ಪ್ರಗತಿವಾಹಿನಿ ಸುದ್ದಿ; ಬೆಂಗಳೂರು: ಇತ್ತೀಚಿನ ದಿನಗಳಲ್ಲಿ ರಾಜಧಾನಿ ಬೆಂಗಳೂರಿನ ರಸ್ತೆಗುಂಡಿಗೆ ಬಲಿಯಾಗುತ್ತಿರುವವರ ಸಂಖ್ಯೆ ಹೆಚ್ಚು. ಅವೈಜ್ಞಾನಿಕ ಹಂಪ್, ಎಲ್ಲೆಂದರಲ್ಲಿ ಕಾಣುವ ಹೊಂಡಗಳು, ಅರ್ಧಕ್ಕೆ ನಿಂತಿರುವ ರಸ್ತೆ ಕಾಮಗಾರಿಗಳಿಂದ ಉಂತಾದ ಗುಂಡಿಗಳಿಂದಾಗಿ ವಾಹನ ಸವಾರರು ಜೀವ ಕೈಯಲ್ಲಿ ಹಿಡಿದು ಓಡಾಡಬೇಕಾದ ಸ್ಥಿತಿ. ಕನ್ನಡದ ಕಿರುತೆರೆ ಖ್ಯಾತ ನಟಿ, ಡಬ್ಬಿಂಗ್ ಕಲಾವಿದೆ ರಸ್ತೆ ಅಪಘಾತಕ್ಕೀಡಾಗಿ ಗಂಭೀರವಾಗಿ ಗಾಯಗೊಂಡಿದ್ದಾರೆ.
ನಿನ್ನೆ ತಡರಾತ್ರಿ ಶೂಟಿಂಗ್ ಮುಗಿಸಿ ಬೈಕ್ ನಲ್ಲಿ ಮನೆಗೆ ತೆರಳುತ್ತಿದ್ದ ವೇಳೆ ಬೆಂಗಳೂರಿನ ಎನ್ ಆರ್ ಕಾಲೋನಿ ಬಳಿಯ ಹಂಪ್ ಬಳಿಯೇ ಇದ್ದ ರಸ್ತೆ ಗುಂಡಿ ಕಾಣದೆ ಬೈಕ್ ಸಮೇತ ಬಿದ್ದಿದ್ದಾರೆ. ಗಂಭೀರವಾಗಿ ಗಾಯಗೊಂಡಿರುವ ಸುನೇತ್ರಾ ಪಂಡಿತ್ ಅವರನ್ನು ಸ್ಥಳೀಯರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಬಸವನಗುಡಿ ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಅವೈಜ್ಞಾನಿಕ ಹಂಪ್ ಹಾಗೂ ರಸ್ತೆ ಗುಂಡಿಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ