Kannada NewsKarnataka NewsLatest

ಮಲ್ಲಮ್ಮನ ಹೆಸರಿನ ಪ್ರಾಧಿಕಾರಕ್ಕಾಗಿ ಇಡೀ ಬೆಳವಡಿಯೇ ಸ್ತಬ್ಧ: ಬಂದ್ ಆಚರಿಸಿ ಪ್ರತಿಭಟನೆಗಿಳಿದ ಗ್ರಾಮಸ್ಥರು

ಪ್ರಗತಿವಾಹಿನಿ ಸುದ್ದಿ, ಬೈಲಹೊಂಗಲ: ಸೈನ್ಯ ಕಟ್ಟಿ ಹೋರಾಡಿದ ವಿಶ್ವದ ಮೊದಲ ಮಹಿಳೆ  ಎಂಬ ಹೆಗ್ಗಳಿಕೆಯ ಬೆಳವಡಿ ಮಲ್ಲಮ್ಮನ ಹೆಸರಿನಲ್ಲಿ ಪ್ರಾಧಿಕಾರ ರಚಿಸಿ ಬೆಳವಡಿಯ ಸಮಗ್ರ ಅಭಿವೃದ್ಧಿ ಕೈಗೊಳ್ಳಬೇಕೆಂದು ಆಗ್ರಹಿಸಿ ಬೆಳವಡಿ ಗ್ರಾಮವನ್ನು ಸಂಪೂರ್ಣ ಬಂದ್ ಮಾಡಿ ಸ್ಥಳೀಯ ನಾಗರಿಕರು ಸೋಮವಾರ ಪ್ರತಿಭಟನೆ ನಡೆಸಿದರು.

ಗ್ರಾಮದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಸ್ವಯಂಪ್ರೇರಿತವಾಗಿ ಬಂದ್ ಮಾಡಲಾಗಿತ್ತು. ಬಸ್ ಸೇರಿದಂತೆ ಎಲ್ಲ ವಾಹನ ಸಂಚಾರವೂ ಸ್ಥಗಿತಗೊಂಡಿತ್ತು. ಶಾಲಾ ಕಾಲೇಜುಗಳಿಗೂ ರಜೆ ಘೋಷಿಸಲಾಗಿತ್ತು.

ಗ್ರಾಮ ದೇವತೆ ಶ್ರೀ ವೀರಭದ್ರೇಶ್ವರ ಪೂಜೆಯೊಂದಿಗೆ ಬೆಳಗ್ಗೆ ಪ್ರತಿಭಟನೆ ಆರಂಭಿಸಿದ ಬೆಳವಡಿ ಗ್ರಾಮಸ್ಥರು ಮೆರವಣಿಗೆಯಲ್ಲಿ ತೆರಳಿ ಮಲ್ಲಮ್ಮ ವೃತ್ತದಲ್ಲಿ ಮಲ್ಲಮ್ಮನ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.

ಅಲ್ಲಿ ನಡೆದ ಹೋರಾಟದ ವೇದಿಕೆಯಲ್ಲಿ ವಿವಿಧ ಶ್ರೀಗಳು, ಸಾಹಿತಿಗಳು, ಗಣ್ಯರು ಭಾಗವಹಿಸಿ ಬೆಳವಡಿ ಮಲ್ಲಮ್ಮ ಪ್ರಾಧಿಕಾರಕ್ಕೆ ಹಕ್ಕೊತ್ತಾಯ ಮಂಡಿಸಿದರು. ಮಳೆಯನ್ನೂ ಲೆಕ್ಕಿಸದೆ ಪ್ರತಿಭಟನೆಯಲ್ಲಿ ತೊಡಗಿದ ನಾಗರಿಕರಿಗೆ ಪ್ರತಿಭಟನೆ ವಾಪಸ್ ಪಡೆಯಲು ಉಪವಿಭಾಗಾಧಿಕಾರಿ ಶಶಿಧರ ಬಗಲಿ, ತಹಸೀಲ್ದಾರ್ ಬಸವರಾಜ ನಾಗರಾಳ ಮನವೊಲಿಸಲು ಯತ್ನಿಸಿದರಾದರೂ ಜಿಲ್ಲಾಧಿಕಾರಿಯವರು ಸ್ಥಳಕ್ಕೆ ಬಂದು ಭರವಸೆ ನೀಡುವವರೆಗೂ ಪ್ರತಿಭಟನೆ ವಾಪಸ್ ಪಡೆಯಲಾಗದು ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದರು.

ಹೂಲಿ ಮಠದ ಶಿವಮಹಾಂತ ಶಿವಾಚಾರ್ಯರು, ದೊಡ್ಡವಾಡದ ಶ್ರೀ ಜಡಿಸಿದ್ದೇಶ್ವರ ಸ್ವಾಮೀಜಿ, ಏಣಗಿ ಬಂಗಾರಜ್ಜನವರು, ಆರಾದ್ರಿಮಠ ಮಹಾಂತ ಶಾಸ್ತ್ರಿಗಳು, ಕಾಡಾ ಅಧ್ಯಕ್ಷ ಡಾ. ವಿಶ್ವನಾಥ ಪಾಟೀಲ, ಶಾಸಕ ಮಹಾಂತೇಶ ಕೌಜಲಗಿ, ಮಾಜಿ ಶಾಸಕ ಜಗದೀಶ ಮೆಟಗುಡ್ಡ, ಜೆಡಿಎಸ್ ಜಿಲ್ಲಾಧ್ಯಕ್ಷ ಶಂಕರ ಮಾಡಲಗಿ,  ಕಸಾಪ ಜಿಲ್ಲಾಧ್ಯಕ್ಷೆ ಮಂಗಳಾ ಮೆಟಗುಡ್ಡ, ಹೋರಾಟಗಾರ ಡಾ.ಆರ್.ಬಿ. ಪಾಟೀಲ, ನ್ಯಾಯವಾದಿ ಸಿ.ಎಸ್. ಚಿಕ್ಕನಗೌಡರ, ಸಾಹಿತಿ ಯ.ರು. ಪಾಟೀಲ, ಆಮ್ ಆದ್ಮಿ ಪಕ್ಷದ ಮುಖಂಡ ಬಿ.ಎಂ. ಚಿಕ್ಕನಗೌಡರ, ಪ್ರಕಾಶ ಹುಂಬಿ, ಸಿ.ಕೆ. ಮೆಕ್ಕೇದ, ಹಬೀಬ್ ಕಿಲ್ಲೇದಾರ, ಜಿಲ್ಲಾ ಲೇಖಕಿಯರ ಸಂಘದ ಪದಾಧಿಕಾರಿಗಳು, ನಾನಾ ಸಂಘಟನೆಗಳ ಮುಖಂಡರು, ಕಾರ್ಯಕರ್ತರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ಜಿಲ್ಲಾಧಿಕಾರಿ ನಿತೇಶ ಪಾಟೀಲ್ ಸ್ಥಳಕ್ಕೆ ಭೇಟಿ ನೀಡಿ ಜು.7ರಂದು ಮುಖ್ಯಮಂತ್ರಿಗಳು ಬೆಂಗಳೂರಿನಲ್ಲಿ ಕಿತ್ತೂರು ಚನ್ನಮ್ಮ ಪ್ರಾಧಿಕಾರದ ಸಭೆ ಕರೆದಿದ್ದು ಆ ಸಭೆಯಲ್ಲಿ ಬೆಳವಡಿ ಮಲ್ಲಮ್ಮ ಪ್ರಾಧಿಕಾರದ ಕುರಿತು ತಾವು ಪ್ರಸ್ತಾಪಿಸುವುದಾಗಿ ಭರವಸೆ ನೀಡಿದರು. ನಂತರ ಪ್ರತಿಭಟನೆ ವಾಪಸ್ ಪಡೆಯಲಾಯಿತು.

ಸವದತ್ತಿ ಕ್ಷೇತ್ರದಿಂದ ಸ್ಥಳೀಯರಿಗೆ ಆದ್ಯತೆ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್‌ ಜಾರಕಿಹೊಳಿ ಸ್ಪಷ್ಟನೆ

ಪ್ರಗತಿವಾಹಿನಿ ಸುದ್ದಿಗಳನ್ನು ನಿಮ್ಮ ಸ್ನೇಹಿತರಿಗೆ, ಬೇರೆ ಗ್ರುಪ್ ಗಳಿಗೆ ಶೇರ್ ಮಾಡಿ

Related Articles

Back to top button