
ಪ್ರಗತಿ ವಾಹಿನಿ ಸುದ್ದಿ ಪಣಜಿ –
ಗೋವಾ ವಿಧಾನಸಭಾ ಚುನಾವಣಾ ಫಲಿತಾಂಶ ಬಂದು ೮ ದಿನಗಳು ಕಳೆದರೂ ೨೦ ಸ್ಥಾನ ಗಳಿಸಿರುವ ಬಿಜೆಪಿ ಸರಕಾರ ರಚಿಸಲು ಮುಂದಾಗುತ್ತಿಲ್ಲ. ಇದಕ್ಕೆ ಗೋವಾ ಬಿಜೆಪಿಯ ಆಂತರಿಕ ಕಲಹಗಳೇ ಕಾರಣ ಎಂದು ಗೋವಾ ಕಾಂಗ್ರೆಸ್ ಮುಖಂಡ ದಿಗಂಬರ ಕಾಮತ್ ಪರೋಕ್ಷವಾಗಿ ಹೇಳಿದ್ದಾರೆ.
ಗೋವಾದಲ್ಲಿ ಬಿಜೆಪಿ ಸರಕಾರ ರಚನೆಗೆ ವಿಳಂಬ ಮಾಡುತ್ತಿರುವ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿರುವ ಅವರು, ಗೋವಾ ಬಿಜೆಪಿಯಲ್ಲಿ ಎಲ್ಲವೂ ಸರಿಯಿಲ್ಲ, ಹಾಗಾಗಿ ಅವರು ಸರಕಾರ ರಚನೆಗೆ ವಿಳಂಬ ಮಾಡುತ್ತಿದ್ದಾರೆ ಎಂದು ಪ್ರತಿಕ್ರಿಯೆ ನೀಡಿದ್ದಾರೆ.
ಗೋವಾ ವಿಧಾನಸಭೆಗೆ ಸ್ಪಷ್ಟ ಬಹುಮತಕ್ಕೆ ೨೧ ಸ್ಥಾನಗಳು ಅಗತ್ಯವಿದ್ದು ಬಿಜೆಪಿ ೨೦ ಸ್ಥಾನ ಗಳಿಸಿದ್ದರೆ ಕಾಂಗ್ರೆಸ್ ೧೧ ಸ್ಥಾನ ಗಳಿಸಿದೆ. ಚುನಾವಣಾ ಫಲಿತಾಂಶದ ದಿನ ಹೇಳಿಕೆ ನೀಡಿರುವ ಬಿಜೆಪಿ ಮುಖಂಡರು ಪಕ್ಷೇತರ ಅಭ್ಯರ್ಥಿಗಳ ಸಹಕಾರದಿಂದ ಸರಕಾರ ರಚಿಸುವುದಾಗಿ ತಿಳಿಸಿದ್ದಾರೆ.
ಆದರೆ ಎಂಟು ದಿನ ಕಳೆದರೂ ಸರಕಾರ ರಚನೆಗೆ ಬಿಜೆಪಿ ಮುಂದಾಗದ ಬಗ್ಗೆ ಕಾಂಗ್ರೆಸ್ ಮುಖಂಡರು ಖಂಡನೆ ವ್ಯಕ್ತಪಡಿಸಿದ್ದಾರೆ. ದಿಗಂಬರ ಕಾಮತ್ ಅಲ್ಲದೇ ಮತ್ತೋರ್ವ ಗೋವಾ ಕಾಂಗ್ರೆಸ್ ಮುಖಂಡ ಕಾರ್ಲೋಸ್ ಅಲ್ವೇರಾಸ್ ಅವರು, ಕೇರ್ ಟೇಕರ್ ಮುಖ್ಯಮಂತ್ರಿಯನ್ನೇ ವಾರಗಟ್ಟಲೆ ಮುಂದುವರೆಸುವುದು ಸರಿಯಾದ ಕ್ರಮವಲ್ಲ. ಬಿಜೆಪಿ ಬಹುಮತ ಸಾಬೀತುಪಡಿಸಲು ಮುಂದಾಗದೆ ಗೋವಾ ಜನತೆಗೆ ಅನ್ಯಾಯ ಎಸಗುತ್ತಿದೆ. ಈ ನಿಟ್ಟಿನಲ್ಲಿ ಗೋವಾ ರಾಜ್ಯಪಾಲರು ಮಧ್ಯಪ್ರವೇಶ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ಇನ್ನೊಂದೆಡೆ ಬಿಜೆಪಿ ಮುಖಂಡರು ಕಾಂಗ್ರೆಸ್‌ನ ಆರೋಪವನ್ನು ನಿರಾಕರಿಸಿದ್ದು, ಹೋಳಿ ಹಬ್ಬದ ನಿಮಿತ್ತವಾಗಿ ಸರಕಾರ ರಚನೆ ವಿಳಂಬವಾಗುತ್ತಿದೆ ಎಂದಿದ್ದಾರೆ.
ಕಾಂಗ್ರೆಸ್ ಮುಖಂಡರ ಹೇಳಿಕೆಗಳ ವಿರುದ್ಧ ಕಿಡಿಕಾರಿರುವ ಗೋವಾ ಶಾಸಕ ಗೋವಿಂದ ಗಾವಡೆ, ಗೋವಾ ಜನತೆಗೆ ಬಿಜೆಪಿಯೇ ಸರಕಾರ ರಚಿಸುತ್ತದೆ ಎಂಬುದು ಗೊತ್ತಿದೆ. ಹಾಗಾಗಿಯೇ ಜನ ಬಿಜೆಪಿಗೆ ಹೆಚ್ಚು ಸ್ಥಾನ ನೀಡಿ ಬೆಂಬಲಿಸಿದ್ದಾರೆ. ಹಾಗಾಗಿ ಕಾಂಗ್ರೆಸ್‌ಗೆ ಸರಕಾರ ರಚನೆಯ ಬಗ್ಗೆ ಮಾತಾಡುವ ನೈತಿಕ ಹಕ್ಕಿಲ್ಲ ಎಂದಿದ್ದಾರೆ.
ಗೋವಾದಲ್ಲಿ ಈ ಬಾರಿಯೂ ಪ್ರಮೋದ ಸಾವಂತ್ ಅವರ ನೇತೃತ್ವದಲ್ಲಿ ಸರಕಾರ ರಚನೆ ಖಚಿತವಾಗಿದೆ. ಕೇವಲ ಪ್ರಮಾಣ ವಚನ ಸ್ವೀಕಾರ ಮಾತ್ರ ಬಾಕಿ ಇದೆ. ಅದ್ಧೂರಿ ಪ್ರಮಾಣ ವಚನ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಹೇಳಿದ್ದಾರೆ.
ಗೋವಾದಲ್ಲಿ ಬಿಜೆಪಿ ಸರ್ಕಾರ ರಚನೆ ಹಾದಿ ಸುಗಮ
ಪ್ರತಿ ತಾಲೂಕಿನಲ್ಲಿ ಮಹಿಳಾ ಸಹಕಾರಿ ಸಂಘ ಸ್ಥಾಪನೆ: CM ಬೊಮ್ಮಾಯಿ ಕ್ರಾಂತಿಕಾರಿ ಘೋಷಣೆ
https://pragati.taskdun.com/latest/rsskalladka-prabhakar-bhatcontroversial-statmentnational-flag/