Kannada NewsLatest

ಲಿಂಗಾಯಿತರು ಸಂಘಟಿತರಾಗದಿದ್ದರೆ ಭವಿಷ್ಯವಿಲ್ಲ: ಡಾ ತೋಂಟದ ಸಿದ್ಧರಾಮ ಸ್ವಾಮೀಜಿ

ಪ್ರಗತಿವಾಹಿನಿ ಸುದ್ದಿ; ಬೆಳಗಾವಿ : ಲಿಂಗಾಯತರೆಲ್ಲ ಸಂಘಟಿತರಾಗದಿದ್ದರೆ ಅವರಿಗೆ ಭವಿಷ್ಯವೇ ಇಲ್ಲದಂತಾಗುತ್ತದೆ ಒಳಪಂಗಡಗಳೆಲ್ಲ ಭಿನ್ನಮತ ಮರೆತು ಸಂಘಟಿತರಾಗಲೇ ಬೇಕಾದ ಕಾಲ ಬಂದಿದೆ ಎಂದು ಗದುಗಿನ ಶ್ರೀ ಎಡೆಯೂರು ಜಗದ್ಗುರು ತೋಂಟದಾರ್ಯ ಸಂಸ್ಥಾನ ಮಠದ ಜಗದ್ಗುರು ಡಾ ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು .

ಅವರಿಂದು ಬೆಳಗಾವಿಯಲ್ಲಿ ಜಾಗತಿಕ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕ ಮತ್ತು ರಾಷ್ಟ್ರೀಯ ಬಸವ ಸೇನೆ ಬೆಳಗಾವಿ ಜಿಲ್ಲಾ ಘಟಕ ಸಂಯುಕ್ತವಾಗಿ ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ಬಸವ ದರ್ಶನ ಪ್ರವಚನ ಮಂಗಲ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡುತ್ತಿದ್ದರು .

ಲಿಂಗಾಯಿತ ಸಮಾಜದ ಸಂಘಟನೆ ರಾಜಕಾರಣಿಗಳಿಂದ ,ರಾಜಕೀಯ ವ್ಯಕ್ತಿಗಳಿಂದ ಮತ್ತು ರಾಜಕೀಯ ಪಕ್ಷಗಳಿಂದ ಸಾಧ್ಯವಿಲ್ಲ .ರಾಜಕೀಯೇತರ ವ್ಯಕ್ತಿಗಳಿಂದ ಮಾತ್ರ ಅದು ಸಾಧ್ಯ, ರಾಜಕಾರಣಿಗಳು ಸಂಘಟನೆಗೆ ಬಂದರೆ ಸಂಘಟನೆ ರಾಜಕೀಯಕ್ಕೆ ಬಳಕೆಯಾಗುತ್ತದೆ ,ಅದಾಗಬಾರದು ಲಿಂಗಾಯತ ಸಂಘಟನೆಯಿAದ ರಾಜಕೀಯವನ್ನು ರಾಜಕಾರಣಿಗಳನ್ನು ದೂರ ಇಡಬೇಕು ಆಡಳಿತ ನಡೆಸುವವರು ಲಿಂಗಾಯಿತರನ್ನೇ ಕೇಳಿ ಆಡಳಿತ ನಡೆಸುವಂತಾಗಬೇಕು ,ಲಿಂಗಾಯತರು ಕಿಂಗ್ ಆಗುವುದಕ್ಕಿಂತ ಕಿಂಗ್ ಮೇಕರ್ ಆಗಬೇಕು ಈ ನಿಟ್ಟಿನಲ್ಲಿ ಲಿಂಗಾಯತರು ಚಿಂತನೆ ಮಾಡಬೇಕು ,ಯಾರನ್ನೇ ಆಗಲಿ ದ್ವೇಷಿಸುವುದು ಬೇಡ ,ನಮ್ಮ ಧರ್ಮದ ಬಗ್ಗೆ ಅಭಿಮಾನ ಹೊಂದಬೇಕು ಪರಧರ್ಮದ ಬಗ್ಗೆ ಸಹಿಷ್ಣುತೆ ಬೇಕು ,ಪರರನ್ನು ಮತ್ತು ಪರರ ಧರ್ಮವನ್ನು ದ್ವೇಷ ಮಾಡಿ ದೇಶ ಕಟ್ಟಲು ಸಾಧ್ಯವಿಲ್ಲ ಎಂದು ಶ್ರೀಗಳು ನುಡಿದರು .

ವೀರಶೈವ ಹೆಸರಿಟ್ಟು ಲಿಂಗಾಯಿತ ಅಸ್ಮಿತೆಗೆ ಧಕ್ಕೆ ಉಂಟಾಗುತ್ತಿದೆ ,ಅಡ್ಡಗಾಲಾಗುತ್ತಿದೆ ವೀರಶೈವ ಅದೊಂದು ಪಂಗಡ ವೀರಶೈವರನ್ನು ದೂರವಿಟ್ಟಿಲ್ಲ ,ವೀರಶೈವ ಮಹಾಸಭೆಯ ದ್ವಂದ್ವ ನೀತಿಯಿಂದ ಸಂಘಟನೆಗೆ ಕಷ್ಟವಾಗುತ್ತಿದೆ ,ಒಂದು ಕಡೆ ತಾವು ಹಿಂದೂಗಳೆಂದು ಹೇಳಿಕೊಳ್ಳುವ ವೀರಶೈವರು ಮತ್ತೊಂದು ಕಡೆ ಪ್ರತ್ಯೆಕ ಧರ್ಮ, ಸ್ವತಂತ್ರ ಧರ್ಮ ಬೇಕೆಂದು ಬೇಡಿಕೆ ಮಂಡಿಸುವುದು ಸಾಧ್ಯವಿಲ್ಲ ,ಅವೈದಿಕ ಧರ್ಮ ಲಿಂಗಾಯತ ಅದಕ್ಕೆ ಸ್ವತಂತ್ರ ಧರ್ಮದ ಸಾಂವಿಧಾನಿಕ ಮಾನ್ಯತೆ ಸಿಗಲೇಬೇಕು,ಇಂದಲ್ಲ ನಾಳೆ ಸಿಕ್ಕೇಸಿಗುತ್ತದೆ, ಆಗ ಲಿಂಗಾಯಿತರ ಬಾಳು ಬೆಳಗುತ್ತದೆ ,ಭವಿಷ್ಯದ ದೃಷ್ಟಿಕೋನ ಬಹಳ ಮುಖ್ಯ ಅದಕ್ಕಾಗಿ ಹೋರಾಟ ಅಗತ್ಯ ಸಂಘಟನೆ ಅಗತ್ಯ ಲಿಂಗಾಯತರನ್ನು ಒಂದುಗೂಡಿಸುವದಕಾಗಿ ಸಂಘಟನೆಯನ್ನು ಬಲಿಷ್ಠ ಮಾಡುವುದಕ್ಕಾಗಿ ಜಾಗತಿಕ ಲಿಂಗಾಯತ ಮಹಾಸಭೆ ಶ್ರಮಿಸುತ್ತಿದೆ, ಎಲ್ಲರನ್ನೂ ಸಂಘಟಿಸುವ ಕಾರ್ಯಕ್ರಮವಾಗಿ ಬಸವಜಯಂತಿ ರೂಪುಗೊಳ್ಳುತ್ತಿದೆ, ಈ ಹಿನ್ನೆಲೆಯಲ್ಲಿ ಈ ವರ್ಷ ಬಸವ ಜಯಂತಿಯನ್ನು ವಿಧಾಯಕವಾಗಿ ಆಚರಿಸಲಾಯಿತು ಎಂದು ಡಾ.ತೋಂಟದ ಶ್ರಿಗಳು ಹೇಳಿದರು .

ಎಲ್ಲರ ಚಿತ್ತ ಈಗ ಬೆಳಗಾವಿಯತ್ತ ಆಗಿದೆ ,ನಾಡಿನ ಜನ ಬೆಳಗಾವಿ ಕಡೆ ನೋಡುತ್ತಿದ್ದಾರೆ, ಸಮಸ್ತ ಲಿಂಗಾಯಿತರಲ್ಲಿ ಬಸವ ಪ್ರಜ್ಞೆ ಮೂಡಬೇಕು ಕಾಯಕ ಮತ್ತು ದಾಸೋಹ ತತ್ವಗಳಿಂದ ಎಂದಿಗೂ ಬಡತನ ಬಾರದು ಇದನ್ನು ಲಿಂಗಾಯತರೆಲ್ಲ ಅರ್ಥ ಮಾಡಿಕೊಳ್ಳಬೇಕು ಎಂದರು.

“ಬಸವಪರ ಲಿಂಗಾಯತ ಮಠಗಳ ಒಕ್ಕೂಟ” ರಚನೆ ಆಗಿದೆ ೧೫೦ ಮಠಗಳ ಮಠಾಧೀಶರು ಸ್ವಯಂ ಪ್ರೇರಣೆಯಿಂದ ಇದರಲ್ಲಿ ಸೇರ್ಪಡೆಯಾಗಿದ್ದಾರೆ ಇದೊಂದು ಸಕಾರಾತ್ಮಕ ವಾತಾವರಣ, ನೂರಾರು ವರ್ಷಗಳ ಹಿಂದೆ ಧರ್ಮ ಸಂರಕ್ಷಣೆ ಮತ್ತು ಧರ್ಮ ಜಾಗೃತಿಗಾಗಿ ಗದುಗಿನ ತೋಂಟದ ಸಿದ್ದಲಿಂಗ ಶಿವಯೋಗಿಗಳಿಂದಲೇ ಲಿಂಗಾಯತ ಮಠಗಳ ಪರಂಪರೆ ಪ್ರಾರಂಭವಾಯಿತು. ಅದನ್ನು ನಾವೀಗ ಮುನ್ನಡೆಸುತ್ತಿದ್ದೇವೆ ಎಂದರು .

ಸಮಾರಂಭದಲ್ಲಿ ಸಾನ್ನಿಧ್ಯ ವಹಿಸಿದ್ದ ಇಳಕಲ್ಲಿನ ಚಿತ್ತರಗಿ ಸಂಸ್ಥಾನಮಠದ ಶ್ರೀ ಗುರುಮಹಾಂತ ಸ್ವಾಮೀಜಿ ಮಾತನಾಡಿ ಲಿಂಗಾಯತರು ಮಾನಸಿಕ ಗುಲಾಮಗಿರಿಯಿಂದ
ಹೊರಬರಬೇಕು ಜ್ಯೋತಿಷ್ಯದ ಗುಲಾಮಗಿರಿಯಿಂದ ಹೊರಬರಬೇಕು ಪಂಚಾಂಗದ ಗುಲಾಮಗಿರಿಯಿಂದ ಹೊರಬರಬೇಕು ,ಹುಟ್ಟು ಸಾವು ಲಗ್ನ ಮುಂತಾದ ಸಂದರ್ಭಗಳಲ್ಲಿ ಜ್ಯೋತಿಷಿಗಳನ್ನು ಕೇಳುವುದಾಗಲಿ ಪಂಚಾಂಗಗಳನ್ನು ನೋಡುವುದಾಗಲಿ ಮಾಡಬೇಡಿ ,ಜ್ಯೊತಿಷಿಗಳು ದಾರ್ಶನಿಕರಲ್ಲ ,ಪಂಚಾAಗ ಧರ್ಮಗ್ರಂಥವಲ್ಲ ,ಬಸವಣ್ಣನೇ ಧರ್ಮಗುರು ವಚನ ಸಾಹಿತ್ಯವೇ ಧರ್ಮಗ್ರಂಥ ಇಷ್ಟಲಿಂಗವೇ ನಮ್ಮ ಮನೆಯ ದೇವರು ಎಂಬುದನ್ನು ಲಿಂಗಾಯತರೆಲ್ಲ ಅರ್ಥಮಾಡಿಕೊಂಡು ಇತರರಿಗೂ ತಿಳಿಸುವ ಕಾರ್ಯ ಮಾಡಬೇಕು, ಸಂಘಟನೆಯೊಂದಿಗೆ ನಾವೆಲ್ಲ ಗಟ್ಟಿಯಾಗಿ ನಿಲ್ಲಬೇಕು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿದ್ದ ಜಾಗತಿಕ ಲಿಂಗಾಯತ ಮಹಾಸಭೆಯ ರಾಷ್ಟ್ರೀಯ ಮಹಾ ಪ್ರಧಾನ ಕಾರ್ಯದರ್ಶಿ ಎಸ್ ಎಂ ಜಾಮದಾರ್ ಮಾತನಾಡಿ ಬಸವಣ್ಣನನ್ನು ಒಪ್ಪದವರು ಲಿಂಗಾಯತರೇ ಅಲ್ಲ ,ಲಿಂಗಾಯತರಿಗೆ ಬಸವ ಜಯಂತಿ ದೊಡ್ಡ ಹಬ್ಬ ,ದೇವಸ್ಥಾನದ ಸಂಸ್ಕೃತಿಯನ್ನು ತಿರಸ್ಕರಿಸಿದ ಧರ್ಮ ಲಿಂಗಾಯತ , ತೀರ್ಥಯಾತ್ರೆಯನ್ನು ಮತ್ತು ಉಪವಾಸ ವನವಾಸಗಳನ್ನು ಬೇಡವೆಂದು ತಿರಸ್ಕರಿಸಿದ ಧರ್ಮ ಲಿಂಗಾಯತ, ಬಸವಣ್ಣನನ್ನು ಒಪ್ಪದವರು ಇಂದಿಗೂ ಇವನ್ನೆಲ್ಲ ಮಾಡುತ್ತಾರೆ , ವಿವಿಧ ಪಂಗಡಗಳಲ್ಲಿ ಹಂಚಿ ಹೋದವರನ್ನು ಮತ್ತೆ ಒಂದುಗೂಡಿಸುವ ದಿನವೇ ಬಸವ ಜಯಂತಿ ಇದನ್ನು ಲಿಂಗಾಯತರೆಲ್ಲ ಅರ್ಥಮಾಡಿಕೊಳ್ಳಬೇಕು ಮತ್ತು ಆಚರಿಸಬೇಕು ಎಂದು ಹೇಳಿದರು .

ಈ ಹಿಂದೆ ಲಿಂಗಾಯತ ಸ್ವತಂತ್ರ ಧರ್ಮವೇ ಆಗಿತ್ತು ,೧೩೯೯ ರಿಂದ ೧೬೧೦ ವರೆಗೆ ಮೈಸೂರು ಮಹಾರಾಜರ ಕಾಲದಲ್ಲಿ ರಾಜಧರ್ಮವಾಗಿತ್ತು , ಸ್ವತಂತ್ರ ಧರ್ಮವಾಗಿತ್ತು, ಬಸವಧರ್ಮ ಅತ್ಯುತ್ತಮ ಧರ್ಮ,ಶ್ರೇಷ್ಠ ಧರ್ಮವೆಂದು ಬಹಳ ಹಿಂದೆಯೇ ಜಗತ್ತಿನ ಹಲವು ದಾರ್ಶನಿಕರು ಹೇಳಿದ್ದಾರೆ .16 ಮತ್ತು 17 ಶತಮಾನದಲ್ಲಿ ವಿವಿಧ ಜಾತಿ ಸಮುದಾಯಗಳಿಗೆ ಸೇರಿದ ಮಠಗಳೆಲ್ಲ ಲಿಂಗಾಯತಕ್ಕೆ ಸೇರಿಕೊಂಡವು .ಇಂದು ವಿವಿಧ ಪಂಗಡಗಳ ಹೆಸರಿನಲ್ಲಿ ಮಠಗಳು ಹುಟ್ಟಿಕೊಂಡಿವೆ ಅವೆಲ್ಲಾ ಲಿಂಗಾಯತಕ್ಕೆ ಸೇರ್ಪಡೆಯಾಗಬೇಕು ಎಂದು ಜಾಮದಾರ್ ಹೇಳಿದರು

ಬೆಳಗಾವಿಯ ಮತ್ತು ಶ್ರೀ ವಾಗ್ದೇವಿ ತಾಯಿಯವರು ಮಾತನಾಡಿ ವಿವಿಧ ಪಂಗಡಗಳಲ್ಲಿರುವ ಸಮಾಜದ ಹಿರಿಯರು ತಮ್ಮ ಹಮ್ಮು ಬಿಮ್ಮುಗಳನ್ನು ಬಿಟ್ಟಾಗ ಸಮಾಜ ಒಂದಾಗುತ್ತದೆ ಮತ್ತು ಬಲಿಷ್ಠವಾಗುತ್ತದೆ , ಮನುಕುಲಕ್ಕೆ ಅತ್ಯುತ್ತಮ ಬದುಕು ಕಲಿಸಿದ ನಮ್ಮನ್ನು ನಮಗೆ ತೂರಿಸಿದ ಪರಮಗುರು ಬಸವಣ್ಣನವರನ್ನು ಒಪ್ಪಿಕೊಳ್ಳದ ಸ್ವಾಮೀಜಿಗಳು ಇದ್ದರೆಷ್ಟು ಬಿಟ್ಟರೆಷ್ಟು ಎಂದ ಅವರು ಕಾರ್ಯಕ್ರಮಕ್ಕೆ ಆಗಮಿಸಿದ ಇಬ್ಬರು ಶಾಸಕರು ಕೆಲಕಾಲ ಕುಳಿತು ಎದ್ದು ಹೋದ ಶಾಸಕರನ್ನು ಹಾಜರಿ ಹಾಕಿ ಹೋದ ಆಯಾರಾಂ ಗಯಾರಾಂ ಎಂದರಲ್ಲದೆ ಸಮಾಜದ ವಿಚಾರಗಳನ್ನು ಕೇಳಿಸಿಕೊಳ್ಳುವ ತಾಳ್ಮೆ ತೋರದಿದ್ದಕ್ಕೆ ಅಸಮಾಧಾನ ವ್ಯಕ್ತಪಡಿಸಿದರು.

ಅಥಣಿಯ ಮೋಟಗಿಮಠದ ಶ್ರೀ ಪ್ರಭುಚನ್ನಬಸವ ಸ್ವಾಮಿಗಳು ಮಾತನಾಡಿ ಹತ್ತೊಂಬತ್ತನೇ ಶತಮಾನದ ಸೂಫಿ ಕವಿ ಬಸವಣ್ಣನವರನ್ನು ಬಸವಣ್ಣನವರನ್ನು ಹೊಗಳಿ ಕವನ ರಚಿಸಿ ಹಾಡಿದ್ದನ್ನು ನೆನೆದು ಜಗತ್ತೇ ಬಸವಣ್ಣನನ್ನು ಕೊಂಡಾಡಿದೆ ಎಂದರು ಬಸವಣ್ಣನವರ ಭಾವಚಿತ್ರದ ಮೆರವಣಿಗೆಯನ್ನು ಬಣ್ಣಿಸಿದ ಅವರು ಬೆಳಗಾವಿ ಬಸವ ನಗರವಾಗಿದೆ ಎಂದರು .

ಬಸವ ದರ್ಶನ ಪ್ರವಚನ ದಲ್ಲಿ ಹನ್ನೊಂದು ದಿನಗಳ ಕಾಲ ಭಾಗವಹಿಸಿದ ಕುಷ್ಟಗಿಯ ಶಾಂತಾನಂದ ಗವಾಯಿಗಳು ಮತ್ತು ಚಳ್ಳಕೆರೆಯ ತಬಲಾ ವಾದಕ ಜ್ಞಾನಮೂರ್ತಿ ಅವರನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಲಾಯಿತು .ಬೆಂಗಳೂರಿನ ಡಾ ಗುರುರಾಜ್ ಗೋಶೆಟ್ಟಿ ಅವರು ರಚಿಸಿದ ಸತ್ಸಂಗ ಗ್ರಂಥವನ್ನು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮಿಗಳು ಲೋಕಾರ್ಪಣೆಗೊಳಿಸಿದರು.

ಮಮ್ಮಿಗಟ್ಟಿಯ ಡಾ. ಬಸವಾನಂದ ಮಹಾಸ್ವಾಮಿಗಳು ಮಂಗಲ ನುಡಿಗಳನ್ನಾಡಿದರು .ಜಾಗತಿಕ ಲಿಂಗಾಯತ ಮಹಾಸಭಾ ಬೆಳಗಾವಿ ಜಿಲ್ಲಾ ಘಟಕದ ಅಧ್ಯಕ್ಷ ಬಸವರಾಜ ರೊಟ್ಟಿ ಅವರು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ ಲಿಂಗಾಯತ ಮಹಾಸಭೆಯ ಚಟುವಟಿಕೆಗಳನ್ನು ವಿವರಿಸಿದರು.

ಬೆಳಗಾವಿಯ ಪ್ರಮುಖ ಬಡಾವಣೆಗಳಲ್ಲಿ ಡಾ ಅಲ್ಲಮಪ್ರಭು ಮಹಾಸ್ವಾಮೀಜಿ ಅವರ ನೇತೃತ್ವದಲ್ಲಿ ಧರ್ಮ ಜಾಗೃತಿ ಪಾದಯಾತ್ರೆಯನ್ನು ಹನ್ನೊಂದು ದಿನಗಳ ಕಾಲ ಹಮ್ಮಿಕೊಳ್ಳಲಾಗಿತ್ತು.

ಬೆಳಗಾವಿ ಮಹಾಂತೇಶ ನಗರದ ಮಹಾಂತ ಭವನದಿಂದ ಬೆಳಗಾವಿ ಶಿವಬಸವನಗರದಲ್ಲಿರುವ ಬೆಳಗಾವಿ ನಾಗನೂರ ರುದ್ರಾಕ್ಷಿ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆಯನ್ನು ಹಮ್ಮಿಕೊಳ್ಳಲಾಗಿತ್ತು. ಮೆರವಣಿಗೆಯಲ್ಲಿ ಸಾವಿರಾರು ಭಕ್ತರು ಪಾಲ್ಗೊಂಡಿದ್ದರು . ಬೆಳಗಾವಿ ಕಾರಂಜಿ ಮಠದ ಕಿರಿಯ ಶ್ರೀಗಳಾದ ಡಾ.ಶಿವಯೋಗಿ ದೇವರು, ಕಮತೇನಟ್ಟಿಯ ಅಲ್ಲಮಪ್ರಭು ಮಠದ ಶ್ರೀ ಗುರುದೇವ ದೇವರು ,ಚನ್ನಮ್ಮನ ಕಿತ್ತೂರಿನ ಓಂ ಗುರೂಜಿಯವರು ,ಚನ್ನಮ್ಮನ ಕಿತ್ತೂರಿನ ವಿಜಯ ಮಹಾಂತ ದೇವರು, ದೋಟಿಹಾಳದ ಚಂದ್ರಶೇಖರ ದೇವರು, ಹಳ೦ಗಳಿಯ ಶಿವಾನಂದ ದೇವರು, ಪೂಜ್ಯ ಶ್ರೀ ಕುಮುದಿನಿ ತಾಯಿಯವರು , ಬೆಳಗಾವಿ ಗ್ರಾಮೀಣ ಕ್ಷೇತ್ರದ ಶಾಸಕಿ ಶ್ರೀಮತಿ ಲಕ್ಷ್ಮೀ ಹೆಬ್ಬಾಳಕರ, ಬೆಳಗಾವಿಯ ಉತ್ತರ ಕ್ಷೇತ್ರದ ಶಾಸಕ ಅನಿಲ್ ಬೆನಕೆ ,ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಉಪಾಧ್ಯಕ್ಷ ಬಸವರಾಜ ಸುಲ್ತಾನ್ ಪುರ ,ಲಿಂಗಾಯತ ಸಂಘಟನೆಯ ಪದಾಧಿಕಾರಿಗಳಾದ ಎಸ್ ಎಚ್ ಸಿದ್ನಾಳ ,ಶ್ರೀಮತಿ ಪ್ರೇಮಕ್ಕ ಅಂಗಡಿ ,ಮಾಜಿ ನಗರ ಸೇವಕಿ ಶ್ರೀಮತಿ ಸರಳಾ ಹೇರೇಕರ, ಶ್ರೀಮತಿ ವಿಜಯಲಕ್ಷ್ಮೀ ಪುಟ್ಟಿ , ಮತ್ತು ಲಿಂಗಾಯತ ಸಂಘಟನೆಯ ಅಧ್ಯಕ್ಷ ಶಂಕರ ಗೂಡುಸ. ಸಮಾರಂಭದಲ್ಲಿ ಉಪಸ್ಥಿತರಿದ್ದರು .ನಯನಾ ಗಿರಿಗೌಡರ ಅವರ ವಚನ
ಪ್ರಾರ್ಥನೆಯೊಂದಿಗೆ ಕಾರ್ಯಕ್ರಮ ಆರಂಭವಾಯಿತು.

ಕಾರ್ಯಕ್ರಮವನ್ನು ಸಿ.ಜಿ.ಮಠಪತಿ ನಿರ್ವಹಿಸಿದರು,ಜಾಗತಿಕ ಲಿಂಗಾಯತ ಮಹಾಸಭೆಯ ಕಾರ್ಯದರ್ಶೀ ಸಿ.ಎಂ.ಬೂದಿಹಾಳ ಅವರು ವಂದಿಸಿದರು.

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button