ಪ್ರಗತಿ ವಾಹಿನಿ ಸುದ್ದಿ, ಬೆಂಗಳೂರು –
ಹಿಜಾಬ್ ತೀರ್ಪು ಪ್ರಕಟಿಸಿದ ಹೈ ಕೋರ್ಟ್ ನ್ಯಾಯಾಧೀಶರುಗಳಿಗೆ ಜೀವ ಬೆದರಿಕೆಯ ಕರೆಗಳು ಬರುತ್ತಿರುವ ಹಿನ್ನೆಲೆಯಲ್ಲಿ ವೈ ಕೆಟಗರಿ ಭದ್ರತೆ ನೀಡಲು ಸರಕಾರ ನಿರ್ಧರಿಸಿದೆ.
ತೀರ್ಪು ಪ್ರಕಟಿಸಿದ ಮುಖ್ಯ ನ್ಯಾಯಾಧೀಶ ಅವರಿಗೆ ತಮಿಳುನಾಡು ಮೂಲದ ತೌಹೀದ್ ಜಮಾದ್ ಎಂಬ ಧಾರ್ಮಿಕ ಸಂಘಟನೆಯೊಂದು ಜೀವ ಬೆದರಿಕೆ ಹಾಕಿತ್ತು. ಈ ಸಂಬಂಧ ವಿಧಾಸೌಧ ಠಾಣೆಯಲ್ಲಿ ದೂರು ದಾಖಲಾಗಿದೆ.
ತಮಿಳುನಾಡಿನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಸಂಘಟನೆಯ ಮುಖ್ಯಸ್ಥ ರೆಹಮತ್ತುಲ್ಲಾ ತೀರ್ಪಿನ ವಿರುದ್ಧ ಭಾಷಣ ಮಾಡಿದ್ದಲ್ಲದೆ ಪರೋಕ್ಷವಾಗಿ ನ್ಯಾಯಾಧೀಶರಿಗೆ ಕೊಲೆ ಬೆದರಿಕೆಯನ್ನೂ ಹಾಕಿದ್ದ. ಇದರ ವಿಡಿಯೋ ವೈರಲ್ ಆಗಿತ್ತು. ವಕೀಲೆ ಸುಧಾ ಎಂಬುವವರು ವಿಡಿಯೋ ನೋಡಿ ವಿಧಾನಸೌಧ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬಳಿಕ ಆರೋಪಿ ರೆಹಮತುಲ್ಲಾ ಎಂಬುವವನನ್ನು ತಮಿಳುನಾಡು ಪೊಲೀಸರು ಶನಿವಾರ ರಾತ್ರಿಯೇ ಬಂಧಿಸಿದ್ದಾರೆ.
ಆದರೆ ನ್ಯಾಯಾಧೀಶರ ಸುರಕ್ಷತೆಗೆ ಅಪಾಯ ಇರುವುದನ್ನು ಗಂಭೀರವಾಗಿ ಪರಿಗಣಿಸಿದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮುಖ್ಯ ನ್ಯಾಯಾಧೀಶ ಋತುರಾಜ ಅವಸ್ತಿ, ಹಾಗೂ ನ್ಯಾಯಾಧೀಶರಾದ ಕೃಣ ದೀಕ್ಷಿತ್ ಮತ್ತು ಖಾಜಿ ಎಂ. ಜೈಬುನ್ನಿಸ್ಸಾ ಅವರಿಗೆ ವೈ ಕೆಟಗರಿ ಭದ್ರತೆ ನೀಡುವುದಾಗಿ ತಿಳಿಸಿದ್ದಾರೆ.
ಕೆಲ ಮುಸ್ಲಿಂ ಸಂಘಟನೆಗಳ ನಡೆಯ ಕುರಿತು ಪ್ರತಿಕ್ರಿಯೆ ನೀಡಿರುವ ಮುಖ್ಯಮಂತ್ರಿ, ಇದು ಪ್ರಜಾಪ್ರಭುತ್ವ ವಿರೋಧಿ ನಡೆಯಾಗಿದೆ. ದೇಶದಲ್ಲಿ ನ್ಯಾಯಾಂಗ ಬಲಿಷ್ಠವಾಗಿರುವುದರಿಂದ ಕಾನೂನು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸಾಧ್ಯವಾಗುತ್ತಿದೆ. ಹಾಗಾಗಿ ನ್ಯಾಯಾಂಗವನ್ನು ದುರ್ಬಲಗೊಳಿಸಲು ಯಾರೂ ಪ್ರಯತ್ನಿಸಬಾರದು ಎಂದಿದ್ದಾರೆ. ಅಲ್ಲದೇ ಸ್ಯುಡೋ ಸೆಕ್ಯುಲರಿಸ್ಟ್‌ಗಳು ಈಗ್ಯಾಕೆ ಮೌನ ತಾಳಿದ್ದಾರೆ ಎಂದು ಮುಖ್ಯಮಂತ್ರಿ ಪ್ರಶ್ನಿಸಿದ್ದಾರೆ.
ಹಿಜಾಬ್ ವಿವಾದ; ತೀರ್ಪು ನೀಡಿದ ಹೈಕೋರ್ಟ್ ನ್ಯಾಯಮೂರ್ತಿಗಳಿಗೆ ಬೆದರಿಕೆ ಕರೆ
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ