ಪ್ರಗತಿವಾಹಿನಿ ಸುದ್ದಿ, ಬೆಳಗಾವಿ
ಪ್ರಭುದ್ಧ ಭಾರತ ಸಂಘಟನೆ ಕಳೆದ ಕೆಲವು ವರ್ಷಗಳಿಂದ ಅತ್ಯುತ್ತಮವಾಗಿ ಕಾರ್ಯ ನಿರ್ವಹಿಸುತ್ತಿದೆ. ದೇಶದ ಮೂಲೆ ಮೂಲೆಗಳಿಂದ ತಜ್ಞರನ್ನು ಇಲ್ಲಿಗೆ ಕರೆಸಿ ಜ್ಞಾನ ಹಂಚುವ ಕೆಲಸಮಾಡುತ್ತಿದೆ ಎಂದು ರಾಜ್ಯಸಭಾ ಸದಸ್ಯ, ಕೆಎಲ್ಇ ಸಂಸ್ಥೆಯ ಕಾರ್ಯಾಧ್ಯಕ್ಷ ಡಾ.ಪ್ರಭಾಕರ ಕೋರೆ ಪ್ರಶಂಸಿಸಿದ್ದಾರೆ.
ಬೆಳಗಾವಿಯಲ್ಲಿ ನಡೆದ ಸ್ಟೆಪ್-2018 ಸಮಾವೇಶದ ಸಮಾರೋಪ ಸಮಾರಂಭದ ಅತಿಥಿಯಾಗಿ ಪಾಲ್ಗೊಂಡು ಅವರು ಮಾತನಾಡಿದರು. ಪ್ರಬುದ್ಧ ಭಾರತ ಸಂಘಟನೆಯಲ್ಲಿರುವವರು ಅತ್ಯಂತ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿದ್ದಾರೆ. ಬೆಳಗಾವಿಯಿಂದ ವಿಮಾನಗಳು ಸ್ಥಳಾಂತರವಾದಾಗಲೂ ನನಗೆ ಮತ್ತು ಸುರೇಶ ಅಂಗಡಿಯವರಿಗೆ ನಿದ್ದೆ ಮಾಡಲು ಬಿಟ್ಟಿಲ್ಲ. ಉಡಾನ್ ಯೋಜನೆ ತಂದ ನಂತರವೇ ನಮಗೆ ಧೈರ್ಯದಿಂದ ಬೆಳಗಾವಿಗೆ ಬರಲು ಬಿಟ್ಟರು. ಇಂತಹ ಒಳ್ಳೆಯ ಕೆಲಸವನ್ನು ಸಂಘಟನೆ ಮುಂದುವರಿಸಿಕೊಂಡು ಹೋಗಬೇಕು ಎಂದು ಕೋರೆ ಹೇಳಿದರು.
ಪ್ರಜ್ಞಾಪ್ರವಾಹದ ರಾಷ್ಟ್ರೀಯ ಸಂಚಾಲಕ ಜೆ.ನಂದಕುಮಾರ ಸಮಾರೋಪ ಭಾಷಣ ಮಾಡಿ, ಭಾರತದ ಶಕ್ತಿ ಮತ್ತು ದೌರ್ಬಲ್ಯವನ್ನು ತಿಳಿದುಕೊಳ್ಳಲು ಇಂತಹ ಸಮಾವೇಶಗಳ ಅಗತ್ಯವಿದೆ. ಕಳೆದ 2 ದಿನಗಳಿಂದ ಅತ್ಯಂತ ವ್ಯವಸ್ಥಿತವಾಗಿ ಸಮಾವೇಶ ನಡೆದಿದೆ. ವಿಶ್ವದೆದುರು ಭಾರತದ ಶಕ್ತಿಯನ್ನು ತೋರಿಸಲು ನಾವು ವಿಫಲರಾಗಿದ್ದೇವೆ. ನಮ್ಮನ್ನು ನಾವು ಬಲಗೊಳಿಸಿಕೊಳ್ಳುವ ಮೂಲಕ ಎದ್ದುನಿಲ್ಲಬೇಕು ಎಂದರು.
ರಾಣಿ ಚನ್ನಮ್ಮ ವಿವಿ ಕುಲಪತಿ ಶಿವಾನಂದ ಹೊಸಮನಿ, ಕೆಎಲ್ಇ ವಿವಿ ಕುಲಪತಿ ವಿವೇಕ ಸಾವೋಜಿ ವೇದಿಕೆಯಲ್ಲಿದ್ದರು. ಪ್ರಬುದ್ಧ ಭಾರತದ ಸಹಸಂಚಾಲಕ ಸಚಿನ್ ಸಬ್ನಿಸ್ ಸ್ವಾಗತಿಸಿದರು. ಸಂಚಾಲಕ ಚೈತನ್ಯ ಕುಲಕರ್ಣಿ ವಂದಿಸಿದರು. ಸೌರಭ ಹೆಗಡೆ ಕಾರ್ಯಕ್ರಮ ನಿರೂಪಿಸಿದರು. ಸಮಾವೇಶಕ್ಕೆ ನೆರವಾದವರಿಗೆ ಸ್ಮರಣಿಕೆಗಳನ್ನು ನೀಡಲಾಯಿತು.
ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ