ಪ್ರಗತಿವಾಹಿನಿ ಸುದ್ದಿ; ನವದೆಹಲಿ: ಲೈಂಗಿಕ ದೌರ್ಜನ್ಯದ ಬಗ್ಗೆ ವಿವಾದಾತ್ಮಕ ತೀರ್ಪು ಪ್ರಕಟಿಸಿದ್ದ ಬಾಂಬೆ ಹೈಕೋರ್ಟ್ ಹೆಚ್ಚುವರಿ ನ್ಯಾಯಾಧೀಶೆ ಪುಷ್ಪಾ ಗನೇಡಿವಾಲಾ ಅಧಿಕಾರಾವಧಿ ಮುಗಿಯುವ ಮೊದಲೇ ರಾಜೀನಾಮೆ ನೀಡಿದ್ದಾರೆ.
ಫೆ.12ರಂದು ಅವರ ಅಧಿಕಾರಾವಧಿ ಮುಗಿಯಲಿದೆ. ಆದರೆ ಎರಡು ದಿನ ಮೊದಲೇ ರಾಜೀನಾಮೆ ನೀಡಿರುವುದು ಅಚ್ಚರಿಗೆ ಕರಣವಾಗಿದೆ.
ಪುಷ್ಪಾ ಅವರನ್ನು ಕಾಯಂ ನ್ಯಾಯಾಧೀಶರನ್ನಾಗಿ ಮಾಡುವ ಪ್ರಸ್ತಾಪವನ್ನು ಸುಪ್ರೀಂ ಕೋರ್ಟ್ ಕೊಲೊಜಿಯಂ ಎರಡನೇ ಬಾರಿ ತಿರಸ್ಕರಿಸಿತ್ತು. ಪುಷ್ಪಾ ಅವರನ್ನು ಬಾಂಬೆ ಹೈಕೋರ್ಟ್ ಕಾಯಂ ನ್ಯಾಯಮೂರ್ತಿಯನ್ನಾಗಿ ನೇಮಕ ಮಾಡಲು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಿದ್ದ ಕೊಲೊಜಿಯ, ಪುಷ್ಪಾ ಅವರ ವಿವಾದಾತ್ಮಕ ತೀರ್ಪು ಬಳಿಕ ಶಿಫಾರಸ್ಸನ್ನೇ ವಾಪಸ್ ಪಡೆದಿತ್ತು.
ಪುಷ್ಪಾ ಅವರು ಇಂತಹ ಪ್ರಕರಣವನ್ನು ಇನ್ನಷ್ಟು ಎದುರಿಸಬೇಕು. ವಕೀಲರಾಗಿದ್ದಾಗ ಅವರು ಇಂತಹ ಪ್ರಕರಣವನ್ನು ನಿರ್ವಹಿಸಿಲ್ಲ. ಹಾಗಾಗಿ ಅವರಿಗೆ ತರಬೇತಿ ಅಗತ್ಯವಿದೆ ಎಂದು ಕೊಲೊಜಿಯಂ ಅನಿಸಿಕೆ ವ್ಯಕ್ತಪಡಿಸಿತ್ತು.
ಬಟ್ಟೆ ಮೇಲಿಂದ ಬಾಲಕಿಯ ಅಂಗಾಂಗ ಮುಟ್ಟುವುದು ಪೋಸ್ಕೋ ಕಾಯ್ದೆಯಡಿ ಅಪರಾಧವಲ್ಲ, ಚರ್ಮದಿಂದ ಚರ್ಮಕ್ಕೆ ಸ್ಪರ್ಷವಾದಾಗ ಮಾತ್ರ ಲೈಂಗಿಕ ದೌರ್ಜನ್ಯ ಎಂದು ಪುಷ್ಪಾ ಗನೇಡಿವಾಲಾ ತೀರ್ಪು ನೀಡಿದ್ದರು. ಈ ತೀರ್ಪು ಭಾರಿ ವಿವಾದಕ್ಕೆ ಕಾರಣವಾಗಿತ್ತು.
ಐದು ವರ್ಷದ ಬಾಲಕಿಯ ಕೈ ಹಿಡಿದು ಆಕೆಯಿಂದ 51 ವರ್ಷದ ವ್ಯಕ್ತಿಯೊಬ್ಬ ತನ್ನ ಪ್ಯಾಂಟ್ ಜಿಪ್ ಬಿಚ್ಚಿಸಿಕೊಂಡದ್ದು ಕೂಡ ಪೋಸ್ಕೋದಡಿ ಲೈಂಗಿಕ ದೌರ್ಜನ್ಯ ಎನಿಸಿಕೊಳ್ಳುವುದಿಲ್ಲ ಎಂದು ತೀರ್ಪು ನೀಡಿ, ಆರೋಪಿಯೊಬ್ಬನನ್ನು ಖುಲಾಸೆಗೊಳಿಸಿದ್ದರು. ಇಂತಹ ತೀರ್ಪುಗಳು ಅಪಾಯಕಾರಿ ಇತಿಹಾಸ ಸೃಷ್ಟಿಸುತ್ತವೆ ಎಂದು ಅಟಾರ್ನಿ ಜನರಲ್ ಕೆ.ಕೆ. ವೇಣುಗೋಪಾಲ್ ವಾದಿಸಿದ ಹಿನ್ನೆಲೆಯಲ್ಲಿ ಜ.27ರಂದು ಪುಷ್ಪಾ ನೀಡಿದ್ದ ತೀರ್ಪಿಗೆ ಸುಪ್ರೀಂಕೋರ್ಟ್ ತಡೆ ನೀಡಿತ್ತು.
ಯುವತಿಗೆ ಸಹಾಯ ಮಾಡುವುದಾಗಿ ನಂಬಿಸಿ ಮಾರಾಟಕ್ಕೆ ಯತ್ನ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ