Kannada NewsKarnataka News

ವಿವಿಧತೆಯಲ್ಲಿ ಏಕತೆ ಭಾರತದ ಮೂಲಮಂತ್ರವಾಗಿದೆ – ಚನ್ನರಾಜ ಹಟ್ಟಿಹೊಳಿ

ಪ್ರಗತಿವಾಹಿನಿ ಸುದ್ದಿ, ಖಾನಾಪುರ – ಭಾಷೆ, ಸಂಸ್ಕೃತಿ, ಆಚಾರ, ವಿಚಾರಗಳಲ್ಲಿ ಭಿನ್ನತೆ ಹೊಂದಿ ವೈವಿಧ್ಯಮಯವಾಗಿರುವ ಭಾರತದಲ್ಲಿ ವಿವಿಧತೆಯಲ್ಲಿ ಏಕತೆ ಮೂಲಮಂತ್ರವಾಗಿದೆ. ಐಕ್ಯತೆಯೇ ಈ ದೇಶದ ಸಂಸ್ಕೃತಿಯ ಶಕ್ತಿಯಾಗಿದೆ, ಈ ಹಿನ್ನೆಲೆಯಲ್ಲಿ ವಿಶ್ವಮಟ್ಟದಲ್ಲಿ ಭಾರತ ದೇಶಕ್ಕೆ ತನ್ನದೆ ಆದ ವರ್ಚಸ್ಸಿದೆ ಎಂದು ವಿಧಾನಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ಹೇಳಿದರು.
 ಖಾನಾಪುರ ತಾಲೂಕಿನ ಸುಕ್ಷೇತ್ರ ಬಿಳಕಿ – ಅವರೊಳ್ಳಿ ರುದ್ರಸ್ವಾಮಿ ಮಠದಲ್ಲಿ ಲಿಂಗೈಕ್ಯ ಶ್ರೀ ಶಾಂಡಿಲ್ಯ ಮಹಾಸ್ವಾಮೀಜಿಯವರ ಐದನೇ ಪುಣ್ಯಾರಾಧನೆ ಕಾರ್ಯಕ್ರಮದ ಪ್ರಯುಕ್ತ ಹಮ್ಮಿಕೊಳ್ಳಲಾಗಿದ್ದ, ಭಾರತೀಯ ಸಂಸ್ಕೃತಿ ಮಹತ್ವದ ಕುರಿತಾದ ಧರ್ಮ ಸಮಾರಂಭದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ನಮ್ಮ ದೇಶದಲ್ಲಿ ವಿವಿಧ ಧರ್ಮಗಳ ಜನರು ತಮ್ಮದೇ ಆದ ಸಂಸ್ಕೃತಿ ಮತ್ತು ಸಂಪ್ರದಾಯದೊಂದಿಗೆ ಶಾಂತಿಯುತವಾಗಿ ಒಟ್ಟಿಗೆ ವಾಸಿಸುತ್ತಾರೆ. ವಿವಿಧ ಧರ್ಮಗಳ ಜನರು ತಮ್ಮದೇ ಆದ ಭಾಷೆ, ಆಹಾರ ಪದ್ಧತಿ, ಆಚಾರ-ವಿಚಾರ, ಉಡುಪು ಇತ್ಯಾದಿಗಳನ್ನು ಹೊಂದಿದ್ದರೂ ಐಕ್ಯತೆಯಿಂದಿದ್ದಾರೆ. ಅನ್ಯ ದೇಶಗಳ ಎದುರು ಭಾರತದ ಸಂಸ್ಕೃತಿ ತಲೆ ಎತ್ತಿ ನಿಲ್ಲುವಲ್ಲಿ ಈ ಐಕ್ಯತೆಯು ಬಲವಾದ ಕಾರಣವಾಗಿದೆ ಎಂದರು.
 ನಾವು ಭಾರತೀಯರು ಅತಿಥಿ ದೇವೋಭವ ಎಂಬ ಭಾವನೆಯನ್ನು ಬಲವಾಗಿ ನಂಬಿದ್ದೇವೆ. ಅತಿಥಿಗಳನ್ನು ದೇವರಂತೆ ಕಾಣುತ್ತೇವೆ. ಮನೆಗೆ ಬಂದ ಅತಿಥಿಗಳಿಗೆ ಸತ್ಕಾರ​,​ ಉಪಚಾರ ಮತ್ತು ತಮ್ಮ ಅಮೂಲ್ಯವಾದ ಸಮಯವನ್ನು ನೀಡುವ ಮೂಲಕ ನಮ್ಮ ಭಾರತೀಯ ಸಂಸ್ಕೃತಿಯ ಪದ್ಧತಿಯನ್ನು ಎತ್ತಿ ಹಿಡಿದಿದ್ದೇವೆ ಎಂದರು.
ಕಾರ್ಯಕ್ರಮದ ಸಂದರ್ಭದಲ್ಲಿ ಖಾನಾ​ಪು​ರ ಶಾಸಕಿ​  ಅಂಜಲಿ ನಿಂಬಾಳ್ಕ​ರ್​, ಬಿಳಕಿ ಅವರೊಳ್ಳಿಯ ಶ್ರೀ ಚನ್ನಬಸವ ದೇವರು, ಮಂಗಳೂರಿನ ಶ್ರೀ ಕೃಷ್ಣಮೂರ್ತಿ ಗುರುಗಳು, ತಾರಿಹಾಳದ ಶ್ರೀ ಅಡವಿ ಸಿದ್ದೇಶ್ವರ ದೇವರು, ಅರಳಿಕಟ್ಟಿಯ ಶ್ರೀ ಶಿವಮೂರ್ತಿ ದೇವರು, ಹಿರೇ ಮುನವಳ್ಳಿಯ ಶ್ರೀ ಶಂಭು​ಲಿಂ​ಗ ಮಹಾಶಿವಾಚಾರ್ಯ ಸ್ವಾಮೀಜಿ, ಬೈಲಹೊಂಗಲದ ಶ್ರೀ ಪ್ರಭು ನೀಲಕಂಠ ಮಹಾಸ್ವಾಮೀಜಿ,  ಸುರೇಶ ಇಟಗಿ, ಅಡಿವೇಶ ಇಟಗಿ, ಗ್ರಾಮದ ಹಿರಿಯರು ಉಪಸ್ಥಿತರಿದ್ದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button