Latest

ಮಳೆಯಾರ್ಭಟಕ್ಕೆ ಮಲೆನಾಡು, ಕರಾವಳಿ ಕಂಗಾಲು: ಹಲವು ಗ್ರಾಮಗಳು ಜಲಾವೃತ; ಸೇತುವೆಗಳ ಮುಳುಗಡೆ

ಪ್ರಗತಿವಾಹಿನಿ ಸುದ್ದಿ, ಬೆಳಗಾವಿ: ರಾಜ್ಯದಲ್ಲಿ ಭಾಗದಲ್ಲಿ ಮಳೆಯಬ್ಬರ ಗುರುವಾರವೂ ಮುಂದುವರಿದಿದ್ದು ಮಲೆನಾಡು, ಕರಾವಳಿ ಸೇರಿದಂತೆ 7 ಜಿಲ್ಲೆಗಳು ಅಕ್ಷರಶಃ ಕಂಗಾಲಾಗಿವೆ.

ಕಾಳಿ, ಗಂಗಾವಳಿ, ಅಘನಾಶಿನಿ,  ಶರಾವತಿ ಸೌಪರ್ಣಿಕಾ, ನೇತ್ರಾವತಿ, ಕುಮಾರಧಾರಾ  ನದಿಗಳು ಮಟ್ಟ ಮೀರಿ ಹರಿಯುತ್ತಿದ್ದು ನದಿ ತೀರದ ಪ್ರದೇಶಗಳ ಜನ ಆತಂಕಕ್ಕೀಡಾಗಿದ್ದಾರೆ.

Home add -Advt

ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ನಾವುಂದ ಸೇರಿದಂತೆ ಹಲವು ಗ್ರಾಮಗಳಿಗೆ ಸೌಪರ್ಣಿಕಾ ನದಿ, ಉದ್ಯಾವರ ಹೊಳೆ ನೀರು ನುಗ್ಗಿ ಹಲವು ಮನೆಗಳು ಜಲಾವೃತವಾಗಿವೆ. ಜನ ತಮ್ಮ ಜಾನುವಾರುಗಳೊಂದಿಗೆ ಸ್ಥಳಾಂತರಗೊಳ್ಳುವುದಕ್ಕೂ ಅಡಚಣೆಯಾಗಿದ್ದು ಎನ್ ಡಿಆರ್ ಎಫ್ ತಂಡ ಕಾರ್ಯಪ್ರವೃತ್ತವಾಗಿದೆ. ಬಂಡ್ವಾಡಿ ಬ್ರಿಜ್ ಮತ್ತು ಸೇತುವೆ ನಿರ್ಮಾಣ ಕಾಮಗಾರಿಯಿಂದಾಗಿ ಈ ಸಮಸ್ಯೆ ಉದ್ಭವಿಸಿರುವುದಾಗಿ ನಾಗರಿಕರು ಆರೋಪಿಸಿದ್ದಾರೆ.

ಕಿರುಮಂಜೇಶ್ವರ ಹಾಗೂ ಅಕ್ಕಪಕ್ಕದ ಕಡಲ ತೀರಗಳಲ್ಲಿ ಕಡಲ್ಕೊರೆತ ವಿಪರೀತವಾಗಿದ್ದು ಸಂಸದ ಬಿ.ವೈ.ರಾಘವೇಂದ್ರ ಗುರುವಾರ ಅಧಿಕಾರಿಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.

ದಕ್ಷಿಣಕನ್ನಡ ಜಿಲ್ಲೆಯಲ್ಲಿ ಕುಮಾರಧಾರಾ ಹಾಗೂ ನೇತ್ರಾವತಿ ನದಿ ನೀರಿನ ಹರಿವು ತೀವ್ರ ವೇಗ ಪಡೆದುಕೊಂಡಿರುವುದರಿಂದ ತೀರ ಪ್ರದೇಶದ ಜನರು ಎಚ್ಚರಿಕೆಯಿಂದಿರಲು ಜಿಲ್ಲಾ ಆಡಳಿತ ಸೂಚಿಸಿದೆ.

ಉತ್ತರ ಕನ್ನಡ ಜಿಲ್ಲೆಯಲ್ಲೂ ಮಳೆ ಜನಜೀವನ ಸಂಪೂರ್ಣ ಅಸ್ತವ್ಯಸ್ತಗೊಂಡಿದ್ದು ಹಲವು ಗ್ರಾಮಗಳು ಜಲಾವೃತಗೊಂಡಿವೆ. ಕಾರವಾರ ತಾಲೂಕಿನ ಬಿಣಗಾ, ಚೆಂಡಿಯಾ, ಅರ್ಗಾ ಇತ್ಯಾದಿ ಭಾಗಗಳಲ್ಲಿ ಮನೆಗಳಿಗೆ ನೀರು ನುಗ್ಗಿ ಅವಾಂತರ ಸೃಷ್ಟಿಯಾಗಿದೆ.  ಬಿಣಗಾ ಸೇತುವೆ ಸೇರಿದಂತೆ ಹಲವು ಸೇತುವೆಗಳು ಜಲಾವೃತಗೊಂಡಿದ್ದು ಜನ ಸಂಕಷ್ಟಪಡುತ್ತಿದ್ದಾರೆ.

ಅಂಕೋಲಾ- ಯಲ್ಲಾಪುರ ಮಾರ್ಗ ಮಧ್ಯದ ಗುಳ್ಳಾಪುರ ಸೇತುವೆ ಜಲಾವೃತಗೊಂಡಿದ್ದು ಸನಿಹದ  ಗ್ರಾಮಗಳ ಸಂಪರ್ಕ ಕಡಿತಗೊಂಡಿದೆ.  ಜಿಲ್ಲಾ ಆಡಳಿತ ಸಮರೋಪಾದಿಯಲ್ಲಿ ಜನರ ರಕ್ಷಣೆ ಕಾರ್ಯದಲ್ಲಿ ತೊಡಗಿದೆ.  ಶಾಲಾ ಕಾಲೇಜುಗಳಿಗೆ ಗುರುವಾರ ರಜೆ ಇದ್ದು ಶುಕ್ರವಾರವೂ  ಮುಂದುವರಿಕೆಯಾಗುವ ಸಾಧ್ಯತೆ ಇದೆ.

ಏತನ್ಮಧ್ಯೆ ಮಲೆನಾಡು ಪ್ರದೇಶದ ಚಿಕ್ಕಮಗಳೂರು, ಶಿವಮೊಗ್ಗ, ಕೊಡಗು ಜಿಲ್ಲೆಗಳಲ್ಲೂ ಮಳೆಯ ಆರ್ಭಟ ಮುಂದುವರಿದಿದೆ. ಹೊರನಾಡು- ಶೃಂಗೇರಿ ಮಾರ್ಗ ಮಧ್ಯದ ಅಬ್ಬಿಕಲ್ ಭೂ ಕುಸಿತ ಸಂಭವಿಸಿದ್ದರಿಂದ ರಸ್ತೆ ಸಂಪರ್ಕ ಕಡಿತಗೊಂಡು ಪ್ರಯಾಣಿಕರು ಪರದಾಡುವತಾಗಿದೆ. ಕೊಡಗು ಜಿಲ್ಲೆಯಲ್ಲಿ ಈಗಾಗಲೇ ರೆಡ್ ಅಲರ್ಟ್ ಘೋಷಿಸಲಾಗಿದ್ದು ನಾಳೆಯೂ ಮುಂದುವರಿಯುವ ಸಾಧ್ಯತೆ ಇದೆ.

ಗುರುವಾರ ಮಧ್ಯಾಹ್ನದ ನಂತರ ಕರಾವಳಿಯ ಕೆಲ ಭಾಗಗಳಲ್ಲಿ ಮಳೆಯಬ್ಬರ ಕೊಂಚ ತಗ್ಗಿದ್ದರೂ ಮಲೆನಾಡಿನಲ್ಲಿ ಎಡೆಬಿಡದೆ ಸುರಿಯುತ್ತಿರುವ ಮಳೆಗೆ ನದಿಗಳ ಮಟ್ಟ ಏರುತ್ತಲೇ ಸಾಗಿರುವುದರಿಂದ ಜನಾತಂಕ ಹೆಚ್ಚಾಗಿದೆ.

ಭ್ರಷ್ಟರನ್ನು ಮಟ್ಟ ಹಾಕಿಯೇ ಅಧಿಕಾರದಿಂದ ವಿಶ್ರಾಂತಿ: ಗೃಹ ಸಚಿವ ಆರಗ ಜ್ಞಾನೇಂದ್ರ ಪ್ರತಿಜ್ಞೆ

Related Articles

Back to top button