ಪ್ರಗತಿವಾಹಿನಿ ಸುದ್ದಿ; ಕೊಚ್ಚಿ: ಮಲಯಾಳಂ ಖ್ಯಾತ ನಟ ದಿಲೀಪ್ ಗೆ ಸಂಕಷ್ಟ ಎದುರಾಗಿದೆ. ಖ್ಯಾತ ನಟಿ ಮೇಲೆ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚಿನ ತನಿಖೆಗೆ ತಡೆ ನೀಡುವಂತೆ ಕೋರಿ ಕೇರಳ ಹೈಕೋರ್ಟ್ ಗೆ ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ.
ನಟ ದಿಲೀಪ್ ಅರ್ಜಿ ವಜಾಗೊಳಿಸಿರುವ ಕೇರಳ ಹೈಕೋರ್ಟ್, ತನಿಖೆ ಚುರುಕುಗೊಳಿಸಿ, ಏಪ್ರಿಲ್ 15ರೊಳಗೆ ಮುಕ್ತಾಯಗೊಳಿಸುವಂತೆ ಸೂಚಿಸಿದೆ.
ಪ್ರಸ್ತುತ ತನಿಖೆಯಲ್ಲಿ ಒಬ್ಬರನ್ನು ಮಾತ್ರ ವಿಚಾರಣೆಗೆ ಒಳಪಡಿಸಲು ಬಾಕಿಯಿರುವುದರಿಂದ ಆ ಪ್ರಕರಣದ ಮುಂದಿನ ತನಿಖೆಗೆ ಅವಕಾಶ ನೀಡಬಾರದು ಎಂದು ದಿಲೀಪ್ ಪರ ವಾದಿಸಿದ್ದರು. ಅವರ ಮನವಿಯನ್ನು ವಿರೋಧಿಸಿ, ಪೊಲೀಸರ ಪರ ವಾದ ಮಂಡಿಸಿದ ಪ್ರಾಸಿಕ್ಯೂಷನ್ ಡೈರೆಕ್ಟರ್ ಜನರಲ್ (ಡಿಜಿಪಿ) ಟಿಎ.ಶಾಜಿ ಮತ್ತು ಹೆಚ್ಚುವರಿ ಪಬ್ಲಿಕ್ ಪ್ರಾಸಿಕ್ಯೂಟರ್ ಪಿ.ನಾರಾಯಣನ್ 2017ರಲ್ಲಿ ನಟಿ ಮೇಲಿನ ಹಲ್ಲೆ ಪ್ರಕರಣದಲ್ಲಿ ಹೆಚ್ಚಿನ ತನಿಖೆ ನಡೆಸಲು ಯಾವುದೇ ಕಾನೂನು ಅಡ್ಡಿಯಿಲ್ಲ ವಿಚಾರಣೆ ಕೊನೆಯ ಹಂತದಲ್ಲಿದೆ. ಹಾಗಾಗಿ ಪೂರ್ವಾನುಮತಿ ಅಗತ್ಯವಿಲ್ಲ ಎಂದು ವಾದಿಸಿದ್ದರು. ವಾದ-ಪ್ರತಿವಾದ ಆಲಿಸಿದ ನ್ಯಾ.ಕೌಸರ್ ಎಡಪ್ಪಗತ್, ನಟನ ವಿರುದ್ಧ ತನಿಖೆ ಮುಂದುವರೆಸುವಂತೆ ಆದೇಶ ನೀಡಿದ್ದಾರೆ.
ಫೆ.17, 2017ರಲ್ಲಿ ಖ್ಯಾತ ನಟಿಯನ್ನು ಅಪಹರಿಸಿ ದೌರ್ಜನ್ಯ ನಡೆಸಲಾಗಿತ್ತು. ಅಲ್ಲದೇ ವಿಡಿಯೋ ಚಿತ್ರೀಕರಿಸಿ ಬ್ಲ್ಯಾಕ್ ಮೇಲ್ ಗು ಆರೋಪಿಗಳು ಮುಂದಾಗಿದ್ದರು. ಕೃತ್ಯದ ಹಿಂದೆ ನಟ ದಿಲೀಪ್ ಕೈವಾಡವಿದೆ ಎಂದು ಆರೋಪಿಸಲಾಗಿತ್ತು. ಪ್ರಕರಣಕ್ಕೆ ಸಂಬಂಧಿಸಿದಂತೆ ನಟ ದಿಲೀಪ್ ಸೇರಿದಂತೆ 7 ಆರೋಪಿಗಳನ್ನು ಪೊಲೀಸರು ಬಂಧಿಸಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ