ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ದಾನಗಳಲ್ಲಿ ಅತ್ಯಂತ ಶ್ರೇಷ್ಟವಾದದ್ದು ರಕ್ತದಾನ. ಆರೋಗ್ಯವಂತ ವಕ್ತಿಗಳು ರಕ್ತದಾನ ಮಾಡುವುದರಿಂದ ಮತ್ತೊಬ್ಬರ ಜೀವ ಉಳಿಸಲು ಸಾಧ್ಯವಾಗುತ್ತದೆ ಎಂದು ಬೆಳಗಾವಿ ಮಹಾವೀರ ಬ್ಲಡ್ ಬ್ಯಾಂಕ್ ನ ಡಾ.. ವಿ.ಬಿ. ಯಲಬುರ್ಗಿ ಹೇಳಿದರು.
ಬೈಲಹೊಂಗಲ ತಾಲೂಕಿನ ನಾವಲಗಟ್ಟಿ ಗ್ರಾಮದಲ್ಲಿ ಶ್ರೀ ಮಾರುತಿ ದೇವರ ಜಾತ್ರೆಯ ಅಂಗವಾಗಿ ಬುಧವಾರ ಬೆಳಗಾವಿ ಮಹಾವೀರ ಬ್ಲಡ್ ಬ್ಯಾಂಕ್ ಸಹಯೋಗದೊಂದಿಗೆ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ಮಾತನಾಡಿದರು.
ರಕ್ತ ಎಂದರೆ ಜೀವ ಜಲ. ನಮ್ಮನ್ನೆಲ್ಲ ಬದುಕಿಸಿರುವುದು ಅದೇ. ಅನಾರೋಗ್ಯ ಪೀಡಿತನಾದ ಅಥವಾ ಅಪಘಾತಕ್ಕೆ ತುತ್ತಾದ ವ್ಯಕ್ತಿ ಸೂಕ್ತ ಗ್ರೂಪಿನ ರಕ್ತ ಸಿಗದ ಕಾರಣವೇ ಸಾವನ್ನಪ್ಪಿದ ಸಾಕಷ್ಟು ಘಟನೆಗಳು ನಮ್ಮ ಮುಂದಿವೆ. ಹೀಗಿರುವಾಗ ಸಂಕಷ್ಟದಲ್ಲಿರುವ, ರಕ್ತದ ಅಗತ್ಯವಿರುವ ವ್ಯಕ್ತಿಗೆ ರಕ್ತದಾನ ಮಾಡಬೇಕಾದ ಅಗತ್ಯವನ್ನು ಅರ್ಥ ಮಾಡಿಕೊಂಡು ಸ್ವ ಇಚ್ಛೆಯಿಂದ ರಕ್ತದಾನ ಮಾಡಬೇಕು. ರಕ್ತದ ಕೊರತೆಯಿಂದ ಯಾರೂ ಜೀವ ಕಳೆದುಕೊಳ್ಳಬಾರದು. ಇದು ದಾನಿಗೆ ಸಾರ್ಥಕತೆಯನ್ನು ನೀಡುತ್ತದೆ. ರಕ್ತದಾನ ಮಾಡುವುದರಿಂದ ಯಾವುದೇ ರೀತಿಯ ಅಶಕ್ತತೆ ಆಗುವುದಿಲ್ಲ. ಬದಲಾಗಿ ಇದು ಹಲವು ರೋಗಗಳಿಗೆ ಪರಿಹಾರ ನೀಡಬಹುದು. ರಕ್ತದಾನ ಮಾಡುವುದಕ್ಕಿಂತ ಹೆಚ್ಚಿನ ಸೇವೆ ಮನುಕುಲದಲ್ಲಿ ಬೇರೆ ಇಲ್ಲ. ೧೮ರಿಂದ ೬೦ ವರ್ಷದೊಳಗಿನ ಆರೋಗ್ಯವಂತ ವ್ಯಕ್ತಿ, ಪುರುಷರು ೩ ತಿಂಗಳಿಗೊಮ್ಮೆ, ಮಹಿಳೆಯರು ೬ ತಿಂಗಳಿಗೊಮ್ಮೆ ರಕ್ತದಾನ ಮಾಡುವುದರಿಂದ ಯಾವುದೇ ಸಮಸ್ಯೆ ಆಗಲಾರದು ಎಂದರು.
ಈ ರಕ್ತದಾನ ಶಿಬಿರದಲ್ಲಿ ಸುಮಾರು ೫೦ ಕ್ಕೂ ಹೆಚ್ಚು ಯುವಕರು ಸ್ವ ಇಚ್ಛೆಯಿಂದ ರಕ್ತದಾನ ಶಿಬಿರದಲ್ಲಿ ಪಾಲ್ಗೊಂಡು, ರಕ್ತದಾನ ಮಾಡಿದರು.
ಈ ಸಂದರ್ಭದಲ್ಲಿ ಗ್ರಾಪಂ ಅಧ್ಯಕ್ಷ ರುದ್ರಗೌಡ ಪಾಟೀಲ, ಮಹಾವೀರ ಬ್ಲಡ್ ಬ್ಯಾಂಕನ ಸುರೇಶ ಕಾಂಬಳೆ, ಸುರಜ ಕಾಂಬಳೆ, ಸಂಗಮೇಶ ಲೋಳಸಾರಮಠ, ದೀಪಕ, ಪ್ರಶಾಂತ ಮಾದುಲೆ, ಗ್ರಾಮಸ್ಥರಾದ ನಿವೃತ್ತ ಶಿಕ್ಷಕ ವಿ.ಬಿ.ತೋರಣಗಟ್ಟಿ, ಅನಿಲ ಕುಂಟಯ್ಯನವರ, ಯಲ್ಲಪ್ಪ ಉಪ್ಪಾರಟ್ಟಿ, ದುಂಡಪ್ಪ ನಾವಲಗಟ್ಟಿ, ರುದ್ರಪ್ಪ ಕಲ್ಲೂರ, ಶಿನವಗೌಡ ನಾವಲಗಟ್ಟಿ, ಬಾಬುಗೌಡ ಪಾಟೀಲ, ಈರಪ್ಪ ಕಲ್ಲೂರ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ