Latest

ಹಿರಿಯ ನ್ಯಾಯವಾದಿ, ರೈತ ಮುಖಂಡ ಬಿ.ಪಿ. ಶೇರಿ ನಿಧನ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಹಿರಿಯ ನ್ಯಾಯವಾದಿ ಹಾಗೂ ರೈತ ಮುಖಂಡ ಬಿ.ಪಿ. ಶೇರಿ ನಿಧನರಾಗಿದ್ದಾರೆ.
ಶೇರಿಯವರ ಕುರಿತು ರೈತ ಮುಖಂಡ ಸಿದಗೌಡ ಮೋದಗಿ ಅವರ ನುಡಿನಮನ ಇಲ್ಲದೆ:
ಕಳೆದ 30 ವರ್ಷಗಳಿಂದ ಬೆಳಗಾವಿಯ ನ್ಯಾಯವಾದಿಗಳಾಗಿ ರಾಷ್ಟೀಯ ರೈತ ಸಂಘದ ಸಂಸ್ಥಾಪಕ ಅಧ್ಯಕ್ಷರಾಗಿ ಬಿ.ಪಿ.ಶೇರಿ ಕೆಲಸ ಮಾಡಿದ್ದರು. ತಮ್ಮ ಜೀವನದಲ್ಲಿ ವಕೀಲಿ ವೃತ್ತಿಗಿಂತ ರೈತರ ನ್ಯಾಯಬದ್ದ ಹೋರಾಟಗಳಿಗೆ ಕಾನೂನಾತ್ಮಕ ಜೀವತುಂಬುವ ಮೂಲಕ ರೈತರ ಹೋರಾಟಗಳಿಗೆ ದೊಡ್ಡ ಶಕ್ತಿಯಾಗಿದ್ದರು.
 ಕರ್ನಾಟಕ ರಾಜ್ಯದಲ್ಲಿ ಕಬ್ಬು ಬೆಳೆಗಾರರಿಗೆ ಸತತವಾಗಿ ಅನ್ಯಾಯವಾಗುವುದನ್ನು ಸಹಿಸದ ಇವರು ಕಾನೂನಾತ್ಮಕವಾಗಿ ಹೋರಾಟವನ್ನು ಪ್ರಾರಂಭಿಸಿದ್ದರು. ಇದರಿಂದ ರಾಜ್ಯದ ಖಾಸಗಿ ಮತ್ತು ಸಹಕಾರಿ ರಂಗದ ಸಕ್ಕರೆ ಕಾರ್ಖಾನೆ ಮಾಲೀಕರಿಗೆ ಸಿಂಹ ಸ್ವಪ್ನವಾಗಿದ್ದರು.
 ಕಳೆದ 2013-14 ರಲ್ಲಿ   “ಕಬ್ಬು (ಖರೀದಿ ಮತ್ತು ಸರಬರಾಜು ನಿಯಂತ್ರಣ) ಅಧಿನಿಯಮ 2013” ಜಾರಿಗೆ ಬಂದ ನಂತರ   ನಾವೆಲ್ಲಾ ಪ್ರತಿವಾದಿಗಳಾಗಿ ರಾಜ್ಯ ಹೈಕೋರ್ಟನಲ್ಲಿ ಭಾಗವಹಿಸಿ  ಬಿ ಪಿ ಶೇರಿ ಅವರ ಸಮರ್ಥವಾದ ಮಂಡನೆಯಾಗಿ ಸಕ್ಕರೆ ಕಾರ್ಖಾನೆ ಮಾಲೀಕರ ಮನಾಯಿ ಅರ್ಜಿಯನ್ನು ವಜಾಗೊಳಿಸಿ ಹೈಕೋರ್ಟ ರೈತರ ಪರವಾಗಿ ಸಲ್ಲಿಸಿದ ಅರ್ಜಿಯನ್ನು ಎತ್ತಿ ಹಿಡಿಯಿತು.
ಇಷ್ಟಕ್ಕೆ ಮುಗಿಯದೆ ಸರ್ವೋಚ್ಚ ನ್ಯಾಯಾಲದಲ್ಲಿ  ಕೂಡಾ ಸಮರ್ಥವಾಗಿ ಮತ್ತು ಅಷ್ಟೇ ಗೌರವಯುತವಾಗಿ ನ್ಯಾಯಪಾಲನೆ ನಿಭಾಯಿಸುತ್ತಿದ್ದರು.
 ಈ ಸಂದರ್ಭದಲ್ಲಿ ಒಂದು ವಿಷಯ ನೆನಪಾಗುತ್ತದೆ, ರೈತ ಹೋರಾಟಗಾರರು ಹಾಗು ಮಾಜಿ ಕೇಂದ್ರ ಸಚಿವರಾದ ಬಾಬಾಗೌಡರಿಗೆ  ಸಭೆಯಲ್ಲಿ ಚರ್ಚೆಗೆ ಕಬ್ಬು ವಿಷಯ ಕಗ್ಗಂಟಾಗಿತ್ತು. ಆಗ  ಬಾಬಾಗೌಡರಿಗೆ ಪ್ರಮಾಣ ಮಾಡಿ ಹೇಳಿದರು, ಏನೆಂದರೆ, ” ರೈತರಿಗೆ ಕರ್ಖಾನೆಯಿಂದ ಬರಬೇಕಾದ ನ್ಯಾಯ ಸಮ್ಮತ ಬಾಕಿಹಣ ಸಂದಾಯವಾಗುವರೆಗೆ ಸಿಹಿ ಮತ್ತು ಸಕ್ಕರೆ ಎರಡನ್ನು ಮುಟ್ಟುವದಿಲ್ಲಾ ಎಂದು ಆ ಹೊತ್ತು ಸಂಕಲ್ಪ ಮಾಡಿದ್ದರು ” ಆದರೆ ಇವತ್ತಿನವರೆಗೆ ಅವರು ಸಿಹಿ ಮುಟ್ಟಲಿಲ್ಲಾ, ರೈತರ ಪರವಾಗಿ ಹೋರಾಟ ಮಾಡಿ ಅವರ ಕೊನೆ ಆಸೆ ಈಡೇರದೆ  ತೀವ್ರ ಹೃದಯಾಘಾತದಿಂದ ಕೊನೆಯುಸಿರೆಳಿದರು.
ಅವರಿಗೆ ತೀವ್ರವಾದ ಹೃದಯ ಕಾಯಿಲೆ ಇದೆಯೆಂದು ಗೊತ್ತಾಗಿ ವೈದ್ಯರಿಂದ ಚಿಕಿತ್ಸೆ ಪಡೆಯುತ್ತಿದ್ದರೂ ಕೂಡಾ ತಮ್ಮ ಹೃದಯ ಕಾಯಿಲೆಯ ಬಗ್ಗೆ ಎಲ್ಲೂ ಚಿಂತಿಸುತ್ತಿಲಿಲ್ಲಾ. ಇದೊಂದು ಅವರ ಹೋರಾಟದ ದೊಡ್ಡ ಗುಣವೆಂದೆ ಹೇಳಬಹುದು.  ಹೋರಾಟದಲ್ಲಿ ತಪ್ಪು ಮಾಡಿದ್ದರೆ ಕರೆದು ಬೈದು ಬುದ್ದಿ ಹೇಳುತ್ತಿದ್ದರು. ಆದರೆ ಅಂತಹ ರೈತ ಹಿರಿಯ ಚೇತನ ಇವತ್ತು ನಮ್ಮಿಂದ ಅಗಲಿ ಬಾರದ ಲೋಕಕ್ಕೆ ಹೋಗಿದ್ದಾರೆ. ಅವರ ಪಾರದರ್ಶಕ ನಿಷ್ಟೆ, ಸಮಾಜ ಸೇವೆ ದೇವರಿಗೆ ಇಷ್ಟವಾಗಲಿಲ್ಲವೆನೋ ಎಂಬುದು ನನ್ನ ಅನಿಸಿಕೆ.
       ಕೊನೆಯದಾಗಿ ನನಗೆ ಅವರೊಂದಿಗೆ ಹೋರಾಟದಲ್ಲಿ ಗುರುತಿಸಿಕೊಂಡಾಗಿನಿಂದ ಪದೆ ಪದೆ ಒಂದು ಮಾತು ಹೇಳುತ್ತಿದ್ದರು, ರಸ್ತೆ ಮೇಲೆ ಕುಳಿತು ಹೋರಾಟ ಮಾಡಿದರೆ ಯಾರು ರೈತರಿಗೆ ಹಣ ಕೊಡುವುದಿಲ್ಲಾ. ಕಾನೂನಾತ್ಕ ಹೋರಾಟವೆ ಮದ್ದು. ಇದರಿಂದ ಅವರ ಬೆಂಬಲಕ್ಕೆ ನಿಂತ ಸರ್ಕಾರಕ್ಕೂ ಮದ್ದು ನೀಡಿದಂತಾಗುತ್ತದೆ ಎಂದು ಹೇಳುತ್ತಿದ್ದರು. ಅದೆ ರೀತಿಯಾಗಿ ಅವರ ಕಠಿಣ ನಿಲುವಿನಿಂದ ಎಲ್ಲಾ ನ್ಯಾಯಾಲಯಗಳಲ್ಲೂ ನ್ಯಾಯವನ್ನು ಗೆದ್ದುಕೊಂಡಿದ್ದಾರೆ, ದುರ್ದೈವವಶಾತ ಸಕ್ಕರೆ ಕಾರ್ಖಾನೆ ಮಾಲೀಕರು ನ್ಯಾಯಾಲಯದ ಆದೇಶಕ್ಕೂ ಬೆಲೆ ನೀಡದೆ ಇನ್ನೂ ರೈತರಿಗೆ ನ್ಯಾಯಸಮ್ಮತವಾಗಿ  ಬರಬೇಕಾದ ಕಬ್ಬು ಬಾಕಿ ಹಣ ನೀಡದೆ ವಂಚಿಸುತ್ತಿದ್ದಾರೆ.
      ಆದರೆ ಒಂದಂತು ನಿಜ ರೈತರಿಗೆ ಬರಬೇಕಾದ ಕಬ್ಬು ಬಾಕಿ ಹಣ ಸಂದಾಯವಾಗುವವರೆಗೆ ಅವರ ಆತ್ಮಕ್ಕೆ ಶಾಂತಿ ಸಿಗುವುದಿಲ್ಲಾ ಅನ್ನುವುದು ನನ್ನ ವಯಕ್ತಿಕ ಅಭಿಪ್ರಾಯ.
    ಬಿ ಪಿ ಶೇರಿ ಯವರ ನಿಧನದಿಂದಾಗಿ ಎಲ್ಲಾ ರೈತಪರ  ಸಂಘಟನೆಗಳಿಗೆ ತುಂಬಲಾರದಂತಹ ನಷ್ಟವಾಗಿದೆ ಎಂದರೆ ತಪ್ಪಾಗಲಾರದು. ರೈತರ ಬಗ್ಗೆ ಅವರ ಕಾಳಜಿ, ಸಮಾಜ ಸೇವೆ, ಪಾರದರ್ಶಕವಾದ ನಿಲುವು, ಕಾರ್ಖಾನೆಗಳ ವಿರುದ್ದ ಅವರ ಕಠಿಣ ನಿಲುವು ಇವೆಲ್ಲಾ ನಮ್ಮ ಕಾನೂನಾತ್ಮಕ  ಹೋರಾಟಗಳಿಗೆ ಪುಷ್ಠಿ ನೀಡುವಂತಿದ್ದು, ಮುಂದಿನ ದಿನಗಳಲ್ಲಿ ಅವರಿಲ್ಲದ ಹೋರಾಟಗಳು  ಏನು ಎಂಬ ಚಿಂತೆ ನನ್ನನ್ನು ಕಾಡಲಾರಂಭಿಸಿದೆ.
       ಇಷ್ಟೆಲ್ಲಾ ವಿಚಾರಗಳನ್ನು ಇವತ್ತು ಹಂಚಿಕೊಳ್ಳಲು ಕಾರಣವೆನೆಂದರೆ ಅವರ ಅಂತ್ಯ ಸಂಸ್ಕಾರ ಸಮಯದಲ್ಲಿ  ನನಗೆ ಅವರ ವಿಚಾರ ಹೇಳಲು ಅವಕಾಶ ಕೊಟ್ಟರು. ಆದರೆ ಅವರ ವಿಚಾರಗಳು ನನಗೆ ಗೊತ್ತಿದ್ದ ಕಾರಣ ತುಂಬಾ ಭಾವುಕನಾಗಿ ಮಾತೆ ಬರಲಿಲ್ಲಾ. 
ಬಿ. ಪಿ. ಶೇರಿಯವರ ನಿಧನ ಸಕ್ಕರೆ ಕಾರ್ಖಾನೆ ಮಾಲೀಕರಿಗೆ (ಸಿಸ್ಮಾ ) ತಿಳಿದರೆ  ಅವರೆಲ್ಲಾ ಒಟ್ಟಿಗೆ ಕುಳಿತು “ಹಾಲು- ಸಕ್ಕರೆ” ಬೆರೆಸಿ ಕುಡಿಯಬಹುದು ಎಂಬ ನನ್ನ ಕೊನೆಯ ಅನಿಸಿಕೆ.
    ಎರಡು ಹೆಣ್ಣು ಮಕ್ಕಳು, ಎರಡು ಗಂಡು ಮಕ್ಕಳು, ಹೆಂಡತಿ, ಅಳಿಯಂದಿರು  ಅಪಾರ ಬಂಧುಬಳಗವನ್ನು ಅಗಲಿದ್ದಾರೆ. ಅವರ ದುಃಖತಪ್ತ ಕುಂಟುಂಬದ ದುಃಖದಲ್ಲಿ ನಾವು ಭಾಗಿಗಳಾಗಿ ಭಗವಂತನು ಅವರ ಕುಟುಂಬಕ್ಕೆ ದುಃಖಭರಿಸುವ ಶಕ್ತಿಯನ್ನು  ದಯಪಾಲಿಸಲೆಂದು ಭಾರತೀಯ ಕೃಷಿಕ ಸಮಾಜ(ಸಂ)ರೈತ ಸಂಘಟನೆಯ ಸಮಸ್ತ ಪದಾಧಿಕಾರಿಗಳ ವತಿಯಿಂದ ಭಗವಂತನಲ್ಲಿ ಪ್ರಾರ್ಥಿಸುತ್ತೇವೆ.
        ಅಂತ್ಯ ಸಂಸ್ಕಾರದಲ್ಲಿ ಬೆಳಗಾವಿ,ಬಾಗಲಕೊಟ ಹಾಗು ಸುತ್ತಲಿನ ಗ್ರಾಮಗಳ ರೈತರು, ರೈತ ಮುಖಂಡರು, ಬೆಳಗಾವಿ ಹಿರಿಯ ಮತ್ತು ಕಿರಿಯ ನ್ಯಾಯವಾದಿಗಳು, ಅವರ ಅಪಾರ ಬಂಧು-ಬಳಗ ಭಾಗವಹಿಸಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button