ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಮಹಿಳೆಯರು ಧೈರ್ಯವಾಗಿ ಮನೆಯಿಂದ ಹೊರಗೆ ಬಂದು ತಮ್ಮ ಪ್ರತಿಭೆಗಳನ್ನು ಪ್ರದರ್ಶಿಸುವ ಜೊತೆಗೆ ಎಲ್ಲ ಕ್ಷೇತ್ರಗಳಲ್ಲೂ ಸಬಲರಾಗುವಂತೆ ಮಾಡುವುದೇ ನಿಯತಿ ಫೌಂಡೇಶನ್ ಗುರಿಯಾಗಿದೆ ಎಂದು ಫೌಂಡೇಶನ್ ಅಧ್ಯಕ್ಷೆ ಡಾ.ಸೋನಾಲಿ ಸರ್ನೋಬತ್ ಹೇಳಿದ್ದಾರೆ.
ಭಾಗ್ಯನಗರದಲ್ಲಿ ಟೈಮ್ ಕಿಡ್ಸ್ ಆಯೋಜಿಸಿದ್ದ ‘ಹೋಮ್ ಮಿನಿಸ್ಟರ್ ಸೀಸನ್ 2’ ಕಾರ್ಯಕ್ರಮದಲ್ಲಿ ಅವರು ಮಾತನಾಡುತ್ತಿದ್ದರು. ಜಗತ್ತು ಎಷ್ಟೇ ಮುಂದುವರಿದರೂ ಮಹಿಳೆಯರು ಮನೆಯಿಂದ ಹೊರಗೆ ಬರಲು ಯೋಚಿಸುತ್ತಾರೆ. ಮನೆಯೊಳಗಿನ ಜವಾಬ್ದಾರಿ ಒಂದು ಕಾರಣವಾದರೆ, ಸಮಾಜ ಏನು ತಿಳಿಯುತ್ತದೆಯೋ ಎನ್ನುವ ಹಿಂಜರಿಕೆ ಮತ್ತೊಂದು ಕಾರಣ. ಇದಕ್ಕೆಲ್ಲ ಕೊನೆ ಹಾಡಿ ಧೈರ್ಯವಾಗಿ ಮನೆಯಿಂದ ಹೊರಗೆ ಬಂದು ಸಮಾಜದ ಎಲ್ಲ ಆಗುಹೋಗುಗಳಲ್ಲಿ ಭಾಗಿಯಾಗುವಂತೆ ಮಾಡುವುದು ನಮ್ಮ ಉದ್ಧೇಶವಾಗಿದೆ ಎಂದು ಅವರು ತಿಳಿಸಿದರು.
ಕಾನೂನು ತಿಳಿವಳಿಕೆ, ಸರಕಾರದ ಯೋಜನೆಗಳ ತಿಳಿವಳಿಕೆ, ತನಗಿರುವ ಅವಕಾಶಗಳನ್ನು ಅರಿತಾಗ ಯಾವುದೇ ಹಿಂಜರಿಕೆ ಇರುವುದಿಲ್ಲ. ಇಂದು ಪುರುಷರೂ ಕೂಡ ಮಹಿಳೆಯರಿಗೆ ಸಾಮಾಜಿಕ ಕೆಲಸದಲ್ಲಿ ಪಾಲ್ಗೊಳ್ಳಲು ಪ್ರೋತ್ಸಾಹಿಸುತ್ತಿದ್ದಾರೆ. ಸಮಾಜ ಬದಲಾಗುತ್ತಿರುವುದರ ಪ್ರಯೋಜನ ಪಡೆದು ನಿಮ್ಮ ಕಾಲ ಮೇಲೆ ನೀವು ನಿಲ್ಲುವಂತೆ ಮುಂದೆ ಬನ್ನಿ ಎಂದು ಸೋನಾಲಿ ಕರೆ ನೀಡಿದರು.
ನೂರಾರು ಮಹಿಳೆಯರು ಹೋಮ್ ಮಿನಿಸ್ಟರ್ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಿಂಜಲ್ ಅಮಟೆ ಹೋಮ್ ಮಿನಿಸ್ಟರ್ ಆಗಿ ಆಯ್ಕೆಯಾದರು. ಪುಷ್ಪಾ ಹೈಬತ್ತಿ ಬೆಸ್ಟ್ ಡ್ರೆಸ್ ಅವಾರ್ಡ್, ನಿಖಿತಾ ಹೆರೇಕರ್ ಬೆಸ್ಟ್ ಹೇರ್ ಸ್ಟೈಲ್ ಅವಾರ್ಡ್ ಪಡೆದರು.
ಡಾ.ಸಮೀರ್ ಸರ್ನೋಬತ್, ದೀಪಾ ಪ್ರಭುದೇಸಾಯಿ, ಭಾಸ್ಕರ್ ಪಾಟೀಲ, ಕಿಶೋರ ಕಾಕಡೆ, ರಾಜಶ್ರೀ ಜಾಧವ, ಮೋನಾಲಿ ಶಹಾ, ಸೀಮಾ ಸೋಲ್ಲಾಪುರೆ, ತುಳಸಾ ಪಾಟೀಲ ಮೊದಲಾದವರು ಕಾರ್ಯಕ್ರಮದಲ್ಲಿ ಇದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ