Latest

ಅಪರಾಧಿಗಳಿಗೆ ರಕ್ಷಣೆ ನೀಡುವ ಕೆಲಸ ಮಾಡಬಾರದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ನಾವು ಅಪರಾಧಿಗಳ ವಿರುದ್ಧ ಇದ್ದೇವೆ. ಅಪರಾಧ ಮತ್ತು ಅಪರಾಧಿಗಳ ರಕ್ಷಣೆಯ ಕೆಲಸವನ್ನು ಯಾರೂ ಕೂಡ ಮಾಡಬಾರದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ಬೆಂಗಳೂರಿನಲ್ಲಿ ಆಯೋಜಿಸಲಾಗಿದ್ದ ನೃಪತುಂಗ ವಿಶ್ವವಿದ್ಯಾಲಯ ಉದ್ಘಾಟನಾ ಸಮಾರಂಭದಲ್ಲಿ ಕೇಂದ್ರ ಗೃಹ ಸಚಿವ ಅಮಿತ ಶಾ ಅವರು ಬಳ್ಳಾರಿಯ ಪ್ರಾದೇಶಿಕ ನ್ಯಾಯ ವಿಜ್ಞಾನ ಪ್ರಯೋಗಾಲಯವನ್ನು ಉದ್ಘಾಟಿಸಿದ ಬಳಿಕ ಮಾತನಾಡಿದರು.

ಕೇಂದ್ರ ಗೃಹ ಸಚಿವರು ನಿರ್ಭಯಾ ಯೋಜನೆಯಡಿ 750 ಕೋಟಿ ರೂ.ಗಳನ್ನು ಕರ್ನಾಟಕಕ್ಕೆ ಒದಗಿಸಿದ್ದಾರೆ. ಬೆಂಗಳೂರಿನಲ್ಲಿ 7000 ಕ್ಕಿಂತ ಹೆಚ್ಚು ಸಿಸಿ ಟಿ ವಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಮಹಿಳಾ ಸುರಕ್ಷತೆಗಾಗಿ ಈ ವ್ಯವಸ್ಥೆ ನೀಡಿದ್ದಕ್ಕಾಗಿ ಎಫ್.ಎಸ್ ಎಲ್ ವಿಶ್ವ ವಿದ್ಯಾಲಯ ಕ್ಯಾಂಪಸ್ ನಿರ್ಮಾಣಕ್ಕೆ ಮುಂದಾಗಿರುವುದಕ್ಕಾಗಿ ಸಿಎಂ ಬಸವರಾಜ ಬೊಮ್ಮಾಯಿ ಧನ್ಯವಾದಗಳನ್ನು ಅರ್ಪಿಸಿದರು.

ಯುವಜನತೆಯಿಂದ ಕರ್ನಾಟಕದ ಭವ್ಯ ಭವಿಷ್ಯ ನಿರ್ಮಾಣ: 

ದೇಶದಲ್ಲಿರುವ ಶೇ. 46 ರಷ್ಟು ಯುವ ಜನರನ್ನು ಪ್ರಧಾನಿ ನರೇಂದ್ರ ಮೋದಿ ಅವರು ದೇಶದ ಆಸ್ತಿ ಎಂದು ಪರಿಗಣಿಸಿ ಭವ್ಯ ಭಾರತ ಕಟ್ಟುವ ಸೇನಾನಿಗಳನ್ನಾಗಿ ಮಾಡಲು ಹೊಸ ಶಿಕ್ಷಣ ನೀತಿಯನ್ನು ಜಾರಿಗೆ ತಂದಿದ್ದಾರೆ. ಇದರಿಂದ ಕರ್ನಾಟಕದ ಭವ್ಯ ಭವಿಷ್ಯ ನಿರ್ಮಾಣವಾಗಲಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹೇಳಿದರು.

ವಿದ್ಯಾರ್ಥಿಗಳು ಬದಲಾವಣೆಯ ಹರಿಕಾರರಾಗಬೇಕು .ಇದೇ ಹಾದಿಯಲ್ಲಿರುವ ಮೊದಲ ಸಂಸ್ಥೆ ನೃಪತುಂಗ ವಿಶ್ವ ವಿದ್ಯಾಲಯ. ನಮ್ಮ ಯುವ ಶಕ್ತಿ ಬದಲಾವಣೆಯ ಪರ್ವ ಕಾಲದಲ್ಲಿ ಹಾಗೂ ಭಾರತಕ್ಕೆ ವಿಶ್ವದಲ್ಲಿ ಉನ್ನತ ಸ್ಥಾನ ದೊರಕಿಸಿಕೊಡುವ ವಿದ್ಯಾರ್ಥಿಗಳಾಗಿದ್ದೀರಿ. ಪ್ರಧಾನಿ ನರೇಂದ್ರ ಮೋದಿಯವರ ದಕ್ಷ ಹಾಗೂ ದೂರದೃಷ್ಟಿಯ ನಾಯಕತ್ವದಲ್ಲಿ ವಿದ್ಯಾರ್ಥಿಗಳಾಗಿರುವುದು ಹೆಮ್ಮೆಯ ಸಂಗತಿ ಎಂದು‌ಅವರು ಹೇಳಿದರು.

ದೇಶದಲ್ಲಿ ಈ ಮೊದಲು ಇಷ್ಟು ಸೌಕರ್ಯ ಗಳು ಇರಲಿಲ್ಲ. ಯುವಕರಿಗೆ ಸ್ಪೂರ್ತಿ ತುಂಬುವ ನಾಯಕತ್ವ ಇರಲಿಲ್ಲ. ಜನಸಂಖ್ಯೆ ದೇಶಕ್ಕೆ ಭಾರ ಎಂದಿದ್ದವರಿಗೆ ಯುವ ಜನಸಂಖ್ಯೆ ನಮ್ಮ ಆಸ್ತಿ ಎಂದು ಪರಿಗಣಿಸಿವರು ನಮ್ಮ ಪ್ರಧಾನಿ ನರೇಂದ್ರ ಮೋದಿ. ಅವರನ್ನು ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ ಮುಂದೆ ತಂದು ಭಾರತ ಕಟ್ಟಲು ಸೇನಾನಿಗಳನ್ನಾಗಿ ಮಾಡಬೇಕೆಂಬ ಸಂಕಲ್ಪ ಮಾಡಿದ್ದಾರೆ. ಅದಕ್ಕಾಗಿ ನೂತನ ಶಿಕ್ಷಣ ನೀತಿಯನ್ನು ರೂಪಿಸಿದ್ದಾರೆ. ಕರ್ನಾಟಕದ ಭವಿಷ್ಯ ಭವ್ಯವಾಗಿದೆ ಎಂಬ ಭರವಸೆ ಹುಟ್ಟಿದೆ ಎಂದು ತಿಳಿಸಿದರು.

ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿರುವ ನೂತನ ಶಿಕ್ಷಣ ನೀತಿ :
ಪದವಿ ಹಾಗೂ ಪಿ.ಜಿಯನ್ನು ಏಕಕಾಲದಲ್ಲಿ ಮಾಡಬಹುದು. ವಿದೇಶಗಳಲ್ಲಿ ದೊರೆಯುವ ಕೋರ್ಸುಗಳು ನೀತಿಯಲ್ಲಿವೆ. ಆಧುನಿಕ ಭಾರತದ ಅವಶ್ಯಕತೆ ಗಳನ್ನು ಸಶಕ್ತರಾಗಿ ನಿಭಾಯಿಸಲು ಸನ್ನದ್ದ ಮಾಡಲು ಈ ನೂತನ ಶಿಕ್ಷಣ ನೀತಿ ಸಹಕಾರಿಯಾಗಿದೆ. ಕೆ.ಜಿ ಇಂದ ಪಿಜಿ ವರೆಗೆ ನೂತನ ಶಿಕ್ಷಣ ನೀತಿ ಕ್ರಾಂತಿಕಾರಿ ಬದಲಾವಣೆಗಳನ್ನು ತರಲಿದೆ. ಈ ವಿವಿಗೆ 50 ಕೋಟಿ ರೂ.ಗಳನ್ನು ಕೇಂದ್ರ ಸರ್ಕಾರ ಒದಗಿಸಿದ್ದು, ಉಳಿದ ಮೊತ್ತವನ್ನು ರಾಜ್ಯ ಸರ್ಕಾರ ಒದಗಿಸಲಿದೆ. ಬದಲಾವಣೆಯ ಹರಿಕಾರ ನೃಪತುಂಗನ ಹೆಸರಿನಲ್ಲಿ ಇಂದು ಬದಲಾವಣೆಯಾಗುತ್ತಿದೆ. ವಿಶ್ವವಿದ್ಯಾಲಯಕ್ಕೆ ಎಲ್ಲ ರೀತಿಯ ಸಹಕಾರವನ್ನು ಕರ್ನಾಟಕ ಸರ್ಕಾರ ಒದಗಿಸಲಿದೆ. ನೃಪತುಂಗ ವಿಶ್ವವಿದ್ಯಾಲಯ ಉತ್ತುಂಗಕ್ಕೆ ಬೆಳೆಯಲಿ ಎಂದರು.

ಉದ್ಯೋಗ ನೀತಿ :
ಸರ್ಕಾರ ಯುವಕರಿಗೆ ಹೊಸ ಯೋಜನೆಗಳನ್ನು ರೂಪಿಸದೆ. ಸ್ವಯಂ ಉದ್ಯೋಗಕ್ಕೆ, ಕ್ಯಾಂಪಸ್ ಸಂದರ್ಶನಗಳಿಗೆ ಹೆಚ್ಚಿನ ಒತ್ತು ನೀಡಿದ್ದು, ಉದ್ಯೋಗಕ್ಕೆ ಒತ್ತು ನೀಡಿ ಉದ್ಯೋಗ ನೀತಿಯನ್ನು ರೂಪಿಸಲಾಗುತ್ತಿದೆ. ನಮ್ಮ ಸರ್ಕಾರ ಯುವಕರಿಗೆ ಎಲ್ಲ ರೀತಿಯ, ಶಿಕ್ಷಣ, ಉದ್ಯೋಗ ಹಾಗೂ ಸಬಲೀಕರಣವನ್ನು ಒದಗಿಸಲು ಬದ್ಧರಾಗಿ ಕೆಲಸ ಮಾಡಲಾಗುತ್ತಿದೆ ಎಂದರು.

ದೇಶದ ಅಖಂಡತೆ, ಏಕತೆ, ಗಡಿಗಳನ್ನು ಭದ್ರ ಪಡಿಸುವ ಮುತ್ಸದ್ದಿ :
ರಾಜಕಾರಾಣಿಯ ಕಣ್ಣು ಮುಂದಿನ ಚುನಾವಣೆಯ ಮೇಲಿದ್ದರೆ, ಒಬ್ಬ ಮುತ್ಸದ್ದಿಯ ಕಣ್ಣು ಮುಂದಿನ ಜನಾಂಗದ ಮೇಲಿರುತ್ತದೆ. ಹಲವಾರು ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದ ದೇಶದ ಸಮಸ್ಯೆಗಳನ್ನು ಬಗೆಹರಿಸಲು ಆರ್ಟಿಕಲ್ 371 ಇರಬಹುದು, ಹಲವಾರು ಕಾನೂನು ಗಳನ್ನು ತೆಗೆದುಹಾಕುವುದಿರಬಹುದು. ದೇಶದ ಅಖಂಡತೆ, ಏಕತೆ, ಗಡಿಗಳನ್ನು ಭದ್ರ ಪಡಿಸುವುದನ್ನು ಸ್ಪಷ್ಟವಾದ ವಿಚಾರಗಳಿಂದ ಮುನ್ನಡೆಸುತ್ತಿರುವ ಮುತ್ಸದ್ಧಿ ಅಮಿತ್ ಶಾ ಎಂದರು.

ಶಿಕ್ಷಣದಿಂದ ಜವಾಬ್ದಾರಿಯುತ ಸಮಾಜ ನಿರ್ಮಾಣ :
ಉನ್ನತ ಶಿಕ್ಷಣ ಸಚಿವ ಡಾ: ಅಶ್ವತ್ಥ್ ನಾರಾಯಣ್ ಬದಲಾವಣೆ ತರಲು ಶ್ರಮಿಸುತ್ತಿದ್ದಾರೆ. ಶಿಕ್ಷಣದ ಉದ್ದೇಶಕ್ಕಾಗಿ ವಿವಿಧ ಶಿಕ್ಷಣ ಸಂಸ್ಥೆಗಳು , ಶಿಕ್ಷಣ ತಜ್ಞರು, ಪ್ರಾಧ್ಯಾಪಕರು ಶಿಕ್ಷಣ ದಲ್ಲಿ ಬದಲಾವಣೆ ತರಲು ನಮಗೆ ಸಹಕಾರ ನೀಡಬೇಕೆಂದು ಕರೆ ನೀಡಿದರು. ಇದರಿಂದ ಹೊಸ ಸಮಾಜ, ಜವಾಬ್ದಾರಿ ಯುತ ಹಾಗೂ ದೇಶವನ್ನು ಪ್ರೀತಿಸುವ ಸಮಾಜವನ್ನು ಕಟ್ಟಲು ಸಾಧ್ಯ ಎಂದರು.

ಎಫ್.ಎಸ್.ಎಲ್ ಪ್ರಯೋಗಾಲಯ :
ಗೃಹ ಇಲಾಖೆಯ ಎಫ್.ಎಸ್.ಎಲ್ ಪ್ರಯೋಗಾಲಯಗಳನ್ನು ಎಲ್ಲ ವಿಭಾಗಳಲ್ಲಿ ತೆರೆಯಲಾಗಿದೆ. ಅಪರಾಧಗಳನ್ನು ತಡೆಯಲು ಹಾಗೂ ಅಪರಾಧಿಗಳನ್ನು ಪತ್ತೆ ಹಚ್ಚಲು ಇದರಿಂದ ನೆರವಾಗಿದೆ ಎಂದರು.

ಕೇಂದ್ರ ಸಚಿವ ಪ್ರಲ್ಹಾದ ಜೋಷಿ, ಗೃಹ ಸಚಿವ ಅರಗ ಜ್ಞಾನೇಂದ್ರ, ಉನ್ನತ ಶಿಕ್ಷಣ ಸಚಿವ ಡಾ. ಸಿ ಎನ್ ಅಶ್ವತ್ಥ ನಾರಾಯಣ, ಸಂಸದ ಪಿ ಸಿ ಮೋಹನ್, ಡಿಜಿಪಿ ಪ್ರವೀಣ ಸೂದ ಮತ್ತು ಇತರರು ಉಪಸ್ಥಿತರಿದ್ದರು.
ಶ್ರೀರಾಮ ಮಂದಿರದ ಕಟ್ಟಡ ಕಾಮಗಾರಿ ಕಾಲಂ ಪೂಜೆ ನೆರವೇರಿಸಿದ ಲಕ್ಷ್ಮಿ ಹೆಬ್ಬಾಳಕರ್, ಚನ್ನರಾಜ ಹಟ್ಟಿಹೊಳಿ​

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button