಸ್ಪಂದಿಸುತ್ತದೆ ಎಂಬುದನ್ನು ಕಾದು ನೊಡೋಣ! ರಾಜ್ಯದ ಮುಖ್ಯಮಂತ್ರಿಗಳೇ ಸ್ವತಃ ಈ ಹಿಂದೆ ನೀರಾವರಿ ಸಚಿವರಾಗಿ ಕಾರ್ಯನಿರ್ವಹಿಸಿದ ಅನುಭವ ಇರುವುದರಿಂದ ಯೋಜನೆಯ ಸಾಧಕ-ಬಾಧಕಗಳನ್ನು ಅರಿವು ಅವರಿಗಿದೆ. ಹೀಗಾಗಿ ಕರ್ನಾಟಕದ ಲಾಭ-ನಷ್ಟಗಳನ್ನು ಕೇಂದ್ರಕ್ಕೆ ಅರಿವು ಮಾಡಿಕೊಟ್ಟು ನಮ್ಮ ಪಾಲಿನ ನೀರನ್ನು ಪಡೆಯುತ್ತಾರೆ ಎಂಬ ಆಶಯ ಕನ್ನಡಿಗರದ್ದಾಗಿದೆ.

 

https://pragati.taskdun.com/karnataka-news/why-not-the-beddi-varada-river-project/

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button