ಪ್ರಗತಿವಾಹಿನಿ ಸುದ್ದಿ, ವಿಜಯಪುರ: ಸೋಮವಾರ ನಡೆಯಲಿರುವ ವಿಧಾನ ಪರಿಷತ್ತಿನ ವಾಯವ್ಯ ಶಿಕ್ಷಕರ ಮತಕ್ಷೇತ್ರದ ಚುನಾವಣೆಯ ಮತದಾರರಿಗೆ ಹಂಚಲು ಹೊರಟಿದ್ದ ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದು, 17.40 ಲಕ್ಷ ರೂ. ಹಣ ವಶಪಡಿಸಿಕೊಳ್ಳಲಾಗಿದೆ. ಈ ಸಂಬಂಧ ಮೂವರನ್ನು ಬಂಧಿಸಲಾಗಿದೆ.
ತಲಾ 10 ಸಾವಿರ ರೂ.ಗಳಿರುವ 170 ಕವರ್ ಗಳು ವಾಹನದಲ್ಲಿ ಸಿಕ್ಕಿವೆ. ಪ್ರತಿ ಶಿಕ್ಷಕರಿಗೆ 10 ಸಾವಿರ ರೂ. ಹಂಚಲಾಗುತ್ತಿತ್ತೆನ್ನುವ ಅನುಮಾನವಿದೆ. ವಾಹನದಲ್ಲಿ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಅವರ ಗುರುತಿನ ಚೀಟಿಗಳು ಸಿಕ್ಕಿವೆ.
ಅರುಣ ಶಹಾಪುರ ದೂರು
ವಿಧಾನ ಪರಿಷತ್ ವಾಯುವ್ಯ ಶಿಕ್ಷಕರ ಮತಕ್ಷೇತ್ರದ ಕಾಂಗ್ರೆಸ್ ಕಡೆಯವರಿಂದ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ಸೋಲಿನ ಹತಾಶೆಯಲ್ಲಿ ಹಣ ಹಂಚುವ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದ್ದಾರೆ ಎಂದು ಆರೋಪಿಸಿ ವಿಧಾನ ಪರಿಷತ್ ಸದಸ್ಯ ಮತ್ತು ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ವಿಜಯಪುರ ಜಿಲ್ಲಾಧಿಕಾರಿ ಡಾ. ವಿಜಯಮಹಾಂತೇಶ ಬಿ. ದಾನಮ್ಮನವರ ಮತ್ತು ಎಸ್ಪಿ ಎಚ್. ಡಿ. ಆನಂದ ಕುಮಾರ ಅವರಿಗೆ ದೂರು ಸಲ್ಲಿಸಿದ್ದಾರೆ.
ಮಾಜಿ ಸಚಿವ ಅಪ್ಪು ಪಟ್ಟಣಶೆಟ್ಟಿ, ಬಿಜೆಪಿ ಮುಖಂಡರಾದ ಪ್ರಕಾಶ ಅಕ್ಕಲಕೋಟ ಮತ್ತು ವಿಜಯ ಜೋಶಿ ಅವರ ಜೊತೆ ತೆರಳಿ ಅರುಣ ಶಹಾಪುರ ದೂರು ಸಲ್ಲಿಸಿದ್ದಾರೆ.
ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ ನೀಡಿರುವ ದೂರಿನ ಪ್ರತಿ –
ಇದಕ್ಕೂ ಮೊದಲು ವಿಜಯಪುರ ನಗರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಅರುಣ ಶಹಾಪುರ, ವಿಜಯಪುರ ನಗರದಲ್ಲಿ ಮಹಾರಾಷ್ಟ್ರದ ಪಾಸಿಂಗ್ ಹೊಂದಿರುವ ವಾಹನದಲ್ಲಿ ಕೆಲವರು ತಲಾ ರೂ. 10,000 ಮೌಲ್ಯದ ನೋಟುಗಳನ್ನು ಪಾಕೀಟಿನಲ್ಲಿ ಇಟ್ಟುಕೊಂಡು ಹೊರಟಿದ್ದಾಗ ಮಾಧ್ಯಮದವರ ಕೈಗೆ ಸಿಲುಕಿಕೊಂಡಿದ್ದಾರೆ. ಆ ದೂರಿನ ಹಿನ್ನೆಲೆಯಲ್ಲಿ ಚುನಾವಣೆ ಅಧಿಕಾರಿಗಳು ಮತ್ತು ಪೊಲೀಸರು ಸ್ಥಳಕ್ಕೆ ಧಾವಿಸಿ ಆ ವಾಹನವನ್ನು ಸೀಜ್ ಮಾಡಿದ್ದಾರೆ. ಇನ್ನೂ ಆರೇಳು ವಾಹನಗಳು ವಿಜಯಪುರ ನಗರದಲ್ಲಿ ಮತ್ತು ಸುಮಾರು 14 ವಾಹನಗಳು ಜಿಲ್ಲೆಯಲ್ಲಿ ಈ ಪ್ರಕ್ರಿಯೆಯಲ್ಲಿ ತೊಡಗಿವೆ ಎಂದು ಈಗ ಪೊಲೀಸರು ಸೀಜ್ ಮಾಡಿರುವ ವಾಹನದಲ್ಲಿರುವ ವ್ಯಕ್ತಿಗಳು ಬಾಯಿ ಬಿಟ್ಟಿರುವ ಮಾಹಿತಿ ಇದೆ ಎಂದು ತಿಳಿಸಿದರು.
ಚುನಾವಣೆ ಆಯೋಗ ಈ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಈಗ ಸೀಜ್ ಮಾಡಿರುವ ವಾಹನದಲ್ಲಿ ಏನೆಲ್ಲ ಸಿಕ್ಕಿವೆ ಎಂಬುದನ್ನು ಚುನಾವಣೆ ಆಯೋಗವೇ ಸ್ಪಷ್ಟಪಡಿಸಬೇಕು ಎಂದು ಅವರು ಆಗ್ರಹಿಸಿದರು.
ನಿಷ್ಪಕ್ಷಪಾತವಾಗಿ ತನಿಖೆ ನಡೆಸಬೇಕು. ವೀಕ್ಷಕರಾದ ಮುನಿಶ್ ಮೌದ್ಗಿಲ್ ಮತ್ತು ಚುನಾವಣೆ ಆಧಿಕಾರಿಗಳು ಒಳ್ಳೆಯವರಿದ್ದಾರೆ. ಚುನಾವಣೆ ಆಯೋಗ, ಕಾರ್ಯಾಂಗ, ಪೊಲೀಸ್ ಅಧಿಕಾರಿಗಳ ಮೇಲೆ ಸಂಪೂರ್ಣ ವಿಶ್ವಾಸವಿದೆ. ಸೂಕ್ತ ಕ್ರಮ ಕೈಗೊಂಡು ಇದನ್ನು ಮಟ್ಟ ಹಾಕುತ್ತಾರೆ ಎಂಬ ವಿಶ್ವಾಸವಿದೆ. ವಿಜಯಪುರದಲ್ಲಿ ಜಿಲ್ಲಾಧಿಕಾರಿಗಳಿಗೆ ದೂರು ನೀಡಲಾಗುವುದು. ಅಲ್ಲದೇ, ಬೆಳಗಾವಿಯಲ್ಲಿ ಆರ್ ಓ ಗೆ ದೂರು ನೀಡಲಾಗುವುದು ಎಂದು ಅವರು ತಿಳಿಸಿದರು.
ವಿಜಯಪುರದಲ್ಲಿ ತುರ್ತು ಸುದ್ದಿಗೋಷ್ಠಿ ನಡೆಸಿದ ಬಿಜೆಪಿ ಅಭ್ಯರ್ಥಿ ಅರುಣ ಶಹಾಪುರ
ಶಿಕ್ಷಕರ ಚಳವಳಿ ಪವಿತ್ರವಾಗಿದೆ. ಎಲ್ಲ ವೃತ್ತಿಗಳನ್ನು ಬಿಟ್ಟು ಶಿಕ್ಷಕರಿಗಾಗಿಯೇ ವಿಧಾನ ಪರಿಷತ್ತಿನಲ್ಲಿ ಪ್ರಾತಿನಿಧ್ಯ ನೀಡಲಾಗಿದೆ. ಆದರೆ, ತಾವು ಹಾಳಾಗುವುದಲ್ಲದೇ ಈ ಕ್ಷೇತ್ರವನ್ನೂ ಹಾಳು ಮಾಡಲು ಕೆಲವರು ಪ್ರಯತ್ನಿಸುತ್ತಿದ್ದಾರೆ. ಶಿಕ್ಷಕರು ಜಾಗೃತರಾಗಿದ್ದಾರೆ. ಇವರ ಬಂಡವಾಳವನ್ನು ಸರಿಯಾಗಿ ಅರ್ಥ ಮಾಡಿಕೊಂಡು ಇಂಥ ಕೃತ್ಯದಲ್ಲಿ ತೊಡಗಿರುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಬಿಜೆಪಿ ಅಭ್ಯರ್ಥಿ ವಿಶ್ವಾಸ ವ್ಯಕ್ತಪಡಿಸಿದರು.
ಲಂಗು ಲಂಗಾಮಿಲ್ಲದೇ ಹಣ ಹಂಚುವ ಕೆಲಸವನ್ನು ನಿಲ್ಲಿಸದಿದ್ದರೆ ಪ್ರಜಾತಂತ್ರದ ವ್ಯವಸ್ಥೆಗೆ ಮೋಸವಾಗುತ್ತದೆ. ಅಧಿಕಾರಿಗಳು ಕ್ರಮ ಕೈಗೊಳ್ಳುವ ವಿಶ್ವಾಸವಿದೆ. ಬಿಜೆಪಿಯ ಐದು ಸಂಘಟನಾತ್ಮಕ ಜಿಲ್ಲೆಗಳ ಬಿಜೆಪಿ ಕಾರ್ಯಕರ್ತರು ಈ ಹಣ ಹಂಚುವ ಪ್ರಕ್ರಿಯೆಯನ್ನು ಯಾವುದೇ ಹೆದರಿಕೆಯಿಲ್ಲದೇ ಮುಂದಾಗಿ ನಿಲ್ಲಿಸಬೇಕು ಎಂದು ಕರೆ ನೀಡಿದರು.
ವಾಹನದಲ್ಲಿ ಹಣ ಮಾತ್ರ ಸಿಕ್ಕಿಲ್ಲ. ಹತಾಶೆಯಲ್ಲಿರುವ ಕಾಂಗ್ರೆಸ್ ಅಭ್ಯರ್ಥಿ ಈ ರೀತಿ ಯಾವುದೇ ಲಂಗು ಲಗಾಮಿಲ್ಲದೇ, ಹೆದರಿಕೆ ಇಲ್ಲದೇ, ಸಂಕೋಚ ಇಲ್ಲದೇ ಹಣ ಹಂಚುವ ಕೆಲಸ ಮಾಡುತ್ತಿದ್ದಾರೆ. ಶಿಕ್ಷಕರ ಕ್ಷೇತ್ರ ಪವಿತ್ರವಾಗಿದೆ. ಹಣ ಹಂಚುವವರಿಗೆ ಮಾನ, ಮರ್ಯಾದೆ ಇದೆಯೋ ಇಲ್ಲವೋ ಗೋತ್ತಿಲ್ಲ. ಆದರೆ, ಶಿಕ್ಷಕರು ತಾವು ರಾಷ್ಟ್ರ ನಿರ್ಮಾಪಕರು ಎಂಬುದನ್ನು ಅರಿತುಕೊಳ್ಳಬೇಕು. ಯಾವ್ಯಾವ ವಾಹನದಲ್ಲಿ ಈ ರೀತಿ ಹಣ ಹಂಚಲಾಗುತ್ತಿದೆಯೋ ಅದನ್ನು ವಿಡಿಯೋ ರೆಕಾರ್ಡ್ ಮಾಡಬೇಕು. ಶಿಕ್ಷಕರಿಗೆ ನೇರವಾಗಿ ಫೋನಾಯಿಸಿ ನಾವು ನಿಮ್ಮನ್ನು ಬಂದು ಭೇಟಿಯಾಗುತ್ತೇವೆ. ಗುರುಕಾಣಿಕೆ ನೀಡುತ್ತೇವೆ ಎಂದು ನಾಚಿಕೆ ಇಲ್ಲದೇ ಹೇಳುವ ಕೆಲಸ ಮಾಡಿದ್ದಾರೆ. ಆ ಎಲ್ಲ ಕರೆಗಳನ್ನು ಗುರುತಿಸಿ ಕರೆ ಮಾಡಲಾದ ನಂಬರ್ ಗಳನ್ನು ಚುನಾವಣೆ ಆಯೋಗಕ್ಕೆ ದೂರು ನೀಡಿ ಎಂದು ಶಿಕ್ಷಕರ ಸಕಮುದಾಯಕ್ಕೆ ಕರೆ ನೀಡುವುದಾಗಿ ಅರುಣ ಶಹಾಪುರ ಹೇಳಿದರು.
ಈ ಸಂದರ್ಭದಲ್ಲಿ ಬಿಜೆಪಿ ಮುಖಂಡ ಚಂದ್ರಶೇಖರ ಕವಟಗಿ ಮುಂತಾದವರು ಉಪಸ್ಥಿತರಿದ್ದರು.
ಸೋಮವಾರ ನಡೆಯಲಿರುವ ವಿಧಾನ ಪರಿಷತ್ ಚುನಾವಣೆಯ ಮತದಾರ ಶಿಕ್ಷಕರಿಗೆ ಹಂಚಿಕೆ ಮಾಡುತ್ತಿದ್ದ ಹಣವನ್ನು ವಶಪಡಿಸಿಕೊಂಡಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪ್ರಕಾಶ ಹುಕ್ಕೇರಿ ವಿರುದ್ದ ಹಣ ಹಂಚಿಕೆ ಆರೋಪ ಮಾಡಿದ ಸಚಿವ ಉಮೇಶ ಕತ್ತಿ, ಚುನಾವಣೆ ನಿಲ್ಲಿಸುವಂತೆ ಆಗ್ರಹಿಸಿದ್ದಾರೆ.
ಹುಕ್ಕೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಹುಕ್ಕೇರಿ ಪಟ್ಟಣದಲ್ಲಿ ಖಾಸಗಿ ಕಲ್ಯಾಣ ಮಂಟಪದಲ್ಲಿ ಹಣ ಹಂಚಿಕೆ ಮಾಡಲಾಗಿದೆ. ವಿಜಾಪುರ,ಬಾಗಲಕೋಟೆ, ಗೋಕಾಕದಲ್ಲಿ ಹಣ ಹಂಚಿಕೆ ಮಾಡಲಾಗಿದೆ. ಈ ಕುರಿತು ದಾಖಲೆಗಳನ್ನ ಚುನಾವಣಾ ಅಧಿಕಾರಿಗಳು ಕಲೆ ಹಾಕಿದ್ದಾರೆ. ಈ ಕುರಿತು ತನಿಖೆ ಮಾಡಬೇಕು . ಕಲ್ಯಾಣ ಮಂಟಪಕ್ಕೆ ಬಂದು ಹೋದ ಶಿಕ್ಷಕರಿಗೆ ಚುನಾವಣೆಗೆ ಅವಕಾಶ ನೀಡಬಾರದು. ಚುನಾವಣೆ ರದ್ದು ಮಾಡಬೇಕು ಎಂದು ಆಗ್ರಹಿಸಿದ್ದಾರೆ.
ಪ್ರಕಾಶ ಹುಕ್ಕೇರಿ ವಜಾಗೊಳಿಸಿ – ಅಭಯ ಪಾಟೀಲ
ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಕಾಶ ಹುಕ್ಕೇರಿ ಅವರು ಮತದಾರರಿಗೆ ಕ್ಷೇತ್ರದಾದ್ಯಂತ ಹಣ ಹಂಚುವ ಮೂಲಕ ಮತದಾರರಿಗೆ ಆಮೀಷ ಒಡ್ಡುತ್ತಿದ್ದಾರೆ ಎಂದು ಬೆಳಗಾವಿ ದಕ್ಷಿಣ ಕ್ಷೇತ್ರದ ಸಾಸಕ ಪ್ರಕಾಶ ಹುಕ್ಕೇರಿ ಆರೋಪಿಸಿದ್ದಾರೆ.
ಇಂದು ಕೇವಲ ವಿಜಯಪುರ ನಗರದಲ್ಲಿ ಸುಮಾರು 17.40 ಲಕ್ಷ ರೂ ಹಣದ ಜೊತೆ ಕಾಂಗ್ರೆಸ್ ಪಕ್ಷಕ್ಕೆ ಸೇರಿದ ಅಭ್ಯರ್ಥಿ ಕರಪತ್ರಗಳು ಸಿಕ್ಕಿವೆ. ಇನ್ನೂ ಗ್ರಾಮೀಣ ಪ್ರದೇಶಗಳಲ್ಲಿ ಹಾಗೂ ತಾಲೂಕು ಮಟ್ಟದಲ್ಲಿ ಯಾವ ರೀತಿ ಕಾಂಗ್ರೆಸ್ ಪಕ್ಷ ಹಣ ಹಂಚಿಕೆ ನಡೆಯುತ್ತಿದೆ ಎಂಬುದು ಊಹೆ ಮಾಡಲಾಗದು. ಈ ಬಗ್ಗೆ ಚುನಾವಣಾ ಅಧಿಕಾರಿಗಳು ಹಾಗೂ ಚುನಾವಣಾ ಆಯೋಗ ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಬೇಕು. ಇದು ನಮ್ಮ ಪ್ರಜಾಪ್ರಭುತ್ವಕ್ಕೆ ಅತ್ಯಂತ ಮಾರಕವಾಗಿದೆ ಎಂದಿದ್ದಾರೆ.
ಅಲ್ಲದೇ ಕಾಂಗ್ರೆಸ್ ನಾಯಕರಿಗೆ ಸೇರಿದ “ಫಾರ್ಮ್ ಹೌಸ್” ನಲ್ಲಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ ಪರವಾಗಿ ಹಣ ಹಂಚಲು ಸೇರಿದಂತೆ ಅನೇಕ ಅಕ್ರಮ ನಡೆಸುತ್ತಿರುವ ಮಾಹಿತಿಯಿದೆ. ಈ ಬಗ್ಗೆ ಚುನಾವಣಾ ಆಯೋಗ ಕೂಡಲೇ ಕ್ರಮ ಜರುಗಿಸಬೇಕು. ಶಿಕ್ಷಕರ ಕ್ಷೇತ್ರ ಅತ್ಯಂತ ಪವಿತ್ರವಾದದ್ದು, ಕಾಂಗ್ರೆಸ್ ಪಕ್ಷವು ಅಕ್ರಮವಾಗಿ, ಆಸೆ-ಆಮೀಷಗಳ ಮೂಲತ ಗೆಲ್ಲಲು ಹವಣಿಸುತ್ತಿರುವುದು ಖಂಡನೀಯ ಎಂದು ಅಭಯ ಪಾಟೀಲ ಹೇಳಿದ್ದಾರೆ.
ಆದ್ದರಿಂದ ವಾಯುವ್ಯ ಶಿಕ್ಷಕರ ಕ್ಷೇತ್ರದ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಕಾಶ ಹುಕ್ಕೇರಿ ಅವರ ಮೇಲೆ “ಪ್ರಜಾಪ್ರತಿನಿಧಿ ಕಾಯ್ದೆ” ಅಡಿಯಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಬೇಕು ಹಾಗೂ ಈ ಪರಿಷತ್ ಚುನಾವಣೆಯಿಂದ ಅವರನ್ನು ವಜಾಗೊಳಿಸಬೇಕೆಂದು ನಾನು ಚುನಾವಣಾ ಆಯೋಗವನ್ನು ಒತ್ತಾಯಿಸುತ್ತೇನೆ ಎಂದು ಅಭಯ ಪಾಟೀಲ್ ಹೇಳಿದ್ದಾರೆ.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ