ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಕಾಂಗ್ರೆಸ್ ನಾಯಕರ ಧರಣಿ, ಗದ್ದಲ, ಗಲಾಟೆಯಿಂದ ರಾಜ್ಯಾದ್ಯಂತ ಪ್ರಕ್ಷುಬ್ದ ವಾತಾವರಣ ಸೃಷ್ಟಿಯಾಗಿದ್ದು, ವಿಪಕ್ಷದ ಗದ್ದಲವೇ ಹರ್ಷನ ಕೊಲೆಗೆ ಕಾರಣವಾಗಿದೆ ಎಂದು ಸಿಎಂ ಬಸವರಾಜ್ ಬೊಮ್ಮಾಯಿ ಆರೋಪಿಸಿದ್ದಾರೆ.
ವಿಧಾನಸಭೆಯಲ್ಲಿ ಇಂದು ಕೂಡ ಕಾಂಗ್ರೆಸ್ ಸದಸ್ಯರು ಸಚಿವ ಈಶ್ವರಪ್ಪ ರಾಜೀನಾಮೆಗೆ ಆಗ್ರಹಿಸಿ ಪಟ್ಟು ಹಿಡಿದ ಬೆನ್ನಲ್ಲೇ ಆಡಳಿತ ಹಾಗೂ ವಿಪಕ್ಷ ಸದಸ್ಯರ ನಡುವೆ ವಾಕ್ಸಮರ ಆರಂಭವಾಗಿದ್ದು, ಈ ವೇಳೆ ಮಾತನಾಡಿದ ಸಿಎಂ ಬಸವರಾಜ್ ಬೊಮ್ಮಾಯಿ, ಕಾಂಗ್ರೆಸ್ ವಿರುದ್ಧ ವಾಗ್ದಾಳಿ ನಡೆಸಿದರು.
ವಿಪಕ್ಷ ಕಾಂಗ್ರೆಸ್ ನಾಯಕರ ಗದ್ದಲ, ಗಲಾಟೆಯಿಂದ ರಾಜ್ಯಾದ್ಯಂತ ಪ್ರಕ್ಷುಬ್ದ ವಾತಾವರಣ ನಿರ್ಮಾಣವಾಗಿದೆ. ಯುವಕ ಹರ್ಷನ ಹತ್ಯೆಗೂ ಕಾಂಗ್ರೆಸ್ ಗದ್ದಲವೇ ಕಾರಣ. ಸದನದಲ್ಲಿ ರಾಜ್ಯದ ಜನರ ಸಮಸ್ಯೆ, ಅಭಿವೃದ್ಧಿ ಕುರಿತಾಗಿ ಚರ್ಚೆಯಾಗಬೇಕು. ಚರ್ಚೆ ನಡೆಸಲು ಸಾಕಷ್ಟು ವಿಷಯಗಳಿವೆ ಆದರೆ ಕಾಂಗ್ರೆಸ್ ನಾಯಕರು ಯಾವುದೇ ಚರ್ಚೆಗೂ ಅವಕಾಶ ನೀಡುತ್ತಿಲ್ಲ. ಕಾಂಗ್ರೆಸ್ ಸದಸ್ಯರ ವರ್ತನೆ ರಾಜ್ಯದ ಇತಿಹಾಸಕ್ಕೆ ಕಪ್ಪುಚುಕ್ಕೆಯಾಗಿದೆ ಎಂದು ಗುಡುಗಿದರು.
ಕಾಂಗ್ರೆಸ್ ನಾಯಕರ ಧರಣಿ, ಪ್ರತಿಭಟನೆಗಳಿಂದ ಪ್ರಚೋದಿತರಾಗಿ ಶಿವಮೊಗ್ಗದಲ್ಲಿ ಷಡ್ಯಂತ್ರದಿಂದ ಬಜರಂಗದಳ ಕಾರ್ಯಕರ್ತನ ಹತ್ಯೆಯಾಗಿದೆ. ರಾಜ್ಯದಲ್ಲಿ ಉಂಟಾಗಿರುವ ಪ್ರಕ್ಷುಬ್ದ ವಾತಾವರಣವನ್ನು ಸರಿಪಡಿಸುವುದು ನಮ್ಮೆಲ್ಲರ ಜವಾಬ್ದಾರಿ. ಇನ್ನಾದರೂ ಧರಣಿ ಕೈಬಿಟ್ಟು ಶಾಂತಿ-ಸುವ್ಯವಸ್ಥೆ ಕಾಪಾಡಲು ಸಹಕರಿಸಿ. ಹಿಜಾಬ್ ವಿಚಾರದಲ್ಲಿ ಹೈಕೋರ್ಟ್ ಮಧ್ಯಂತರ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳಿ. ಸದನದಲ್ಲಿ ಜನರ ಸಮಸ್ಯೆಗಳ ಕುರಿತಾಗಿ ಚರ್ಚೆ ನಡೆಸಲು ಅವಕಾಶ ನೀಡಿ ಎಂದು ಹೇಳಿದರು.
ರಾಜ್ಯಪಾಲರನ್ನು ಭೇಟಿಯಾದ ಸಚಿವ ಈಶ್ವರಪ್ಪ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ