ಪ್ರಗತಿವಾಹಿನಿ ಸುದ್ದಿ, ಗುರ್ಲಾಪುರ:
ಮನುಷ್ಯ ಸತತ ಪರಿಶ್ರಮ ನಿರಂತರ ಪ್ರಯತ್ನಗಳಿಂದಾಗ ಯಶಸ್ವಿ ಜೀವನ ನಡೆಸಲು ಸಾಧ್ಯ. ನ್ಯೂನತೆಗಳನ್ನೆ ಪ್ರಮುಖವಾಗಿಸಿಕೊಳ್ಳದೆ ಮೆಟ್ಟಿ ನಿಂತು ಮಾದರಿಯ ಜೀವನ ನಮ್ಮದಾಗಿಸಿಕೊಳ್ಳಬೇಕು ಎಂದು ಚಿಕ್ಕೋಡಿ ಡಿಡಿಪಿಐ ಎಮ್ ಜಿ ದಾಸರ ಹೇಳಿದರು.
ಅವರು ಸಮೀಪದ ಮುಗಳಖೋಡ ತೋಟದಲ್ಲಿ ನೂತನವಾಗಿ ಪ್ರಾರಂಭಗೊಂಡ ವಿದ್ಯಾ ಬಳಪ ತಯಾರಿಕಾ ಘಟಕದ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು. ಶಿಕ್ಷಣವನ್ನು ಪಡೆದುಕೊಳ್ಳಲು ಪ್ರಮುಖವಾಗಿ ಬಳಪದ ಪಾತ್ರ ಹಿರಿದಾಗಿದೆ. ರೈತ ಬಿತ್ತಿದ ಬೀಜದಿಂದ ಫಸಲು ಪಡೆಯುತ್ತಾನೆ. ಅದರಂತೆ ಶಿಕ್ಷಣದಲ್ಲಿಯೂ ಕಪ್ಪು ಹಳಗೆಯ ಮೇಲೆ ಬಿಳಿ ಬಳಪ ಬಳಸಿದಾಗ ಮಾತ್ರ ಶೈಕ್ಷಣಿಕವಾಗಿ ಪ್ರತಿಯೂಬ್ಬರು ಬೆಳೆಯಲು ಸಾಧ್ಯವಾಗುವುದು. ಅಂಗವಿಕಲನಾಗಿರುವ ಬಾಳಪ್ಪ ಮುಗಳಖೋಡ ಸತತ ಪ್ರಯತ್ನದ ಫಲವಾಗಿ ಸ್ವತಃ ಬಳಪ ತಯಾರಿಕಾ ಘಟಕ ಪ್ರಾರಂಭಿಸಿರುವುದು ಹೆಮ್ಮೆಯ ವಿಷಯವಾಗಿದೆ. ಇಂದಿನ ದಿನಗಳಲ್ಲಿ ನಾವಿನ್ಯಯುತ ಉದ್ಯೋಗಗಳಲ್ಲಿ ನಮ್ಮನ್ನು ತೊಡಿಗಿಸಿಕೊಳ್ಳುವ ಮೂಲಕ ಜೀವನದಲ್ಲಿ ಆರ್ಥಿಕವಾಗಿ ಪ್ರಬಲರಾಗಲು ಸಾಧ್ಯ ಎಂದು ಹೇಳಿದರು.
ಮೂಡಲಗಿ ಬಿಇಒ ಅಜೀತ ಮನ್ನಿಕೇರಿ ಮಾತನಾಡಿ, ಪ್ರತಿಯೊಬ್ಬರಿಗೂ ಜೀವನ ನಡೆಸಲು ಸಾಮಾಜಿಕ ವ್ಯವಸ್ಥೆಯಲ್ಲಿ ಮುಕ್ತ ಅವಕಾಶಗಳಿವೆ. ಅಂಗವಿಕಲತೆ ಹಾಗೂ ಇನ್ನಿತರ ಕಾರಣದ ನೆಪವೊಡ್ಡಿ ಕಾಲಹರಣ ಮಾಡದೇ ಸದಾ ಉತ್ಸಾಹ ದಿಂದ ಅನೇಕ ಹಿರಿಯ ಹಾಗೂ ಯಶಸ್ವಿ ಉದ್ಯಮಿದಾರರ ಸಲಹೆ ಸಹಾಯ ಪಡೆದು ಆರ್ಥಿಕವಾಗಿ ಬೆಳೆಯುವುದರ ಮೂಲಕ ಸಮಾಜದಲ್ಲಿ ತಮ್ಮ ಸಾಧನೆ ತೋರಿಸಬೇಕು ಎಂದು ಹೇಳಿದರು.
ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿದ್ದ ಮೂಡಲಗಿ ಸಿದ್ಧ ಸಂಸ್ಥಾನ ಮಠದ ಪೀಠಾಧಿಕಾರಿ ಶ್ರೀ ಶ್ರೀಪಾದ ಬೋಧ ಮಹಾಸ್ವಾಮೀಜಿ ಮಾತನಾಡಿ, ಬಾಳಪ್ಪ ಮುಗಳಖೋಡ ನಿರಂತರವಾಗಿ ಸಂಪರ್ಕಕ್ಕೆ ಬಂದು ತನ್ನಲ್ಲಿರುವ ದುಡಿಯ ಬೇಕೆಂಬ ಛಲವನ್ನು ಕೈಚಲ್ಲದೆ ಬಿಟ್ಟು ಬಿಡದೆ ಶ್ರಮವಹಿಸಿರುವುದು ಮೆಚ್ಚುವಂತಹುದು. ಈ ಸಮಾಜದಲ್ಲಿ ಅಂಗವೈಕಲ್ಯವನ್ನೆ ದುರುಪಯೋಗ ಮಾಡಿಕೊಂಡು ಕೇವಲ ಸರಕಾರಿ ಸೌವಲತ್ತುಗಳನ್ನೆ ಬಳಸಿಕೊಂಡು ವ್ಯರ್ಥ ಕಾಲಹರಣ ಮಾಡುವವರೆ ಹೆಚ್ಚಾಗಿದ್ದಾರೆ. ಅಂತಹವರಿಗೆ ಮಾದರಿ ಎಂಬಂತೆ ವಿದ್ಯಾ ಬಳಪ ತಯಾರಿಕಾ ಘಟಕ ಪ್ರಾರಂಭಿಸಿರುವುದು ಹೆಮ್ಮೆಯ ವಿಷಯವಾಗಿದೆ ಎಂದು ಆಶಿರ್ವಚನ ನೀಡಿದರು.
ಸಮಾರಂಭದಲ್ಲಿ ಸಮನ್ವಯಾಧಿಕಾರಿ ಬಿ.ಎಚ್ ಮೋರೆ, ಬಿ.ಆರ್.ಪಿಗಳಾದ ಕೆ.ಎಲ್.ಮೀಶಿ, ಬಿ.ಎಮ್ ನಂದಿ, ಮಾಜಿ ಪುರಸಭೆ ಸದಸ್ಯ ಆರ್.ಬಿ ನೇಮಗೌಡರ, ಗ್ರಾ.ಪಂ ಸದಸ್ಯ ಶ್ರೀಶೈಲ್ ಮುಗಳಖೋಡ, ಮಹಾದೇವ ಮುಕ್ಕುಂದ, ಮಲ್ಲಪ್ಪ ಮುಗಳಖೋಡ, ಮಲಕಾರಿ ಹಳ್ಳೂರ, ದುಂಡಪ್ಪ ಮುಗಳಖೋಡ, ಪ್ರಕಾಶ ಸುಳ್ಳನವರ, ಮೂಡಲಗಿ ವಲಯ ವ್ಯಾಪ್ತಿಯ ಸಿ.ಆರ್.ಪಿಗಳು ಹಾಗೂ ವಿದ್ಯಾ ಬಳಪ ತಯಾರಿಕಾ ಘಟಕದ ವ್ಯವಸ್ಥಾಪಕ ದಿವ್ಯಾಂಗ ಬಾಳಪ್ಪ ಮುಗಳಖೋಡ ಮತ್ತಿತರರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಮಲ್ಲಿಕಾರ್ಜುನ ಮಠಪತಿ ನಿರೂಪಿಸಿದರು. ಶಶಿಕಾಂತ ಪಾಲಬಾವಿ ಸ್ವಾಗತಿಸಿ ವಂದಿಸಿದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ