ಬ್ಯಾಂಕುಗಳಿಗೆ ಸರ್ಕಾರದ ಗ್ಯಾರಂಟಿ
ಸರ್ಕಾರವು 52 ಸಾವಿರ ಮನೆಗಳನ್ನು ಪೂರ್ತಿ ಮಾಡಿದ್ದು, ಇನ್ನು 50 ಸಾವಿರ ಮನೆಗಳಿಗೆ ನಾವು ಈ ವರ್ಷ ಕಾರ್ಯಾದೇಶ ನೀಡಿದ್ದೇವೆ. ಫಲಾನುಭವಿಗಳಿಂದ ವಂತಿಗೆ ಬರುವುದು ತಡವಾಗುತ್ತಿದ್ದು, ಅವುಗಳನ್ನು ಪೂರ್ಣಮಾಡಲು ತಡವಾಗುತ್ತಿದೆ ಎಂದು ಸರ್ಕಾರ ಮನಗಂಡಿದೆ. ಮನೆಗಳನ್ನು ಕಟ್ಟಿದ ಸಂದರ್ಭದಲ್ಲಿ ಫಲಾನುಭವಿಗಳಿಗೆ ವಂತಿಕೆಯನ್ನು ಕೊಡುವುದು ಕಷ್ಟಸಾಧ್ಯವಾಗುತ್ತಿದೆ ಎನ್ನುವುದನ್ನು ಅರಿತು, ಅದಕ್ಕಾಗಿ ಸುಮಾರು ಬಡವರ ಪರವಾಗಿ ಬ್ಯಾಂಕುಗಳಿಗೆ ಸರ್ಕಾರ ಗ್ಯಾರಂಟಿ ಕೊಟ್ಟು 500 ಕೋಟಿ ರೂ.ಗಳನ್ನು ಸಾಲ ಪಡೆಯಲಾಗುವುದು. ಇದರಿಂದಾಗಿ ಸಮಸ್ಯೆಗೆ ಪರಿಹಾರ ನೀಡಿದಂತಾಗುತ್ತದೆ. ಮನೆ ಪೂರ್ತಿಯಾದಾಗ ಕಂತಿನಲ್ಲಿ ನೀಡುವ ವ್ಯವಸ್ಥೆ ಮಾಡುತ್ತೇವೆ. ಬಡವರಿಗೆ ಸಹಾಯ ಮಾಡಲು ಎಲ್ಲೆಲ್ಲಿ ಸಾಧ್ಯವಿದೆಯೋ ಅದನ್ನು ಮಾಡುತ್ತಿದ್ದೇವೆ ಎಂದರು.
ಅಧಿಕಾರ ವಹಿಸಿಕೊಂಡ ಸಂದರ್ಭದಲ್ಲಿ ಬೆಂಗಳೂರಿಗೆ ನಗರೋತ್ಥಾನ ಯೋಜನೆಯನ್ನು ಘೋಷಿಸಿ, ಕೊಳಚೆ ಪ್ರದೇಶಗಳ ಅಭಿವೃದ್ಧಿಯಾಗಬೇಕು, ಬಡವರು ಇರುವ ಪ್ರದೇಶಗಳಲ್ಲಿ ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು ಮತ್ತು ಕೆರೆಗಳ ರಕ್ಷಣೆಯಾಗಬೇಕು ಎನ್ನುವ ವಿಚಾರಗಳನ್ನು ಸೇರಿಸಲಾಯಿತು. ಅದರ ಭಾಗವಾಗಿ ಇಂದು 1588 ಜನರಿಗೆ ಮನೆಗಳ ನಿರ್ಮಾಣ ಕಾಮಗಾರಿಯಾಗಲಿದೆ ಎಂದರು.
ಬಡವರಿಗಾಗಿ ಐದು ಸಾವಿರ ಎಕರೆ ಸರ್ಕಾರಿ ಜಮೀನು ಮೀಸಲು:
ದೇಶದಲ್ಲಿ ಬಡವರ ತಲೆಯ ಮೇಲೆ ಸೂರಿಲ್ಲ ಎನ್ನುವುದು ದೇಶವ್ಯಾಪಿ ಸಮಸ್ಯೆ. ಇದನ್ನು ಹೋಗಲಾಡಿಸುವ ದೊಡ್ಡ ಪ್ರಯತ್ನ ರಾಜ್ಯದಲ್ಲಿ ಆಗುತ್ತಿದೆ. ಪ್ರಧಾನಮಂತ್ರಿ ಆವಾಸ್ ಯೋಜನೆಯನ್ನು ಬೃಹತ್ ಪ್ರಮಾಣದಲ್ಲಿ ತೆಗೆದುಕೊಂಡು ಮುಂದಿನ 5 ವರ್ಷಗಳಲ್ಲಿ ಎಲ್ಲರ ತಲೆಯ ಮೇಲೆ ಸೂರು ಇರಬೇಕೆನ್ನುವ ವಿಚಾರವನ್ನು ಇಟ್ಟುಕೊಂಡು ಕಾರ್ಯಕ್ರಮ ರೂಪಿಸಲಾಗಿದೆ. ಕರ್ನಾಟಕದಲ್ಲಿ ದೇವರಾಜ ಅರಸು ಅವರ ಕಾಲದಿಂದಲೂ ಮನೆಗಳ ನಿರ್ಮಾಣಕ್ಕೆ ವಿಶೇಷ ಪ್ರಯತ್ನಗಳಾಗಿವೆ. ಆದರೆ ಬೆಳೆಯುತ್ತಿರುವ ಜನಸಂಖ್ಯೆಯಿಂದಾಗಿ ಮನೆಗಳ ನಿರ್ಮಾಣ ದೊಡ್ಡ ಸವಾಲಾಗಿದೆ. ಘೋಷಣೆ ಮಾಡಬಹುದು. ಆದರೆ ಅದರ ಅನುಷ್ಠಾನದಲ್ಲಿನ ಸಮಸ್ಯೆಗಳ ಅರಿವು ಕರ್ನಾಟಕ ಸರ್ಕಾರಕ್ಕಿದೆ. ನಮ್ಮ ಸರ್ಕಾರ ಈಗ 5 ಲಕ್ಷ ಮನೆ ಪೂರ್ಣಗೊಳಿಸುತ್ತಿದೆ. ಕಟ್ಟಿರುವ ಮನೆಗಳನ್ನು ಪೂರ್ಣಗೊಳಿಸುವ ಸಂಕಲ್ಪ ನಮ್ಮ ಸರ್ಕಾರ ಮಾಡಿದೆ. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡದವರಿಗೆ 1.75 ಲಕ್ಷ ನೀಡುತ್ತಿದ್ದ ಮೊತ್ತವನ್ನು 2 ಲಕ್ಷ ರೂ.ಗಳಿಗೆ ಹೆಚ್ಚಿಸಲಾಗಿದೆ. ಜಮೀನಿನ ಸಮಸ್ಯೆ ಬಗೆಹರಿಸಲು 5000 ಸರ್ಕಾರಿ ಜಮೀನು ಗುರುತಿಸಲಾಗಿದ್ದು, ಬಡವರಿಗಾಗಿ ಇದನ್ನು ಮೀಸಲಿಟ್ಟು, ಅಲ್ಲಿ ನಿವೇಶನ ಮತ್ತು ಮನೆ ಕೊಡುವ ಕೆಲಸವನ್ನು ಸರ್ಕಾರ ಮಾಡಲಿದೆ ಎಂದರು.
ಕಾಲಮಿತಿಯಲ್ಲಿ ಮನೆಗಳ ನಿರ್ಮಾಣ
ಪರಿಹಾರದ ರಾಜಕಾರಣವಾಗಬೇಕು. ಚರ್ಚೆಯ ರಾಜಕಾರಣವಲ್ಲ. ಜನರ ಸಮಸ್ಯೆ ಇದ್ದಲ್ಲಿಗೆ ಹೋಗಿ ಅರಿವಿನಿಂದ ಕೆಲಸ ಮಾಡಬೇಕು. ಪ್ರವಾಹದ ಸಂದರ್ಭದಲ್ಲಿ ಬೆಳೆ ಹಾನಿಗೆ ಕೇಂದ್ರ ಸರ್ಕಾರ 11000 ರೂ.ಗಳನ್ನು ನೀಡಿದರೆ, ರಾಜ್ಯ ಸರ್ಕಾರವೂ ಅಷ್ಟೇ ಮೊತ್ತವನ್ನು ಹಾಕಿ 22 ಸಾವಿರ ರೂ.ಗಳನ್ನು ನಮ್ಮ ಸರ್ಕಾರ ನೀಡಿದೆ. 1588 ಮನೆ ನಿರ್ಮಾಣಕ್ಕೆ ಯಾವುದೇ ರೀತಿಯ ತೊಂದರೆಯಾಗದಂತೆ ನಿಗದಿತ ಸಮಯದಲ್ಲಿ ಪೂರ್ಣಗೊಳಿಸುವ ಕೆಲಸವನ್ನು ನಮ್ಮ ಸರ್ಕಾರ ಮಾಡಲಿದೆ. ಜನರ ನಿರೀಕ್ಷೆಗೆ ತಕ್ಕಹಾಗೆ ನಮ್ಮ ಸರ್ಕಾರ ಮಾಡಲಿದೆ ಎಂದರು. ಮುಂದಿನ ದಿನಗಳಲ್ಲಿ ವಸತಿ ಇಲಾಖೆ ಮತ್ತು ಕೊಳಚೆ ನಿರ್ಮೂಲನಾ ಮಂಡಳಿ ವತಿಯಿಂದ ಕೊಳಚೆ ಪ್ರದೇಶಗಳ ಎಲ್ಲ ಮನೆಗಳಿಗೂ ಕಾಯಕಲ್ಪ ನೀಡಬೇಕು ಎಂದರು.
: *ಬೆಂಗಳೂರಿಗೆ ದೂರದೃಷ್ಟಿಯ ಯೋಜನೆಯನ್ನು ರೂಪಿಸಲು ವಿಷನ್ ಡಾಕ್ಯುಮೆಂಟ್: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ* –
ಬೆಂಗಳೂರಿಗೆ ದೂರದೃಷ್ಟಿಯ ಯೋಜನೆಯನ್ನು ರೂಪಿಸಲು ವಿಷನ್ ಡಾಕ್ಯುಮೆಂಟ್ ತಯಾರು ಮಾಡಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ರಾಜರಾಜೇಶ್ವರಿನಗರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿನ ಉಲ್ಲಾಳ ಮತ್ತು ಅನ್ನಪೂರ್ಣೇಶ್ವರಿ ನಗರಗಳ ಮುಖ್ಯರಸ್ತೆಗೆ ಅಡ್ಡಲಾಗಿ ಕೆಂಗೇರಿ ಹೊರವರ್ತುಲ ರಸ್ತೆಯಿಂದ ಗ್ರೇಡ್ ಸೆಪರೇಟ್ ನಿರ್ಮಾಣದ ಕಾಮಗಾರಿ ಶಂಕುಸ್ಥಾಪನೆ, ರಾ.ಹೆ.-ತುಮಕೂರು ರಸ್ತೆ ಜಂಕ್ಷನ್ನಿಂದ ನಾಯಂಡಹಳ್ಳಿ ಜಂಕ್ಷನ್ವರೆಗೆ (ಒ.ಆರ್.ಆರ್) ಮತ್ತು ಸುಮನಹಳ್ಳಿ ಜಂಕ್ಷನ್ನಿಂದ ಅಂಬೇಡ್ಕರ್ ಕಾಲೇಜುವರೆಗೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ, ಸೇತುವೆಗಳು ಮತ್ತು ಇತರೆ ಅಭಿವೃದ್ಧಿ ಕಾಮಗಾರಿಯ ಶಂಕುಸ್ಥಾಪನೆ ಕಾರ್ಯವನ್ನು ನೆರವೇರಿಸಿ ಮಾತನಾಡಿದರು.
ಯಾವ ರೀತಿ ಬೆಂಗಳೂರು ಬೆಳವಣಿಗೆಯಾಗಬೇಕು ಎಂದು ಯೋಜನಾಬದ್ಧವಾಗಿ ಮಾಡಲಾಗುವುದು. ಹಲವಾರು ಹೊಸ ಯೋಜನೆಗಳನ್ನು ರೂಪಿಸುವುದು ಅನಿವಾರ್ಯ ಹಾಗೂ ಅವಶ್ಯಕ. ನಮ್ಮ ಸರ್ಕಾರ ಆ ನಿಟ್ಟಿನಲ್ಲಿ ಕೆಲಸ ಮಾಡುತ್ತಿದೆ ಎಂದರು.
*ಕಾನೂನುಬಾಹಿರವಾಗಿ ಫ್ಲೆಕ್ಸ್ ಹಾಕಲು ಅವಕಾಶವಿಲ್ಲ*:
ನಗರದ ಆರೋಗ್ಯ, ಸುರಕ್ಷತೆಗೆ ಫ್ಲೆಕ್ಸ್ ಒಳ್ಳೆಯದಲ್ಲ. ಇನ್ನು ಮುಂದೆ ಕಾನೂನುಬಾಹಿರವಾಗಿ ಫ್ಲೆಕ್ಸ್ ಹಾಕಲು ಅವಕಾಶ ನೀಡಬಾರದು ಎಂದು ಬಿಬಿಎಂಪಿ ಆಯುಕ್ತರಿಗೆ ಸೂಚನೆ ನೀಡಿದರು. ಜನ ಫ್ಲೆಕ್ಸ್ ಚಟ ಬಿಡಬೇಕು ಎಂದರು. ಪ್ಲಾಸ್ಟಿಕ್ ಉಪಯೋಗವನ್ನು ಆದಷ್ಟು ಕಡಿಮೆ ಮಾಡಬೇಕು ಎಂದರು.
250 ಕೋಟಿಗಿಂತ ಹೆಚ್ಚು ಕಾಮಗಾರಿಗಳ ನಿರ್ಮಾಣಕ್ಕೆ ಇಂದು ಶಂಕುಸ್ಥಾಪನೆ ನೆರವೇರಿಸಲಾಗಿದೆ. ಇದರಿಂದ ಸಿಗ್ನಲ್ ಫ್ರೀ ಕಾರಿಡಾರ್ ನಿರ್ಮಾಣದಿಂದ ಜನರಿಗೆ ಅನುಕೂಲವಾಗಲಿದೆ ಎಂದರು.
ಬೆಂಗಳೂರು ನಿರ್ಮಾತೃ ಕೆಂಪೇಗೌಡರು ಉತ್ತಮ ಯೋಜನೆಯನ್ನು ಭದ್ರ ಬುನಾದಿ ಹಾಕಿ ಕಟ್ಟಿದ್ದಾರೆ. ಅವರು ಸ್ಥಾಪನೆ ಮಾಡುವಾಗ 200 ವರ್ಷಗಳವರೆಗೆ ಬೆಂಗಳೂರು ಹೇಗಿರಬೇಕೆಂಬ ಕಲ್ಪನೆಯಿಂದ ಕಟ್ಟಿದರು. ಇಷ್ಟು ಬೃಹತ್ ಮಟ್ಟದಲ್ಲಿ ಬೆಂಗಳೂರು ಬೆಳೆಯುತ್ತವೆ ಎಂದು ಯಾರೂ ಊಹಿಸಿರಲಿಲ್ಲ. ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಜನ ವಲಸೆ ಬಂದಿದ್ದಾರೆ. ನಿರಂತರವಾಗಿ ಅಭಿವೃದ್ಧಿ ಈ ನಗರದಲ್ಲಿ ಆಗಬೇಕು. ವಿಧಾನಸಭೆಗಿಂತ ಹೆಚ್ಚು ಸದಸ್ಯರು ಬಿಬಿಎಂಪಿಯಲ್ಲಿದ್ದಾರೆ. ಒಬ್ಬ ಆಯುಕ್ತರು ಇಷ್ಟು ದೊಡ್ಡ ಬೆಂಗಳೂರನ್ನು ನಿಭಾಯಿಸುವುದು ಅತ್ಯಂತ ಕಷ್ಟಸಾಧ್ಯ ಎಂದರು.
ಮೂರು ಸಾವಿರ ಕೋಟಿ ರೂ.ಗಳ ವೆಚ್ಚದಲ್ಲಿ ರಾಜಕಾಲುವೆಗಳ ಅಭಿವೃದ್ಧಿ
ನಗರೋತ್ಥಾನ ಯೋಜನೆಗೆ ಸುಮಾರು 6 ಸಾವಿರ ಕೋಟಿ ರೂ.ಗಳ ಅನುದಾನ ಒದಗಿಸಿ, ಕಾರ್ಯವನ್ನು ಪ್ರಾರಂಭಿಸಲಾಗಿದೆ. ಏಪ್ರಿಲ್ ನಲ್ಲಿ ಕೊಡುವ ಅನುದಾನವನ್ನು ಜನವರಿಯಲ್ಲಿ ನೀಡಿದ್ದರಿಂದ ಕೆಲಸಗಳು ಪ್ರಾರಂಭವಾಗಿವೆ. ಒಟ್ಟು ಅನುದಾನದಲ್ಲಿ 3 ಸಾವಿರ ಕೋಟಿ ರೂ.ಗಳನ್ನು ರಸ್ತೆಗಳ ಅಭಿವೃದ್ಧಿಗೆ ಮೀಸಲಿಡಲಾಗಿದೆ. ಇದಲ್ಲದೆ 1600 ಕೋಟಿ ರೂ.ಗಳನ್ನು ರಾಜಕಾಲುವೆಗಳ ಅಭಿವೃದ್ಧಿಯನ್ನು ವೈಜ್ಞಾನಿಕವಾಗಿ ಮಾಡಲಾಗುವುದು. ಈಗಾಗಲೇ ಕೆಲಸ ಪ್ರಾರಂಭಿಸಲಾಗಿದೆ. ಅಕ್ರಮವಾಗಿ ಮನೆ ನಿರ್ಮಾಣ ಮಾಡಿಕೊಂಡಿರುವುದನ್ನು ಗುರುತಿಸಿ ತೆಗೆದುಹಾಕಲು ಟಾಸ್ಕ್ ಫೋರ್ಸ್ಗಳನ್ನು ರಚಿಸಲಾಗಿದೆ. ಬಡವರಿಗೆ ಪರ್ಯಾಯ ಸ್ಥಳ ನೀಡಿ, ಉಳಿದವರ ಮೇಲೆ ನಿರ್ದಾಕ್ಷಿಣ್ಯ ಕ್ರಮವನ್ನು ತೆಗೆದುಕೊಳ್ಳಲಾಗುವುದು ಎಂದರು.
*ಅಲಿಖಿತ ಒಪ್ಪಂದ*
ಮೆಟ್ರೋ ಎರಡನೇ ಹಂತದ ಕಾಮಗಾರಿಗೆ ವೇಗ ನೀಡಿ 2024 ಕ್ಕೆ ಯೋಜನೆ ಪೂರ್ಣಗೊಳಿಸಲು ಅಧಿಕಾರಿಗಳಿಗೆ ಆದೇಶ ನೀಡಲಾಗಿದೆ. 15000 ಕೋಟಿ ರೂ.ಗಳ ಸಬ್ ಅರ್ಬನ್ ರೈಲು ಯೋಜನೆಗೆ ಪ್ರಧಾನಿಗಳಿಂದ 21 ನೇ ತಾರೀಖು ಶಂಕುಸ್ಥಾಪನೆ ನೆರವೇರಲಿದೆ. ಪೆರಿಫೆರಲ್ ರಿಂಗ್ ರೋಡ್ ಗೆ ಈಗಾಗಲೇ ಟೆಂಡರ್ ಪ್ರಕ್ರಿಯೆ ಪ್ರಾರಂಭವಾಗಿದೆ. ಬೆಂಗಳೂರಿನ ಅಭಿವೃದ್ಧಿಗೆ ದೂರದೃಷ್ಟಿ ಇಟ್ಟುಕೊಂಡು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿ ಸಚಿವ ಮುನಿರತ್ನ ಅವರ ರೀತಿಯಲ್ಲಿ ಪ್ರಮುಖ ಕೆಲಸ ಕೈಗೊಂಡರೆ, ಬೆಂಗಳೂರಿನ ಸಂಚಾರ ದಟ್ಟಣೆಯನ್ನು ಸುಗಮಗೊಳಿಸಬಹುದು. ಬೆಂಗಳೂರಿನ ಬಗ್ಗೆ ಹಲವಾರು ಪ್ರಮುಖ ನಿರ್ಧಾರಗಳನ್ನು ಮುಂದಿನ ದಿನಗಳಲ್ಲಿ ಕೈಗೊಳ್ಳಲಾಗುವುದು. ಯಾವುದೇ ಸರ್ಕಾರ ಅಧಿಕಾರದಲ್ಲಿದ್ದರೂ ಅವರಿಗೆ ಅಭಿವೃದ್ಧಿಯ ವಿಚಾರದಲ್ಲಿ ಸಂಪೂರ್ಣ ಸಹಕಾರ ನೀಡುವುದಾಗಿ ರಾಜಕಾರಣದಲ್ಲೂ ಅಲಿಖಿತ ಒಪ್ಪಂದ ಮಾಡಿಕೊಳ್ಳಬೇಕು. 59 ತಿಂಗಳು ಅಭಿವೃದ್ಧಿ ಮಾಡಿ ಒಂದು ತಿಂಗಳು ರಾಜಕಾರಣ ಮಾಡೋಣ. ಒಳ್ಳೆ ಕೆಲಸ ಮಾಡಿದ್ದರೆ ಜನ ಪುರಸ್ಕರಿಸುತ್ತಾರೆ. ಜನ ಮಾಲೀಕರು ನಾವು ಸೇವಕರು. ರಾಜ್ಯದ ಅಭಿವೃದ್ಧಿಗೆ ಗುರುತರ ಜವಾಬ್ದಾರಿಯನ್ನು ಜನ ಕೊಟ್ಟಿದ್ದಾರೆ. ಅಧಿಕಾರವೆಂದರೆ ಜವಾಬ್ದಾರಿ. ಅದನ್ನು ಅರಿತು ನಮ್ಮ ಸರ್ಕಾರ ಕೆಲಸ ಮಾಡುತ್ತಿದೆ ಎಂದರು.
*ಕಾಲಮಿತಿಯಲ್ಲಿ ಕಾಮಗಾರಿಗಳನ್ನು ಪೂರ್ಣಗೊಳಿಸಲಾಗುವುದು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ*
ಬೆಂಗಳೂರಿನ ಅಭಿವೃದ್ಧಿಗೆ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಪೂರ್ಣಗೊಳಿಸಲಾಗುವುದು ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ಬೆಂಗಳೂರಿನ ರಾಜರಾಜೇಶ್ವರಿ ವಿಧಾನಸಭಾಕ್ಷೇತ್ರ ವ್ಯಾಪ್ತಿಯ ರಾಜರಾಜೇಶ್ವರಿನಗರ ಆರ್ಚ್ ಬಳಿ ಗ್ರೇಡ್ ಸಪರೇಟರ್ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಿ, ಹೊಸಕೇರಹಳ್ಳಿ ಮತ್ತು ಕೆಂಚೇನಹಳ್ಳಿ ಕೆರೆಗಳಲ್ಲಿ ಒಳಚರಂಡಿ ತ್ಯಾಜ್ಯ ನೀರನ್ನು ತಿರುಗಿಸುವ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ಮಾತನಾಡಿದರು.
*ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರ*
ಆರ್.ಆರ್ ನಗರ ಬಹಳ ಪ್ರಮುಖವಾದ, ಜನದಟ್ಟಣೆ ಹಾಗೂ ವಾಹನ ದಟ್ಟಣೆ ಇರುವ ಜಂಕ್ಷನ್. ಕೆಂಗೇರಿಯಿಂದ ಬೆಂಗಳೂರಿನ ಟೌನ್ ಹಾಲ್ ವರೆಗೆ ಸಂಚಾರ ದÀಟ್ಟಣೆ ಇದೆ. ಗ್ರೇಡ್ ಸಪರೇಟರ್ ಕೆಲಸದಿಂದ ಕೇವಲ ಆರ್.ಆರ್ ನಗರಕ್ಕೆ ಮಾತ್ರವಲ್ಲದೇ ಬೆಂಗಳೂರಿನ ವಾಹನ ದಟ್ಟಣೆಯ ಸಮಸ್ಯೆಗೆ ಪರಿಹಾರ ಕೊಡುವ ಕೆಲಸವನ್ನು ಮಾಡಲಾಗಿದೆ. ಬೆಂಗಳೂರು- ಮೈಸೂರು ರಸ್ತೆ ಎಂಟು ಪಥದ ರಸ್ತೆಯನ್ನಾಗಿ ಮಾಡುವ ಕಾಮಗಾರಿ 4-5 ತಿಂಗಳಲ್ಲಿ ಪೂರ್ಣಗೊಳ್ಳಲಿದೆ. ಈ ಜಂಕ್ಷನ್ ಮುಗಿದರೆ ಬೆಂಗಳೂರಿನ ಒಳಗೆ ಪ್ರವೇಶ ಮಾಡಿದರೆ ನೇರವಾಗಿ ಟೌನ್ ಹಾಲ್ವರೆಗೆ ಯಾವುದೇ ಆತಂಕವಿಲ್ಲದೇ ಹೋಗಬಹುದಾಗಿದೆ. ಅತಿ ಉದ್ದನೆಯ ಸಿಗ್ನಲ್ ಫ್ರೀ ಕಾರಿಡಾರ್ ಆಗಲಿದೆ. ಅತ್ಯುತ್ತಮವಾಗಿ ಯೋಜಿತವಾದ ಕಾರ್ಯಕ್ರಮವಾಗಿದೆ ಎಂದರು.
*ಬೆಂಗಳೂರಿನ ಅಭಿವೃದ್ಧಿಗೆ ವಿಶೇಷ ಒತ್ತು*
ಉತ್ತರಹಳ್ಳಿಯಿಂದ ದಕ್ಷಿಣದವರೆಗೂ ಸಂಪರ್ಕ ಕಲ್ಪಿಸುವ ರಾಜರಾಜೇಶ್ವರಿ ನಗರಬೃಹತ್ ಪ್ರಮಾಣದಲ್ಲಿ ಬೆಳೆದು ಅತ್ಯಂತ ಪ್ರತಿಷ್ಠಿತ ಬಡಾವಣೆ ಎನಿಸಿದೆ. ನಿಗದಿತ ಸಮಯದಲ್ಲಿ, ಉತ್ತಮ ಗುಣಮಟ್ಟದ ಕಾಮಗಾರಿಯಾಗಬೇಕು. ನಮ್ಮೆಲ್ಲರ ಯೋಜನೆಗೆ ಮೀರಿ ಬೆಂಗಳೂರು ಬೆಳೆಯುತ್ತಿದೆ. ಅದಕ್ಕಾಗಿ ರಸ್ತೆಗಳ ಬಗ್ಗೆ ಸಂಚಾರದ ಬಗ್ಗೆ ವಿಶೇಷ ಯೋಜನೆ ಮಾಡಲು ತೀರ್ಮಾನಿಸಲಾಗಿದೆ. ಸ್ಯಾಟಿಲೈಟ್ ಟೌನ್ ರಿಂಗ್ ರೋಡ್ ಗೆ ಸಹ ಪ್ರಧಾನಮಂತ್ರಿಗಳು ಜೂನ್ 21 ರಂದು ಅಡಿಗಲ್ಲು ಹಾಕುತ್ತಿದ್ದಾರೆ. ಪೆರಿಫೆರಲ್ ರಿಂಗ್ ರೋಡ್, ಸಬ್ ಅರ್ಬನ್ ರೈಲು ಕಾಮಗಾರಿಗಳಿಗೆ ಅಡಿಗಲ್ಲು ಹಾಕಲಾಗುತ್ತಿದೆ. ಇದರಿಂದ ಸಂಚಾರ ದಟ್ಟಣೆಯನ್ನು ಕಡಿಮೆ ಮಾಡಬಹುದಾಗಿದೆ. ಈ ಬಾರಿಯ ಬಜೆಟ್ ನಲ್ಲಿ ಪ್ರತಿ ವಾರ್ಡಿಗೆ ಒಂದು ‘ನಮ್ಮ ಕ್ಲಿನಿಕ್’ ಸ್ಥಾಪನೆ, ಬೆಂಗಳೂರಿನ ಶಾಲೆಗಳ ಸಮಗ್ರ ಅಭಿವೃದ್ಧಿ, ನಗರದ ಆರೋಗ್ಯ ಸೇವೆಗಳಿಗೆ ವಿಶೇಷ ಇಲಾಖೆ ರೂಪಿಸಿ ನಿರ್ವಹಿಸಲು ಯೋಜನೆ, ಕೆರೆ, ಉದ್ಯಾನವನ, ಕೊಳಚೆಪ್ರದೇಶದ ಜನರಿಗೆ ವಿಶೇಷ ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ಇಂದು * ಮುಖ್ಯಮಂತ್ರಿ* * * *ಬಸವರಾಜ ಬೊಮ್ಮಾಯಿ* ಅವರು *ಕರ್ನಾಟಕ ಸರ್ಕಾರ* ಹಾಗೂ *ಬೃಹತ್ ಬೆಂಗಳೂರು* *ಮಹಾನಗರ ಪಾಲಿಕೆಯ* ವತಿಯಿಂದ *ರಾಜರಾಜೇಶ್ವರಿನಗರದ* *ಹೆಬ್ಬಾಗಿಲಿನ (ಆರ್ಚ್) ಬಳಿ* ಮುಖ್ಯಮಂತ್ರಿಗಳ *ನವನಗರೋತ್ಥಾನ ಯೋಜನೆಯಡಿ* *ರಾಜರಾಜೇಶ್ವರಿನಗರ ವಿಧಾನಸಭಾ* ಕ್ಷೇತ್ರದ ವ್ಯಾಪ್ತಿಯಲ್ಲಿನ *ಆರ್* *.ಆರ್.ನಗರ* ವಲಯದ *ಆರ್ಚ್ನಲ್ಲಿ ಸ್ನಿಗಲ್ ಮುಕ್ತ* *ರೋಟರಿಗೆ ಅನುಕೂಲವಾಗುವಂತೆ* ಗ್ರೇಡ್ ಸೆಪರೇಟ್ ನಿರ್ಮಾಣದ *ಕಾಮಗಾರಿ ಶಂಕುಸ್ಥಾಪನೆ,* *ಹೊಸಕೆರಹಳ್ಳಿ ಮತ್ತು ಕೆಂಚೇನಹಳ್ಳಿ* ಕೆರೆಗಳಲ್ಲಿ *ಲೀಚೆಟ್ ಮತ್ತು ಒಳಚರಂಡಿ* ತ್ಯಾಜ್ಯ ನೀರನ್ನು ತಿರುಗಿಸುವ *ಅಭಿವೃದ್ಧಿ ಕಾಮಗಾರಿಯ* ಶಂಕುಸ್ಥಾಪನೆ ಕಾರ್ಯವನ್ನು *ನೆರವೇರಿಸಿದರು.*
ಈ ಸಂದರ್ಭದಲ್ಲಿ ಸಚಿವರಾದ ವಿ ಸೋಮಣ್ಣ, ಆರ್. ಅಶೋಕ್, ಮುನಿರತ್ನ ಮತ್ತು ಇತರರು ಉಪಸ್ಥಿತರಿದ್ದರು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ