Kannada NewsLatestPolitics

ಪ್ರತಿ ವರ್ಷ 3 ಲಕ್ಷ ಮಕ್ಕಳಲ್ಲಿ ಕ್ಯಾನ್ಸರ್ – ಡಾ.ಎಂ.ವಿ.ಜಾಲಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ: ಕ್ಯಾನ್ಸರ್ ರೋಗವನ್ನು ಪ್ರಥಮ ಹಂತದಲ್ಲಿರುವಾಗಲೇ ಪತ್ತೆ ಹಚ್ಚಿ, ಚಿಕಿತ್ಸಾ ಕೇಂದ್ರದಲ್ಲಿ ಸೂಕ್ತ ಚಿಕಿತ್ಸೆ ಪಡೆದರೆ ಗುಣಪಡಿಸಲು ಸಾಧ್ಯವಿದೆ. ಮುಖ್ಯವಾಗಿ ಎಲ್ಲ ಮಕ್ಕಳಿಗೂ ಚಿಕಿತ್ಸೆ ಲಭಿಸಲು ಅನುಕೂಲವಾಗುವದಕ್ಕೆ ಪ್ರಥಮ ಹೆಜ್ಜೆಯಾಗಿ ಜಾಗೃತಿ ಮೂಡಿಸುವದು. ಆರೋಗ್ಯ ಕಾರ್ಯಕರ್ತರು ಮನೆಮನೆಗೆ ತೆರಳಿ ಪಾಲಕ ಮತ್ತು ಮಕ್ಕಳಿಗೆ ರೋಗದ ಬಗ್ಗೆ ಜಾಗೃತಿ ಮೂಡಿಸಬೇಕು. ವಿದೇಶಗಳಲ್ಲಿ ಶೇ.80ರಷ್ಟು ಮಕ್ಕಳು ಗುಣಮುಖರಾಗುತ್ತಿದ್ದಾರೆ. ಅಭಿವೃದ್ದಿ ಹೊಂದುತ್ತಿರುವ ದೇಶಗಳಲ್ಲಿ ಭಾರತವೂ ಸೇರಿದಂತೆ ಶೇ.50ಕ್ಕಿಂತ ಕಡಿಮೆ ಮಕ್ಕಳು ಗುಣಮುಖರಾಗುತ್ತಿದ್ದಾರೆ ಎಂದು ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕರಾದ ಡಾ. ಎಂ ವಿ ಜಾಲಿ ಹೇಳಿದರು.

ಅಂತರಾಷ್ಟ್ರೀಯ ಬಾಲ್ಯ ಕ್ಯಾನ್ಸರ್ ದಿನಾಚರಣೆ ಅಂಗವಾಗಿ ಕೆಎಲ್‌ಇ ಸಂಸ್ಥೆಯ ಡಾ. ಪ್ರಭಾಕರ ಕೋರೆ ಆಸ್ಪತ್ರೆ ಹಾಗೂ ವೈದ್ಯಕೀಯ ಸಂಶೋಧನಾ ಕೆಂದ್ರದಲ್ಲಿ ಚಿಕ್ಕಮಕ್ಕಳ ಕ್ಯಾನ್ಸರ್ ವಿಭಾಗವು ಏರ್ಪಡಿಸಿದ್ದ ಜಾಗೃತಿ ಸಮಾರಂಭದಲ್ಲಿ ಮಾತನಾಡಿದ ಅವರು, ವಿಶ್ವದಾದ್ಯಂತ ಸುಮಾರು 3 ಲಕ್ಷ ಮಕ್ಕಳಲ್ಲಿ ಪ್ರತಿ ವರ್ಷ ಕ್ಯಾನ್ಸರ್ ರೋಗದ ಪ್ರಕರಣಗಳು ಬೆಳಕಿಗೆ ಬರುತ್ತಿವೆ. ಈ ಪೈಕಿ ಭಾರತ ದೇಶದಲ್ಲಿಯೇ 85 ಸಾವಿರ ಮಕ್ಕಳು ಕ್ಯಾನ್ಸರ್‌ನಿದ ಬಳಲುತ್ತಿರುವದು ಸಮೀಕ್ಷೆಯಿಂದ ತಿಳಿದುಬಂದಿದೆ. ಕಳೆದ 10 ವರ್ಷಗಳಲ್ಲಿ ಇದು ದ್ವಿಗುಣಗೊಂಡಿದೆ ಇದು ಅತ್ಯಂತ ಕಳವಳಕಾರಿ ಎಂದು ಆತಂಕ ವ್ಯಕ್ತಪಡಿಸಿದರು.

ರೋಗ ಪತ್ತೆ ಮಾಡುವಲ್ಲಿ ವಿಳಂಬ, ಕೈಗೆಟುಕದ ಚಿಕಿತ್ಸಾ ಕೇಂದ್ರಗಳು, ಅರ್ಧದಲ್ಲಿಯೇ ಚಿಕಿತ್ಸೆಯನ್ನು ನಿಲ್ಲಿಸುವದರಿಂದ ಪ್ರಾಣಾಪಾಯದಂತ ಸಮಸ್ಯೆಗಳು ಬಂದೆರಗುತ್ತವೆ. ಈ ಹಿಂದೆ ಕುಷ್ಠರೋಗ ಅತ್ಯಂತ ಮಾರಕವಾಗಿತ್ತು. ಈಗ ಅದು ನಿರ್ಮೂಲನೆ ಹಂತ ತಲುಪಿದೆ. ಕ್ಯಾನ್ಸರಗಿಂತ ಆದ್ದರಿಂದ ನಿಯಮಿತವಾಗಿ ಚಿಕಿತ್ಸೆ ಪಡೆಯಬೇಕು. ಮುಂದಿನ ದಿನಗಳಲ್ಲಿ ನಮ್ಮದೇ ಆದ ಅತ್ಯಾಧುನಿಕ ವೈದ್ಯಕೀಯ ಸಲಕರಣೆಯುಳ್ಳ ಕ್ಯಾನ್ಸರ್ ಆಸ್ಪತ್ರೆ ಕರ‍್ಯನಿರ್ವಹಿಸಲಿದೆ. ಇದರಿಂದ ಕ್ಯಾನ್ಸರಗೆ ಅವಶ್ಯವಿರುವ ಅನೇಕ ವಿಧವಾದ ಚಿಕಿತ್ಸೆಗಳು ಒಂದೆ ಸೂರಿನಲ್ಲಿ ಸಿಗಲಿವೆ ಎಂದು ತಿಳಿಸಿದರು.

ಜೆಎನ್ ವೈದ್ಯಕೀಯ ಮಹಾವಿದ್ಯಾಲಯದ ಪ್ರಾಚಾರ‍್ಯರಾದ ಡಾ. ಎನ್ ಎಸ್ ಮಹಾಂತಶೆಟ್ಟಿ ಅವರು ಮಾತನಾಡಿ, ಕಳೆದ ಮೂವತ್ತು ವರ್ಷಗಳಿಂದ ಚಿಕ್ಕಮಕ್ಕಳಲ್ಲಿರುವ ಕ್ಯಾನ್ಸರಗೆ ಚಿಕಿತ್ಸೆ ನೀಡಲಾಗುತ್ತಿದೆ. ಆದರೆ ಈಗಿನಂತೆ ಅತ್ಯಾಧುನಿಕ ಚಿಕಿತ್ಸಾ ಕ್ರಮಗಳಿಲ್ಲದೇ ಮಕ್ಕಳು ಬದುಕುಳಿವ ಸಾಧ್ಯತೆ ಕಡಿಮೆ ಇತ್ತು. ಆದರೆ ಈಗ ಸುಲಭ ಚಿಕಿತ್ಸೆ ಲಭಿಸುತ್ತಿರುವದರಿಂದ ಗುಣಮುಖಪಡಿಸಲು ಸಾಧ್ಯವಿದೆ. ಕರ್ಚುವೆಚ್ಚ ಭರಿಸಲು ಸಂಘಸಂಸ್ಥೆಗಳಿವೆ ಅವುಗಳ ಸದುಪಯೋಗವನ್ನು ಪಡೆದುಕೊಂಡು ಮಕ್ಕಳನ್ನು ಆರೈಕೆ ಮಾಡಬೇಕು. ಮಕ್ಕಳ ಆರೈಕೆಯು ಅತ್ಯಂತ ಸೂಕ್ಷ್ಮವಾಗಿದ್ದು ಅವರನ್ನು ಅರಿತುಕೊಂಡು ಚಿಕಿತ್ಸೆ ನೀಡುವದು ಕಠಿಣ. ಆದರೂ ಕೂಡ ಇಲ್ಲಿ ಅತ್ಯುತ್ತಮವಾದ ಚಿಕಿತ್ಸೆ ಲಭಿಸುತ್ತದೆ ಎಂದು ಹೇಳಿದರು.

ಚಿಕ್ಕಮಕ್ಕಳ ಹಿರಿಯ ತಜ್ಞವೈದ್ಯರಾದ ಡಾ. ವಿ ಡಿ ಪಾಟೀಲ ಅವರು ಮಾತನಾಡಿದರು. ಬಾಲ ಕ್ಯಾನ್ಸರ್ ತಜ್ಞವೈದ್ಯರಾದ ಡಾ. ಅಭಿಲಾಷಾ ಸಂಪಗಾರ ಅವರು ಮಾತನಾಡಿದರು. ವೇದಿಕೆ ಮೇಲೆ ಡಾ. ವಿಶ್ವನಾಥ ಪಟ್ಟಣಶೆಟ್ಟಿ, ಡಾ. ಆರಿಫ್ ಮಾಲ್ದಾರ, ಡಾ. ಸುಜಾತಾ ಜಾಲಿ, ಡಾ. ಮನಿಷಾ ಭಾಂಡನಕರ, ಡಾ. ತನ್ಮಯಾ ಮೆಟಗುಡ್ ಉಪಸ್ಥಿತರಿದ್ದರು. ಡಾ. ರೋಹನ ಭಿಸೆ, ಡಾ. ಭಾವನಾ ಕೊಪ್ಪದ ಸೇರಿದಂತೆ ಮುಂತಾದವರು ಸಮಾರಂಭದಲ್ಲಿ ಉಪಸ್ಥಿತರಿದ್ದರು. ಡಾ. ಗೋಪಿಕಾ ನಿರೂಪಿಸಿದರು.

ಕೆಎಲ್ಇ, ಕೇಂದ್ರ ಸರ್ಕಾರ – ಮಹತ್ವದ ಒಪ್ಪಂದ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button