ಪ್ರಗತಿವಾಹಿನಿ ಸುದ್ದಿ, ಬೆಳಗಾವಿ – ಮುಖ್ಯಮಂತ್ರಿ ಸ್ಥಾನಕ್ಕಾಗಿ 2,500 ಕೋಟಿ ರೂ. ಕೇಳಿದವರ ಹಾಗೂ ನೂರು ಕೋಟಿ ರೂ. ಕೊಟ್ಟು ಮಂತ್ರಿಯಾದವರ ಕುರಿತು ಸಮಗ್ರ ತನಿಖೆ ನಡೆಸಬೇಕು ಎಂದು ಮಾಜಿ ಮುಖ್ಯಮಂತ್ರಿ, ವಿಧಾನ ಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.
ಬೆಳಗಾವಿಯಲ್ಲಿ ಪತ್ರಕರ್ತರೊಂದಿಗೆ ಮಾತನಾಡಿದ ಅವರು, ಶಾಸಕ ಬಸನಗೌಡ ಪಾಟೀಲ ಯತ್ನಾಳ ಅವರ ಹೇಳಿಕೆ ಕುರಿತು ತನಿಖೆ ನಡೆಸುವಂತೆ ಒತ್ತಾಯಿಸಿದರು.
ಯತ್ನಾಳ್ ಗೆ ಹಣ ಕೇಳಿದರವರು ಯಾರು? ಹಿಂದೆ ಸಿಎಂ ಆದವರು, ಯಡಿಯೂರಪ್ಪ ಎಷ್ಟ ಕೋಟಿ ಕೊಟ್ಟು ಸಿಎಂ ಆಗಿದ್ದಾರೆ. ಮಂತ್ರಿಗಳು ಎಷ್ಟು ದುಡ್ಡು ಕೊಟ್ಟು ಆಗಿದ್ದಾರೆ. ಬಸವರಾಜ ಬೊಮ್ಮಾಯಿ ಎಷ್ಟು ಕೋಟಿ ಕೊಟ್ಟು ಸಿಎಂ ಆಗಿದ್ದಾರೆ. ಅಷ್ಟೊಂದು ಹಣ ಎಲ್ಲಿಂದ ಬಂತು ಎನ್ನುವ ತನಿಖೆಯಾಗಬೇಕು ಎಂದರು.
ಬೊಮ್ಮಾಯಿ ಸರಕಾರದಲ್ಲಿ ಆದಷ್ಟು ಹಗರಣಗಳು ಯಾವ ಕಾಲದಲ್ಲಿಯೂ ಆಗಿಲ್ಲ. ಇಷ್ಟು ಭ್ರಷ್ಟ ಸರಕಾರ ನಾನು ನೋಡಿಯೇ ಇಲ್ಲ. ಪಿಎಸ್ ಐ ನೇಮಕದಲ್ಲಿ ಭ್ರಷ್ಟಾಚಾರ, ಕಾಮಗಾರಿ ಮಾಡಲು 40% ಕಮಿಷನ್ ಕೊಡಬೇಕು ಎಂದು ಗುತ್ತಿಗೆದಾರರು ಪ್ರಧಾನಿ ಮೋದಿಗೆ ಪತ್ರ ಬರೆದು 10 ತಿಂಗಳಾದರೂ ಯಾವುದೇ ಕ್ರಮ ಇಲ್ಲ. ಪ್ರಧಾನಿ ನರೇಂದ್ರ ಮೋದಿ ಭ್ರಷ್ಟಾಚಾರಕ್ಕೆ ಸಾಥ್ ಕೊಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
2020 ಜನೇವರಿಯಿಂದ 2021 ಜನೇವರಿವರೆಗೆ ಭಾರತದಲ್ಲಿ 47 ಲಕ್ಷ ಜನ ಕೊರೊನಾಗೆ ಬಲಿಯಾಗಿದ್ದಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ಮಾಹಿತಿ ನೀಡಿದೆ. ಆದರೆ 5ಲಕ್ಷ 20 ಸಾವಿರ ಮಾತ್ರ ಮೃತಪಟ್ಟಿದ್ದಾರೆ. ವಿಶ್ವ ಆರೋಗ್ಯ ಸಂಸ್ಥೆ ಸುಳ್ಳು ಹೇಳುತ್ತಿದೆ ಎಂದು ಅಧಿಕಾರಿ ಕಡೆಯಿಂದ ಕೇಂದ್ರ ಸರಕಾರ ಹೇಳಿಸಿದೆ. ಕೊರೊನಾದಿಂದ ಮೃತಪಟ್ಟವರ ಸಂಖ್ಯೆಯ ಬಗ್ಗೆ ಕೇಂದ್ರ ಮತ್ತು ರಾಜ್ಯ ಸರಕಾರ ಸುಳ್ಳು ಹೇಳುತ್ತಿದೆ. ಸರಕಾರ ಲೆಕ್ಕ ಮಾಡಿಲ್ಲ. ಸುಳ್ಳು ಹೇಳುತ್ತಿದ್ದಾರೆ. ಪ್ರಧಾನಿಯೂ ಸಹ ಸುಳ್ಳು ಹೇಳುತ್ತಿದ್ದಾರೆ. ಕೊರೊನಾದಿಂದ ಮೃತಪಟ್ಟವರು ಎಷ್ಟು ಎಂದು ಡೆತ್ ಆಡಿಟ್ ಆಗಬೇಕು. ಮೃತಪಟ್ಟ ಕುಟುಂಬಸ್ಥರಿಗೆ ನಾಲ್ಕು ಲಕ್ಷ ರೂ. ಪರಿಹಾರ ನೀಡಬೇಕು. ಪ್ರಧಾನಿ ಮತ್ತು ಆರೋಗ್ಯ ಇಲಾಖೆ ಸುಳ್ಳು ಹೇಳಿ ತಪ್ಪು ಮಾಹಿತಿ ಕೊಟ್ಟಿದ್ದಾರೆ. ದೇಶದ ಜನರ ಕ್ಷಮೆ ಕೇಳಬೇಕೆಂದು ಒತ್ತಾಯಿಸಿದರು.
ಸಚಿವ ಪ್ರಭು ಚವ್ಹಾಣ ಪಿಎಸ್ಐ ಪರೀಕ್ಷೆಯಲ್ಲಿ ಅಕ್ರಮವಾಗಿದೆ ಎಂದು ಮುಖ್ಯಮಂತ್ರಿಗೆ ಪತ್ರ ಬರೆದಿದ್ದಾರೆ. ಆದರೆ ಗೃಹ ಸಚಿವ ಆರಗ ಜ್ಞಾನೇಂದ್ರ ಯಾವುದೇ ಅಕ್ರಮ ನಡೆದಿಲ್ಲ. ಕಾನೂನು ಬದ್ಧವಾಗಿ ನಡೆದಿದೆ ಎಂದು ತಿಳಿಸಿದ್ದಾರೆ. ಈಗ ಅಕ್ರಮ ನಡೆದಿದೆಯಲ್ಲ. ಆರಗ ಜ್ಞಾನೇಂದ್ರ ಸಚಿವನಾಗಿ ಮುಂದುವರೆಯಲು ಯೋಗ್ಯನಲ್ಲ. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಾನ ಮರ್ಯಾದೆ ಇದ್ದರೆ ಅವರನ್ನು ಸಚಿವ ಸಂಪುಟದಿಂದ ಕಿತ್ತು ಹಾಕಬೇಕು ಎಂದರು.
ಶಾಸಕರಾದ ಲಕ್ಷ್ಮೀ ಹೆಬ್ಬಾಳ್ಕರ್, ಗಣೇಶ ಹುಕ್ಕೇರಿ ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ, ಮಾಜಿ ಸಚಿವ ಎ.ಬಿ.ಪಾಟೀಲ, ಕಾಂಗ್ರೆಸ್ ಗ್ರಾಮೀಣ ಜಿಲ್ಲಾಧ್ಯಕ್ಷ ವಿನಯ ನಾವಲಗಟ್ಟಿ, ಲಕ್ಷ್ಮಣರಾವ್ ಚಿಂಗಳೆ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ