ಪ್ರಗತಿವಾಹಿನಿ ಸುದ್ದಿ; ಬೆಂಗಳೂರು; ಸರಸ್ವತಿ ಸಮ್ಮಾನ ಬಂದಾಗ ರಾಜ್ಯ ಸರ್ಕಾರ ನನಗೆ ಗೌರವ ಪುರಸ್ಕಾರವಾಗಿ ನೀಡಿದ್ದ ಮೊತ್ತ ರೂ. 5 ಲಕ್ಷಗಳನ್ನು ಸರ್ಕಾರಕ್ಕೆ ವಾಪಸ್ ನೀಡಿ ಕನ್ನಡ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿ ಉತ್ತಮ ಅಂಕಗಳನ್ನು ಪಡೆದು ತೇರ್ಗಡೆಯಾದ ವಿದ್ಯಾರ್ಥಿಗಳಿಗೆ, ವಿದ್ಯಾರ್ಥಿ ವೇತನ (ಸ್ಕಾಲರ್ಶಿಫ್) ರೂಪದಲ್ಲಿ ನೀಡಲು ತಿಳಿಸಿದ್ದೆ. ಆದರೆ ಅದು ಅಷ್ಟಕ್ಕೆ ಸ್ಥಗಿತಗೊಂಡಿದೆ. ಅದನ್ನು ಮುಂದುವರಿಸಬೇಕು ಎಂದು ಹಿರಿಯ ಸಾಹಿತಿ ಡಾ. ಎಸ್. ಎಲ್. ಭೈರಪ್ಪ ತಿಳಿಸಿದರು.
ಕನ್ನಡ ಸಾಹಿತ್ಯ ಪರಿಷತ್ತು ಹಮ್ಮಿಕೊಂಡ ‘ಕನ್ನಡ ಶಾಲೆ ಉಳಿಸಿ – ಕನ್ನಡ ಬೆಳೆಸಿ’ ಕುರಿತಂತೆ ದುಂಡು ಮೇಜಿನ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.
ಆಗಿನ ವಿದ್ಯಾಮಂತ್ರಿಗಳಾಗಿದ್ದ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ತಮಗೆ ಬಂದ ಐದು ಲಕ್ಷ ರೂಪಾಯಿಗಳ ಜೊತೆಗೆ 200 ಕೋಟಿ ರೂಪಾಯಿ ಮೀಸಲಿಟ್ಟು 6,66,000 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ಕೊಡುವುದಾಗಿ ಹೇಳಿದ್ದರು. ಅಷ್ಟರಲ್ಲಿ ಸರ್ಕಾರ ಬದಲಾಗಿದ್ದು, ನೂತನ ಸರ್ಕಾರ ಈ ಪ್ರಸ್ತಾವನೆಯಲ್ಲಿ ಕೈಗೆತ್ತಿಕೊಳ್ಳಲಿಲ್ಲ. ಈ ವಿಷಯವನ್ನು ಡಾ. ಎಸ್. ಆರ್. ಲೀಲಾ ಅವರು ಸದನದಲ್ಲಿ ಪ್ರಸ್ತಾಪ ಕೂಡ ಮಾಡಿದ್ದರು. ಆದರೆ ಅದು ಅಲ್ಲಿಗೇ ನಿಂತುಕೊಂಡಿದೆ. ಕನ್ನಡದಲ್ಲಿ ಕಲಿತ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಿಸಿದಾಗ ಕನ್ನಡದ ಮೇಲಿನ ಆಸಕ್ತಿ ಹೆಚ್ಚಾಗುತ್ತದೆ. ಮಕ್ಕಳಿಗೆ ವಿಷಯ ತಿಳಿಸುವ ಬದಲು ಭಾಷೆಯನ್ನು ಕಲಿಸುವ ಕೆಲಸ ಆಗಬೇಕಾಗಿದೆ. ಹಳ್ಳಿಯ ಮಕ್ಕಳು ಮತ್ತು ನಗರ ಪ್ರದೇಶಗಳ ಮಕ್ಕಳು ಎಂಬ ಅನಿವಾರ್ಯತೆ ಕಂಡು ಬರುತ್ತಿದ್ದು, ಇದನ್ನು ಹೋಗಲಾಡಿಸುವ ಅವಶ್ಯಕತೆ ಇದೆ ಎಂದು ಭೈರಪ್ಪ ಅವರು ಅಭಿಪ್ರಾಯಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಶಿಕ್ಷಣ ಸಚಿವರಾದ ಬಿ.ಸಿ. ನಾಗೇಶ್ ಅವರು ಕನ್ನಡ ಮಾಧ್ಯಮದಲ್ಲಿ ಕಲಿತ ಮಕ್ಕಳಿಗೆ ಸಮಸ್ಯೆಗಳು ಎದುರಾಗುವುದು ಎಂಬ ಭಾವನೆ ಪೋಷಕರಲ್ಲಿದೆ. ಜನಸಾಂದ್ರತೆ ಕಡಿಮೆಯಾಗುತ್ತಿರುವುದರಿಂದ ಕನ್ನಡದ ಶಾಲೆಗಳು ಮುಚ್ಚುತ್ತಿವೆ. ಆದರೆ ಸರ್ಕಾರ ಹೋಬಳಿ ಮಟ್ಟದಲ್ಲಿ 3000 ಮಾದರಿ ಶಾಲೆಗಳನ್ನು ನಿರ್ಮಿಸುತ್ತಿದ್ದು, ಮುಂದಿನ ದಿನಗಳಲ್ಲಿ ಶಾಲೆಗಳಲ್ಲಿ ದ್ವಿಭಾಷಾ ಪಠ್ಯಪುಸ್ತಕಗಳನ್ನು ಸಿದ್ಧಪಡಿಸಲಾಗುತ್ತಿದೆ. ಎಸ್. ಎಲ್. ಭೈರಪ್ಪ ಅವರು ಪ್ರಸ್ತಾಪಿಸಿದಂತೆ 200 ಕೋಟಿ ರೂಪಾಯಿಗಳ ವಿಶೇಷ ಅನುದಾನದಲ್ಲಿ ಕನ್ನಡ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ನೀಡುವ ಉದ್ದೇಶವನ್ನು ಮಾನ್ಯ ಮುಖ್ಯಮಂತ್ರಿಗಳ ಜೊತೆಗೆ ಚರ್ಚಿಸಿ ಅನುಷ್ಠಾನಕ್ಕೆ ತರಲಾಗುವುದು ಎಂದು ತಿಳಿಸಿದರು.
ಈ ಸಭೆಯ ಆಯೋಜನೆ ಕುರಿತಂತೆ ಆಶಯ ನುಡಿಯಲ್ಲಿ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮಾತನಾಡಿ, ಕನ್ನಡ ಶಾಲೆಗಳು ಉಳಿದರೆ ಕನ್ನಡ ಉಳಿಯುತ್ತದೆ, ಕನ್ನಡ ಉಳಿದರೆ, ಕನ್ನಡಿಗರು ಉಳಿಯುತ್ತಾರೆ, ಕನ್ನಡಿಗರು ಉಳಿದರೆ ಕರ್ನಾಟಕ ಉಳಿಯುತ್ತದೆ. ಹಾಗಾಗಿ ಕನ್ನಡ-ಕನ್ನಡಿಗ-ಕರ್ನಾಟಕ ಈ ಮೂರು ಪದಗಳು ಏಕತೆಯನ್ನು ಸಾರುವಂಥವು. ಇಂದಿನ ವ್ಯಾಪಾರೀಕರಣ ಶಿಕ್ಷಣದಿಂದಾಗಿ ಕನ್ನಡ ಶಾಲೆಗಳು ಮುಚ್ಚುತ್ತಿವೆ. ೨೦೧೦-೧೧ ರಲ್ಲಿ ಅಂಕಿ ಅಂಶಗಳ ಪ್ರಕಾರ ೪೫,೬೭೭ ಇದ್ದ ಸರ್ಕಾರಿ ಕನ್ನಡ ಶಾಲೆಗಳಲ್ಲಿ, ಕಳೆದ ಹತ್ತು ವರ್ಷಗಳಿಂದೀಚೆಗೆ ೨೪೨೬ ಶಾಲೆಗಳು ಮುಚ್ಚಿವೆ. ಇದು ನಿಜವಾಗಿಯೂ ಆತಂಕ ಪಡಬೇಕಾದದ್ದು ಎಂದು ಕಳವಳ ವ್ಯಕ್ತಪಡಿಸಿದರು.
ಕನ್ನಡ ಅನ್ನದ ಭಾಷೆಯಾಗಬೇಕೆಂದರೆ, ಸರ್ಕಾರಿ ನೌಕರರು, ಅಧಿಕಾರಿಗಳು, ರಾಜಕಾರಣಿಗಳು ಹಾಗೂ ಸರ್ಕಾರಿ ಶಾಲಾ ಶಿಕ್ಷಕರು ತಮ್ಮ ಮಕ್ಕಳನ್ನು ಕನ್ನಡ ಮಾಧ್ಯಮಕ್ಕೆ ಸೇರಿಸಬೇಕು. ಕೇಂದ್ರ ಸರ್ಕಾರ ಹಾಗೂ ರಾಜ್ಯ ಸರ್ಕಾರದ ಹುದ್ದೆಗಳಿಗೆ ಏರ್ಪಡಿಸುವ ಪರೀಕ್ಷೆಗಳನ್ನು ಕನ್ನಡದಲ್ಲಿ ನಡೆಸಬೇಕು. ಆಗ ಕನ್ನಡ ಕಲಿಯುವವರ ಸಂಖ್ಯೆ ಹೆಚ್ಚಾಗುವುದು, ಕನ್ನಡ ಶಾಲೆಗಳು ಉಳಿದು ಕನ್ನಡ ಬೆಳೆಯುವುದು ಎಂದು ಅಭಿಪ್ರಾಯಪಟ್ಟರು
ವಿಶೇಷ ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಡಾ. ಪ್ರಧಾನ ಗುರುದತ್ತ ಅವರು ಮಾತನಾಡಿ ೩೦ ವಿದ್ಯಾರ್ಥಿಗಳಿಗಿಂತ ಕಡಿಮೆ ಇರುವ ೧೨೦೦೦ ಶಾಲೆಗಳನ್ನು ಮುಚ್ಚಲಾಗಿದೆ ಎಂದು ಗೋವಿಂದ ಸಮಿತಿ ವರದಿ ಮಾಡಿದೆ. ಆಂಗ್ಲ ಶಾಲೆಗಳನ್ನು ತೆರೆಯುತ್ತಿರುವ ಸರ್ಕಾರದ ಮೂರ್ಖತನದ ಕ್ರಮ ಹಾಗೂ ಅನುದಾನಿತ ಕನ್ನಡ ಶಾಲೆಗಳನ್ನು ಕೂಡಿಸುವ ಪ್ರಯತ್ನ ಆಗಾಥ ತಂದಿದೆ.
ಈ ಹಿನ್ನೆಲೆಯಲ್ಲಿ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾಡೋಜ ಡಾ. ಮಹೇಶ ಜೋಶಿ ಅವರು ಮುತುವರ್ಜಿ ವಹಿಸಿ ಕನ್ನಡಿಗರ ಪರವಾಗಿ ಸರ್ಕಾರದ ಕಣ್ತೆರೆಯುವ ಕೆಲಸ ಮಾಡಬೇಕಾಗಿದೆ ಎಂದರು.
ಪರಿಷತ್ತು ಆಯೋಜಿಸಿದ್ದ ಕನ್ನಡ ಉಳಿಸಿ : ಬೆಳೆಸಿ ಕುರಿತು ದುಂಡು ಮೇಜಿನ ಸಭೆಯಲ್ಲಿ ಶ್ರೀ ವೀರಭದ್ರ ಚನ್ನಮಲ್ಲ ಸ್ವಾಮೀಜಿಗಳು ನಿಡುಮಾಮಿಡಿ, ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಹುಕ್ಕೇರಿ ಇವರೊಂದಿಗೆ ಹಿರಿಯ ಸಾಹಿತಿಗಳು, ಪ್ರಮುಖ ಶಿಕ್ಷಣ ತಜ್ಞರು, ಚಿಂತಕರು ಹಾಗೂ ಕನ್ನಡಪರ ಹೋರಾಟಗಾರರು ಭಾಗವಹಿಸಿದ್ದರು.
ದಿನವಿಡೀ ನಡೆದ ಚರ್ಚೆಯಲ್ಲಿ ಪ್ರಮುಖ ಆರು ನಿರ್ಣಯಗಳನ್ನು ಸರ್ವಾನುಮತದಿಂದ ತೆಗೆದುಕೊಂಡು ಸರ್ಕಾರಕ್ಕೆ ಸಲ್ಲಿಸುವುದಕ್ಕೆ ಒಮ್ಮತದಿಂದ ಸಭೆ ಅನುಮೋದಿಸಿತು. ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳಾದ ಶ್ರೀ ನೇ.ಭ. ರಾಮಲಿಂಗಶೆಟ್ಟಿ ಅವರು ಸ್ವಾಗತಿಸಿದರು, ಗೌರವ ಕೋಶಾಧ್ಯಕ್ಷರಾದ ಶ್ರೀ ಬಿ.ಎಂ. ಪಟೇಲ್ಪಾಂಡು ಅವರು ಕಾರ್ಯಕ್ರಮವನ್ನು ನಿರೂಪಿಸಿ ವಂದಿಸಿದರು.
ದುಂಡು ಮೇಜಿನ ಸಭೆಯಲ್ಲಿ ಕೈಗೊಂಡ ಆರು ನಿರ್ಣಯಗಳು :
೧. ಇನ್ನು ಮುಂದೆ ಸರ್ಕಾರವು ಯಾವುದೇ ಕಾರಣವನ್ನು ಮುಂದೊಡ್ಡಿ ಸರ್ಕಾರಿ, ಅನುದಾನ ರಹಿತ, ಅನುದಾನ ಸಹಿತ ಕನ್ನಡ ಮಾದ್ಯಮ ಶಾಲೆಗಳನ್ನು ಮುಚ್ಚಬಾರದು.
೨. ಕನ್ನಡ ಶಾಲೆಗಳನ್ನು ಸಬಲೀಕರಣಗೊಳಿಸುವುದಕ್ಕೆ ಆರ್.ಟಿ.ಇ. ೨೦೦೯ರ ಕಾಯ್ದೆ ಅನ್ವಯ ಇರುವ ೯ ಮೂಲಭೂತ ಮಾನದಂಡಗಳನ್ನು ಸಮರ್ಪಕವಾಗಿ ಪರಿಪಾಲನೆ ಮಾಡತಕ್ಕದ್ದು.
೩. ರಾಜ್ಯದ ಒಟ್ಟು ಉತ್ಪನ್ನದಲ್ಲಿ (ಎಸ್.ಜಿ.ಡಿ.ಪಿ) ಕನಿಷ್ಠ ಶೇಕಡಾ ೬% ರಷ್ಟು ಹಣಕಾಸನ್ನು ಶಿಕ್ಷಣಕ್ಕಾಗಿ ಪ್ರತಿವರ್ಷವೂ ಆಯವ್ಯಯದಲ್ಲಿ ಮೀಸಲಿಡಬೇಕು.
೪. ಅನುದಾನ ರಹಿತ ಕನ್ನಡ ಶಾಲೆಗಳು ಉಳಿಯುವುದಕ್ಕೆ ಮತ್ತು ಬೆಳೆಯುವುದಕ್ಕೆ ವಿಶೇಷ ಅನುದಾನ ಮತ್ತು ರಿಯಾಯಿತಿಯನ್ನು ನೀಡಬೇಕು.
೫. ರಾಜ್ಯ ಭಾಷೆಯೇ ೧ ರಿಂದ ೮ ನೆಯ ತರಗತಿಯವರೆಗೆ ಶಿಕ್ಷಣ ಮಾಧ್ಯಮವಾಗಬೇಕೆಂದು, ಸಂವಿಧಾನದಲ್ಲಿ ತಿದ್ದುಪಡಿ ಮಾಡಬೇಕೆಂದು ರಾಜ್ಯ ಸರ್ಕಾರವು, ಕೇಂದ್ರ ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
೬. ನೂತನ ಶಿಕ್ಷಣ ನೀತಿಯ ಪ್ರಕಾರ ೨೦೨೨-೨೩ನೇ ಶೈಕ್ಷಣಿಕ ವರ್ಷದಿಂದ ಯಾವುದೇ ಸರ್ಕಾರಿ ಕನ್ನಡ ಮಾಧ್ಯಮ ಶಾಲೆಗಳಲ್ಲಿ ಇಂಗ್ಲಿಷ್ ಮಾಧ್ಯಮ ಶಾಲೆಗಳನ್ನು ಪ್ರಾರಂಭಿಸಬಾರದು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ